Tag: ಸಂಸದ ನಾರಾಯಣಸ್ವಾಮಿ

  • ಮುಸ್ಲಿಮರಿಗೆ ಪಾಕಿಸ್ತಾನ, ಹಿಂದೂಗಳಿಗೆ ಭಾರತ ನಿರ್ಧಾರಕ್ಕೆ ನೆಹರು ಮುದ್ರೆ- ಸಂಸದ ನಾರಾಯಣಸ್ವಾಮಿ

    ಮುಸ್ಲಿಮರಿಗೆ ಪಾಕಿಸ್ತಾನ, ಹಿಂದೂಗಳಿಗೆ ಭಾರತ ನಿರ್ಧಾರಕ್ಕೆ ನೆಹರು ಮುದ್ರೆ- ಸಂಸದ ನಾರಾಯಣಸ್ವಾಮಿ

    ಚಿತ್ರದುರ್ಗ: ಪೌರತ್ವ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಯುತ್ತಿರುವ ಬೆನ್ನಲ್ಲೇ ಸಂಸದ ನಾರಾಯಣಸ್ವಾಮಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

    ಜಿಲ್ಲೆಯ ಹೊಳಲ್ಕೆರೆ ಪಟ್ಟಣದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸಿ ಬಿಜೆಪಿ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ಮುಸ್ಲಿಮರಿಗೆ ಪಾಕಿಸ್ತಾನ, ಹಿಂದೂಗಳಿಗೆ ಭಾರತ ಎಂದು ಗಾಂಧೀಜಿಯವರು ವಿಭಜನೆ ಮಾಡಿ ಕೈಗೊಂಡ ನಿರ್ಧಾರಕ್ಕೆ ಅಂದಿನ ಪ್ರಧಾನಿ ಜವಹರ್ ಲಾಲ್ ನೆಹರು ಮುದ್ರೆ ಒತ್ತಿದ್ದರು. ಸ್ವಾತಂತ್ರ್ಯ ಪೂರ್ವದಲ್ಲಿ ಧರ್ಮದ ಆಧಾರದ ಮೇಲೆ ದೇಶ ವಿಭಜನೆಯಾಗಿತ್ತು. ನಾವೇನು ಸಿಎಎ ವಿಚಾರದಲ್ಲಿ ಹೊಸದಾಗಿ ಕಾನೂನು ಮಾಡಿದ್ದೇವೆಯೇ ಎಂದು ಪ್ರಶ್ನಿಸಿದರು.

    ctd narayanswamy 2

    ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಬಂಡವಾಳ ಮಾಡಿಕೊಂಡು ಹೋರಾಟ, ಪ್ರತಿಭಟನೆ ಮಾಡುತ್ತಿರುವ ಕಾಂಗ್ರೆಸ್ ಮತ್ತು ಕಮ್ಯುನಿಸ್ಟರು ಸಂವಿಧಾನ ಅರಿತು ಚರ್ಚಿಸಲಿ. ದೇಶದಲ್ಲಿ ಶಾಂತಿ ಕದಡುವ ಕೆಲಸ ಬಿಡಲಿ ಎಂದು ವಾಗ್ದಾಳಿ ನಡೆಸಿದರು.

    ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕೊಟ್ಟಿದ್ದಕ್ಕೆ 65 ವರ್ಷಗಳ ಕಾಲ ಜಮ್ಮು ಸಿಎಂಗೆ ಅಲ್ಲಿ ಪ್ರಧಾನಿ ಎನ್ನಲಾಗುತ್ತಿತ್ತು. ಆದರೆ ಜಮ್ಮು ಕಾಶ್ಮೀರಕ್ಕೆ ಭಾರತದ ಪ್ರಧಾನಿ ಹೋದಾಗ ತ್ರಿವರ್ಣ ಧ್ವಜ ಹಾರಿಸುವ ಯೋಗ್ಯತೆ ಕೂಡ ಇವರಿಗೆ ಇರಲಿಲ್ಲ. ದೇಶದಲ್ಲಿ ಇಷ್ಟೆಲ್ಲಾ ಬದಲಾವಣೆ ತಂದು ಎಲ್ಲರ ಹಿತ ಕಾಯುತ್ತಿರುವ ಸರ್ಕಾರವನ್ನು ಪ್ರಶ್ನಿಸುವ ನೈತಿಕತೆ ವಿರೋಧ ಪಕ್ಷಗಳಿಗಿಲ್ಲ ಎಂದರು. ಈ ವೇದಿಕೆಯಲ್ಲಿ ಹೊಳಲ್ಕೆರೆ ಬಿಜೆಪಿ ಶಾಸಕ ಚಂದ್ರಪ್ಪ, ಬಿಜೆಪಿ ರಾಜ್ಯ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನ ಸೇರಿದಂತೆ ಜಿಲ್ಲೆಯ ಬಿಜೆಪಿ ಮುಖಂಡರು ಭಾಗವಹಿಸಿದ್ದರು.

  • ಅದ್ಧೂರಿ ಸ್ವಾಗತದೊಂದಿಗೆ ಗೊಲ್ಲರಹಟ್ಟಿ ಪ್ರವೇಶಿಸಿದ ಸಂಸದ ನಾರಾಯಣಸ್ವಾಮಿ

    ಅದ್ಧೂರಿ ಸ್ವಾಗತದೊಂದಿಗೆ ಗೊಲ್ಲರಹಟ್ಟಿ ಪ್ರವೇಶಿಸಿದ ಸಂಸದ ನಾರಾಯಣಸ್ವಾಮಿ

    ತುಮಕೂರು: ದಲಿತರಿಗೆ ಪ್ರವೇಶ ನಿರಾಕರಿಸಿ ದೇಶದೆಲ್ಲೆಡೆ ಚರ್ಚೆಗೆ ಗ್ರಾಸವಾಗಿದ್ದ ಗ್ರಾಮಕ್ಕೆ ಇಂದು ಚಿತ್ರದುರ್ಗ ಸಂಸದ ನಾರಾಯಣಸ್ವಾಮಿ ಅದ್ಧೂರಿ ಸ್ವಾಗತದೊಂದಿಗೆ ಪ್ರವೇಶಿಸಿದ್ದಾರೆ.

    ಪಾವಗಡ ತಾಲೂಕಿನ ಪೆಮ್ಮನಹಳ್ಳಿ ಗೊಲ್ಲರಹಟ್ಟಿಗೆ ಈ ಹಿಂದೆ ಸಂಸದರು ದಲಿತ ಸಮುದಾಯಕ್ಕೆ ಸೇರಿದವರೆಂದು ಗ್ರಾಮದ ಒಳಗೆ ಪ್ರವೇಶಿಸಲು ಗ್ರಾಮಸ್ಥರು ನಿರಾಕರಿಸಿದ್ದರು. ಇದಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು. ಹಲವು ಸ್ವಾಮೀಜಿಗಳು ಸಹ ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದರು. ಹೀಗಾಗಿ ಇಂದು ಗೊಲ್ಲರಹಟ್ಟಿಗೆ ಸಂಸದ ನಾರಾಯಣಸ್ವಾಮಿಯವರನ್ನು ಆಹ್ವಾನಿಸಿ, ಅದ್ಧೂರಿ ಸ್ವಾಗತ ಕಾರ್ಯಕ್ರಮ ನಡೆಸಲಾಯಿತು.

    vlcsnap 2019 09 23 17h05m15s170

    ಸ್ವಾಗತ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಸಂಸದ ನಾರಾಯಣಸ್ವಾಮಿ, ಗೊಲ್ಲರಹಟ್ಟಿಯಲ್ಲಿ ನಡೆದ ಘಟನೆ ಉದ್ದೇಶ ಪೂರ್ವಕವಾಗಿ ನಡೆದಿಲ್ಲ. ಕೆಲವರು ಈ ಘಟನೆಯಿಂದ ನಮ್ಮ ನಡುವೆ ಕಂದಕ ನಿರ್ಮಾಣ ಮಾಡಿ ರಾಜಕೀಯ ಲಾಭ ಪಡೆಯಲು ಹೊರಟಿದ್ದಾರೆ. ಅಭಿವೃದ್ಧಿ ವಂಚಿತ ಗೊಲ್ಲರಹಟ್ಟಿ ಗ್ರಾಮಗಳ ಸಮೀಕ್ಷೆ ಮಾಡಲು ಬಂದಿದ್ದೆ. ಹಸಿವಿಗೆ ಜಾತಿ ಇಲ್ಲ. ಶಿಕ್ಷಣದ ಹಸಿವು ಇರಬಹುದು. ಆದರೆ ಹಸಿವಿಗೆ ಮಾನವೀಯತೆಯ ಸ್ಪರ್ಶ ಕೊಡಬೇಕು. ನಾನು ಆಗಮಿಸಿದ ಸಂದರ್ಭದಲ್ಲಿ ಇಲ್ಲಿಯ ಜನರು ಹಠ, ದಬ್ಬಾಳಿಕೆಯಿಂದ ಮಾತನಾಡಲಿಲ್ಲ. ಇದಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತೇನೆ ಎಂದು ಸಂಸದ ನಾರಾಯಣಸ್ವಾಮಿ ಸಂತಸ ವ್ಯಕ್ತಪಡಿಸಿದರು.

    ಇಂತಹ ಕೆಲಸ ಸ್ವಾಮೀಜಿಗಳಿಂದ ಹಿಡಿದು ಎಲ್ಲ ವರ್ಗದ ಜನರಿಂದ ನಡೆಯಬೇಕು. ನಾವುಗಳು ಸಮಾಜದಲ್ಲಿ ಜಾಗೃತಿ ಮೂಡಿಸಬೇಕು. ಮುಖ್ಯವಾಹಿನಿಯಿಂದ ಹಿಂದೆ ಇದ್ದರೆ ಅಂಥ ಸಮಾಜವನ್ನು ಮುಖ್ಯವಾಹಿನಿಗೆ ತರಬೇಕು. ನಾನು ಪ್ರಗತಿಪರ ಚಿಂತಕ, ಸಮಾಜ ಸುಧಾರಣೆ ಮಾಡುವುದು ನನ್ನ ಗುರಿ. ಯಾರಿಗೆ ಯಾವ ಯೋಜನೆ ಸಿಗಬೇಕೋ ಅಂತಹವರಿಗೆ ಅದು ತಲುಪಲೇಬೇಕೆಂಬುದು ನನ್ನ ಆದ್ಯತೆ. ಹೀಗಾಗಿ ಗ್ರಾಮಕ್ಕೆ ಆಗಮಿಸಿದ್ದೆ. ಆದರೆ ಅನೇಕ ಕಡೆ ಈ ಘಟನೆ ದುರುಪಯೋಗವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

    vlcsnap 2019 09 23 17h17m59s131

    ದ್ವೇಷ ಹುಟ್ಟಿಸುವ ಕೆಲಸ ಆಗುತ್ತಿದೆ. ಈ ಬೆಳವಣಿಗೆ ದೇಶಕ್ಕೆ ಕಂಟಕ. ಹೀಗಾಗಿ ಸ್ವಾಮೀಜಿಗಳ ಬಳಿ ಮಾತನಾಡಿದ್ದೆ. ಸಮಾಜದ ನಡುವೆ ಇಂತಹ ಕಂದಕ ನೋಡಿಕೊಂಡು ಇರುವವರು ನಿಜವಾದ ಅಪರಾಧಿ. ಅಂಥ ಸಮಾಜವನ್ನು ಎಚ್ಚರಿಸುವವನೇ ನಿಜವಾದ ದಾರ್ಶನಿಕ, ನಿಜವಾದ ಸ್ವಾಮೀಜಿ. ಈ ಘಟನೆಯಿಂದ ಗೊಲ್ಲ ಸಮುದಾಯಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ. ಈ ಗ್ರಾಮದ ಹಿರಿಯರಿಗೆ ವಂದಿಸುತ್ತೇನೆ. ದೇಶ ಕಟ್ಟಲು ಎಲ್ಲರ ಸಹಕಾರ ಬೇಕು. ಮೋದಿ ಅಥವಾ ಅಮಿತ್ ಶಾ ಮಾತ್ರ ದೇಶ ಕಟ್ಟಿಲ್ಲ ಅಥವಾ ಇಂದಿರಾ ಗಾಂಧಿ ಮಾತ್ರ ದೇಶ ಕಟ್ಟಿಲ್ಲ. ದೇಶದ 120 ಕೋಟಿ ಜನರು ದೇಶ ಕಟ್ಟಲು ಪಾಲುದಾರರು ಎಂದು ತಿಳಿಸಿದರು.

    ಈ ಹಿಂದೆ ಪೆಮ್ಮನಹಳ್ಳಿ ಗೊಲ್ಲರಹಟ್ಟಿಗೆ ಸಂಸದ ಎ.ನಾರಾಯಣಸ್ವಾಮಿ ಅವರು ಪ್ರವೇಶಿಸದಂತೆ ಅಡ್ಡಿಪಡಿಸಲಾಗಿತ್ತು. ಇಂದು ಗೊಲ್ಲರಹಟ್ಟಿಯಲ್ಲಿ ಗ್ರಾಮಸ್ಥರು ಅದ್ಧೂರಿ ಸ್ವಾಗತ ಕೋರಿದ್ದಾರೆ. ತಳಿರು ತೋರಣ ಕಟ್ಟಿ ಹಬ್ಬದ ವಾತಾವರಣ ನಿರ್ಮಿಸಿ ಸಂಸದರನ್ನು ಬರಮಾಡಿಕೊಂಡಿದ್ದಾರೆ. ಕಾರ್ಯಕ್ರಮದಲ್ಲಿ ಸಂಸದರ ಜೊತೆಗೆ ಶ್ರೀ ಈಶ್ವರನಂದಪುರಿ ಸ್ವಾಮಿಜಿ, ಶ್ರೀ ಕೃಷ್ಣ ಯಾದವನಾಂದ ಸ್ವಾಮಿಜಿ, ಡಾ. ಶ್ರೀ ಶಾಂತವೀರ ಸ್ವಾಮೀಜಿ, ಬಸವಮೂರ್ತಿ ಮಾದರ ಚನ್ನಯ್ಯ ಸ್ವಾಮಿಜಿ, ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್, ಜಿಲ್ಲಾಧಿಕಾರಿ ರಾಕೇಶ್ ಕುಮಾರ್, ಎಸ್‍ಪಿ ಕೆ.ವಂಶಿಕೃಷ್ಣ, ಜಿಲ್ಲಾ ಮಟ್ಟದ ಸಮಾಜ ಕಲ್ಯಾಣ ಅಧಿಕಾರಿಗಳು ಹಾಗೂ ಇತರ ಗಣ್ಯರು ಭಾಗವಹಿಸಿದ್ದರು.

    vlcsnap 2019 09 23 17h03m13s229

    ಏನಿದು ಘಟನೆ?
    ಗುಡಿಸಲು ಮುಕ್ತ ಯೋಜನೆ ರೂಪಿಸಲು ಗ್ರಾಮಕ್ಕೆ ಆಗಮಿಸಿದ್ದ ಚಿತ್ರದುರ್ಗ ಬಿಜೆಪಿ ಸಂಸದ ನಾರಾಯಣಸ್ವಾಮಿಗೆ ಪಾವಗಡ ತಾಲೂಕಿನ ಪೆಮ್ಮನಹಳ್ಳಿ ಗೊಲ್ಲರಹಟ್ಟಿಯ ಒಳಗಡೆ ಬಿಡದೇ ಗ್ರಾಮಸ್ಥರು ತಡೆ ಹಾಕಿದ್ದರು.

    ಖಾಸಗಿ ಕಂಪನಿಗಳ ತಂಡದೊಂದಿಗೆ ಊರಿಗೆ ಬಂದಿದ್ದ ಸಂಸದ ನಾರಾಯಣಸ್ವಾಮಿ ಪೆಮ್ಮನಹಳ್ಳಿ ಗೊಲ್ಲರಹಟ್ಟಿಗೂ ಭೇಟಿ ಕೊಟ್ಟಿದ್ದರು. ಈ ವೇಳೆ ಎದುರಾದ ಗೊಲ್ಲರಟ್ಟಿ ನಿವಾಸಿಗಳು ಹಟ್ಟಿಯ ಪ್ರವೇಶ ದ್ವಾರದಲ್ಲೇ ತಡೆದು ನಿಲ್ಲಿಸಿ, ಅಲ್ಲಿಯೇ ಕುರ್ಚಿ ಹಾಕಿ ಕೂರಲು ಮನವಿ ಮಾಡಿಕೊಂಡಿದ್ದರು. ಯಾವುದೇ ಕಾರಣಕ್ಕೂ ನಿಮ್ಮ ಜನಾಂಗದವರು ಹಟ್ಟಿಯೊಳಗಡೆ ಹೋಗಬಾರದು ಎಂದು ಪಟ್ಟು ಹಿಡಿದಿದ್ದರು. ಸಂಸದ ನಾರಾಯಣಸ್ವಾಮಿ ಎಷ್ಟೇ ಮನವೊಲಿಸಿದರೂ ಗೊಲ್ಲರಹಟ್ಟಿ ನಿವಾಸಿಗಳು ಒಳಗೆ ಬಿಟ್ಟುಕೊಂಡಿರಲಿಲ್ಲ. ನೀವು ಗೊಲ್ಲರಹಟ್ಟಿ ಪ್ರವೇಶ ಮಾಡಿದರೆ ಕೇವಲ ನಮಗೆ ಮಾತ್ರ ಅಲ್ಲ, ನಿಮಗೂ ಕೆಟ್ಟದಾಗುತ್ತದೆ. ಬಲವಂತಾಗಿ ನುಗ್ಗಿದವರಿಗೆ, ಸುಳ್ಳು ಹೇಳಿ ಒಳಗೆ ಬಂದಿದ್ದ ಹಲವರಿಗೆ ಅನಾಹುತ ಉಂಟಾಗಿದೆ. ಆ ಅನಾಹುತ ನಿಮಗೆ ಆಗುವುದು ಬೇಡ ಎಂದು ನಾರಾಯಣಸ್ವಾಮಿಯವರಿಗೆ ಸಮಾಧಾನಪಡಿಸಿದ್ದರು.

    TMK MP CAST AV 4

    ನೂರಾರು ವರ್ಷದ ಹಿಂದೆ ಗೊಲ್ಲರ ಚಿತ್ರಲಿಂಗೇಶ್ವರ ದೇವರು-ಹರಿಜನರ ದೇವರ ನಡುವೆ ಕೆಟ್ಟ ಘಟನೆ ನಡೆದಿತ್ತು. ಅಲ್ಲಿಂದ ಇಲ್ಲಿಯವರೆಗೂ ಯಾವ ಹರಿಜನರನ್ನೂ ಬಿಟ್ಟುಕೊಳ್ಳುತ್ತಿಲ್ಲ ಎಂದು ಗ್ರಾಮಸ್ಥರು ಕಥೆ ಕಟ್ಟಿದ್ದರು. ಇಷ್ಟೆಲ್ಲ ಅವಮಾನ ಸಹಿಸಿಕೊಂಡು ಸಂಸದ ನಾರಾಯಣಸ್ವಾಮಿ ಸೌಜನ್ಯದಿಂಲೇ ಅರ್ಧ ಗಂಟೆ ಕಾರಿನಲ್ಲೇ ಕುಳಿತುಕೊಂಡಿದ್ದರು.

    ನಾನು ಅತಿಹೆಚ್ಚು ಗೊಲ್ಲರ ಮತದಿಂದ ಗೆದ್ದು ಬಂದಿದ್ದೆನೆ. ಅವರ ಸಮುದಾಯಕ್ಕೆ ಏನಾದರೊಂದು ಒಳ್ಳೆಯದು ಮಾಡಬೇಕು ಎಂದು ಬಂದಿದ್ದೇನೆ. ಈ ಒಂದು ಕಾರಣಕ್ಕೆ ನೀವು ಅವಮಾನ ಮಾಡಿದರೂ ಸುಮ್ಮನಿದ್ದೇನೆ ಎಂದು ಸೌಜನ್ಯದಿಂದ ವರ್ತಿಸಿದ್ದರು. ಗೊಲ್ಲರಹಟ್ಟಿ ಒಳಗೆ ಹೋದ ತಂಡದ ಸದಸ್ಯರು ಹೊರಗೆ ಬರುವವರೆಗೂ ಸುಮಾರು ಅರ್ಧ ಗಂಟೆಗಳ ಕಾಲ ಸಂಸದರು ಕಾರಿನಲ್ಲಿ ಕುಳಿತು, ಬಳಿಕ ತಂಡದ ಜತೆ ವಾಪಾಸ್ ಹೋಗಿದ್ದರು.