ನವದೆಹಲಿ: ವಿಶ್ವದಾದ್ಯಂತ ಕ್ರಿಕೆಟ್ ಪ್ರೇಮಿಗಳ ಕಣ್ಣು ಈಗ ಭಾರತ ಮತ್ತು ಇಂಗ್ಲೆಂಡ್ (IndVsEng) ನಡುವಿನ ಸೆಮಿಫೈನಲ್ ಪಂದ್ಯದ ಮೇಲೆ ನೆಟ್ಟಿದೆ. ಇಂದು ಈಡನ್ ಗಾರ್ಡನ್‌ನಲ್ಲಿ ನಡೆಯುವ ಮೊದಲ ಸೆಮಿಸ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಮತ್ತು ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗಲಿವೆ.
ಮಾರ್ಚ್ 5ರಂದು ನಡೆಯಲಿರುವ ಈ ಮಹತ್ವದ ಕದನಕ್ಕೆ ಮುನ್ನ ಟೀಮ್ ಇಂಡಿಯಾ ಪಾಳೆಯದಿಂದ 1 ಬಿಗ್ ಅಪ್‌ಡೇಟ್ ಹೊರಬಿದ್ದಿದೆ. ಆಂಗ್ಲರ ಪಡೆಯನ್ನು ಕಟ್ಟಿಹಾಕಲು ಸೂರ್ಯ ಪಡೆ ಈಗ ಸಪ್ರೈಸ್ ಅಸ್ತ್ರವೊಂದನ್ನು ಪ್ರಯೋಗಿಸಲು ಸಜ್ಜಾಗಿದೆ.

ಕುಲ್‌ದೀಪ್ ಎಂಟ್ರಿ – ವರುಣ್‌ಗೆ ಕೊಕ್?
ಮೂಲಗಳ ಪ್ರಕಾರ, ಈ ನಿರ್ಣಾಯಕ ಪಂದ್ಯಕ್ಕಾಗಿ ಭಾರತದ ಪ್ಲೇಯಿಂಗ್ ಇಲೆವೆನ್‌ನಲ್ಲಿ ಒಂದು ಪ್ರಮುಖ ಬದಲಾವಣೆ ಬಹುತೇಕ ಖಚಿತ ಎನ್ನಲಾಗುತ್ತಿದೆ. ಇಷ್ಟು ದಿನ ತಂಡದಲ್ಲಿ ಮಿಸ್ಟರಿ ಸ್ಪಿನ್ನರ್ ಆಗಿ ಕಾಣಿಸಿಕೊಂಡಿದ್ದ ವರುಣ್ ಚಕ್ರವರ್ತಿ ಬದಲಿಗೆ, ಅನುಭವಿ ಚೈನಾಮನ್ ಬೌಲರ್ ಕುಲದೀಪ್ ಯಾದವ್ ಅವರನ್ನು ಕಣಕ್ಕಿಳಿಸಲು ಮ್ಯಾನೇಜ್‌ಮೆಂಟ್ ನಿರ್ಧರಿಸಿದೆ.
ಏಕೆಂದ್ರೆ ಇಂಗ್ಲೆಂಡ್ ಬ್ಯಾಟರ್‌ಗಳು ವೇಗದ ಬೌಲಿಂಗ್‌ಗಿಂತ ಸ್ಪಿನ್ ಬೌಲಿಂಗ್ ಎದುರಿಸಲು ಹೆಚ್ಚು ತಿಣುಕಾಡುತ್ತಾರೆ ಎಂಬುದು ಇತಿಹಾಸದಿಂದ ತಿಳಿದುಬಂದಿದೆ. ವಿಶೇಷವಾಗಿ ಕುಲ್‌ದೀಪ್ ಯಾದವ್ ಅವರ ಗೂಗ್ಲಿ ಮತ್ತು ಲೂಪ್ ಎಸೆತಗಳು ಇಂಗ್ಲೆಂಡ್ ನಾಯಕ ಹ್ಯಾರಿ ಬ್ರೂಕ್, ಜೋಸ್ ಬಟ್ಲರ್ರಂತಹ ಘಟಾನುಘಟಿಗಳಿಗೆ ಕಂಟಕವಾಗಬಲ್ಲವು ಎಂದು ತಜ್ಞರು ಅಂದಾಜಿಸಿದ್ದಾರೆ. ಹೀಗಾಗಿ ವರುಣ್‌ಗೆ ಕೊಕ್ ಕೊಟ್ಟು ಕುಲ್‌ದೀಪ್ ಅವರನ್ನು ಆಹ್ವಾನಿಸಲಿದೆ.

3 ಆವೃತ್ತಿಗಳಲ್ಲಿ ಆಂಗ್ಲರೇ ಎದುರಾಳಿ
ಟಿ20 ವಿಶ್ವಕಪ್ ಟೂರ್ನಿಯ ಕಳೆದ 3 ಆವೃತ್ತಿಗಳಲ್ಲಿ ಸೆಮಿಫೈನಲ್‌ನಲ್ಲಿ ಭಾರತಕ್ಕೆ ಆಂಗ್ಲರೇ ಎದುರಾಳಿಯಾಗುತ್ತಿದ್ದಾರೆ. 2022 ರ ಟೂರ್ನಿಯಲ್ಲಿ ಇಂಗ್ಲೆಂಡ್ ಭಾರತದ ವಿರುದ್ಧ 10 ವಿಕೆಟ್ ಜಯ ಸಾಧಿಸಿತು. ಸೆಮಿಸ್‌ನಲ್ಲಿ ಪಾಕ್ ಸೋಲಿಸಿ ಟ್ರೋಫಿ ಗೆದ್ದಿತ್ತು. 2024 ರ ಸೆಮಿಸ್‌ನಲ್ಲಿ ಭಾರತ ಆಂಗ್ಲರನ್ನ ಸೋಲಿಸಿ, ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ಸೋಲಿಸಿ ಟ್ರೋಫಿ ಗೆದ್ದಿತ್ತು. ಇದೀಗ ಮೂರನೇ ಬಾರಿಗೆ ಮುಖಾಮುಖಿಯಾಗುತ್ತಿದ್ದು, ಕುತೂಹಲ ಹೆಚ್ಚಿಸಿದೆ.

