Tag: ಚನ್ನಪಟ್ಟಣ

  • ರಾಜ್ಯದ ಉಪಚುನಾವಣೆಯಲ್ಲಿ ಮೂರು ಕ್ಷೇತ್ರವೂ ಕಾಂಗ್ರೆಸ್ ಪಾಲು – ಫಲಕೊಡದ ಗೌಡರ ತಂತ್ರ, ಕೈಹಿಡಿದ ಮುಸ್ಲಿಂ ಮತ!

    ರಾಜ್ಯದ ಉಪಚುನಾವಣೆಯಲ್ಲಿ ಮೂರು ಕ್ಷೇತ್ರವೂ ಕಾಂಗ್ರೆಸ್ ಪಾಲು – ಫಲಕೊಡದ ಗೌಡರ ತಂತ್ರ, ಕೈಹಿಡಿದ ಮುಸ್ಲಿಂ ಮತ!

    ಬೆಂಗಳೂರು: ಹೆಚ್‌.ಡಿ ಕುಮಾರಸ್ವಾಮಿ (HD Kumaraswamy), ಬಸವರಾಜ ಬೊಮ್ಮಾಯಿ ಹಾಗೂ ಈ. ತುಕಾರಾಮ್‌ ಅವರ ರಾಜೀನಾಮೆಯಿಂದ ತೆರವಾದ ಮೂರು ಕ್ಷೇತ್ರಗಳಿಗೆ ಉಪಚುನಾವಣೆ (By Election) ನಡೆದರೂ ರಾಜ್ಯದ ಮಟ್ಟಿಗೆ ಹೆಚ್ಚು ಸದ್ದು ಮಾಡಿದ್ದು, ಹೈವೋಲ್ಟೇಜ್ ಕಣ ಚನ್ನಪಟ್ಟಣ.

    ಅಂತಿಮವಾಗಿ ಎಲ್ಲರ ಲೆಕ್ಕಾಚಾರ ತಲೆಕೆಳಗು ಮಾಡಿ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ ಯೋಗೇಶ್ವರ್ (CP Yogeshwar) ಗೆಲುವಿನ ನಗಾರಿ ಬಾರಿಸಿದ್ದಾರೆ. ಕಾಂಗ್ರೆಸ್ ರೂಪಿಸಿದ ಚಕ್ರವ್ಯೂಹ ಬೇಧಿಸುವಲ್ಲಿ ನಿಖಿಲ್ ಕುಮಾರಸ್ವಾಮಿ 3ನೇ ಬಾರಿಯೂ ವಿಫಲರಾಗಿದ್ದಾರೆ. ಈ ಪ್ರತಿಷ್ಠೆಯ ರಾಜಕೀಯ ಆಟದಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್ (DK Shivakumar) ಕೈ ಮೇಲಾಗಿದೆ. ಇದನ್ನೂ ಓದಿ: ಜೈಲರ್‌ ಬಾಕ್ಸ್‌ನಿಂದ ಬ್ಯಾಲೆಟ್‌ ಬಾಕ್ಸ್‌ವರೆಗೆ – ಒಂದೇ ವರ್ಷದಲ್ಲಿ 2ನೇ ಬಾರಿ ಹೇಮಂತ್‌ ಸೊರೆನ್‌ ಸಿಎಂ

    Shiggaon By Poll 2

    ಸ್ವಂತ ಕ್ಷೇತ್ರದಲ್ಲಿ ಪುತ್ರನನ್ನು ಗೆಲ್ಲಿಸಲಾಗದೇ ಕೇಂದ್ರ ಸಚಿವ ಹೆಚ್‌.ಡಿ ಕುಮಾರಸ್ವಾಮಿ ಮುಜುಗರ ಅನುಭವಿಸಿದ್ದಾರೆ. ದೇವೇಗೌಡರು ನಿರಂತರ 10 ದಿನ ಪ್ರಚಾರ ನಡೆಸಿ ಅಬ್ಬರಿಸಿದರೂ, ಬಿಜೆಪಿ ನಾಯಕರು ಬಂದು ಸಂಘಟಿತವಾಗಿ ಪ್ರಚಾರ ನಡೆಸಿದ್ರೂ, ಅದು ನಿಖಿಲ್‌ಗೆ ಗೆಲುವು ತಂದುಕೊಡಲಿಲ್ಲ. ಮತ ಎಣಿಕೆಯ ಮೊದಲ 6 ಸುತ್ತಿನ ವರೆಗೂ ಹಾವು – ಏಣಿ ಆಟ ನಡೆದಿತ್ತು. ಆದ್ರೆ 6ನೇ ಸುತ್ತಿನ ಬಳಿಕ ಫಲಿತಾಂಶದ ದಿಕ್ಕೇ ಬದಲಾಯಿತು. ಯೋಗೇಶ್ವರ್‌ ಸತತ ಮುನ್ನಡೆ ಸಾಧಿಸುತ್ತಾ ಹೋದ್ರು, ಇದರಿಂದ ಗೆಲುವು ʻಕೈʼ ಪಾಲಾಯಿತು.

    ಮೂರು ಕ್ಷೇತ್ರಗಳ ಫಲಿತಾಂಶ ಹೊರ ಬೀಳುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮದಲ್ಲಿ ಮುಳುಗಿದ್ರೆ, ಜೆಡಿಎಸ್-ಬಿಜೆಪಿ ಕಾರ್ಯಕರ್ತರು ಮೌನಕ್ಕೆ ಶರಣಾದ್ರು. ಸೋಲು ಗೆಲುವಿನ ಬಗ್ಗೆ ಎಂದಿನಂತೆ ರಾಜಕಾರಣಿಗಳು ಮಾತಾಡಿದರು. ಗೌಡರ ಒಕ್ಕಲಿಗ ನಾಯಕತ್ವವನ್ನು ಜನ ಕಿತ್ಕೊಂಡಿದ್ದಾರೆ ಎಂದು ಯೋಗೇಶ್ವರ್ ವ್ಯಾಖ್ಯಾನಿಸಿದರು. ಇದನ್ನೂ ಓದಿ: ಬೊಂಬೆನಗರಿಯಲ್ಲಿ ಯೋಗೇಶ್ವರ್ ಮ್ಯಾಜಿಕ್‌ ಹೇಗಾಯ್ತು? ಹಿಂದೆ ಯಾವ ಪಕ್ಷದಿಂದ ಯಾವಾಗ ಗೆದ್ದಿದ್ದರು?

    Shiggaon By Poll

    ಚನ್ನಪಟ್ಟಣ ಫಲಿತಾಂಶ – ಯಾರಿಗೆ ಎಷ್ಟು ಮತ?
    * ಯೋಗೇಶ್ವರ್ – ಕಾಂಗ್ರೆಸ್ – ಗೆಲುವು – 1,12,642 ಮತ
    * ನಿಖಿಲ್ – ಎನ್‌ಡಿಎ – ಸೋಲು – 87,229 ಮತ
    * ಕಾಂಗ್ರೆಸ್ ಗೆಲುವಿನ ಅಂತರ – 25,413 ಮತ

    ಚನ್ನಪಟ್ಟಣ ಫಲಿತಾಂಶ ಟ್ರೆಂಡ್ಸ್ ಹೇಗಿತ್ತು?
    * 1ನೇ ಸುತ್ತು – ಯೋಗೇಶ್ವರ್‌ಗೆ 49 ಮತಗಳ ಮುನ್ನಡೆ (ಗ್ರಾಮೀಣ)
    * 2ನೇ ಸುತ್ತು – ನಿಖಿಲ್‌ಗೆ 135 ಮತಗಳ ಮುನ್ನಡೆ (ಗ್ರಾಮೀಣ)
    * 5ನೇ ಸುತ್ತು – ನಿಖಿಲ್‌ಗೆ 1,306 ಮತಗಳ ಮುನ್ನಡೆ (ಗ್ರಾಮೀಣ)
    * 6ನೇ ಸುತ್ತು – ಯೋಗೇಶ್ವರ್‌ಗೆ 783 ಮತಗಳ ಮುನ್ನಡೆ (ಟೌನ್)
    * 10ನೇ ಸುತ್ತು – ಯೋಗೇಶ್ವರ್‌ಗೆ 19,799 ಮತಗಳ ಮುನ್ನಡೆ (ಟೌನ್)
    * 20ನೇ ಸುತ್ತು – 25,515 ಮತಗಳ ಅಂತರದಿಂದ ಯೋಗೇಶ್ವರ್ ಗೆಲುವು

    Nikhil Kumaraswamy 1 1

    ಚನ್ನಪಟ್ಟಣ ಫಲಿತಾಂಶ ವಿಶ್ಲೇಷಣೆ
    * ಯೋಗೇಶ್ವರ್ ಕೈ ಹಿಡಿದ ಮುಸ್ಲಿಂ ಮತ
    * ಯೋಗೇಶ್ವರ್ ಕೈ ಹಿಡಿದ `ಪಟ್ಟಣ’ದ ಮತ
    * ಒಕ್ಕಲಿಗ ಮತ ವಿಭಜನೆ- ನಿಖಿಲ್ ಸೋಲು
    * ಯೋಗೇಶ್ವರ್ ಕೈ ಹಿಡಿದ `ಗೃಹಲಕ್ಷ್ಮಿ’ಯರ `ಶಕ್ತಿ’
    * ಸಿಪಿವೈ ವೈಯಕ್ತಿಕ ವರ್ಚಸ್ಸು – 2 ಸೋಲಿನ ಅನುಕಂಪ
    * ಬಿಜೆಪಿಯ `ವಕ್ಫ್’ ವಿರೋಧಿ ನೀತಿ-ನಿಖಿಲ್‌ಗೆ ಹೊಡೆತ
    * ಕಾಂಗ್ರೆಸ್‌ಗೆ ಪ್ಲಸ್ ಆದ ಜಮೀರ್ ವಿವಾದಿತ ಮಾತು
    * ಕೈಗೂಡದ ದೇವೇಗೌಡರು- ಹೆಚ್‌ಡಿಕೆ ರಣತಂತ್ರ

    ಶಿಗ್ಗಾಂವಿಯಲ್ಲಿ 3 ದಶಕದ ಬಳಿಕ ʻಕೈʼ ಮೇಲು:
    ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಶಿಗ್ಗಾಂವಿ ಉಪಚುನಾವಣೆಯಲ್ಲಿ ಎಲ್ಲರ ನಿರೀಕ್ಷೆ ಮೀರಿ ಮತಪ್ರಭುಗಳು ಅಚ್ಚರಿಯ ತೀರ್ಪು ನೀಡಿದ್ದಾರೆ. ಬಿಜೆಪಿಯ ಭದ್ರಕೋಟೆ ಛಿದ್ರವಾಗಿದೆ. 1994ರ ಬಳಿಕ ಇದೇ ಮೊದಲ ಬಾರಿಗೆ ಶಿಗ್ಗಾಂವಿ ಕಾಂಗ್ರೆಸ್ ಕೈ ಹಿಡಿದಿದೆ. ತಾವೇ ಕಟ್ಟಿರುವ ಕೋಟೆಯಲ್ಲಿ ಮಗನನ್ನು ಪ್ರತಿಷ್ಠಾಪಿಸಲು ಬೊಮ್ಮಾಯಿ ವಿಫಲರಾಗಿದ್ದಾರೆ. ಜನಾದೇಶ ಭರತ್ ಬೊಮ್ಮಾಯಿ ವಿರುದ್ಧ ಬಂದಿದೆ. ಮೊದಲ 7 ಸುತ್ತಿನವರೆಗೆ ಭರತ್ ಬೊಮ್ಮಾಯಿ ಲೀಡ್‌ನಲ್ಲಿದ್ದರು. ಆದ್ರೆ 8ನೇ ಸುತ್ತಿನ ನಂತ್ರ ಚಿತ್ರಣ ಬದಲಾಯ್ತು. ಅಂತಿಮವಾಗಿ ಕಾಂಗ್ರೆಸ್ ಜನಾದೇಶ ಕಾಂಗ್ರೆಸ್ ಪರ ಬಂತು. ಪರಿಣಾಮ ಯಾಸೀರ್ ಪಠಾಣ್ ಇದೇ ಮೊದಲ ಬಾರಿಗೆ ವಿಧಾನಸಭೆ ಪ್ರವೇಶ ಮಾಡ್ತಿದ್ದಾರೆ. ಕಾಂಗ್ರೆಸ್ ಹಣ ಹರಿಸಿದ್ದು, ಮುಸ್ಲಿಮರು, ಕುರುಬರು ಕಾಂಗ್ರೆಸ್ ಪರ ನಿಂತಿದ್ದು ನಮ್ಮ ಸೋಲಿಗೆ ಕಾರಣ ಎಂದು ಬಿಜೆಪಿ ಆರೋಪಿಸಿದೆ. ನಾನು ಡಿಸಿಎಂ ಅಲ್ದೇ ಇದ್ರೂ ಗೆಲ್ಸಿದ್ದೀನಿ ನೋಡಿ ಎನ್ನುತ್ತಾ ಡಿಸಿಎಂ ಸ್ಥಾನಕ್ಕೆ ಸತೀಶ್ ಜಾರಕಿಹೊಳಿ ಪರೋಕ್ಷವಾಗಿ ಟವೆಲ್ ಹಾಕಿದ್ದಾರೆ. ಬೆಳಗಾವಿಯಲ್ಲಿ ಮುಂದಿನ ಸಿಎಂ ಸತೀಶ್ ಜಾರಕಿಹೊಳಿ ಘೋಷಣೆ ಮೊಳಗಿವೆ.

    ಶಿಗ್ಗಾಂವಿ ಫಲಿತಾಂಶ ಹೇಗಿದೆ?
    * ಯಾಸೀರ್ ಪಠಾಣ್ – ಕಾಂಗ್ರೆಸ್ – ಗೆಲುವು – 1,00,756 ಮತ
    * ಭರತ್ ಬೊಮ್ಮಾಯಿ – ಬಿಜೆಪಿ – ಸೋಲು – 87,308 ಮತ
    * ಕಾಂಗ್ರೆಸ್ ಗೆಲುವಿನ ಅಂತರ – 13,448 ಮತ

    ಶಿಗ್ಗಾಂವಿ ರಿಸಲ್ಟ್ ಟ್ರೆಂಡ್ಸ್ ಹೇಗಿತ್ತು?
    * 1ನೇ ಸುತ್ತು – ಭರತ್‌ಗೆ 325 ಮತಗಳ ಮುನ್ನಡೆ
    * 7ನೇ ಸುತ್ತು – ಭರತ್‌ಗೆ 998 ಮತಗಳ ಮುನ್ನಡೆ
    * 8ನೇ ಸುತ್ತು – ಯಾಸೀರ್‌ಗೆ 1158 ಮತಗಳ ಮುನ್ನಡೆ
    * 18ನೇ ಸುತ್ತು – ಯಾಸೀರ್‌ಗೆ 13,448 ಮತಗಳ ಗೆಲುವು

    ಶಿಗ್ಗಾಂವಿ ಫಲಿತಾಂಶ ವಿಶ್ಲೇಷಣೆ
    * ಕಾಂಗ್ರೆಸ್ ಕೈಹಿಡಿದ ಅಹಿಂದ ಮತ
    * ಕುರುಬ, ಮುಸ್ಲಿಂ ಮತ ಚದುರದಂತೆ ಸಿಎಂ ಕಾರ್ಯತಂತ್ರ
    * ಯಾಸೀರ್‌ಗೆ ವರವಾದ ಗ್ಯಾರಂಟಿ ಮತ
    * ತಳಮಟ್ಟದಲ್ಲಿ ಸತೀಶ್ ಜಾರಕಿಹೊಳಿ ಸಂಘಟನೆ
    * ಫಲ ಕೊಡದ ಬೊಮ್ಮಾಯಿ ಕಾರ್ಯತಂತ್ರ
    * ಕುಟುಂಬ ರಾಜಕೀಯ ಒಪ್ಪದ ಮತದಾರ

    ಸಂಡೂರು ಕ್ಷೇತ್ರಕ್ಕೆ ಮೊದಲ ಮಹಿಳಾ ಶಾಸಕಿ:
    ಇನ್ನೂ ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬಂಗಾರು ಹನುಮಂತ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ ಗೆಲುವು ಸಾಧಿಸಿದ್ದಾರೆ. 19 ಸುತ್ತುಗಳ ಮತ ಎಣಿಕೆಯಲ್ಲಿ ಆರಂಭದಿಂದ ಅನ್ನಪೂರ್ಣ, ಬಂಗಾರು ಹನುಮಂತು ನಡ್ವೆ ತುರುಸಿನ ಪೈಪೋಟಿ ಕಂಡುಬಂದಿತ್ತು. ಆದ್ರೆ 6 ಮತ್ತು 7ನೇ ಸುತ್ತು ಹೊರತು ಪಡಿಸಿದ್ರೆ, ಉಳಿದಂತೆ ಅನ್ನಪೂರ್ಣ ಎಲ್ಲೂ ಹಿನ್ನಡೆ ಕಾಣಲಿಲ್ಲ. ನಿಧಾನಕ್ಕೆ ಮತಗಳ ಅಂತರವನ್ನು ಹೆಚ್ಚಿಸಿಕೊಳ್ಳುತ್ತಾ, ಸುಲಭ ಜಯ ಗಳಿಸಿದ್ರು. ಈ ಮೂಲಕ ಸಂಡೂರಿನಿಂದ ವಿಧಾನಸಭೆ ಪ್ರವೇಶ ಮಾಡ್ತಿರುವ ಮೊದಲ ಮಹಿಳಾ ಶಾಸಕಿ ಅನ್ನೋ ಹೆಗ್ಗಳಿಕೆಗೂ ಪಾತ್ರರಾದ್ರು.

    ಸಂಡೂರು ಫಲಿತಾಂಶ ಹೇಗಿದೆ?
    * ಅನ್ನಪೂರ್ಣ – ಕಾಂಗ್ರೆಸ್ – ಗೆಲುವು – 93,616 ಮತ
    * ಬಂಗಾರು ಹನುಮಂತು – ಬಿಜೆಪಿ – ಸೋಲು – 83,967 ಮತ
    (ಕಳೆದ ಬಾರಿ ಬಿಜೆಪಿ ಪಡೆದ ಮತ 49,700 )
    * ಕಾಂಗ್ರೆಸ್ ಗೆಲುವಿನ ಅಂತರ – 9649 ಮತ

    ಸಂಡೂರು ರಿಸಲ್ಟ್ ಟ್ರೆಂಡ್ಸ್ ಹೇಗಿದೆ?
    * 1ನೇ ಸುತ್ತು – ಅನ್ನಪೂರ್ಣಗೆ 2,586 ಮತಗಳ ಮುನ್ನಡೆ
    * 6ನೇ ಸುತ್ತು – ಬಂಗಾರುಗೆ 262 ಮತಗಳ ಮುನ್ನಡೆ
    * 8ನೇ ಸುತ್ತು – ಅನ್ನಪೂರ್ಣಗೆ 33 ಮತಗಳ ಮುನ್ನಡೆ
    * 19ನೇ ಸುತ್ತು – ಅನ್ನಪೂರ್ಣಗೆ 9,649 ಮತಗಳ ಗೆಲುವು

    ಸಂಡೂರು ಫಲಿತಾಂಶ ವಿಶ್ಲೇಷಣೆ
    * ಕಾಂಗ್ರೆಸ್‌ನ ಭದ್ರಕೋಟೆ
    * ಸಂಸದ ತುಕಾರಾಂ ಸಾಫ್ಟ್ ಇಮೇಜ್
    * ಸಂತೋಷ್ ಲಾಡ್ ಸಂಘಟನೆ
    * ಕಾಂಗ್ರೆಸ್ ಕೈಹಿಡಿದ `ಗ್ಯಾರಂಟಿ’
    * ಜನಾರ್ದನರೆಡ್ಡಿ ರಣತಂತ್ರ ಫೇಲ್
    * ಬಿಜೆಪಿಯಲ್ಲಿ ಹೊಂದಾಣಿಕೆ ಕೊರತೆ
    * ಬಂಗಾರು ಹೊರಗಿನವರು ಎಂಬ ಆರೋಪ

  • ಬೊಂಬೆನಗರಿಯಲ್ಲಿ ಯೋಗೇಶ್ವರ್ ಮ್ಯಾಜಿಕ್‌ ಹೇಗಾಯ್ತು? ಹಿಂದೆ ಯಾವ ಪಕ್ಷದಿಂದ ಯಾವಾಗ ಗೆದ್ದಿದ್ದರು?

    ಬೊಂಬೆನಗರಿಯಲ್ಲಿ ಯೋಗೇಶ್ವರ್ ಮ್ಯಾಜಿಕ್‌ ಹೇಗಾಯ್ತು? ಹಿಂದೆ ಯಾವ ಪಕ್ಷದಿಂದ ಯಾವಾಗ ಗೆದ್ದಿದ್ದರು?

    ಬೆಂಗಳೂರು: ಕರ್ನಾಟಕದ ಮೂವರ ರಾಜೀನಾಮೆಯಿಂದ ತೆರವಾದ ಮೂರು ಕ್ಷೇತ್ರಗಳಿಗೆ ಉಪ ಚುನಾವಣೆ ನಡೆದರೂ ರಾಜ್ಯದ ಮಟ್ಟಿಗೆ ಹೆಚ್ಚು ಸದ್ದು ಮಾಡಿದ್ದು ಹೈವೋಲ್ಟೇಜ್ ಕಣ ಚನ್ನಪಟ್ಟಣ. ತುರುಸಿನ ಸ್ಪರ್ಧೆಯಲ್ಲಿ ಎಲ್ಲರ ಲೆಕ್ಕಾಚಾರಗಳನ್ನು ತಲೆ ಕೆಳಗೆ ಮಾಡಿ ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವರ್ (CP Yogeshwar) ಗೆಲುವಿನ ನಗಾರಿ ಬಾರಿಸಿದ್ದಾರೆ.

    ಕಾಂಗ್ರೆಸ್ ರೂಪಿಸಿದ ಚಕ್ರವ್ಯೂಹ ಬೇಧಿಸುವಲ್ಲಿ ನಿಖಿಲ್ ಕುಮಾರಸ್ವಾಮಿ (Nikhil Kumaraswamy) 3ನೇ ಬಾರಿ ವಿಫಲರಾಗಿದ್ದಾರೆ. ಈ ಪ್ರತಿಷ್ಠೆಯ ರಾಜಕೀಯ ಆಟದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಕೈ ಮೇಲಾಗಿದೆ. ಸ್ವಂತ ಕ್ಷೇತ್ರದಲ್ಲಿ ಪುತ್ರನನ್ನು ಗೆಲ್ಲಿಸಲಾಗದೇ ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ (HD Kumaraswamy) ಮುಜುಗರ ಅನುಭವಿಸಿದ್ದಾರೆ.

    ದೇವೇಗೌಡರು (Devegowda) ನಿರಂತರ 10 ದಿನ ಪ್ರಚಾರ ನಡೆಸಿ ಅಬ್ಬರಿಸಿದರೂ, ಬಿಜೆಪಿ ನಾಯಕರು ಬಂದು ಸಂಘಟಿತವಾಗಿ ಪ್ರಚಾರ ನಡೆಸಿದ್ರೂ, ಅದು ನಿಖಿಲ್‌ಗೆ ಗೆಲುವು ತಂದುಕೊಡಲಿಲ್ಲ. ಮತ ಎಣಿಕೆಯ ಮೊದಲ ಸುತ್ತಲ್ಲಿ ಕಾಂಗ್ರೆಸ್ ಅಲ್ಪಮತಗಳ ಮುನ್ನಡೆ ಸಿಕ್ಕಿತ್ತು. ನಂತರದ 4 ಸುತ್ತುಗಳಲ್ಲಿ ನಿಖಿಲ್ ಮುನ್ನಡೆ ಸಿಕ್ಕಿದರೂ ಹೀಗೆ ಮುಂದುವರೆಯಲಿಲ್ಲ. ಆರನೇ ಸುತ್ತಿನಿಂದ ಆರಂಭವಾದ ಯೋಗೇಶ್ವರ್ ಜೈತ್ರಯಾತ್ರೆ ಕೊನೆವರೆಗೂ ನಿಲ್ಲಲಿಲ್ಲ. ಕಾಂಗ್ರೆಸ್ ಕಾರ್ಯಕರ್ತರು ಸಂಭ್ರಮದಲ್ಲಿ ಮುಳುಗಿದರೆ ಜೆಡಿಎಸ್-ಬಿಜೆಪಿ ಕಾರ್ಯಕರ್ತರು ಮೌನಕ್ಕೆ ಶರಣಾದ್ರು. ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಬಿಜೆಪಿ ಗೆದ್ದಿದ್ದು ಹೇಗೆ? ಆರ್‌ಎಸ್‌ಎಸ್‌ ಏನೇನು ಕಾರ್ಯತಂತ್ರ ಮಾಡಿತ್ತು?

     

    ಚನ್ನಪಟ್ಟಣ ಫಲಿತಾಂಶ
    * ಯೋಗೇಶ್ವರ್ – 1,12,642 ಮತ
    * ನಿಖಿಲ್ – 87,229 ಮತ
    * ಕಾಂಗ್ರೆಸ್ ಗೆಲುವಿನ ಅಂತರ – 25,413 ಮತ

    ಚನ್ನಪಟ್ಟಣ ರಿಸಲ್ಟ್ ಟ್ರೆಂಡ್ಸ್
    * 1ನೇ ಸುತ್ತು – ಯೋಗೇಶ್ವರ್‌ಗೆ 49 ಮತಗಳ ಮುನ್ನಡೆ (ಗ್ರಾಮೀಣ)
    * 2ನೇ ಸುತ್ತು – ನಿಖಿಲ್‌ಗೆ 135 ಮತಗಳ ಮುನ್ನಡೆ (ಗ್ರಾಮೀಣ)
    * 5ನೇ ಸುತ್ತು – ನಿಖಿಲ್‌ಗೆ 1306 ಮತಗಳ ಮುನ್ನಡೆ (ಗ್ರಾಮೀಣ)
    * 6ನೇ ಸುತ್ತು – ಯೋಗೇಶ್ವರ್‌ಗೆ 783 ಮತಗಳ ಮುನ್ನಡೆ (ನಗರ)
    * 10ನೇ ಸುತ್ತು – ಯೋಗೇಶ್ವರ್‌ಗೆ 19,799 ಮತಗಳ ಮುನ್ನಡೆ (ನಗರ)
    * 20ನೇ ಸುತ್ತು – 25,515 ಮತಗಳ ಅಂತರದಿಂದ ಯೋಗೇಶ್ವರ್ ಗೆಲುವು
    ಇದನ್ನೂ ಓದಿ: ರಾಹುಲ್ ದಾಖಲೆ ಬ್ರೇಕ್ – ಪ್ರಿಯಾಂಕಾಗೆ 4 ಲಕ್ಷಕ್ಕೂ ಅಧಿಕ ಮತಗಳ ಅಂತರದ ಗೆಲುವು

     
    ಗೆದ್ದಿದ್ದು ಹೇಗೆ?
    * ಯೋಗೇಶ್ವರ್ ಕೈ ಹಿಡಿದ ಮುಸ್ಲಿಂ ಮತ
    * ಯೋಗೇಶ್ವರ್ ಕೈ ಹಿಡಿದ `ಪಟ್ಟಣ’ದ ಮತ
    * ಒಕ್ಕಲಿಗ ಮತ ವಿಭಜನೆ- ನಿಖಿಲ್ ಸೋಲು
    * ಯೋಗೇಶ್ವರ್ ಕೈ ಹಿಡಿದ `ಗೃಹಲಕ್ಷ್ಮಿಯರʼ ʼಶಕ್ತಿ’
    * ಸಿಪಿವೈ ವೈಯಕ್ತಿಕ ವರ್ಚಸ್ಸು – 2 ಸೋಲಿನ ಅನುಕಂಪ
    * ಬಿಜೆಪಿಯ `ವಕ್ಫ್’ ವಿರೋಧಿ ನೀತಿ-ನಿಖಿಲ್‌ಗೆ ಹೊಡೆತ
    * ಕಾಂಗ್ರೆಸ್‌ಗೆ ಪ್ಲಸ್ ಆದ ಜಮೀರ್ ವಿವಾದಿತ ಮಾತು
    * ಕೈಗೂಡದ ದೇವೇಗೌಡರು- ಹೆಚ್‌ಡಿಕೆ ರಣತಂತ್ರ

    ʼಸೈನಿಕʼನ ಕಲರ್‌ಫುಲ್‌ ಜರ್ನಿ
    1999 – ಚನ್ನಪಟ್ಟಣದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಗೆಲುವು
    2004 – ಕಾಂಗ್ರೆಸ್ ಅಭ್ಯರ್ಥಿಯಾಗಿ ಜಯ
    2008 – ಕಾಂಗ್ರೆಸ್ ಅಭ್ಯರ್ಥಿಯಾಗಿ ವಿಜಯ
    2009 – ಉಪಚುನಾವಣೆಯಲ್ಲಿ ಜೆಡಿಎಸ್‌ ವಿರುದ್ಧ ಯೋಗೇಶ್ವರ್ ಸೋಲು
    2011 – ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಗೆಲುವು
    2013 – ಸಮಾಜವಾದಿ ಅಭ್ಯರ್ಥಿಯಾಗಿ ಗೆಲುವು
    2018 – ಬಿಜೆಪಿ ಅಭ್ಯರ್ಥಿಯಾಗಿ ಸೋಲು
    2023 – ಬಿಜೆಪಿ ಅಭ್ಯರ್ಥಿಯಾಗಿ ಸೋಲು, ಬಿಜೆಪಿ MLC ಆಗಿ ಆಯ್ಕೆ
    2024 – ಉಪಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆಲುವು

  • ಇದು ಬಯಸದೇ ಬಂದ ಉಪಚುನಾವಣೆ, ಕೊನೆಗಳಿಗೆಯ ತೀರ್ಮಾನಕ್ಕೆ ತಲೆ ಬಾಗುತ್ತೇನೆ – ನಿಖಿಲ್ ಕುಮಾರಸ್ವಾಮಿ

    ಇದು ಬಯಸದೇ ಬಂದ ಉಪಚುನಾವಣೆ, ಕೊನೆಗಳಿಗೆಯ ತೀರ್ಮಾನಕ್ಕೆ ತಲೆ ಬಾಗುತ್ತೇನೆ – ನಿಖಿಲ್ ಕುಮಾರಸ್ವಾಮಿ

    ರಾಮನಗರ: ಇದು ಬಯಸದೇ ಬಂದ ಉಪಚುನಾವಣೆ, ಕೊನೆಗಳಿಗೆಯ ತೀರ್ಮಾನಕ್ಕೆ ನಾನು ತಲೆ ಬಾಗುತ್ತೇನೆ ಎಂದು ಎನ್‌ಡಿಎ ಅಭ್ಯರ್ಥಿ ಹಾಗೂ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಹೇಳಿದರು.

    ಚುನಾವಣೆ ಫಲಿತಾಂಶದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದು ಬಯಸದೇ ಬಂದ ಉಪಚುನಾವಣೆ, ಕೊನೆಗಳಿಗೆಯ ತೀರ್ಮಾನಕ್ಕೆ ನಾನು ತಲೆಬಾಗುತ್ತೇನೆ. ಚುನಾವಣಾ ಸಂದರ್ಭದಲ್ಲಿ ನಾನು ಕೆಲವು ಮಾತು ಕೊಟ್ಟಿದ್ದೆ ಆ ಮಾತನ್ನ ಚುನಾವಣೆಯ ಸೋಲು-ಗೆಲುವು ನಿರ್ಧಾರ ಮಾಡಲ್ಲ. ನಿಮ್ಮ ಋಣ ತೀರಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಮಾತಿನಿಂದ ಹಿಂದೆ ಸರಿಯಲ್ಲ. ನಾನು ಈ ಜಿಲ್ಲೆಯ ಮಗ ಎಂದು ಭಾವಿಸುತ್ತೇನೆ. ನಾನು ಇಲ್ಲಿ ಹುಟ್ಟದೆ ಇರಬಹುದು ಆದರೆ ಭಾವನಾತ್ಮಕವಾಗಿ ಸಂಬಂಧ ಇದೆ ಎಂದು ಹೇಳಿದರು.ಇದನ್ನೂ ಓದಿ: ಪತಿಯೊಂದಿಗೆ ಯುಕೆಯಲ್ಲಿ ವಾಸಿಸುತ್ತಿದ್ದ ಭಾರತದ ಮಹಿಳೆ ಕಾರಿನಲ್ಲಿ ಶವವಾಗಿ ಪತ್ತೆ


    ರಾಜ್ಯದಲ್ಲಿ 3 ಕ್ಷೇತ್ರದ ಉಪಚುನಾವಣೆಗಳಲ್ಲಿ (ByElection) ಚನ್ನಪಟ್ಟಣ (Channapatna) ಬಹುನಿರೀಕ್ಷೆಯ ಚುನಾವಣೆ ಆಗಿತ್ತು. ಉಪಚುನಾವಣೆಯಲ್ಲಿ ಕೊನೆಹಂತದ ತೀರ್ಮಾನಕ್ಕೆ ಪಕ್ಷದ ಶಿಸ್ತಿನ ಸಿಪಾಯಿ ಆಗಿ ನಾನು ಎನ್‌ಡಿಎ ಅಭ್ಯರ್ಥಿ ಆಗಿ ಸ್ಪರ್ಧೆ ಮಾಡಿದೆ. ಚುನಾವಣೆಯ ಫಲಿತಾಂಶ ಎಲ್ಲರಿಗೂ ಆಘಾತ ತಂದುಕೊಟ್ಟಿದೆ. ಕೊನೆಯ ಹಂತದ ಬೆಳವಣಿಗೆಯಲ್ಲಿ ಕಳೆದ 18 ದಿನದಲ್ಲಿ ಪ್ರತಿ ಹಳ್ಳಿಯಲ್ಲೂ ಎಲ್ಲರೂ ನನಗೆ ಪ್ರೀತಿ, ವಾತ್ಸಲ್ಯ ತೋರಿದ್ದಾರೆ. ಸುಮಾರು 87 ಸಾವಿರ ಮತ ಬಂದಿದೆ. ಪ್ರಜಾಪ್ರಭುತ್ವದಲ್ಲಿ ತೀರ್ಮಾನ, ತೀರ್ಪು ತೆಗೆದುಕೊಳ್ಳುವ ಹಕ್ಕು ಇರುವುದು ಜನರಿಗೆ, ಮತದಾರರಿಗೆ ಎಲ್ಲರಿಗೂ ಧನ್ಯವಾದ ತಿಳಿಸುತ್ತೇನೆ ಎಂದು ತಿಳಿಸಿದರು.

    ಎಲ್ಲರೂ ಬಹಳ ಪ್ರಾಮಾಣಿಕವಾಗಿ ದುಡಿದಿದ್ದಾರೆ. ಆದರೆ ಚುನಾವಣೆ ಸೋಲಿಗೆ ಕೆಲವು ಕಾರಣ ಇರುತ್ತದೆ. ಒಂದು ಸಮುದಾಯದ ಮತ ಒಂದು ಕಡೆ ಕ್ರೋಢಿಕರಿಸಿದ್ದು ಕಾರಣ ಆಗಿರಬಹುದು. ನಮ್ಮ ಪಕ್ಷ ಸಾಕಷ್ಟು ಬಾರಿ ಆ ಸಮುದಾಯದ ಜೊತೆ ನಿಂತಿದ್ದೇವೆ. ಆದರೂ ಆ ಸಮುದಾಯ ನಮ್ಮ ಜೊತೆ ನಿಂತಿಲ್ಲ. ಎದೆಗುಂದಲ್ಲ ಹೋರಾಟದ ಹಿನ್ನೆಲೆಯಲ್ಲಿ ಈ ಪಕ್ಷ ಕಟ್ಟಿದ್ದೇವೆ. ವಯಸ್ಸು ಚಿಕ್ಕದಿದೆ ಎಲ್ಲವನ್ನೂ ಸಮಚಿತ್ತದಿಂದ ತಗೆದುಕೊಂಡಿದ್ದೇನೆ. ರಾಜ್ಯದ ನಿಷ್ಠಾವಂತ ಕಾರ್ಯಕರ್ತರೆಲ್ಲರಿಗೂ ಧ್ವನಿಯಾಗಿ ಇರುತ್ತೇನೆ ಎಂದರು.

    ನಾನು ಮೂರು ಬಾರಿ ಸೋತಿದ್ದೇನೆ ಒಪ್ಪಿಕೊಳ್ಳುತ್ತೇನೆ. ನಾನು ಗೆಲುವನ್ನು ನೋಡಿಲ್ಲ. ಇತಿಹಾಸ ನೋಡಿದರೆ ಅಬ್ರಾಹಂ ಲಿಂಕನ್, ಅಂಬೇಡ್ಕರ್, ವಾಜಪೇಯಿ ಸೋತಿದ್ದು ಹೇಳುತ್ತಾರೆ. ಈ ಪರಿಸ್ಥಿತಿಯಲ್ಲಿ ಕಾರ್ಯಕರ್ತರಿಗೆ ಕೊಟ್ಟು ಅವರು ಸೋತಿದ್ದರೆ ಕುಟುಂಬ, ರಾಜಕಾರಣ, ಸ್ವಾರ್ಥ ಎಂಬ ಆರೋಪ ಬರುತ್ತಿತ್ತು. ಇವಾಗ ಈ ಹೊಣೆ ನಾನೇ ಹೊರುತ್ತೇನೆ ನೆಮ್ಮದಿಯಿಂದ ಮಲಗುತ್ತೇನೆ. ಈ ಒಂದು ಸೋಲಿನಿಂದ ಜಿಲ್ಲೆಯಲ್ಲಿ ಜೆಡಿಎಸ್ ಮುಕ್ತ ಅಂದುಕೊಳ್ಳಲು ಸಾಧ್ಯವಿಲ್ಲ. ಕಾಂಗ್ರೆಸ್‌ನವರು ಲೋಕಸಭೆಯಲ್ಲಿ ಸೋತರು ಅವರ ಬಲವಿಲ್ಲ ಎಂದು ಹೇಳಲು ಸಾಧ್ಯವಿಲ್ಲ. ಹಾಗೆಯೇ ಈ ಗೆಲವಿನಿಂದ ಅವರ ಬಲ ಮತ್ತೆ ಹೆಚ್ಚಿದೆ ಎನ್ನಲು ಸಾಧ್ಯವಿಲ್ಲ. ಡಿ.ಕೆ.ಶಿವಕುಮಾರ್ ಅವರ ಹೇಳಿಕೆಗೆ ಸಂತೋಷವಾಗಿದೆ ಎಂದು ತಿಳಿಸಿದರು.ಇದನ್ನೂ ಓದಿ: ಉಪಚುನಾವಣೆಯಲ್ಲಿ ಸೋತಿದ್ದೇವೆ, ಇವಿಎಂ ಹ್ಯಾಕ್ ಮಾಡಿದ್ದಾರೆ ಎನ್ನಲ್ಲ: ಜೋಶಿ

  • 2028ರ ಚುನಾವಣೆಯ ಗೆಲುವಿಗೆ ಇದು ಮುನ್ನುಡಿ: ಡಿಕೆ ಶಿವಕುಮಾರ್‌

    2028ರ ಚುನಾವಣೆಯ ಗೆಲುವಿಗೆ ಇದು ಮುನ್ನುಡಿ: ಡಿಕೆ ಶಿವಕುಮಾರ್‌

    ಬೆಂಗಳೂರು: ಸುಳ್ಳನ್ನು ಹೇಳಿ ಅಪ್ರಚಾರ ಮಾಡಿದ್ದಾರೆ. ಮತದಾರರು ಪ್ರಜ್ಞಾವಂತರಿದ್ದಾರೆ. ಉಪ ಚುನಾವಣೆಯ ಗೆಲುವು 2028ರ ವಿಧಾನಸಭೆ ಚುನಾವಣೆಗೆ ಗೆಲುವಿಗೆ ಮುನ್ನುಡಿ ಎಂದು ಡಿಸಿಎಂ ಡಿಕೆ ಶಿವಕುಮಾರ್‌ (DK Shivakumar) ಬಣ್ಣಿಸಿದ್ದಾರೆ.

    ಚನ್ನಪಟ್ಟಣ, ಸಂಡೂರು, ಶಿಗ್ಗಾವಿ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಳಿಕ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾತನಾಡಿದ ಅವರು, ಚನ್ನಪಟ್ಟಣದಲ್ಲಿ ನಿಖಿಲ್‌ (Nikhil Kumaraswamy) ಸೋತಿದ್ದಾರೆ ಎಂದು ಹೇಳಲ್ಲ. ಕುಮಾರಸ್ವಾಮಿ (HD Kuaraswamy) ವಿರುದ್ಧ ಜನ ತೀರ್ಪು ನೀಡಿದ್ದಾರೆ. ಶಿಗ್ಗಾವಿಯಲ್ಲಿ ಭರತ್ ಬೊಮ್ಮಾಯಿ ಸೋಲು ಎಂದು ಹೇಳುವುದಿಲ್ಲ. ಅವರ ತಂದೆ ಬೊಮ್ಮಾಯಿ ಅವರದ್ದು ಎಂದು ಹೇಳುತ್ತೇನೆ ಎಂದರು.  ಇದನ್ನೂ ಓದಿ: ಜೆಡಿಎಸ್ ಅಂತಿಮ ದಿನಗಳನ್ನು ಎಣಿಸುತ್ತಿದೆ, ದೇವೇಗೌಡ್ರ ಹೋರಾಟದಲ್ಲಿ ಸ್ವಾರ್ಥವಿತ್ತು: ಯೋಗೇಶ್ವರ್

    ವಿಪಕ್ಷಗಳು ನಮ್ಮ ಗ್ಯಾರಂಟಿಯನ್ನು ಟೀಕೆ ಮಾಡಿದ್ದವು. ವಿಪಕ್ಷಗಳು ಟೀಕೆ ಮಾಡುವುದನ್ನು ಬಿಡಿ ಎಂದು ಜನ ತೀರ್ಪು ಕೊಟ್ಟಿದ್ದಾರೆ. ಜನರ ಬದುಕಿನ ಮೇಲೆ ರಾಜಕೀಯ ಮಾಡಬೇಡಿ ಅಂತ ಸಂದೇಶ ಜನ ಕೊಟ್ಡಿದ್ದಾರೆ. ಟೀಕೆಗಳು ಸಾಯ್ತವೇ, ಕೆಲಸ ಉಳಿಯತ್ತವೆ. ಇದು ಮತ್ತೊಮ್ಮೆ ಸಾಬೀತಾಗಿದೆ ಎಂದು ಹೇಳಿದರು.

    ಜನರಿಗೆ ಸರಿಯಾಗಿ ಗ್ಯಾರಂಟಿ ಹೋಗುತ್ತಿಲ್ಲ ಎಂದು ವಿಪಕ್ಷಗಳು ಟೀಕಿಸಿದ್ದವು. 56 ಸಾವಿರ ಕೋಟಿ ರೂ. ಗ್ಯಾರಂಟಿ ಗೆ ಕೊಟ್ಟಿದ್ದೇವೆ. ಪ್ರತಿ ಕ್ಷೇತ್ರಕ್ಕೆ 200 ಕೋಟಿ ರೂ. ಹಣ ಹೋಗಿದೆ. ಇದೆಲ್ಲವು ಅಭಿವೃದ್ಧಿ ಅಲ್ಲವೇ ಎಂದು ಪ್ರಶ್ನಿಸಿದರು.

  • ಇದು ಸಿದ್ದರಾಮಯ್ಯ ಆಡಳಿತಕ್ಕೆ ಜನ ಕೊಟ್ಟ ತೀರ್ಪಲ್ಲ, ಹಗರಣಗಳು ಮುಚ್ಚಿ ಹೋಗಲ್ಲ: ವಿಶ್ವನಾಥ್‌

    ಇದು ಸಿದ್ದರಾಮಯ್ಯ ಆಡಳಿತಕ್ಕೆ ಜನ ಕೊಟ್ಟ ತೀರ್ಪಲ್ಲ, ಹಗರಣಗಳು ಮುಚ್ಚಿ ಹೋಗಲ್ಲ: ವಿಶ್ವನಾಥ್‌

    – ಬಿಜೆಪಿಯಲ್ಲಿ 4 ಗುಂಪು ಇರೋದು ಸತ್ಯ ಎಂದ ಎಂಎಲ್‌ಸಿ

    ಮೈಸೂರು: ಇದು ಸಿದ್ದರಾಮಯ್ಯ (Siddaramaiah) ಆಡಳಿತಕ್ಕೆ ಜನ ಕೊಟ್ಟ ತೀರ್ಪಲ್ಲ. ಈ ತೀರ್ಪಿನಿಂದ ಹಗರಣಗಳು ಮುಚ್ಚಿ ಹೋಗುವುದಿಲ್ಲ ಎಂದು ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್ (H Vishwanath) ತಿಳಿಸಿದ್ದಾರೆ.

    ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಶ್ವನಾಥ್‌ ಉಪ ಚುನಾವಣೆಯಲ್ಲಿ (BY Poll) ಮೂರು ಕ್ಷೇತ್ರಗಳಲ್ಲೂ ಕಾಂಗ್ರೆಸ್‌ ಗೆಲುವು ಸಾಧಿಸಿದ ಬಗ್ಗೆ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಇದು ಸಿದ್ದರಾಮಯ್ಯ ಆಡಳಿತಕ್ಕೆ ಜನ ಕೊಟ್ಟ ತೀರ್ಪಲ್ಲ. ಈ ತೀರ್ಪಿನಿಂದ ಹಗರಣಗಳು ಮುಚ್ಚಿ ಹೋಗುವುದಿಲ್ಲ, ಗೆದ್ದವರು ಬೀಗುವ ಅಗತ್ಯವೂ ಇಲ್ಲ ಎಂದು ತಿವಿದಿದ್ದಾರೆ. ಇದನ್ನೂ ಓದಿ: ಜೆಡಿಎಸ್ ಅಂತಿಮ ದಿನಗಳನ್ನು ಎಣಿಸುತ್ತಿದೆ, ದೇವೇಗೌಡ್ರ ಹೋರಾಟದಲ್ಲಿ ಸ್ವಾರ್ಥವಿತ್ತು: ಯೋಗೇಶ್ವರ್

    ಹಣ, ಹೆಂಡ, ಶಿಫಾರಸ್ಸು ಇಂತಹದರ ಮೇಲೆಯೆ ಚುನಾವಣೆ ನಡೆಯುವುದು. ಈ ಚುನಾವಣೆಯೂ ಅದೇ ರೀತಿ ನಡೆದಿದೆ. ಮುಡಾ ಹಗರಣ ಮೈಸೂರು ವ್ಯಾಪ್ತಿಯದ್ದು, ಹೀಗಾಗಿ ಅದು ಚನ್ನಪಟ್ಟಣದಲ್ಲಿ ವರ್ಕ್ ಆಗುತ್ತೆ ಅಂದುಕೊಳ್ಳುವುದು ಬೇಡ. ಸಿದ್ದರಾಮಯ್ಯ ಸರ್ಕಾರಕ್ಕೆ ಜನಕೊಟ್ಟ ತೀರ್ಪು ಇದಲ್ಲ. ಉಪಚುನಾವಣೆಗಳು ಯಾವ ರೀತಿ ನಡೆದಿದೆ ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಮೂರೂ ಕ್ಷೇತ್ರಗಳ ಸೋಲಿನಿಂದ ನಮಗೆ ನಿರಾಸೆ ಆಗಿರೋದು ಸತ್ಯ: ವಿಜಯೇಂದ್ರ

    ಬಿಜೆಪಿ 4 ಗುಂಪು ಇರೋದು ಸತ್ಯ:
    ಹಗರಣದ ಆರೋಪ ಹೊತ್ತವರು, ಈ ತೀರ್ಪುನಿಂದ ಖುಷಿ ಪಡುವ ಅಗತ್ಯ ಇಲ್ಲ. ನಿಖಿಲ್ ಸೋತಿದ್ದಾರೆ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಇದೆಲ್ಲ ಸಾಮಾನ್ಯ. ಬಿಜೆಪಿಯವರು ಜೆಡಿಎಸ್ ಒಟ್ಟಾಗಿ ಕೆಲಸ ಮಾಡಿದರು, ಆದರೂ ಅದು ಫಲಕೊಟ್ಟಿಲ್ಲ. ಬಿಜೆಪಿ 4 ಗುಂಪು ಇರೋದು ಸತ್ಯ. ಅವಕಾಶ ಕೊಟ್ಟವರಿಗೆ ಮತ್ತೆ ಮತ್ತೆ ಅವಕಾಶ ಕೊಟ್ಟಿದ್ದಾರೆ ವಿಶ್ವನಾಥ್‌ ಹೇಳಿದ್ದಾರೆ.

  • ಜೆಡಿಎಸ್ ಅಂತಿಮ ದಿನಗಳನ್ನು ಎಣಿಸುತ್ತಿದೆ, ದೇವೇಗೌಡ್ರ ಹೋರಾಟದಲ್ಲಿ ಸ್ವಾರ್ಥವಿತ್ತು: ಯೋಗೇಶ್ವರ್

    ಜೆಡಿಎಸ್ ಅಂತಿಮ ದಿನಗಳನ್ನು ಎಣಿಸುತ್ತಿದೆ, ದೇವೇಗೌಡ್ರ ಹೋರಾಟದಲ್ಲಿ ಸ್ವಾರ್ಥವಿತ್ತು: ಯೋಗೇಶ್ವರ್

    – ಗೆಲುವಿನ ಕ್ರೆಡಿಟ್ ಕಾಂಗ್ರೆಸ್‌ಗೆ, ಸಿಎಂ, ಡಿಸಿಎಂ, ನನ್ನ ಆಪ್ತ ಸುರೇಶ್‌ಗೆ ಅರ್ಪಿಸುತ್ತೇನೆ

    ರಾಮನಗರ: ಗೆಲುವಿನ ಕ್ರೆಡಿಟ್ ಕಾಂಗ್ರೆಸ್‌ಗೆ, ಸಿಎಂ ಸಿದ್ದರಾಮಯ್ಯ(CM Siddaramaiah), ಡಿಸಿಎಂ ಡಿಕೆ ಶಿವಕುಮಾರ್ (DCM DK Shivakumar) ಹಾಗೂ ನನ್ನ ಆಪ್ತ ಸುರೇಶ್‌ಗೆ ಅರ್ಪಿಸುತ್ತೇನೆ ಎಂದು ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವರ್ (CP Yogeshwar) ಸಂತಸ ವ್ಯಕ್ತಪಡಿಸಿದ್ದರು.

    ಚನ್ನಪಟ್ಟಣ (Channapatna) ಉಪಚುನಾವಣಾ ಅಖಾಡದಲ್ಲಿ ಕಾಂಗ್ರೆಸ್ (Congress) ಪಕ್ಷದಿಂದ ಸ್ಪರ್ಧಿಸಿದ್ದ ಯೋಗೇಶ್ವರ್ 25,515 ಮತಗಳ ಅಂತರದಿಂದ ಜೆಡಿಎಸ್‌ನ ನಿಖಿಲ್ ಕುಮಾರಸ್ವಾಮಿ (Nikhil Kumarswamy) ವಿರುದ್ಧ ಗೆಲುವು ಸಾಧಿಸಿದ್ದಾರೆ.ಇದನ್ನೂ ಓದಿ: ಅಭಿವೃದ್ಧಿಗೆ ಒಲವು, ಗ್ಯಾರಂಟಿಗೆ ಗೆಲುವು – ಬೈಎಲೆಕ್ಷನ್‌ ಫಲಿತಾಂಶಕ್ಕೆ ಕಾಂಗ್ರೆಸ್‌ ಸಂತಸ

    ಗೆಲುವಿನ ಬಳಿಕ ಪ್ರತಿಕ್ರಿಯೆ ನೀಡಿದ ಅವರು, ನಾನು ಚನ್ನಪಟ್ಟಣ ಉಪಚುನಾವಣೆಯಲ್ಲಿ ಗೆಲುವು ನಿರೀಕ್ಷೆ ಮಾಡಿದ್ದೆ. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳಿಗೆ 30 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತೇವೆ ಎಂದು ಮಾಹಿತಿ ಕೊಟ್ಟಿದ್ದೆ. ನನ್ನ ನಿರೀಕ್ಷೆಗೆ ಹತ್ತಿರವಾದ ಗೆಲುವು. ಗೆಲುವಿನ ಕ್ರೆಡಿಟ್ ಕಾಂಗ್ರೆಸ್‌ಗೆ, ಮುಖ್ಯಮಂತ್ರಿಗೆ, ಉಪಮುಖ್ಯಮಂತ್ರಿಗೆ ಮತ್ತು ನನ್ನ ಜೊತೆ ಇದ್ದ ಸುರೇಶ್‌ಗೆ ಅರ್ಪಿಸುತ್ತೇನೆ ಎಂದು ಹೇಳಿದರು.

    ಜೆಡಿಎಸ್ ಅಂತಿಮ ದಿನಗಳನ್ನ ಎಣಿಸುತ್ತಿದೆ ಎಂದು ಹೇಳಲು ಬಯಸುತ್ತೇನೆ. ದೇವೇಗೌಡರು ಹೋರಾಟದಲ್ಲಿ ಸಾಮಾಜಿಕ ಕಳಕಳಿ ಇರಲಿಲ್ಲ. ಕೇವಲ ಸ್ವಾರ್ಥ ಇತ್ತು. ಕುಟುಂಬದವರನ್ನ ಬೆಳೆಸುವ ಹೋರಾಟ ಇತ್ತು. ಒಕ್ಕಲಿಗರ ನಾಯಕತ್ವವನ್ನ ದೇವೇಗೌಡರ ಕುಟುಂಬದಿಂದ ಜನ ಕಿತ್ತುಕೊಂಡಿದ್ದಾರೆ. ಅವರ ಹಠ, ಛಲ ನೋಡಿ ನಾನು ಆಲೋಚನೆ ಮಾಡಿದ್ದೆ ಆದರೆ ಅದಕ್ಕೆ ಜನ ಸೊಪ್ಪು ಹಾಕಲಿಲ್ಲ. ನಿಖಿಲ್ ಇನ್ನೂ ಯುವಕ. ಆತನಿಗೆ ಒಳ್ಳೆದಾಗಲಿ. ನಿಖಿಲ್ 36 ವರ್ಷದ ಯುವಕ 63 ವರ್ಷದವರ ಥರ ಮಾತನಾಡುತ್ತೇನೆ. ದೇವೇಗೌಡರು ತಮ್ಮ ಸಂಧ್ಯಕಾಲದಲ್ಲಿ ಮೊಮ್ಮಗನ ಪರ ಪ್ರಚಾರ ಮಾಡಿದ್ದರೂ ಕೂಡ ಏನು ಆಗಲಿಲ್ಲ. ಇನ್ನು ಮುಂದೆಯೂ ಆರಾಮಾಗಿ ಇರಲ್ಲ. 100ಕ್ಕೆ 100 ಭಾಗ ಒಕ್ಕಲಿಗರ ಒಲವನ್ನ ದೇವೇಗೌಡರ ಕುಟುಂಬ ಕಳೆದಕೊಳ್ಳುತ್ತಿದೆ ಎಂದು ಹೇಳಿದರು.

    ವಿಜಯೇಂದ್ರ ಅವರು ನನ್ನ ಬ್ಯಾಟರಿ ವೀಕ್ ಆಗಿದೆ ಎಂದು ಹೇಳಿದ್ದರು ಆದರೆ ಅವರ ಬ್ಯಾಟರಿ ವೀಕ್ ಆದಾಗ ನಾನು ಚಾರ್ಜ್ ಮಾಡಿದ್ದೆ. ವಿಜಯೇಂದ್ರ, ಯಡಿಯೂರಪ್ಪ ಷಡ್ಯಂತ್ರದಿಂದ ನಾನು ಎನ್‌ಡಿಎ ಬಿಟ್ಟೆ. ಇವತ್ತು ಹಳೇ ಮೈಸೂರು ಭಾಗದಲ್ಲಿ ಡಿಕೆ ಶಿವಕುಮಾರ್ ನಾಯಕತ್ವವನ್ನು ನಮ್ಮ ಜನ ಒಪ್ಪಿಕೊಂಡಿದ್ದಾರೆ. ಕುಮಾರಸ್ವಾಮಿಗೆ ಅಧಿಕಾರ ದಾಹವಿದೆ. ಹಾಗಾಗಿ ಯಾರನ್ನು ಸಹಿಸಲ್ಲ, ಅಪ್ಪನ್ನು ಸಹಿಸಲ್ಲ, ಮಗನನ್ನು ಸಹಿಸಲ್ಲ. ಮಂಡ್ಯದಲ್ಲಿ ಕುಮಾರಸ್ವಾಮಿ ನಿಖಿಲ್ ಅವರನ್ನು ನಿಲ್ಲಿಸಿದ್ದರೆ ಈ ಬಾರಿ ಗೆಲ್ಲುತ್ತಿದ್ದರೇನೋ? ರಾಜೀನಾಮೆ ಕೊಟ್ಟು ಮಂಡ್ಯಕ್ಕೆ ಹೋಗುವ ಅವಶ್ಯಕತೆ ಏನಿತ್ತು ಎಂದು ಪ್ರಶ್ನಿಸಿದರು.ಇದನ್ನೂ ಓದಿ: ಸಂಡೂರು ಸೋಲನ್ನ ಒಪ್ಪಿಕೊಳ್ತೇವೆ, 2028ಕ್ಕೆ ಬಂಗಾರು ಗೆಲ್ತಾರೆ: ಜನಾರ್ದನ ರೆಡ್ಡಿ

  • ನಾವು ಓಲೈಕೆ ಮಾಡಲ್ಲ, ಮುಸ್ಲಿಮರು ನಮ್ಗೆ ಮತ ಹಾಕಲ್ಲ: ಸಿ.ಟಿ ರವಿ

    ನಾವು ಓಲೈಕೆ ಮಾಡಲ್ಲ, ಮುಸ್ಲಿಮರು ನಮ್ಗೆ ಮತ ಹಾಕಲ್ಲ: ಸಿ.ಟಿ ರವಿ

    ಕಲಬುರಗಿ: ನಾವು ಮುಸ್ಲಿಮರ ಪರವಾಗಿ ಎಷ್ಟೇ ಕೆಲಸ ಮಾಡಿದರೂ ಅವರು ನಮಗೆ ಮತ ಹಾಕಲ್ಲ, ಏಕೆಂದರೆ ನಾವು ಅವರನ್ನ ಓಲೈಕೆ ಮಾಡಲ್ಲ ಎಂದು ವಿಧಾನ ಪರಿಷತ್‌ ಸದಸ್ಯ ಸಿ.ಟಿ ರವಿ ಹೇಳಿದ್ದಾರೆ.

    ಕಲಬುರಗಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುನ್ನಡೆ ಕಾಯ್ದುಕೊಂಡಿದೆ. ಟಫ್ ಪೈಟ್ ಇದೆ, ಆದ್ರೂ ಎರಡರಲ್ಲಿ ಎನ್‌ಡಿಎ ಗೆಲ್ಲುತ್ತೆ ಅಂತ ವಿಶ್ವಾಸವಿದೆ ಎಂದಿದ್ದಾರೆ. ಪ್ರಯತ್ನ ನಾವು ಪಟ್ಟಿದ್ದೆವೆ ತೀರ್ಪು ಜನರು ಕೊಡ್ತಾರೆ ಎಂದಿದ್ದಾರೆ.

    ಮಹಾರಾಷ್ಟ್ರದಲ್ಲಿ ಕರ್ನಾಟಕದಿಂದ ನಾನು ಸೇರಿ ಹಲವು ಜನರು ಕೆಲಸ ಮಾಡಿದ್ದೆವೆ. ಪಶ್ಚಿಮ ಮಹಾರಾಷ್ಟ್ರದ 58 ಕ್ಷೇತ್ರದಲ್ಲಿ ಓಡಾಟ ನಡೆಸಿದ್ದೇನೆ. ಎನ್‌ಡಿಎ 221 ಕ್ಷೇತ್ರದಲ್ಲಿ ಮುನ್ನಡೆ ಕಾಯ್ಡುಕೊಂಡಿದೆ. ಇದೇ ಅಂತಿಮ ಅಲ್ಲ, ಜಾರ್ಖಂಡ್‌ನಲ್ಲಿ ನಮ್ಮ ನೀರಿಕ್ಷೆಯಷ್ಟು ಮುನ್ನಡೆ ಸಿಕ್ಕಿಲ್ಲ. ಮಹಾರಾಷ್ಟ್ರ ಮತ್ತು ಜಾರ್ಖಂಡ್ ಎರಡೂ ರಾಜ್ಯಗಳಲ್ಲಿ ಅಧಿಕಾರಕ್ಕೆ ಬರ್ತೀವಿ ಅನ್ನೋ ವಿಶ್ವಾವಿದೆ. ಕರ್ನಾಟಕದಲ್ಲಿ ಏನಾಗುತ್ತದೆ ಎಂಬುದನ್ನು ಕಾದುನೋಡಬೇಕು ಎಂದು ಹೇಳಿದ್ದಾರೆ.

    ಚನ್ನಪಟ್ಟಣದಲ್ಲಿ ಅಲ್ಲಿನ ಮುಸ್ಲಿಂ ಮತಗಳ ಸಂಖ್ಯೆ ಜಾಸ್ತಿ ಇದೆ. ಹಾಗಾಗಿ ಯೋಗೇಶ್ವರ್‌ಗೆ ಮುನ್ನಡೆ ಇರಬೇಕು. ನಾವು ಎಷ್ಟೇ ಅವರ ಪರ ಕೆಲಸ ಮಾಡಿದ್ರು ಮುಸ್ಲಿಮರು ನಮಗೆ ಮತ ಹಾಕಲ್ಲ. ಶಿಗ್ಗಾಂವಿ ನಗರದಲ್ಲೂ ಮುಸ್ಲಿಂ ಮತಗಳು ಹೆಚ್ಚಾಗಿದೆ. ಓಲೈಕೆ ನಾವು ಮಾಡಲ್ಲ ಹಾಗಾಗಿ ಅವರು ನಮಗೆ ಮತ ಹಾಕಲ್ಲ. ತೀರ್ಪು ಏನೇ ಬಂದರೂ ಕ್ರೀಡಾ ಮನೋಭಾವದಿಂದ ಸ್ವೀಕರಿಸುತ್ತೇವೆ. ಆದ್ರೆ ಕಾಂಗ್ರೆಸ್ ಮೂರು ಗೆದ್ದರೆ ಜನಾದೇಶ ಅಂತಾರೆ. ಬರಲಿಲ್ಲ ಅಂದ್ರೆ ಇವಿಎಂ ದೋಷ ಅಂತಾ ಹೇಳ್ತಾರೆ ಎಂದು ಕುಟುಕಿದ್ದಾರೆ.

    ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಮುನ್ನಡೆ:
    ರಾಜ್ಯದಲ್ಲಿ ಚನ್ನಪಟ್ಟಣ, ಸಂಡೂರು, ಶಿಗ್ಗಾಂವಿ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯ ಫಲಿತಾಂಶ ಇಂದು ಹೊರಬೀಳುತ್ತಿದೆ. ಚನ್ನಪಟ್ಟಣದಲ್ಲಿ ಯೋಗೇಶ್ವರ್‌ 23,210 ಮತಗಳ ಮುನ್ನಡೆ ಸಾಧಿಸಿದ್ದಾರೆ. 15ನೇ ಸುತ್ತಿನಲ್ಲಿ ಸಂಡೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ತುಕಾರಾಂ 8,239 ಮತಗಳ ಮುನ್ನಡೆಯಲ್ಲಿದ್ದಾರೆ. ಶಿಗ್ಗಾಂವಿಯಲ್ಲಿ ಯಾಸೀರ್‌ ಖಾನ್ ಪಠಾಣ್‌ 12,251 ಮತಗಳಿಂದ ಮುನ್ನಡೆಯಲ್ಲಿದ್ದಾರೆ.

  • ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್‌ಗೆ ಭಾರೀ  ಮುನ್ನಡೆ

    ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್‌ಗೆ ಭಾರೀ ಮುನ್ನಡೆ

    ರಾಮನಗರ: ಚನ್ನಪಟ್ಟಣದಲ್ಲಿ (Channapatna) ಹಾವು ಏಣಿ ಆಟ ಆರಂಭವಾಗಿದೆ. 6 ಸುತ್ತಿನ ಮತ ಎಣಿಕೆಯಲ್ಲಿ ಮುನ್ನಡೆಯಲ್ಲಿದ್ದ ನಿಖಿಲ್‌ ಕುಮಾರಸ್ವಾಮಿ (Nikhil Kumaraswamy) 7ನೇ ಸುತ್ತಿನಲ್ಲಿ ಹಿನ್ನಡೆ ಅನುಭವಿಸಿದ್ದಾರೆ.

    ಕಾಂಗ್ರೆಸ್‌ನ ಸಿಪಿ ಯೋಗೇಶ್ವರ್‌ (CP Yogeshwar) ಅವರಿಗೆ 11,178 ಮತಗಳ ಮುನ್ನಡೆ ಸಿಕ್ಕಿದೆ. ನಗರದ ಪ್ರದೇಶದ ಎಣಿಕಾ ಕಾರ್ಯದಲ್ಲಿ ಸಿಪಿವೈ ಮುನ್ನಡೆ ಸಾಧಿಸಿದ್ದಾರೆ.

    ನಗರ ಪ್ರದೇಶದಲ್ಲಿ ಅಲ್ಪಸಂಖ್ಯಾತ ಮತಗಳು ಜಾಸ್ತಿ ಇರುವ ಕಾರಣ ಕಾಂಗ್ರೆಸ್‌ಗೆ ಬಿದ್ದಿದೆ ಎಂಬ ವಿಶ್ಲೇಷಣೆ ಕೇಳಿ ಬಂದಿದೆ.

    ಚನ್ನಪಟ್ಟಣದಲ್ಲಿ ಒಟ್ಟು 20 ಸುತ್ತುಗಳಿವೆ. ಚನ್ನಪಟ್ಟಣದಲ್ಲಿ ಯಾರೇ ಗೆದ್ದರೂ 3-5 ಸಾವಿರ ಅಂತರಗಳಿಂದ ಗೆಲವು ಸಿಗಬಹುದು ಎಂದು ನಿರೀಕ್ಷಿಸಲಾಗಿದೆ. ಹೀಗಾಗಿ ಉಳಿದ 13 ಸುತ್ತುಗಳಲ್ಲಿ ಯಾರಿಗೆ ಮುನ್ನಡೆ ಸಿಗುತ್ತದೆ ಎಂಬ ಕುತೂಹಲ ಹೆಚ್ಚಾಗಿದೆ.

  • ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು ಉಪಚುನಾವಣೆ ಮತ ಎಣಿಕೆ ಆರಂಭ

    ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು ಉಪಚುನಾವಣೆ ಮತ ಎಣಿಕೆ ಆರಂಭ

    ಬೆಂಗಳೂರು: ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು ಉಪಕದನ (By Election) ಕುತೂಹಲಕ್ಕೆ ಇಂದು ಅಂತಿಮ ತೆರೆ ಬೀಳಲಿದ್ದು ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಆರಂಭವಾಗಿದೆ.

    ಕಳೆದ ಒಂದು ತಿಂಗಳಿನಿಂದ ಭಾರೀ ಸದ್ದು ಮಾಡಿದ್ದ, ರಾಜಕೀಯ ಕೆಸರರೆಚಾಟಕ್ಕೆ ಕಾರಣವಾಗಿದ್ದ ಮಾತಿನ ತಾಪು, ವಿವಾದಾತ್ಮಕ ಹೇಳಿಕೆಗಳಿಗೆ ಸಾಕ್ಷಿಯಾಗಿದ್ದ ಉಪಚುನಾವಣೆಯ ಫಲಿತಾಂಶ ಇಂದು ಪ್ರಕಟವಾಗಲಿದೆ.ಬೆಳಗ್ಗೆ 11 ಗಂಟೆಗೆ ಗೆಲ್ಲೋದು ಯಾರು ಎನ್ನುವ ಬಗ್ಗೆ ಒಂದು ಪಿಚ್ಚರ್ ಸಿಗಲಿದೆ.

    ರಾಮನಗರದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಚನ್ನಪಟ್ಟಣ (Channapatn) ಕ್ಷೇತ್ರದ ಮತಎಣಿಕೆ ನಡೆಯುತ್ತಿದ್ದರೆ ಹಾವೇರಿಯ ದೇವಗಿರಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಶಿಗ್ಗಾಂವಿ (Shiggaon) ಕ್ಷೇತ್ರದ ಮತ ಎಣಿಕೆ ಆರಂಭವಾಗಿದೆ. ಬಳ್ಳಾರಿ ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಸಂಡೂರು (Sandur) ಕ್ಷೇತ್ರದ ಮತ ಎಣಿಕೆ ನಡೆಯುತ್ತಿದೆ. ಮುಂಜಾಗ್ರತಾ ಕ್ರಮವಾಗಿ ಮತ ಎಣಿಕೆ ಕೇಂದ್ರಗಳ ಸುತ್ತ ಬಿಗಿ ಭದ್ರತೆ ಕಲ್ಪಿಸಲಾಗಿದೆ.

    ಮತಗಟ್ಟೆ ಸಮೀಕ್ಷೆಗಳು ಅವರದ್ದು ಅವರಿಗೆ ಎಂದು ಹೇಳ್ತಿದ್ದರೂ, ಇದನ್ನು ನಂಬಲು ಕಾಂಗ್ರೆಸ್ ಸಿದ್ದವಿಲ್ಲ. ನಮಗೆ ಎಕ್ಸಿಟ್‌ಪೋಲ್‌ಗಳ ಬಗ್ಗೆಯೇ ನಂಬಿಕೆ ಇಲ್ಲ. ಮೂರು ಕಡೆಯೂ ನಮ್ದೇ ಗೆಲುವು ಅಂತಿದೆ.

    ಡಿಸಿಎಂ ಡಿಕೆ ಶಿವಕುಮಾರ್‌ ಚನ್ನಪಟ್ಟಣದಲ್ಲಿ ಸೋತರೇ ನಾನೇ ಸೋತಂತೆ ಎಂದು ಹೇಳಿಬಿಟ್ಟಿದ್ದಾರೆ. ಇದೇ ವೇಳೆ, ಕುಮಾರಸ್ವಾಮಿ ಸಹ ಪುತ್ರನ ಗೆಲುವಿನ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬಿಜೆಪಿಯೇ 3 ಕ್ಷೇತ್ರ ಗೆಲ್ಲುತ್ತೆ ಎಂದು ಬೊಮ್ಮಾಯಿ ಹೇಳಿದ್ದಾರೆ.

  • ಚನ್ನಪಟ್ಟಣದಲ್ಲಿ ನಿಖಿಲ್‌ ಕುಮಾರಸ್ವಾಮಿಗೆ ಮುನ್ನಡೆ

    ಚನ್ನಪಟ್ಟಣದಲ್ಲಿ ನಿಖಿಲ್‌ ಕುಮಾರಸ್ವಾಮಿಗೆ ಮುನ್ನಡೆ

    ರಾಮನಗರ: ಭಾರಿ ಕುತೂಹಲ ಮೂಡಿಸಿರುವ ಚನ್ನಪಟ್ಟಣ ವಿಧಾನಸಭಾ ಉಪಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ನಿಖಿಲ್‌ ಕುಮಾರಸ್ವಾಮಿ ಗೆಲುವು ಸಾಧಿಸುವ ಸಾಧ್ಯತೆ ಇದೆ ಎಂದು ಪಿ-ಮಾರ್ಕ್‌ ಚುನಾವಣೋತ್ತರ ಸಮೀಕ್ಷೆ ಭವಿಷ್ಯ ನುಡಿದಿದೆ.

    ಕಾಂಗ್ರೆಸ್‌ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್‌ ಹಿನ್ನಡೆ ಅನುಭವಿಸಲಿದ್ದಾರೆಂದು ಸಮೀಕ್ಷೆ ತಿಳಿಸಿದೆ.

    ಚನ್ನಪಟ್ಟಣ ಗೆಲುವಿಗಾಗಿ ಎರಡೂ ಕಡೆಯಿಂದ ಭರ್ಜರಿ ಪ್ರಚಾರ ನಡೆದಿತ್ತು. ಪ್ರಚಾರದ ವೇಳೆ ಕೇಂದ್ರ ಸಚಿವ ಹೆಚ್‌.ಡಿ.ಕುಮಾರಸ್ವಾಮಿ ವಿರುದ್ಧ ಆಕ್ಷೇಪಾರ್ಹ ಪದ ಬಳಕೆ ಮಾಡಿ ಸಚಿವ ಜಮೀರ್‌ ಅಹ್ಮದ್‌ ವಾಗ್ದಾಳಿ ನಡೆಸಿದ್ದರು. ಇದು ಕಾಂಗ್ರೆಸ್‌ ಅಭ್ಯರ್ಥಿ ಹಿನ್ನಡೆಗೆ ಕಾರಣವಾಗಲಿದೆ ಎಂದೇ ವಿಶ್ಲೇಷಿಸಲಾಗಿತ್ತು.

    ಸ್ವತಃ ಕಾಂಗ್ರೆಸ್‌ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್‌ ಅವರು ಹತಾಶೆಯಿಂದ ಮಾತನಾಡಿದ್ದರು. ಜಮೀರ್‌ ಹೇಳಿಕೆಯಿಂದ ಡ್ಯಾಮೇಜ್‌ ಆಗಿರುವ ವಿಚಾರವನ್ನು ಪರೋಕ್ಷವಾಗಿ ಒಪ್ಪಿಕೊಂಡಿದ್ದರು.