ಕೋಲ್ಕತ್ತಾ: ಇಲ್ಲಿ ನಡೆದ 2026ರ ಟಿ20 ವಿಶ್ವಕಪ್‌ನ ಮೊದಲ ಗ್ರೂಪ್ ಸಿ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವು ಬ್ಯಾಟ್ಸ್‌ಮನ್ ಶಿಮ್ರಾನ್ ಹೆಟ್ಮೈಯರ್ ಮತ್ತು ಆಲ್‌ರೌಂಡರ್ ರೊಮಾರಿಯೊ ಶೆಫರ್ಡ್ ಅವರ ಅದ್ಭುತ ಪ್ರದರ್ಶನದ ನೆರವಿನಿಂದ ಸ್ಕಾಟ್ಲೆಂಡ್ ತಂಡವನ್ನು 35 ರನ್‌ಗಳಿಂದ ಸೋಲಿಸಿತು.
ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ತಂಡವು ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 182 ರನ್ ಗಳಿಸಿತು. ಗುರಿ ಬೆನ್ನತ್ತಿದ ಸ್ಕಾಟ್ಲೆಂಡ್ 18.5 ಓವರ್‌ಗೆ ಆಲೌಟ್ ಆಗಿ 35 ರನ್‌ಗಳ ಸೋಲನುಭವಿಸಿತು.
ಇಂಡೀಸ್ ಪರ ಬ್ರಾಂಡನ್ ಕಿಂಗ್ 35, ಶೆರ್ಫೇನ್ ರುದರ್ಫೋರ್ಡ್ 26, ರೋವ್‌ಮನ್ ಪೊವೆಲ್ 24, ಶೈ ಹೋಪ್ 19 ರನ್ ಗಳಿಸಿದರು. ಹೆಟ್ಮೈಯರ್ 36 ಎಸೆತಗಳಲ್ಲಿ 64 ರನ್ ಗಳಿಸಿ, ತಂಡ ಸವಾಲಿನ ಮೊತ್ತ ಪೇರಿಸಲು ನೆರವಾದರು. ಹೆಟ್ಮೈಯರ್ 22 ಎಸೆತಗಳಲ್ಲಿ ತಮ್ಮ ಅರ್ಧಶತಕವನ್ನು ಪೂರೈಸಿದರು. ಟಿ20 ವಿಶ್ವಕಪ್‌ನಲ್ಲಿ ವೆಸ್ಟ್ ಇಂಡೀಸ್‌ನ ವೇಗದ ಅರ್ಧಶತಕ ಬಾರಿಸಿದ್ದ ಕ್ರಿಸ್ ಗೇಲ್ ಅವರ ದಾಖಲೆಯನ್ನು ಮುರಿದರು.
ನಂತರ ಬ್ಯಾಟಿಂಗ್ ಮಾಡಿದ ಸ್ಕಾಟ್ಲೆಂಡ್ ಪರ ರಿಚೀ ಬೆರಿಂಗ್ಟನ್ 42, ಟಾಮ್ ಬ್ರೂಸ್ 35, ಜಾರ್ಜ್ ಮುನ್ಸೆ 19, ಮಾರ್ಕ್ ವ್ಯಾಟ್ 15, ಬ್ರಾಂಡನ್ ಮೆಕ್‌ಮುಲ್ಲೆನ್ 14 ರನ್ ಗಳಿಸಿದರು. ಸ್ಕಾಟ್ಲೆಂಡ್ ಬ್ಯಾಟರ್‌ಗಳನ್ನು ಶೆಫರ್ಡ್ ಸಿಂಹಸ್ವಪ್ನವಾಗಿ ಕಾಡಿದರು. ಶೆಫರ್ಡ್ 17 ನೇ ಓವರ್‌ನಲ್ಲಿ ಹ್ಯಾಟ್ರಿಕ್ ಸೇರಿದಂತೆ ಐದು ವಿಕೆಟ್‌ಗಳನ್ನು ಕಬಳಿಸಿ ಮಿಂಚಿದರು. ಜೇಸನ್ ಹೋಲ್ಡರ್ 3, ಶಮರ್ ಜೋಸೆಫ್ ಹಾಗೂ ಗುಡಕೇಶ್ ಮೋತಿ ತಲಾ 1 ವಿಕೆಟ್ ಪಡೆದರು. ಸ್ಕಾಟ್ಲೆಂಡ್ 18.5 ಓವರ್‌ಗಳಲ್ಲಿ 147 ರನ್‌ಗಳಿಗೆ ಪತನಗೊಂಡು ಸೋತಿತು.

