Tag: ಸಿಂಧನೂರು

  • ಆಸ್ಪತ್ರೆಯಿಂದ ಮರಳುತ್ತಿದ್ದವರು ಮಸಣ ಸೇರಿದ್ರು

    ಆಸ್ಪತ್ರೆಯಿಂದ ಮರಳುತ್ತಿದ್ದವರು ಮಸಣ ಸೇರಿದ್ರು

    ರಾಯಚೂರು: ಸ್ವಿಫ್ಟ್ ಕಾರು ಪಲ್ಟಿಯಾಗಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಸಿಂಧನೂರು ತಾಲೂಕಿನ ಮಣ್ಣಿಕೆರೆ ಬಳಿ ನಡೆದಿದೆ.

    ತೆಲಂಗಾಣದ ಗದ್ವಾಲ್ ಮೂಲದ ಗೋಪಾಲ (28) ಹಾಗೂ ಲಕ್ಷ್ಮಣ (30) ಮೃತ ದುರ್ದೈವಿಗಳು. ಮೂವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ರಾಯಚೂರಿನ ರಿಮ್ಸ್‌ಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

    ಬೆಂಗಳೂರಿನಿಂದ ರಾಯಚೂರು ಕಡೆಗೆ ಬರುತ್ತಿದ್ದ ವೇಳೆ ಘಟನೆ ನಡೆದಿದ್ದು, ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ ಹೊಡೆದಿರುವ ಶಂಕೆ ವ್ಯಕ್ತವಾಗಿದೆ. ಆರೋಗ್ಯ ಸಮಸ್ಯೆ ಹಿನ್ನೆಲೆ ಅನುಮತಿ ಪಡೆದು ಬೆಂಗಳೂರಿಗೆ ತೆರಳಿದ್ದವರು ವಾಪಸ್ ಬರುವ ವೇಳೆ ಅಪಘಾತ ನಡೆದಿದೆ.

    RCR Accident A

    ರಸ್ತೆಯಲ್ಲಿ ಹೋಗುತ್ತಿದ್ದ ಕೆಲವರು ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದವನ್ನು ರಕ್ಷಿಸಿ ಅಂಬುಲೆನ್ಸ್ ಹಾಗೂ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಗಾಯಾಳುಗಳನ್ನು ಸಿಂಧನೂರು ತಾಲೂಕು ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಹೆಚ್ಚಿನ ಚಿಕಿತ್ಸೆ ಅಗತ್ಯವಾಗಿದ್ದರಿಂದ ಅವರನ್ನು ರಿಮ್ಸ್‌ಗೆ ದಾಖಲಿಸಲಾಗಿದೆ.

    ಮೃತರು ತೆಲಂಗಾಣದ ಗದ್ವಾಲ್ ಮೂಲದವರಾಗಿದ್ದು, ರಾಯಚೂರು ಮೂಲಕ ಗದ್ವಾಲ್‍ಗೆ ತೆರಳುತ್ತಿದ್ದರು. ಬೆಳಗಿನ ಜಾವ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿದೆ. ಬಳಗಾನೂರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

    Police Jeep 1

  • ಕೊರೊನಾ ಲಾಕ್‍ಡೌನ್ ಬಿಸಿ- ಊಟಕ್ಕಾಗಿ ಮಂಗಳಮುಖಿಯರ ಪರದಾಟ

    ಕೊರೊನಾ ಲಾಕ್‍ಡೌನ್ ಬಿಸಿ- ಊಟಕ್ಕಾಗಿ ಮಂಗಳಮುಖಿಯರ ಪರದಾಟ

    ರಾಯಚೂರು: ಕೊರೊನಾ ವೈರಸ್ ಸೋಂಕಿನ ಭೀತಿಗೆ ಇಡೀ ದೇಶ ಲಾಕ್‍ಡೌನ್ ಆಗಿರುವ ಹಿನ್ನೆಲೆ ಜಿಲ್ಲೆಯಲ್ಲಿ ಊಟವಿಲ್ಲದೆ ಮಂಗಳಮುಖಿಯರು ಪರದಾಡುತ್ತಿದ್ದಾರೆ.

    ಸಿಂಧನೂರು ನಗರದ ಸುಕಾಲಪೇಟೆಯಲ್ಲಿರುವ 30ಕ್ಕೂ ಹೆಚ್ಚು ಮಂಗಳಮುಖಿಯರು ದಯವಿಟ್ಟು ಸಹಾಯ ಮಾಡಿ ನಮ್ಮನ್ನೂ ಇತರರಂತೆ ಪರಿಗಣಿಸಿ ಅಂತ ಗೋಗರೆದಿದ್ದಾರೆ. ಭಿಕ್ಷಾಟನೆ ಮಾಡಿ ಬದುಕುತ್ತಿದ್ದ ಮಂಗಳಮುಖಿಯರಿಗೆ ಲಾಕ್‍ಡೌನ್ ನಿಂದ ಭಿಕ್ಷಾಟನೆಗೂ ಬ್ರೇಕ್ ಬಿದ್ದಿದ್ದರಿಂದ ಊಟಕ್ಕೆ ತೊಂದರೆಯಾಗಿದೆ. ಕಾಟಾಚಾರಕ್ಕೆ ಒಂದು ಬಾರಿ ಊಟ ಕೊಟ್ಟಿರುವ ತಾಲೂಕು ಆಡಳಿತ ಅವರ ಕಡೆ ಗಮನ ಹರಿಸಿರಲಿಲ್ಲ. ನಿತ್ಯ ಊಟ, ಇಲ್ಲವೆ ಪಡಿತರ ಕೊಡುವಂತೆ ಮಂಗಳಮುಖಿಯರು ಒತ್ತಾಯಿಸಿದ್ದಾರೆ.

    RCR Mangalamukhi

    ದಯವಿಟ್ಟು ತಾರತಮ್ಯ ಮಾಡಬೇಡಿ ಎಲ್ಲರಂತೆ ನಮ್ಮಕಡೆ ಗಮನಹರಿಸಿ. ಕೂಡಲೆ ನಮ್ಮ ನೆರವಿಗೆ ಧಾವಿಸಿ ನಮಗೆ ಊಟ ಕೊಡಿ ಅಂತ ತಾಲೂಕು ಆಡಳಿತಕ್ಕೆ ಮಂಗಳಮುಖಿಯರು ಅಂಗಲಾಚಿದ್ದಾರೆ. ಮಂಗಳಮುಖಿಯರು ವಾಸಿಸುತ್ತಿರುವ ಸ್ಥಳಕ್ಕೆ ಭೇಟಿ ನೀಡಿರುವ ಸಿಂಧನೂರು ತಹಶೀಲ್ದಾರ್ ಮಂಜುನಾಥ್ ಸದ್ಯ ಊಟಕ್ಕೆ ವ್ಯವಸ್ಥೆ ಮಾಡಿದ್ದು, ಮುಂದೆ ಮಂಗಳಮುಖಿಯರಿಗೆ ಪಡಿತರ ವಿತರಿಸುವುದಾಗಿ ಭರವಸೆ ನೀಡಿದ್ದಾರೆ.

  • ನಿಂತಿದ್ದ ಲಾರಿಗೆ ಮತ್ತೊಂದು ಲಾರಿ ಡಿಕ್ಕಿ- ಕ್ಯಾಬಿನ್ ಪೀಸ್ ಪೀಸ್, ಇಬ್ಬರು ಸಾವು

    ನಿಂತಿದ್ದ ಲಾರಿಗೆ ಮತ್ತೊಂದು ಲಾರಿ ಡಿಕ್ಕಿ- ಕ್ಯಾಬಿನ್ ಪೀಸ್ ಪೀಸ್, ಇಬ್ಬರು ಸಾವು

    ರಾಯಚೂರು: ಕೆಟ್ಟು ನಿಂತಿದ್ದ ಲಾರಿಗೆ ಕಬ್ಬಿಣ ಹೊತ್ತುಯ್ಯುತ್ತಿದ್ದ ಲಾರಿ ಡಿಕ್ಕಿ ಹೊಡೆದ ಪರಿಣಾಮ ಕ್ಲಿನರ್ ಹಾಗೂ ಚಾಲಕ ಮೃತಪಟ್ಟ ಘಟನೆ ಸಿಂಧನೂರು ತಾಲೂಕಿನ ಮುಳ್ಳೂರು ಕ್ರಾಸ್ ಬಳಿ ನಡೆದಿದೆ.

    ಮಹಾರಾಷ್ಟ್ರ ಮೂಲದ ಸವಳೂರು ಗ್ರಾಮದ ರಾಹುಲ್ ಭಾಸ್ಕರ್ (25), ವೈಜನಾಥ (28) ಮೃತ ದುರ್ದೈವಿಗಳು. ರಾಹುಲ್ ಸ್ಥಳದಲ್ಲೇ ಮೃತಪಟ್ಟಿದ್ದು, ವೈಜನಾಥ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

    Police Jeep 1

    ಮಸ್ಕಿ-ಸಿಂಧನೂರು ರಸ್ತೆಯ ಮುಳ್ಳೂರು ಕ್ರಾಸ್ ಬಳಿ ಕೆಟ್ಟು ನಿಂತಿದ್ದ ಲಾರಿಗೆ ನಾಸಿಕ್‍ನಿಂದ ಬಳ್ಳಾರಿ ಕಡೆಗೆ ಕಬ್ಬಿಣದ ಪೈಪ್‍ಗಳನ್ನ ಹೊತ್ತುಯ್ಯುತ್ತಿದ್ದ ಲಾರಿ ಡಿಕ್ಕಿ ಹೊಡೆದಿದೆ. ಪರಿಣಾಮ ಲಾರಿಯಲ್ಲಿನ ಕಬ್ಬಿಣದ ಸರಳುಗಳು ಡಿಕ್ಕಿ ಹೊಡೆದ ಲಾರಿಗೆ ನುಗ್ಗಿ ರಾಹುಲ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಂಭೀರ ಗಾಯಗೊಂಡಿದ್ದ ವೈಜನಾಥ್ ಅವರನ್ನು ಕಲಬುರ್ಗಿಯ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ವೈಜನಾಥ್ ಸಾವನ್ನಪ್ಪಿದ್ದಾರೆ. ಈ ಸಂಬಂಧ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಸಿಎಎ ವಿರೋಧಿಸಿ ರಕ್ತದಲ್ಲಿ ಪತ್ರ ಬರೆದು ಸಹಿ ಸಂಗ್ರಹ- ಸಿಂಧನೂರಿನಲ್ಲಿ ಬೃಹತ್ ಸಮಾವೇಶ

    ಸಿಎಎ ವಿರೋಧಿಸಿ ರಕ್ತದಲ್ಲಿ ಪತ್ರ ಬರೆದು ಸಹಿ ಸಂಗ್ರಹ- ಸಿಂಧನೂರಿನಲ್ಲಿ ಬೃಹತ್ ಸಮಾವೇಶ

    ರಾಯಚೂರು: ಸಿಎಎ, ಎನ್.ಆರ್.ಸಿ ಮತ್ತು ಎನ್.ಪಿ.ಆರ್ ವಿರೋಧಿಸಿ ಜಿಲ್ಲೆಯ ಸಿಂಧನೂರು ನಗರದಲ್ಲಿ ಬೃಹತ್ ಪ್ರತಿಭಟನಾ ಸಮಾವೇಶ ಆಯೋಜಿಸಲಾಗಿತ್ತು. ನಗರದ ಆರ್ ಜಿಎಂ ಶಾಲಾ ಮೈದಾನದಲ್ಲಿ ಆಯೋಜಿಸಿದ್ದ ಸಮಾವೇಶದಲ್ಲಿ ನೂರಾರು ಯುವಕರು ರಕ್ತದಲ್ಲಿ ಪತ್ರ ಬರೆದು ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರಿಗೆ ರವಾನೆ ಮಾಡಲಾಯಿತು.

    ಎನ್.ಆರ್.ಸಿ ಹಾಗೂ ಸಿಎಎ ವಿರೋಧಿಸಿ ನಡೆದ ರಕ್ತದ ಪತ್ರ ಚಳುವಳಿಯಲ್ಲಿ ಜಿಲ್ಲೆಯ ವಿವಿಧೆಡೆಯಿಂದ ಬಂದ ಯುವಕರು ತಮ್ಮ ರಕ್ತದಲ್ಲಿ ಪತ್ರ ಬರೆದರು. ಈ ವೇಳೆ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ರಾಜ್ಯ ರೈತಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, ಬಿಜೆಪಿ ಪಕ್ಷ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು.

    CAA NRC RCR 1

    ಸೇವೆ ಮಾಡುತ್ತೇವೆ ಎಂದು ತಲೆ ಸವರಿದರೆ, ನೀವು ನಂಬಿಕೆಗೆ ಯೋಗ್ಯವಾದ ಜನ ಅಲ್ಲ. ಬಿಜೆಪಿ ಅಂದ್ರೆ ಬೇಡ ಅನ್ನಲ್ಲ, ಬಿಜೆಪಿಯನ್ನ ನಡೆಸುವ ಆಂತರಿಕ ಸಂಘಟನೆಗಳನ್ನ ನಾವು ಒಪ್ಪಲ್ಲ. ಬಸವಣ್ಣನನ್ನು ಕೊಂದವರು, ಅವತ್ತು ಗಾಂಧಿಯನ್ನ ಕೊಂದವರು, ಬುದ್ಧನನ್ನು ಕೊಂದವರು ನಮ್ಮನ್ನು ಉಳಿಸ್ತಾರಾ ಅಂತ ಪ್ರಶ್ನಿಸಿದರು. ಯಡಿಯೂರಪ್ಪ ಸ್ವತಂತ್ರವಾಗಿ ಸರ್ಕಾರ ನಡೆಸಲು ಆಗುತ್ತಿಲ್ಲ. ಯಡಿಯೂರಪ್ಪ ಮತ್ತು ಸಚಿವರಿಗೆ ಸ್ವತಂತ್ರ ಕೊಟ್ಟಿದ್ದೀರಾ? ಸರ್ಕಾರ ನಡಸೋದಿಕ್ಕೆ ಯಾವುದೇ ಸ್ವಾತಂತ್ರ್ಯ ಇಲ್ಲ ಅಂತ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದರು.

    ಇನ್ನೂ ಸಮಾವೇಶದಲ್ಲಿ ಮಹಿಳಾ ಹೋರಾಟಗಾರ್ತಿ ಕೆ.ನೀಲಾ, ಸಿಂಧನೂರು ಶಾಸಕ ವೆಂಕಟರಾವ್ ನಾಡಗೌಡ, ಸೇರಿದಂತೆ ಹಲವಾರು ಸಂಘಟನೆಗಳ ಮುಖಂಡರು ಭಾಗವಹಿಸಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಯುವಕರು, ವಿದ್ಯಾರ್ಥಿಗಳು ಸೇರಿದಂತೆ ಎರಡು ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಜನ ಸಮಾವೇಶಕ್ಕೆ ಬಂದಿದ್ದರು.

  • ಖನನ ಮೂಲಕ ನಿರ್ದೇಶಕರಾಗಿ ಬಂದ್ರು ರಾಯಚೂರಿನ ರಾಧಾ!

    ಖನನ ಮೂಲಕ ನಿರ್ದೇಶಕರಾಗಿ ಬಂದ್ರು ರಾಯಚೂರಿನ ರಾಧಾ!

    ಬೆಂಗಳೂರು: ಎಸ್. ನಲಿಗೆ ಪ್ರೊಡಕ್ಷನ್ಸ್ ಬ್ಯಾನರಿನಡಿಯಲ್ಲಿ ಶ್ರೀನಿವಾಸ ರಾವ್ ನಿರ್ಮಾಣ ಮಾಡಿರುವ ಖನನ ಚಿತ್ರ ಬಿಡುಗಡೆಗೆ ರೆಡಿಯಾಗಿದೆ. ಆರ್ಯವರ್ಧನ್ ನಾಯಕನಾಗಿ ಪಾದಾರ್ಪಣೆ ಮಾಡುತ್ತಿರುವ ಈ ಚಿತ್ರವನ್ನು ನಿರ್ದೇಶನ ಮಾಡಿರುವವರು ರಾಧಾ. ರಾಯಚೂರು ಮೂಲದ ಅಪ್ಪಟ ಕನ್ನಡಿಗರಾದರೂ ತೆಲುಗು ಚಿತ್ರರಂಗದಲ್ಲಿ ಛಾಪು ಮೂಡಿಸಿರೋ ರಾಧಾ ಕೂಡಾ ಈ ಚಿತ್ರದ ಮೂಲಕವೇ ನಿರ್ದೇಶಕರಾಗಿ ಕನ್ನಡಕ್ಕೆ ಪರಿಚಯವಾಗುತ್ತಿದ್ದಾರೆ.

    ತೆಲುಗು ಚಿತ್ರರಂಗದಲ್ಲಿ ರಾಧಾ ಎಂದೇ ಜನಪ್ರಿಯರಾಗಿರೋ ಇವರ ಪೂರ್ತಿ ಹೆಸರು ರಾಧಾ ಕೃಷ್ಣ. ಆದರೆ ರಾಧಾ ಎಂಬ ನಾಮಧೇಯದೊಂದಿಗೇ ಕನ್ನಡಕ್ಕೂ ಆಗಮಿಸಿರೋ ಅವರು ತಮ್ಮ ಜನರಿಗೆ ಒಂದೊಳ್ಳೆ ಕಂಟೆಂಟಿನ ಚಿತ್ರವನ್ನು ಕೊಡುವ ಕಾತರದಲ್ಲಿದ್ದಾರೆ. ರಾಧಾ ಮೂಲತಃ ರಾಯಚೂರಿನ ಸಿಂಧಗಿ ತಾಲೂಕಿನ ಪುಟ್ಟ ಹಳ್ಳಿಯವರು. ಅಪ್ಪಟ ರೈತಾಪಿ ವರ್ಗದಲ್ಲಿಯೇ ಹುಟ್ಟಿ ಬೆಳೆದ ಅವರು ಹೈಸ್ಕೂಲುವರೆಗಿನ ವ್ಯಾಸಂಗವನ್ನು ಮುದನೂರು ಮುಂತಾದೆಡೆಗಳಲ್ಲಿ ಪೂರೈಸಿಕೊಂಡು ಡಿಗ್ರಿ ಮಗಿಸಿಕೊಂಡಿದ್ದು ಮೈಸೂರಿನ ಜೆಎಸ್ ಎಸ್ ಕಾಲೇಜಿನಲ್ಲಿ. ಅವರೊಳಗಿನ ನೈಜ ಆಸಕ್ತಿಗೆ ವೇದಿಕೆ ಮತ್ತು ಪ್ರೋತ್ಸಾಹ ಸಿಕ್ಕಿದ್ದೂ ಕೂಡಾ ಇಲ್ಲಿಯೇ.

    KHANANA d

    ರಾಧಾ ಅವರಿಗೆ ಅಕ್ಷರಗಳ ಪರಿಚಯವಾದ ಘಳಿಗೆಯಿಂದಲೇ ಸಾಹಿತ್ಯದತ್ತ ಕಣ್ಣಾಡಿಸುವ, ತಮ್ಮ ಸುತ್ತಲಿನ ವಾತಾವರಣವನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಕಥೆ ಬರೆಯುವ ಹವ್ಯಾಸ ಬೆಳೆದು ಬಂದಿತ್ತು. ಇವರ ತಾಯಿಯ ತಂದೆಯವರಾದ ವೆಂಕಟರಾವ್ ಅವರೂ ಕೂಡಾ ಕಥೆಗಾರರೇ. ಬ್ರಿಟಿಷರ ವಿರುದ್ಧ ಕಥೆ ಬರೆದು ಆಕ್ರೋಶ ಹೊರ ಹಾಕೋ ಕ್ರಾಂತಿಕಾರಿ ಮನಸ್ಥಿತಿ ಹೊಂದಿದ್ದ ವೆಂಕಟರಾಯರು ಬರೆದ ಅದೆಷ್ಟೋ ಕಥೆಗಳನ್ನು ಬ್ರಿಟಿಷ್ ಅಧಿಕಾರಿಗಳ ದರ್ಪಕ್ಕೆ ಬೆದರಿ ಮನೆ ಮಂದಿ ಸುಟ್ಟು ಹಾಕುತ್ತಿದ್ದರಂತೆ. ಆ ತಾತನ ಕಥೆ ಬರೆಯೋ ಪ್ರತಿಭೆಯೇ ಮೊಮ್ಮಗ ರಾಧಾಗೂ ಬಂದಿದೆ ಅಂತ ಆಗಾಗ ಅಪ್ಪ ಅಮ್ಮ ಹೇಳುತ್ತಿದ್ದರಂತೆ. ಶಾಲೆಯಲ್ಲಿ ರಾಧಾರ ಈ ಪ್ರತಿಭೆಗೆ ಮೇಸ್ಟರಾಗಿದ್ದ ವೆಂಕೋಬ ಪಾಟೀಲರೂ ಕೂಡಾ ಪ್ರೋತ್ಸಾಹ ಕೊಡುತ್ತಾ ಬಂದಿದ್ದರಿಂದಲೇ ಕಾಲೇಜು ತಲುಪೋ ಹೊತ್ತಿಗೆಲ್ಲ ಅವರೊಳಗೊಬ್ಬ ಕಥೆಗಾರ ಜೀವ ಪಡೆದು ಬಿಟ್ಟಿದ್ದ.

    KHANANA c

    ಶಾಲಾ ದಿನಗಳಲ್ಲಿಯೇ ರಾಧಾ ಯಾವ ಪರಿಯಾಗಿ ಬರವಣಿಗೆಯ ಗುಂಗಿಗೆ ಬಿದ್ದಿದ್ದರೆಂದರೆ ಪ್ರತೀ ದಿನವೂ ಏನಾದರೊಂದು ಬರೆಯದಿದ್ದರೆ ನಿದ್ದೆ ಹತ್ತದಂತಾಗುತ್ತಿದ್ದರು, ಕಡೆಯ ಪಕ್ಷ ಡೈರಿಯಾದರೂ ಗೀಚಿದರೇನೇ ಸಮಾಧಾನ. ಮಗ ಚೆಂದಗೆ ಓದಿ ದೊಡ್ಡ ಕೆಲಸ ಹಿಡಿಯ ಬೇಕೆಂಬ ಆಸೆ ಹೊಂದಿದ್ದ ತಂದೆ ಇದರಿಂದ ಗಾಬರಿಗೀಡಾಗುತ್ತಿದ್ದದ್ದೂ ಇದೆ. ಆದರೂ ಬರವಣಿಗೆಯನ್ನೇ ನೆಚ್ಚಿಕೊಂಡಿದ್ದ ಅವರು ಶಾಲಾ ಕಾಲೇಜು ದಿನಗಳಲ್ಲಿ ಲೇಖನಗಳ ಮೂಲಕ ಸುತ್ತಲಿನವರಿಗೆ ವಿಶೇಷ ವ್ಯಕ್ತಿಯಾಗಿ ಕಾಣಿಸಲಾರಂಭಿಸಿದ್ದರು. ಹೀಗೆ ಬರೆಯೋ ಹವ್ಯಾಸ ಬೆಳೆಸಿಕೊಳ್ಳುತ್ತಲೇ ತಾನು ಸಿನಿಮಾ ರಂಗದಲ್ಲಿ ಏನಾದರೊಂದು ಸಾಧಿಸಲೇ ಬೇಕೆಂಬ ಕನಸು ಅವರೊಳಗೆ ಚಿಗುರಿಕೊಂಡಿತ್ತು. ಅದುವೇ ಅವರನ್ನು ಅನಾಯಾಸವಾಗಿ ಚಿತ್ರರಂಗದ ಸಂಪರ್ಕಕ್ಕೂ ಪಕ್ಕಾಗಿಸಿತ್ತು.

    KHANANA e

    ರಾಯಚೂರು ಸೀಮೆಯಲ್ಲಿ ತೆಲುಗು ಚಿತ್ರರಂಗದ ನಂಟು ಹೊಂದಿರೋ ಅನೇಕರಿದ್ದಾರೆ. ಬಾಹುಬಲಿ ಖ್ಯಾತಿಯ ರಾಜಮೌಳಿಯವರೂ ಕೂಡಾ ರಾಧಾರ ದೂರದ ಸಂಬಂಧಿಕರೇ. ಈ ನಂಟಿನೊಂದಿಗೇ ರಾಧಾ ತೆಲುಗು ಚಿತ್ರರಂಗಕ್ಕೆ ರೈಟರ್ ಆಗಿ ಪಾದಾರ್ಪಣೆ ಮಾಡಿದ್ದರು. 2006ರಲ್ಲಿ ಹೀಗೆ ಪಾದಾರ್ಪಣೆ ಮಾಡಿದ್ದ ಅವರು ಈವರೆಗೆ ಎಂಬತ್ತಕ್ಕೂ ಹೆಚ್ಚು ತೆಲುಗು ಚಿತ್ರಗಳಿಗೆ ಕೆಲಸ ಮಾಡಿದ್ದಾರೆ. ಅಲ್ಲಿ ಹೀಗೆ ಯಶಸ್ವಿಯಾದರೂ ಕನ್ನಡ ಚಿತ್ರವೊಂದನ್ನು ಮಾಡಬೇಕೆಂಬ ಆಸೆ ಅವರಿಗೆ ಇದ್ದೇ ಇತ್ತು. ಅದಕ್ಕೆ ಸರಿಯಾದ ಮುಹೂರ್ತ ಕೂಡಿ ಬಂದಿದ್ದು ಖನನ ಚಿತ್ರದ ಮೂಲಕ.

    ಶ್ರೀನಿವಾಸ್ ರಾವ್ ಅವರು ತಮ್ಮ ಮಗನ ಎಂಟ್ರಿಗೆ ವಿಶೇಷವಾದೊಂದು ಕಥೆಗಾಗಿ ಕಾದು ಕೂತಿದ್ದರಲ್ಲಾ? ಅದು ಹೇಗೋ ಅವರ ಸಂಪರ್ಕವಾಗಿ, ಅವರಿಗೆ ರಾಧಾ ಹೇಳಿದ ಕಥೆ ಇಷ್ಟವಾಗಿ ಹೋಗಿತ್ತು. ತೀರಾ ಮೂವತ್ತು ನಲವತ್ತು ಕೋಟಿ ಬಜೆಟ್ಟಿನ ಚಿತ್ರಗಳಿಗೆ ಕೆಲಸ ಮಾಡಿದ್ದ ರಾಧಾ ಸಣ್ಣ ಮೊತ್ತದ ಚಿತ್ರ ಮಾಡೋದು ಹೇಗೆಂದು ಆರಂಭದಲ್ಲಿ ಚಿಂತೆಗೆ ಬಿದ್ದಿದ್ದರಂತೆ. ಆದರೆ ಕಥೆ ಚೆನ್ನಾಗಿದ್ದುದರಿಂದಾಗಿ ಏಕಕಾಲದಲ್ಲಿ ಮೂರು ಭಾಷೆಗಳಲ್ಲಿ ಖನನವನ್ನು ನಿರ್ಮಾಣ ಮಾಡಲೂ ನಿರ್ಮಾಪಕರು ಮುಂದಾಗಿದ್ದರು. ಯಾವ ಕೊರತೆಯೂ ಆಗದಂತೆ ನೋಡಿಕೊಂಡಿದ್ದರಂತೆ. ಈ ಕಾರಣದಿಂದಲೇ ಈಗ ಖನನ ಬಿಡುಗಡೆಗೆ ತಯಾರಾಗಿ ನಿಂತಿದೆ.

    ತೆಲುಗಿನಲ್ಲಿ ಎಂಬತ್ತಕ್ಕೂ ಹೆಚ್ಚು ಚಿತ್ರಗಳಿಗೆ ಕೆಲಸ ಮಾಡಿದ್ದರೂ ರಾಧಾ ಖನನ ಮೂಲಕವೇ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಯಾವ ಭಾಷೆಗೇ ಆದರೂ ಹೊಸತಾಗುವಂಥಾ ಖನನ ಎಲ್ಲ ವರ್ಗದವರಿಗೂ ಇಷ್ಟವಾಗುವ, ಬದುಕಿನ ವಾಸ್ತವವನ್ನು ತೆರೆದಿಡುವ ಭಿನ್ನ ಮಾದರಿಯಲ್ಲಿ ಮೂಡಿ ಬಂದಿದೆಯಂತೆ. ಹೇಳಿಕೇಳಿ ರಾಧಾ ತೆಲುಗು ಚಿತ್ರರಂಗದಲ್ಲಿ ಪಳಗಿಕೊಂಡಿರುವವರು. ಆದ್ದರಿಂದ ವಿಶಿಷ್ಟವಾದ ಈ ಕಥೆಯನ್ನು ಅವರು ಪಕ್ಕಾ ಕಮರ್ಶಿಯಲ್ ಶೈಲಿಯಲ್ಲಿಯೇ ನಿರ್ದೇಶನ ಮಾಡಿದ್ದಾರಂತೆ. ಈ ಚಿತ್ರದ ಅಸಲೀ ಮಜಾ ಏನೆಂಬುದು ಮುಂದಿನ ತಿಂಗಳ ಹೊತ್ತಿಗೆಲ್ಲ ತಿಳಿಯಲಿದೆ.

  • ವೇಶ್ಯಾವಾಟಿಕೆ ದಂಧೆ ಮೇಲೆ ಪೊಲೀಸ್ ದಾಳಿ- ಅಡ್ಡೆಯಲ್ಲಿ ಸಿಕ್ಕಿಬಿದ್ದ ಬಿಜೆಪಿ ಮುಖಂಡ ಅರೆಸ್ಟ್

    ವೇಶ್ಯಾವಾಟಿಕೆ ದಂಧೆ ಮೇಲೆ ಪೊಲೀಸ್ ದಾಳಿ- ಅಡ್ಡೆಯಲ್ಲಿ ಸಿಕ್ಕಿಬಿದ್ದ ಬಿಜೆಪಿ ಮುಖಂಡ ಅರೆಸ್ಟ್

    ರಾಯಚೂರು: ಜಿಲ್ಲೆಯ ಸಿಂಧನೂರು ನಗರ ಪೊಲೀಸರು ವೇಶ್ಯಾವಾಟಿಕೆ ಅಡ್ಡೆಯ ಮೇಲೆ ದಾಳಿ ನಡೆಸಿದ್ದು, ಈ ವೇಳೆ ಅಲ್ಲಿ ಸಿಕ್ಕಿಬಿದ್ದ ಬಿಜೆಪಿ ಮುಖಂಡನೋರ್ವರನ್ನು ಬಂಧಿಸಿದ್ದಾರೆ.

    ಸಿಂಧನೂರು ತಾಲೂಕು ಬಿಜೆಪಿ ಎಸ್‍ಸಿ ಘಟಕದ ಅಧ್ಯಕ್ಷ ಹುಸೇನಪ್ಪ ಶ್ರೀಪುರಂ ಬಂಧಿತ ಮುಖಂಡ. ನಗರದ ಆದರ್ಶ ಕಾಲೋನಿಯಲ್ಲಿ ಅಕ್ರಮ ದಂಧೆ ನಡೆಸಲಾಗ್ತಿದೆ ಅಂತ ಸಾರ್ವಜನಿಕರು ಪೊಲೀಸರಿಗೆ ದೂರು ಸಲ್ಲಿಸಿದ್ದರು.

    BJP Leader Arrest

    ಹೀಗಾಗಿ ಖಚಿತ ಮಾಹಿತಿ ಮತ್ತು ದೂರಿನ ಅನ್ವಯ ಪೊಲೀಸರು ಅಡ್ಡೆಯ ಮೇಲೆ ರಾತ್ರಿ 8 ಗಂಟೆಯ ಸುಮಾರಿಗೆ ದಾಳಿ ನಡೆಸಿದ್ದರು. ಈ ವೇಳೆ ಮನೆಯಲ್ಲಿದ್ದ ಹುಸೇನಪ್ಪನನ್ನು ಸಿಂಧನೂರು ಪೊಲೀಸರು ಬಂಧಿಸಿದ್ದು, ಇಬ್ಬರು ಮಹಿಳೆಯರನ್ನು ರಕ್ಷಣೆ ಮಾಡಿದ್ದಾರೆ. ಹುಸೇನಪ್ಪ ಈ ವೇಶ್ಯಾವಾಟಿಕೆಯನ್ನ ನಡೆಸುತ್ತಿದ್ದ ಅಂತ ಹೇಳಲಾಗುತ್ತಿದ್ದು, ಪೊಲೀಸರು ಈ ಸಂಬಂಧ ವಿಚಾರಣೆ ನಡೆಸುತ್ತಿದ್ದಾರೆ.

  • ಬೊಲೆರೋ ಡಿಕ್ಕಿ- ಕೆಟ್ಟು ನಿಂತ ವಾಹನದಲ್ಲಿ ಮಲಗಿದ್ದವರು ಚಿರನಿದ್ರೆಗೆ ಜಾರಿದ್ರು

    ಬೊಲೆರೋ ಡಿಕ್ಕಿ- ಕೆಟ್ಟು ನಿಂತ ವಾಹನದಲ್ಲಿ ಮಲಗಿದ್ದವರು ಚಿರನಿದ್ರೆಗೆ ಜಾರಿದ್ರು

    ರಾಯಚೂರು: ಎರಡು ಬೊಲೆರೋ ಪಿಕ್ ಅಪ್ ವಾಹನಗಳ ಮಧ್ಯೆ ಡಿಕ್ಕಿಯಾಗಿ ಇಬ್ಬರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಸಿಂಧನೂರು ತಾಲೂಕಿನ ಎಲೆಕೂಡ್ಲಿಗಿ ಗ್ರಾಮದ ಬಳಿ ನಡೆದಿದೆ.

    ಲಿಂಗಸುಗೂರಿನ ಎರೆಜಂತಿ ಗ್ರಾಮದ ಮಲ್ಲಪ್ಪ(47) ಮತ್ತು ಲಿಂಗಪ್ಪ(47) ಮೃತ ದುರ್ದೈವಿಗಳು. ಯಾದಗಿರಿಯ ಶಹಪುರದಿಂದ ಹೊರಟಿದ್ದ ವಾಹನ ಸಿಂಧನೂರಿನ ಎಲೆಕೂಡ್ಲಿಗಿ ಗ್ರಾಮದ ಬಳಿ ಕೆಟ್ಟು ನಿಂತಿತ್ತು. ವಾಹನ ರಿಪೇರಿಯಾಗದ ಹಿನ್ನೆಲೆಯಲ್ಲಿ ಈ ಇಬ್ಬರು ವಾಹನದಲ್ಲೇ ಮಲಗಿದ್ದರು. ಲಿಂಗಸೂಗುರು ಕಡೆಯಿಂದ ಬಂದ ಇನ್ನೊಂದು ಬೊಲೆರೋ ವಾಹನ ನಿಂತ ವಾಹನಕ್ಕೆ ಡಿಕ್ಕಿ ಹೊಡೆದಿದೆ.

    ಕೆಟ್ಟು ನಿಂತಿದ್ದ ವಾಹನದಲ್ಲಿ ಮಲಗಿದ್ದವರು ಗಂಭೀರವಾಗಿ ಗಾಯಗೊಂಡಿದ್ದರು. ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆಯೇ ಸಾವನ್ನಪ್ಪಿದ್ದಾರೆ. ಮತ್ತೊಂದು ವಾಹನದಲ್ಲಿದ್ದ ಇಬ್ಬರಿಗೆ ಸಣ್ಣ ಪ್ರಮಾಣದ ಗಾಯಗಳಾಗಿವೆ. ಈ ಸಂಬಂಧ ತುರವಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    rcr Accident 4

    rcr Accident 5

    rcr Accident 6

    rcr Accident 1

    rcr Accident 3

    rcr Accident 2

  • ಮಾವ ಶಾಸಕ, ಸೋದರಳಿಯ ಕಳ್ಳ- ಕಬ್ಬಿಣ ಕಳ್ಳರಿಗೆ ಬಳ್ಳಾರಿ ಪೊಲೀಸರ ಕೋಳ

    ಮಾವ ಶಾಸಕ, ಸೋದರಳಿಯ ಕಳ್ಳ- ಕಬ್ಬಿಣ ಕಳ್ಳರಿಗೆ ಬಳ್ಳಾರಿ ಪೊಲೀಸರ ಕೋಳ

    ಬಳ್ಳಾರಿ: ಮಾವ ಶಾಸಕ, ಆದ್ರೆ ಶಾಸಕರ ಸೋದರಳಿಯ ಮಾತ್ರ ಮಹಾಕಳ್ಳ. ಶಾಸಕರ ಹೆಸರು ಬಳಸಿಕೊಂಡು ಜಿಂದಾಲ್ ಕಾರ್ಖಾನೆಯಲ್ಲಿ ಟ್ರಾನ್ಸ್ ಪೋರ್ಟ್ ಏಜೆನ್ಸಿ ಮಾಡುತ್ತಿದ್ದ ಗುಂಪೊಂದು ಸ್ಲಾಗ್ ಹೆಸರಿನಲ್ಲಿ ಜಿಂದಾಲ್ ಕಾರ್ಖಾನೆಯಿಂದಲೇ ಮಿದು ಕಬ್ಬಿಣವನ್ನು ಕಳ್ಳತನ ಮಾಡುತ್ತಿದ್ದ ಜಾಲವನ್ನು ಪೊಲೀಸರು ಬೇಧಿಸಿ ಕಳ್ಳರನ್ನ ಅರೆಸ್ಟ್ ಮಾಡಿದ್ದಾರೆ.

    bly theft 2

    ಜಿಂದಾಲ್ ಉದ್ಯೋಗಿಗಳ ಜೊತೆ ಸಿಂಧನೂರ ಶಾಸಕ ಹಂಪನಗೌಡ ಬಾದರ್ಲಿ ಸೋದರಳಿಯ ಯರ್ರಿಸ್ವಾಮಿ ಹಾಗೂ ಇನ್ನಿತರ ಹತ್ತು ಜನರ ವಿರುದ್ಧ ಜಿಂದಾಲ್ ಕಾರ್ಖಾನೆ ಆಡಳಿತ ಮಂಡಳಿ ತೋರಣಗಲ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿತ್ತು. ಪ್ರಕರಣದ ತನಿಖೆ ನಡೆಸಿದ ತೋರಣಗಲ್ ಪೊಲೀಸರು ನಾಲ್ವರು ಜಿಂದಾಲ್ ಸಿಬ್ಬಂದಿ ಸೇರಿದಂತೆ 7 ಜನರನ್ನು ಬಂಧಿಸಿದ್ದು ಇನ್ನೂ ಮೂವರಿಗೆ ಬಲೆ ಬೀಸಿದ್ದಾರೆ.

    hampanagowda
    ಹಂಪನಗೌಡ ಬಾದರ್ಲಿ

    ಪ್ರಕರಣಕ್ಕೆ ಸಂಬಧಿಸಿದಂತೆ 2 ಲಾರಿಗಳನ್ನು ಜಪ್ತಿ ಮಾಡಿದ್ದಾರೆ. ಪೊಲೀಸರು ಪ್ರಕರಣದ ತನಿಖೆ ಮುಂದುವರೆಸಿದ್ದು ಇದೊಂದು ಬಹುದೊಡ್ಡ ಹಗರಣವಾಗಿರುವ ಶಂಕೆ ವ್ಯಕ್ತವಾಗಿದೆ.

    bly theft 1

    bly theft

    bly theft 3

  • ವಿಡಿಯೋ: ಮಹಿಳಾ ಸಿಬ್ಬಂದಿಗೆ ಕಾಲಿನಿಂದ ಒದ್ದ ನಗರಸಭೆ ನೌಕರ

    ವಿಡಿಯೋ: ಮಹಿಳಾ ಸಿಬ್ಬಂದಿಗೆ ಕಾಲಿನಿಂದ ಒದ್ದ ನಗರಸಭೆ ನೌಕರ

    ರಾಯಚೂರು: ಜಿಲ್ಲೆಯ ಸಿಂಧನೂರು ನಗರಸಭೆ ಕಚೇರಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ಮಹಿಳಾ ಸಿಬ್ಬಂದಿ ಮೇಲೆ ಸಹೋದ್ಯೋಗಿಯೇ ಹಲ್ಲೆ ಮಾಡಿರುವ ಅಮಾನವೀಯ ಘಟನೆ ನಡೆದಿರುವ ಬಗ್ಗೆ ತಡವಾಗಿ ಬೆಳಕಿಗೆ ಬಂದಿದೆ.

    ಗುತ್ತಿಗೆ ಆಧಾರದ ಮೇಲೆ ಕೆಲಸಮಾಡುತ್ತಿರುವ ದಿನಗೂಲಿ ನೌಕರ ಶರಣಪ್ಪ, ಎಸ್‍ಡಿಎ ನಸ್ರಿನಾ ಮೇಲೆ ಹಲ್ಲೆ ಮಾಡಿದ್ದಾನೆ. ಸದ್ಯ ನೌಕರನ್ನು ಜಿಲ್ಲಾಧಿಕಾರಿ ಕೆಲಸದಿಂದ ವಜಾ ಮಾಡಿದ್ದಾರೆ.

    ಈ ಘಟನೆ ಜೂನ್. 10ರಂದು ನಡೆದಿದೆ. ಕಚೇರಿಗೆ ತಡವಾಗಿ ಬಂದು ಕೆಲಸವನ್ನೂ ಮಾಡುತ್ತಿಲ್ಲ ಅಂತ ಆರೋಪಿ ಮಹಿಳಾ ಸಹೋದ್ಯೋಗಿ ಮೇಲೆ ಕಾಲಿನಿಂದ ಒದ್ದಿದ್ದಾನೆ. ಹಲ್ಲೆ ಬಳಿಕವೂ ಬೆದರಿಕೆ ಹಾಕಿದ್ದಾನೆ. ಮಹಿಳಾ ಸಿಬ್ಬಂದಿ ಮೇಲೆ ನಡೆದ ಹಲ್ಲೆಯ ಸಿಸಿ ಟಿವಿಯ ಎಕ್ಸಕ್ಲೂಸಿವ್ ದೃಶ್ಯಗಳು ಇದೀಗ ಪಬ್ಲಿಕ್ ಟಿಗೆ ಲಭಿಸಿದೆ.

    ಈಗಾಗಲೇ ಆರೋಪಿ ಶರಣಪ್ಪನನ್ನ ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ನಡೆಸಿದ್ದಾರೆ.

    https://www.youtube.com/watch?v=APkIRhw-4YU

  • ಸಿನಿಮೀಯ ರೀತಿಯಲ್ಲಿ ಹಾಡಹಗಲೇ ಮಚ್ಚಿನಿಂದ ಕೊಚ್ಚಿ ವ್ಯಕ್ತಿಯ ಕೊಲೆ

    ಸಿನಿಮೀಯ ರೀತಿಯಲ್ಲಿ ಹಾಡಹಗಲೇ ಮಚ್ಚಿನಿಂದ ಕೊಚ್ಚಿ ವ್ಯಕ್ತಿಯ ಕೊಲೆ

    ರಾಯಚೂರು: ಸಿಂಧನೂರು ತಾಲೂಕಿನ ಮುಚ್ಚಳಕ್ಯಾಂಪ್ ಬಳಿ ಸಿನಿಮೀಯ ರೀತಿಯಲ್ಲಿ ಸ್ಕಾರ್ಪಿಯೋ ಕಾರಿನಲ್ಲಿ ಬಂದು ಬೈಕ್‍ಗೆ ಅಡ್ಡಗಟ್ಟಿ ಮಚ್ಚಿನಿಂದ ಕೊಚ್ಚಿ ವ್ಯಕ್ತಿಯನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ.

    RCR MURDER 1

    ಸಿಂಧನೂರು ತಾಲೂಕಿನ ಗೀತಾಕ್ಯಾಂಪ್ ನಿವಾಸಿ 50 ವರ್ಷದ ಕೆ.ಪಾಪರೆಡ್ಡಿ ಕೊಲೆಯಾಗಿರುವ ವ್ಯಕ್ತಿ. ಜಮೀನು ವಿವಾದ ಹಿನ್ನೆಲೆಯಲ್ಲಿ ಹಳೇ ವೈಷಮ್ಯ ಸಾಧಿಸಿ ಕೊಲೆ ಮಾಡಲಾಗಿದೆ ಅಂತ ಮೃತನ ಸಂಬಂಧಿಕರು ಆರೋಪಿಸಿದ್ದಾರೆ.

    ಹೈದರಾಬಾದ್ ನಲ್ಲಿರುವ ಭೋಸ್ ರೆಡ್ಡಿ ಮತ್ತು ಸುಮನ್ ರೆಡ್ಡಿ ಎಂಬುವವರು ಕೊಲೆಗೆ ಕಾರಣ ಎನ್ನಲಾಗಿದೆ. ಕೊಲೆಯಾದ ಸ್ಥಳದಲ್ಲಿ ಮಚ್ಚು ಲಾಂಗುಗಳು ಪತ್ತೆಯಾಗಿದ್ದು, ಇದು ಸುಪಾರಿ ಕೊಲೆ ಅಂತ ಶಂಕಿಸಲಾಗಿದೆ.

    RCR MURDER 3

    ಸ್ಥಳಕ್ಕೆ ಸಿಂಧನೂರು ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ. ಶ್ವಾನದಳ, ಬೆರಳಚ್ಚು ತಜ್ಞರು ಕೊಲೆಯಾದ ಸ್ಥಳದಲ್ಲಿ ಪರಿಶೀಲನೆ ನಡೆಸಿದ್ದಾರೆ. ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೇತನಸಿಂಗ್ ರಾಥೋರ್ ಭೇಟಿ ನೀಡಿ ಮಾಹಿತಿ ಕಲೆಹಾಕುತ್ತಿದ್ದಾರೆ.