ನವದೆಹಲಿ: ಯೋಧರು ಕಾರ್ಗಿಲ್ ವಿಜಯೋತ್ಸವವವನ್ನು ಅದ್ಧೂರಿಯಾಗಿ ಆಚರಿಸುತ್ತಿದ್ದಾರೆ. ವಿಜಯೋತ್ಸವದ ಅಂಗವಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಜಮ್ಮು ಕಾಶ್ಮೀರದ ಕಾರ್ಗಿಲ್ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿದ್ದು, ಇದೇ ವೇಳೆ ಪರ್ವತಗಳಿಗೆ ಸಂಪರ್ಕ ಕಲ್ಪಿಸುವ ಎರಡು ಸೇತುವೆಗಳನ್ನು ಉದ್ಘಾಟಿಸಲಿದ್ದಾರೆ.
ಆಪರೇಷನ್ ವಿಜಯ್‍ನ 20ನೇ ವರ್ಷಾಚರಣೆ ಹಿನ್ನೆಲೆ ಶನಿವಾರ ಜಮ್ಮು ಕಾಶ್ಮೀರದಲ್ಲಿರುವ ಕಾರ್ಗಿಲ್ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿ ರಾಜನಾಥ್ ಸಿಂಗ್ ಗೌರವ ಸಲ್ಲಿಸಿದರು. 1999ರಲ್ಲಿ ನಡೆದ ಕಾರ್ಗಿಲ್ ಯುದ್ಧದಲ್ಲಿ ಪಾಕ್ ಸೈನಿಕರು ಹಾಗೂ ಉಗ್ರರ ಒಳನುಸುಳುವಿಕೆ ವಿರುದ್ಧ ನಡೆದ ಯುದ್ಧದಲ್ಲಿ ಭಾರತ ಜಯಗಳಿಸಿತ್ತು.
ಯುದ್ಧ ಸ್ಮಾರಕಕ್ಕೆ ಗೌರವ ಸಲ್ಲಿಸಿದ ನಂತರ ಬಾರ್ಡರ್ ರೋಡ್ಸ್ ಆರ್ಗನೈಸೇಶನ್ ಕಥುವಾ ಜಿಲ್ಲೆಯ ಉಝ್ ಹಾಗೂ ಸಂಬ ಜಿಲ್ಲೆಯ ಬಸಂತರ್‍ನಲ್ಲಿ ನಿರ್ಮಿಸಿರುವ ಎರಡು ಸೇತುವೆಗಳನ್ನು ರಾಷ್ಟ್ರಕ್ಕೆ ಸಮರ್ಪಣೆ ಮಾಡಲಿದ್ದಾರೆ. ಉಝ್ ಸೇತುವೆ 1 ಕಿ.ಮೀ ಉದ್ದವಿದ್ದು, ಬಸಂತರ್ ಸೇತುವೆ 617.4 ಕಿ.ಮೀ.ಉದ್ದವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
1999ರಲ್ಲಿ ಭಾರತೀಯ ಸೇನೆ ಅಕ್ರಮವಾಗಿ ಒಳ ನುಸುಳುತ್ತಿದ್ದ ಪಾಕಿಸ್ತಾನ ಸೈನಿಕರು ಹಾಗೂ ಉಗ್ರರ ವಿರುದ್ಧ ಹೋರಾಡಿ, ಶ್ರೀನಗರದ ಲೇಹ್ ಹೆದ್ದಾರಿಯನ್ನು ಗಮನದಲ್ಲಿರಿಸಿಕೊಂಡು ಪಾಕಿಸ್ತಾನ ಆಕ್ರಮಿಸಿದ್ದ ಹಲವು ಪರ್ವತ ಶಿಖರಗಳನ್ನು ವಶಪಡಿಸಿಕೊಂಡಿತ್ತು.
ಜು.14ರ ಭಾರತದ ವಿಜಯ ದಿನದಂದು ರಾಜನಾಥ್ ಸಿಂಗ್ ಅವರು ದೆಹಲಿಯ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಭೆಟಿ ನೀಡಿ, ‘ವಿಜಯ ಜ್ವಾಲೆ’ಯನ್ನು ಹೊತ್ತಿಸಿದ್ದರು. ಜ್ವಾಲೆಯು ಜು.26 ರಂದು ಡ್ರಾಸ್ ತಲುಪಲಿದ್ದು, ಸುಮಾರು 9 ಪಟ್ಟಣಗಳು ಹಾಗೂ ನಗರಗಳನ್ನು ಹಾದು ಹೋಗಲಿದೆ. ನಂತರ ಕಾರ್ಗಿಲ್‍ಗೆ ತಲುಪಿ ಶಾಶ್ವತ ವಿಜಯ ಜ್ವಾಲೆ ಬಳಿ ವಿಲೀನಗೊಳಿಸಲಾಗುತ್ತದೆ.

ವಿಜಯ ದಿನವನ್ನು ಭಾರತೀಯ ಸೇನೆ ವಿಜೃಂಭಣೆಯಿಂದ ಆಚರಿಸುತ್ತಿದ್ದು, ಈ ಮೂಲಕ ಆಪರೇಷನ್ ವಿಜಯ್‍ನಲ್ಲಿ ಭಾಗವಹಿಸಿದ ಯೋಧರಿಗೆ ನಮನ ಸಲ್ಲಿಸಲಾಗುತ್ತಿದೆ. ಆಪರೇಷನ್ ವಿಜಯ್‍ನ್ನು ‘ರಿಮೆಂಬರ್, ರೀಜಾಯ್ಸ್ ಆಂಡ್ ರಿನ್ಯೂ(ನೆನಪಿಡಿ, ಹೆಮ್ಮೆಪಡಿ ಮತ್ತು ನವೀಕರಿಸಿ)’ ಎಂಬ ಘೋಷವಾಕ್ಯದೊಂದಿಗೆ ಆಚರಿಸಲಾಗುತ್ತಿದೆ. ಅಲ್ಲದೆ, ಸೈನ್ಯದ ಮೂರು ಬೆಟಾಲಿಯನ್‍ಗಳು ಅಸಾಧ್ಯವಾಗದ ಸ್ಥಿಯಲ್ಲಿ ಹೋರಾಡಿದ ಶಿಖರಗಳಿಗೆ ದಂಡಯಾತ್ರೆ ಕೈಗೊಳ್ಳುತ್ತಿವೆ.

ಕಾರ್ಗಿಲ್ ವಿಜಯ ದಿನದ ಅಂಗವಾಗಿ ಇಂಡೋ ಟಿಬೇಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಮತ್ತು ಬಿಎಸ್‍ಎಫ್ ಯೋಧರ ತಂಡಗಳು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೋಂಡಿದ್ದು, ಸೈನಿಕರು, ಪೊಲೀಸ್ ಹಾಗೂ ಅರೆಸೇನಾ ಪಡೆಗಳ ಧೈರ್ಯದ ಕಥೆಗಳನ್ನು ಪ್ರದರ್ಶಿಸಲಿವೆ. ಹೀಗಾಗಿ ವಿವಿಧ ಕಾರ್ಯಕ್ರಮಗಳನ್ನು ಸೇನೆ ಹಾಕಿಕೊಂಡಿದ್ದು, ಕಾರ್ಗಿಲ್ ವಿಜಯ ದಿನದ ಬಳಿ ಸಾವನ್ನಪ್ಪಿದ ಸೈನಿಕರ ಕುಟುಂಬ ಸದಸ್ಯರನ್ನು ಗೌರವಿಸಲಾಗುತ್ತಿದೆ.

ಕಾರ್ಯಕ್ರಮಗಳ ಭಾಗವಾಗಿ ರಕ್ತದಾನ ಶಿಬಿರ, ಆರೋಗ್ಯ ಶಿಬಿರ, ಪ್ರೇರಣೆ ನೀಡುವ ಉಪನ್ಯಾಸ, ಶಾಲಾ ಮಕ್ಕಳಿಗೆ ಕಾರ್ಗಿಲ್ ಪ್ರದೇಶದ ಶೈಕ್ಷಣಿ ಪ್ರವಾಸವನ್ನು ಏರ್ಪಡಿಸಲಾಗಿದೆ. ಅಲ್ಲದೆ, ಕಾರ್ಗಿಲ್ ವಿಜಯದ ಕುರಿತು ರಕ್ಷಣಾ ಸಚಿವಾಲಯದಿಂದ ನಿರ್ಮಿಸಿದ 7 ನಿಮಿಷಗಳ ಕಿರು ಚಿತ್ರ, ಫೋಟೊ ಗ್ಯಾಲರಿ, ಸೈನಿಕರ ಶೌರ್ಯ ಬಿಂಬಿಸುವ ಚಿತ್ರಗಳನ್ನು ಪ್ರದರ್ಶಿಸಲಾಗುತ್ತಿದೆ. ಈ ಎಲ್ಲ ಕಾರ್ಯಕ್ರಮಗಳು ಜು.27ರ ವರೆಗೆ ನಡೆಯಲಿವೆ ಎಂದು ಇಂಡೋ ಟಿಬೇಟಿಯನ್ ಬಾರ್ಡರ್ ಪೊಲೀಸ್(ಐಟಿಬಿಪಿ) ವಕ್ತಾರ ವಿವೇಕ್ ಪಾಂಡೆ ತಿಳಿಸಿದ್ದಾರೆ.