ನೆಲಮಂಗಲ: ಟ್ಯಾಬ್ ಮೂಲಕ ನಕಲಿ ಕೀ ಬಳಸಿ ರಾತ್ರಿ ವೇಳೆ ಐಷಾರಾಮಿ ಕಾರು ಕಳ್ಳತನ ಮಾಡುತ್ತಿದ್ದ ನಾಲ್ವರು ಆರೋಪಿಗಳ ಗ್ಯಾಂಗ್‍ನ್ನು ಬೆಂಗಳೂರು ಹೊರ ವಲಯದ ನೆಲಮಂಗಲ ಪೊಲೀಸರು ಬಂಧಿಸಿದ್ದಾರೆ.
ಸದ್ದಾಂ ಹುಸೇನ್, ಹರಿಕೃಷ್ಣನ್, ನಾಹೂರ್ ಮೀರಾ ಹಾಗೂ ಮಾರಿಮುತ್ತು ಬಂಧಿತ ಆರೋಪಿಗಳಾಗಿದ್ದು, ಮೂಲತಃ ತಮಿಳುನಾಡು ಮೂಲದವರಾಗಿದ್ದಾರೆ. ಆರೋಪಿಗಳನ್ನು ಬಂಧಿಸಿ 40 ಲಕ್ಷ ರೂ. ಮೌಲ್ಯದ ಮೂರು ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ. ನಂತರ ಪೊಲೀಸರು ಕಾರಿನ ಮೂಲ ಮಾಲೀಕರಿಗೆ ವಾಹನವನ್ನು ಒಪ್ಪಿಸಿದ್ದಾರೆ.
ಹೊಸ ಕಾರು ಮನೆಯ ಮುಂದೆ ನಿಂತರೆ ಸಾಕು ಕ್ಷಣಾರ್ಧದಲ್ಲಿ ಕಾರಿನಲ್ಲಿ ಬಂದು ಟ್ಯಾಬ್ ಮೂಲಕ ನಕಲಿ ಕೀ ಬಳಸಿ ಹತ್ತೇ ನಿಮಿಷದಲ್ಲಿ ಇವರು ಕಾರು ಕದಿಯುತ್ತಿದ್ದರು. ಯಾರಿಗೂ ಗೊತ್ತಾಗದ ರೀತಿಯಲ್ಲಿ ಚಾಣಾಕ್ಷತನದಿಂದ ಕಾರ್ ಎಸ್ಕೇಪ್ ಮಾಡಿ, ಹೊರ ರಾಜ್ಯಕ್ಕೆ ಕಳುಹಿಸುತ್ತಿದ್ದರು.
ಬೆಂಗಳೂರು ಹೊರವಲಯ ನೆಲಮಂಗಲ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸರಣಿ ಕಾರುಗಳ ಕಳ್ಳತನದಿಂದ ಜನ ಆತಂಕಕ್ಕೆ ಒಳಗಾಗಿದ್ದರು. ಪ್ರಕರಣ ದಾಖಲಿಸಿಕೊಂಡ ಟೌನ್ ಪೊಲೀಸರು, ಆರೋಪಿಗಳಿಗಾಗಿ ಬಲೆ ಬೀಸಿದ್ದರು. ನೆಲಮಂಗಲ ಟೌನ್ ಪಿಎಸ್‍ಐ ಮಂಜುನಾಥ್ ಹಾಗೂ ಸಿಪಿಐ ಶಿವಣ್ಣ ನೇತೃತ್ವದ ತಂಡ ಸಿಸಿಟಿವಿಯ ವಿಡಿಯೋಗಳನ್ನು ಆಧರಿಸಿ ಮಿಂಚಿನ ಕಾರ್ಯಚರಣೆ ನಡೆಸಿದ್ದಾರೆ. ಮಾಲು ಸಮೇತ ನಾಲ್ವರು ಅಂತರ್ ರಾಜ್ಯ ಕಾರು ಕಳ್ಳರನ್ನು ಬಂಧಿಸಿದ್ದಾರೆ.
ಸಾಲ ಮಾಡಿ ಖರೀದಿಸಿದ ಕಾರು ಕಳ್ಳತನವಾಗಿದ್ದರಿಂದ ಮಾಲೀಕರು ಆತಂಕಕ್ಕೆ ಒಳಗಾಗಿದ್ದರು. ಪೊಲೀಸರ ಕಾರ್ಯಾಚರಣೆಯಿಂದ ಕಾರು ಸಿಕ್ಕಿದ್ದು, ಪೊಲೀಸರಿಗೆ ಧನ್ಯವಾದ ಅರ್ಪಿಸಿದ್ದಾರೆ.