T20 World Cup: ಇಂಗ್ಲೆಂಡ್‌ ವಿರುದ್ಧ ಭರ್ಜರಿ ಜಯ – ಫೈನಲ್‌ಗೆ ಭಾರತ ಗ್ರ್ಯಾಂಡ್‌ ಎಂಟ್ರಿ

Public TV
2 Min Read
Team India T20 World Cup

ಗಯಾನ: ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯ ಎರಡನೇ ಸೆಮಿಫೈನಲ್‌ ಪಂದ್ಯದಲ್ಲಿ ಇಂಗ್ಲೆಂಡ್‌ ವಿರುದ್ಧ ಭಾರತ ಭರ್ಜರಿ ಜಯ ಸಾಧಿಸಿ ಫೈನಲ್‌ಗೆ ಗ್ರ್ಯಾಂಡ್‌ ಎಂಟ್ರಿ ಕೊಟ್ಟಿದೆ. 10 ವರ್ಷಗಳ ಬಳಿಕ ಟೀಂ ಇಂಡಿಯಾ ಫೈನಲ್‌ಗೆ ಲಗ್ಗೆ ಇಟ್ಟಿದೆ.

ಮೊದಲು ಬ್ಯಾಟಿಂಗ್‌ ಮಾಡಿದ ಭಾರತ ತಂಡವು 20 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 171 ರನ್‌ ಗಳಿಸಿತು. 172 ರನ್‌ಗಳ ಗುರಿ ಬೆನ್ನತ್ತಿದ ಆಂಗ್ಲರ ಪಡೆ 16.4 ಓವರ್‌ಗಳಲ್ಲಿ ತನ್ನೆಲ್ಲ ವಿಕೆಟ್‌ ಕಳೆದುಕೊಂಡು 103 ರನ್‌ಗಳಿಸಲಷ್ಟೇ ಶಕ್ತವಾಗಿ ಸೋಲೊಪ್ಪಿಕೊಂಡಿತು.

 Rohit Sharma Suryakumar Yadav

2007ರಲ್ಲಿ ಮೊದಲ ಬಾರಿಗೆ ನಡೆದಿದ್ದ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ಪ್ರಶಸ್ತಿ ಜಯಿಸಿತ್ತು. ಆಗಲೂ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಸೆಣಸಿತ್ತು. ಈಗ ಭಾರತಕ್ಕೆ ಮತ್ತೆ ಚಾಂಪಿಯನ್‌ ಆಗುವ ಅವಕಾಶ ಲಭಿಸಿದೆ. ಶನಿವಾರ ನಡೆಯುವ ಫೈನಲ್‌ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಹಿಟ್‌ಮ್ಯಾನ್‌ ರೋಹಿತ್‌ ಪಡೆ ಎದುರಿಸಲಿದೆ.

ಇಲ್ಲಿನ ಪ್ರಾವಿಡೆನ್ಸ್‌ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಎರಡನೇ ಸೆಮಿಫೈನಲ್‌ ಪಂದ್ಯದಲ್ಲಿ ಭಾರತ ಮೊದಲು ಬ್ಯಾಟ್‌ ಮಾಡಿತು. ಮಳೆ ಕಾರಣಕ್ಕೆ ಪಂದ್ಯವು 75 ನಿಮಿಷ ತಡವಾಗಿ ಆರಂಭವಾಯಿತು. ಬ್ಯಾಟಿಂಗ್‌ ಮಾಡಿದ ಭಾರತ 8 ಓವರ್‌ಗಳಿಗೆ 65 ರನ್‌ ಗಳಿಸಿ 2 ವಿಕೆಟ್‌ ಕಳೆದುಕೊಂಡಿತ್ತು. ಆಗ ಮತ್ತೆ ಮಳೆ ಬಂದು ಆಟವನ್ನು ಸ್ಥಗಿತಗೊಳಿಸಲಾಗಿತ್ತು. ಅರ್ಧ ಗಂಟೆ ಬಳಿಕ ಮತ್ತೆ ಪಂದ್ಯ ಆರಂಭವಾಯಿತು.

Chris Jordan

ರೋಹಿತ್‌ ಜೊತೆ ಇನಿಂಗ್ಸ್‌ ಆರಂಭಿಸಿದ್ದ ವಿರಾಟ್‌ ಕೊಹ್ಲಿ ಸಿಕ್ಸ್‌ ಸಿಡಿಸುವ ಮೂಲಕ ಭರವಸೆ ಮೂಡಿಸಿದ್ದರು. ಆದರೆ ರೀಸ್‌ ಟಾಪ್ಲಿ ಬೌಲಿಂಗ್‌ಗೆ ಕ್ಲೀನ್‌ ಬೌಲ್ಡ್‌ ಆದರು. ಕೇವಲ 9 ರನ್‌ ಗಳಿಸಿ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದರು. ರಿಷಭ್‌ ಪಂತ್‌ 4 ರನ್‌ಗೆ ಪೆವಿಲಿಯನ್‌ ಸೇರಿದರು. ನಾಯಕ ರೋಹಿತ್‌ ಶರ್ಮಾ ಜವಾಬ್ದಾರಿಯುತ ಆಟವು ತಂಡ ಸವಾಲಿನ ಮೊತ್ತ ಪೇರಿಸಲು ನೆರವಾಯಿತು. ರೋಹಿತ್‌ಗೆ ಸೂರ್ಯಕುಮಾರ್‌ ಯಾದವ್‌ ಸಾಥ್‌ ನೀಡಿದರು. ಇಬ್ಬರ ಜೊತೆಯಾಟದಲ್ಲಿ 73 (50 ಎಸೆತ) ರನ್‌ ಹರಿದುಬಂತು. ರೋಹಿತ್‌ ಶರ್ಮಾ 57 ರನ್‌ (39 ಎಸೆತ, 6 ಫೋರ್‌, 2 ಸಿಕ್ಸರ್‌) ಗಳಿಸಿದರು. ಸೂರ್ಯಕುಮಾರ್‌ ಯಾದವ್‌ 47 (4 ಫೋರ್‌, 2 ಸಿಕ್ಸರ್‌) ರನ್‌ ಗಳಿಸಿದರು.

ಉಳಿದಂತೆ ಹಾರ್ದಿಕ್‌ ಪಾಂಡ್ಯ 23, ರವೀಂದ್ರ ಜಡೇಜಾ 17, ಅಕ್ಷರ್‌ ಪಟೇಲ್‌ 10 ಗಳಿಸಿ ತಂಡದ ರನ್‌ ಹೆಚ್ಚಿಸಿದರು. ಇಂಗ್ಲೆಂಡ್‌ ಪರ ಕ್ರಿಸ್ ಜೋರ್ಡಾನ್ 3 ವಿಕೆಟ್‌ ಕಬಳಿಸಿ ಮಿಂಚಿದರು. ರೀಸ್ ಟೋಪ್ಲಿ, ಜೋಫ್ರಾ ಆರ್ಚರ್, ಸ್ಯಾಮ್ ಕರ್ರನ್, ಆದಿಲ್ ರಶೀದ್ ತಲಾ 1 ವಿಕೆಟ್‌ ಕಿತ್ತರು.

Axar Patel

ಭಾರತ ನೀಡಿದ್ದ 172 ರನ್‌ ಗುರಿ ಬೆನ್ನತ್ತಿದ್ದ ಇಂಗ್ಲೆಂಡ್‌ ಆರಂಭಿಕ ಆಘಾತ ಎದುರಿಸಿತು. ಫಿಲ್ ಸಾಲ್ಟ್ ಕೇವಲ 5 ರನ್‌ಗಳಿಸಿ ಔಟಾಗಿ ಪೆವಿಲಿಯನ್‌ ಸೇರಿದರು. ಹ್ಯಾರಿ ಬ್ರೂಕ್‌ 25, ಜೋಸ್‌ ಬಟ್ಲರ್‌ 23, ಜೋಪ್ರಾ ಆರ್ಚರ್‌ 21 ರನ್‌ ಗಳಿಸಿದ್ದೇ ಹೆಚ್ಚಾಯಿತು. ಭಾರತ ತಂಡದ ಅಕ್ಷರ್‌ ಪಟೇಲ್‌ (3 ವಿಕೆಟ್‌) ಮತ್ತು ಕುಲದೀಪ್‌ ಯಾದವ್‌ (3 ವಿಕೆಟ್) ಸ್ಪಿನ್‌ ಮೋಡಿಗೆ ಆಂಗ್ಲ ಪಡೆ ಮಂಕಾಯಿತು.‌ 16.4 ಓವರ್‌ಗಳಿಗೆ ಆಲೌಟ್‌ ಆಗಿ 103 ರನ್‌ ಗಳಿಸಿ ಇಂಗ್ಲೆಂಡ್‌ ಸೋಲನುಭವಿಸಿತು.

ಭಾರತದ ಪರ ಅಕ್ಷರ್‌ ಪಟೇಲ್‌ ಹಾಗೂ ಕುಲ್ದೀಪ್‌ ಯಾದವ್‌ ತಲಾ 3 ವಿಕೆಟ್‌ ಕಿತ್ತು ಮಿಂಚಿದರು. ಜಸ್ಪ್ತ್ರಿತ್‌ ಬುಮ್ರಾ 2 ವಿಕೆಟ್‌ ಕಿತ್ತರು.

Share This Article