Tag: ಪೃಥ್ವಿ ಕೋಣನೂರು

  • ‘ಪಿಂಕಿ’ಯ ಸೃಷ್ಟಿಕರ್ತ ಪೃಥ್ವಿ ತೆರೆದಿಟ್ಟ ಅಚ್ಚರಿ!

    ‘ಪಿಂಕಿ’ಯ ಸೃಷ್ಟಿಕರ್ತ ಪೃಥ್ವಿ ತೆರೆದಿಟ್ಟ ಅಚ್ಚರಿ!

    ಲ್ಲೆಡೆಯಿಂದಲೂ ಕುತೂಹಲ ಮೂಡಿಸಿರುವ ‘ಪಿಂಕಿ ಎಲ್ಲಿ’ (Pinki Elli) ಚಿತ್ರ ಈ ವಾರ ಅಂದರೆ, ಜೂನ್ 2ರಂದು ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ಸಿನಿಮೋತ್ಸವಗಳಲ್ಲಿ ಪ್ರದರ್ಶನಗೊಂಡು ಪ್ರಶಸ್ತಿ ಪಡೆದುಕೊಂಡ ಸಿನಿಮಾಗಳು ಸಾಮಾನ್ಯ ಪ್ರೇಕ್ಷಕರಿಗೆ ತಲುಪುವುದಿಲ್ಲ ಅಂತೊಂದು ಅಪವಾದವಿತ್ತು. ಅದನ್ನು ಒಡೆಯುವಂತೆ ಇದೀಗ ‘ಪಿಂಕಿ ಎಲ್ಲಿ’ ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳ್ಳಲು ತಯಾರಾಗಿದೆ. ಇದೆಲ್ಲದರ ಹಿಂದಿರುವ ಶಕ್ತಿಯಂಥವರು ನಿರ್ದೇಶಕ ಪೃಥ್ವಿ ಕೋಣನೂರು.

    pinky 1

    ಈ ಹಿಂದೆ ‘ರೈಲ್ವೆ ಚಿಲ್ಡ್ರನ್ಸ್’ ಎಂಬ ಚಿತ್ರದ ಮೂಲಕ ವ್ಯಾಪಕವಾಗಿ ಹೆಸರು ಗಳಿಸಿಕೊಂಡಿದ್ದ ಪೃಥ್ವಿ, ಪಿಂಕಿ ಎಲ್ಲಿಚಿತ್ರದ ಮೂಲಕ ತಮ್ಮದು ಭಿನ್ನ ಪಥವೆಂಬುದನ್ನು ಸಾಬೀತುಗೊಳಿಸಿದ್ದಾರೆ. ಈಗಾಗಲೇ ‘ಪಿಂಕಿ ಎಲ್ಲಿ’ಯ ಒಂದಷ್ಟು ಝಲಕ್ಕುಗಳು ಹೊರ ಬಂದಿವೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶನಗೊಂಡಿರುವ ಈ ಚಿತ್ರ ಒಂದಷ್ಟು ಪ್ರಶಸ್ತಿಗಳನ್ನೂ ಬಾಚಿಕೊಂಡಿದೆ. ಇದೆಲ್ಲವನ್ನೂ ನೋಡುತ್ತಿದ್ದರೆ, ಇಂಥಾದ್ದೊಂದು ಕಥೆ ಹುಟ್ಟಿಕೊಂಡಿರೋದು ಹೇಗೆಂಬ ಪ್ರಶ್ನೆ ಸಹಜವಾಗಿಯೇ ಮೂಡಿಕೊಳ್ಳುತ್ತೆ. ಅದರ ಬಗ್ಗೆ ಪೃಥ್ವಿ (Pruthvi) ಒಂದಷ್ಟು ಅಚ್ಚರಿಯ ಅಂಶಗಳನ್ನು ತೆರೆದಿಟ್ಟಿದ್ದಾರೆ.

    pinky 3

    ಸದಾ ಭಿನ್ನ ಕಥಾನಕಗಳ ಧ್ಯಾನದಲ್ಲಿರುವ ಪೃಥಿ ಅವರೊಳಗೆ ಈ ಕಥೆ ಮೂಡಿಕೊಂಡಿದ್ದದ್ದು ವರ್ಷಾಂತರಗಳ ಹಿಂದೆ. 2007-08ನೇ ಸಾಲಿನಲ್ಲಿ ಒಂದು ಘಟನೆ ಮಾಧ್ಯಮಗಳಲ್ಲಿಯೂ ಸದ್ದು ಮಾಡಿತ್ತು. ಅದರ ಬಗ್ಗೆ ಕೇಳಿ ಜನಸಾಮಾನ್ಯರೂ ಬೆಚ್ಚಿಬಿದ್ದಿದ್ದರು. ಆ ಎಳೆಯಿಟ್ಟುಕೊಂಡೇ ಭಿನ್ನ ಕಥೆಯೊಂದನ್ನು ಸಹಜವಾಗಿ ಸಿದ್ಧಪಡಿಸಲು ಪೃಥ್ವಿ ಮುಂದಾಗಿದ್ದರು. ಆದರೆ ಅದೇನು ಸಲೀಸಿನ ವಿಚಾರವಾಗಿರಲಿಲ್ಲ. ಅದಕ್ಕಾಗಿ ಈ ವ್ಯವಸ್ಥೆಯ ಒಳ ಹೊಕ್ಕು, ರಿಸರ್ಚುಗಳನ್ನು ನಡೆಸಬೇಕಾಗಿತ್ತು. ಅದೆಲ್ಲವನ್ನ ವರ್ಷಗಳ ಕಾಲ ಮಾಡಿದ ಪೃಥ್ವಿ ಕಡೆಗೂ ಕಥೆ ಚಿತ್ರಕಥೆಯೆಲ್ಲವನ್ನೂ ಮುಗಿಸಿಕೊಂಡು ರೆಡಿಯಾಗಿದ್ದರು. ಆಗ ಎದುರಾದ ಪ್ರಶ್ನೆಯೇ ನಿರ್ಮಾಪಕರು ಯಾರು ಎಂದು. ಈ ಬಗ್ಗೆ ಕೃಷ್ಣೇಗೌಡರ ಬಳಿ ಚರ್ಚಿಸಿದಾಗ ಅವರು ಬೇರೇನೂ ಯೋಚಿಸದೆ ತಾವು ಹಣ ಹೂಡುವುದಾಗಿ ಒಪ್ಪಿಕೊಂಡಿದ್ದರಂತೆ. ಆ ನಂತರ ಯಾವುದರಲ್ಲಿಯೂ ಹಸ್ತಕ್ಷೇಪ ಮಾಡದೆ, ಸಿನಿಮಾ ಮೂಡಿ ಬರಲು ಸಹಕರಿಸಿದರು. ಇದನ್ನೂ ಓದಿ:ಮಕ್ಕಳಿಗೆ ಗುಲಾಬಿ ಹೂ, ಚಾಕ್ಲೇಟ್‌ ನೀಡಿ ಸ್ವಾಗತಿಸಿದ ಡಾಲಿ

    pinky 2

    ಈ ಚಿತ್ರಕ್ಕೆ ಗ್ರಾಮೀಣ ಭಾಗದ ಪ್ರತಿಭೆಗಳನ್ನು ಹುಡುಕಿ ಅವರಿಗೆ ನಟನೆ ಕಲಿಸಿದ್ದೂ ಒಂದು ಸಾಹಸ. ಗುಂಜಾಲಮ್ಮ, ಸಂಗಮ್ಮ, ಅನಸೂಯ ಮುಂತಾದ ಮಹಿಳೆಯರು ಈ ಚಿತ್ರದಲ್ಲಿ ಮನೋಜ್ಞವಾಗಿ ನಟಿಸಿದ್ದಾರೆ. ‘ಬಿಗ್‌ ಬಾಸ್‌’ (Bigg Boss Kannada) ಖ್ಯಾತಿಯ ಅಕ್ಷತಾ ಪಾಂಡವಪುರ (Akshatha Pandavapura) ಕೂಡಾ ಅಷ್ಟೇ ತೀವ್ರವಾದ ಪಾತ್ರಕ್ಕೆ ಜೀವ ತುಂಬಿದ್ದಾರೆ. ಹೀಗೆ ‘ಪಿಂಕಿ ಎಲ್ಲಿ’ ಮೂಲಕ ಸುದ್ದಿಯಲ್ಲಿರುವ ಪೃಥ್ವಿ ಮೂಲತಃ ಐಟಿ ವಲಯದವರು. ಸಿನಿಮಾದಲ್ಲೇನಾದರೂ ಸಾಧಿಸಬೇಕೆಂಬ ಹಂಬಲದೊಂದಿಗೆ ಬಂದ ಅವರು ಪದೇ ಪದೆ ಭಿನ್ನ ಪ್ರಯತ್ನಗಳ ಮೂಲಕ ಹೆಸರಾಗುತ್ತಿದ್ದಾರೆ. ‘ಪಿಂಕಿ ಎಲ್ಲಿ’ ಚಿತ್ರವಂತೂ ಅವರಿಗೆ ಮತ್ತಷ್ಟು ಹೆಸರು ತಂದು ಕೊಟ್ಟಿದೆ.

  • ಶೀಘ್ರದಲ್ಲೇ ತೆರೆಗೆ ಬರಲಿದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿ ಪಿಂಕಿ ಎಲ್ಲಿ ಚಿತ್ರ

    ಶೀಘ್ರದಲ್ಲೇ ತೆರೆಗೆ ಬರಲಿದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿ ಪಿಂಕಿ ಎಲ್ಲಿ ಚಿತ್ರ

    ಸಿದ್ಧಸೂತ್ರಗಳ ಸರಹದ್ದು ದಾಟಿದ ಚಿತ್ರಗಳು ಕನ್ನಡದಲ್ಲಿ ಆಗಾಗ ಸದ್ದು ಮಾಡುತ್ತವೆ. ಕನ್ನಡ ಚಿತ್ರರಂಗದ ಘನತೆಯನ್ನು ಗಡಿಗಳಾಚೆಗೂ ಎತ್ತಿ ಹಿಡಿದು ಇತಿಹಾಸ ಬರೆಯುತ್ತವೆ. ಆ ಸಾಲಿಗೆ ಇತ್ತೀಚಿನ ಸೇರ್ಪಡೆ `ಪಿಂಕಿ ಎಲ್ಲಿ?’ (Pinki Elli)  ಸಿನಿಮಾ. ಹಲವಾರು ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡು, ಪ್ರಶಸ್ತಿಗಳಿಗೆ ಭಾಜನವಾಗಿರುವ ಈ ಚಿತ್ರವೀಗ ಬಿಡುಗಡೆಗೆ ಅಣಿಗೊಂಡಿದೆ. ಬಹುಮುಖ ಪ್ರತಿಭೆಯ ಖ್ಯಾತ ನಿರ್ಮಾಪಕ ಕೃಷ್ಣೇ ಗೌಡ (Krishna Gowda) ನಿರ್ಮಾಣ ಮಾಡಿ, ಪೃಥ್ವಿ ಕೋಣನೂರು (Prithvi Konanur) ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಚಿತ್ರ ಇದೇ ಜೂನ್ 2ರಂದು ಅದ್ದೂರಿಯಾಗಿ  ರಿಲೀಸ್ ಆಗುತ್ತಿದೆ.

    Pinki elli 3

    ಸತ್ಯ ಘಟನೆಯನ್ನಾಧರಿಸಿ ರೂಪುಗೊಂಡಿರುವ ಈ ಸಿನಿಮಾ ಭಿನ್ನ ಧಾಟಿಯದ್ದು. ಕಮರ್ಶಿಯಲ್ ಅಲೆಯ ಅಬ್ಬರದಾಚೆಗೂ ಉಸಿರು ಬಿಗಿ ಹಿಡಿದು ನೋಡುವಂತೆ ಮಾಡುವ, ವಾಸ್ತವಿಕ ನೆಲೆಯಲ್ಲಿಯೇ ಕುತೂಹಲ ನಿಗಿನಿಗಿಸುವಂತೆ ಮಾಡುವ, ಕಣ್ಣಂಚನ್ನು ತೇವಗೊಳಿಸುತ್ತಲೇ ಆಲೋಚನೆಗೆ ಹಚ್ಚುವ ಈ ಸಿನಿಮಾ ಈಗಾಗಲೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದೆ. ಒಂದು ಮನಸು ಮುರಿದ ದಂಪತಿ ಮತ್ತು ಪುಟ್ಟ ಮಗುವಿನ ಸುತ್ತಾ, ನಾನಾ ಕಾಡುವ ಪಾತ್ರಗಳೊಂದಿಗೆ ಚಲಿಸುವ ಈ ಕಥಾನಕ ಕನ್ನಡದ ಮಟ್ಟಿಗೆ ವಿಭಿನ್ನ ಪ್ರಯತ್ನ. ಇದನ್ನೂ ಓದಿ:RRR ಸಿನಿಮಾದ ಐರಿಶ್ ನಟ ರೇ ಸ್ಟೀವನ್ಸನ್ ನಿಧನ

    Pinki elli 5

    ಸಾಮಾನ್ಯವಾಗಿ ಸಿನಿಮೋತ್ಸವಗಳಲ್ಲಿ ಪ್ರದರ್ಶಿತಗೊಂಡ, ಪ್ರಶಸ್ತಿಗಳನ್ನು ಬಾಚಿಕೊಂಡ ಸಿನಿಮಾಗಳು ಕಮರ್ಶಿಯಲ್ ಸಿನಿಮಾಗಳಿಗೆ ಪೈಪೋಟಿ ಕೊಟ್ಟು ಸಿನಿಮಾ ಮಂದಿರಗಳಲ್ಲಿ ಬಿಡುಗಡೆಯಾಗೋದು, ಸಾಮಾನ್ಯ ಪ್ರೇಕ್ಷಕರನ್ನು ತಲುಪೋದು ಅತ್ಯಂತ ಅಪರೂಪ. ಆದರೆ ನಿರ್ಮಾಪಕರಾದ ಕೃಷ್ಣೇಗೌಡ ಅದನ್ನು ಸಾಧ್ಯವಾಗಿಸಿದ್ದಾರೆ. ನಿರ್ದೇಶಕ ಪೃಥ್ವಿ ಕೋಣನೂರರ ಕಲಾವಂತಿಕೆ ಅದಕ್ಕೆ ಸೂಕ್ತ ರೀತಿಯಲ್ಲಿ ಸಾಥ್ ಕೊಟ್ಟಿದೆ. ಈ ಹಿಂದೆ ರೈಲ್ವೆ ಚಿಲ್ಡ್ರನ್ ಎಂಬ ಚೆಂದದ ಚಿತ್ರ ಮಾಡಿ ಗಮನ ಸೆಳೆದಿದ್ದ ಪೃಥ್ವಿ, ಈ ಮೂಲಕ ಮತ್ತೊಂದು ಭಿನ್ನ ಚಿತ್ರದೊಂದಿಗೆ ಅಚ್ಚರಿ ಮೂಡಿಸಿದ್ದಾರೆ.

    Pinki elli 2

    ಈ ಸಿನಿಮಾದಲ್ಲಿ ಅತ್ಯಂತ ಸಹಜ ಸ್ಥಿತಿಯಲ್ಲಿ ಕದಲುವ ನಾನಾ ಪಾತ್ರಗಳಿವೆ. ಅದರಲ್ಲಿ ಪ್ರಧಾನ ಪಾತ್ರವನ್ನು ಪ್ರತಿಭಾನ್ವಿತ ರಂಗಭೂಮಿ ಕಲಾವಿದೆ, ನಟಿ ಅಕ್ಷತಾ ಪಾಂಡವಪುರ (Akshata Pandavapur) ನಿಭಾಯಿಸಿದ್ದಾರೆ. ಸವಾಲಿನದ್ದಾದ ಈ ಪಾತ್ರವನ್ನು ಲೀಲಾಜಾಲವಾಗಿ ಆವಾಹಿಸಿಕೊಳ್ಳುವ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಗಳಿಸಿಕೊಂಡಿದ್ದಾರೆ. ಪ್ರಶಸ್ತಿಗೂ ಭಾಜನರಾಗಿದ್ದಾರೆ. ದೀಪಕ್ ಸುಬ್ರಮಣ್ಯ, ಪೃಥ್ವಿ ಕೋಣನೂರು ಮುಂತಾದವರ ತಾರಾಗಣವಿದೆ.

    Pinki elli 4

    ಈ ಬಗೆಯ ಚಿತ್ರಗಳು ವ್ಯಾವಹಾರಿಕವಾಗಿ ಗೆಲುವು ಕಾಣೋದು ಕಷ್ಟ ಎಂಬಂಥಾ ವಾತಾವರಣ ಇದುವರೆಗಿತ್ತು. ಆದರೆ ಪಿಂಕಿ ಎಲ್ಲಿ ಚಿತ್ರ ಅದನ್ನು ಸುಳ್ಳಾಗಿಸಿದೆ. ಈಗಾಗಲೇ ಇದರ ರೀಮೇಕ್ ಹಕ್ಕುಗಳಿಗೆ ಬೇಡಿಕೆ ಬರುತ್ತಿದೆ. ಡಬ್ಬಿಂಗ್ ಹಕ್ಕುಗಳಿಗಾಗಿ ಮಾತುಕತೆ ನಡೆಯುತ್ತಿದೆ. ಇದೆಲ್ಲವೂ ಚಿತ್ರತಂಡವನ್ನು ಖುಷಿಗೊಳಿಸಿದೆ. ಇಂಥಾ ನಾನಾ ವಿಶೇಷತೆಗಳನ್ನು ಹೊಂದಿರುವ ಈ ಸಿನಿಮಾ ಇದೇ ಜೂನ್ 2ರಂದು ತೆರೆಗೆ ಬರಲಿದೆ.