ನಾರ್ತ್ ಸೌಂಡ್ (ಆ್ಯಂಟಿಗಾ): 2024ರ ಟಿ20 ವಿಶ್ವಕಪ್‌ನ (T20 World Cup) ಸೂಪರ್-8 ಪಂದ್ಯದಲ್ಲಿ ಭಾರತ (India) ಮತ್ತು ಬಾಂಗ್ಲಾದೇಶ (Bangladesh) ತಂಡಗಳು ಮುಖಾಮುಖಿಯಾಗಿವೆ. ಇಲ್ಲಿನ ಸರ್ ವಿವಿಯನ್ ರಿಚರ್ಡ್ಸ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಮತ್ತು ಬಾಂಗ್ಲಾದೇಶ ಟಿ20 ವಿಶ್ವಕಪ್ ಕ್ರಿಕೆಟ್ ಪಂದ್ಯದಲ್ಲಿ ಭಾರತ 196 ರನ್ ಗಳಿಸುವ ಮೂಲಕ ಬಾಂಗ್ಲಾದೇಶಕ್ಕೆ 197 ರನ್‌ಗಳ ಗುರಿ ನೀಡಿದೆ.
ಟಾಸ್ ಗೆದ್ದು ಬಾಂಗ್ಲಾದೇಶ ಬೌಲಿಂಗ್ ಆಯ್ದುಕೊಂಡಿತು. ಮೊದಲಿಗೆ ಭಾರತ ತಂಡದಿಂದ ನಾಯಕ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಬ್ಯಾಟ್ ಬೀಸಿ ಉತ್ತಮ ಆರಂಭ ನೀಡಿದರು. 11 ಎಸೆತಗಳಿಗೆ 23 ರನ್ ಸಿಡಿಸಿ ರೋಹಿತ್ ಶರ್ಮಾ ಔಟಾಗುವ ಮೂಲಕ ಟೀಂ ಇಂಡಿಯಾದ ಮೊದಲ ವಿಕೆಟ್ ಪತನಗೊಂಡಿತು. 11 ಬಾಲ್‌ಗಳಲ್ಲಿ ರೋಹಿತ್ ಶರ್ಮಾ 3 ಫೋರ್ ಹಾಗೂ 1 ಸಿಕ್ಸ್ ಸಿಡಿಸಿ ಒಟ್ಟು 23 ಅಂಕಗಳನ್ನು ತಂಡಕ್ಕೆ ಗಳಿಸಿಕೊಟ್ಟರು. ವಿರಾಟ್ ಕೊಹ್ಲಿ 28 ಬಾಲ್‌ಗಳಿಗೆ ಒಟ್ಟು 37 ರನ್ ಸಿಡಿಸಿ 2ನೇ ವಿಕೆಟ್ ಬಿಟ್ಟುಕೊಟ್ಟರು.
ಬಳಿಕ ಕ್ರೀಸ್‌ಗೆ ಬಂದ ಸೂರ್ಯಕುಮಾರ್ ಯಾದವ್ ಮೊದಲ ಎಸೆತಕ್ಕೆ ಸಿಕ್ಸ್ ಬಾರಿಸಿ ಎರಡನೇ ಬಾಲ್ ಅನ್ನು ವಿಕೆಟ್ ಕೀಪರ್ ಕೈಗೆ ಕ್ಯಾಚ್ ನೀಡುವ ಮೂಲಕ ಒಟ್ಟು 6 ರನ್ ಗಳಿಸಿ ಪೆವಿಲಿಯನ್‌ಗೆ ಮರಳಿದರು. ರಿಷಭ್ ಪಂತ್ 4 ಫೋರ್ ಹಾಗೂ 2 ಸಿಕ್ಸ್ ಸಿಡಿಸಿ 24 ಬಾಲ್‌ಗಳಿಗೆ ಒಟ್ಟು 36 ರನ್ ಗಳಿಸಿ ವಿಕೆಟ್ ಒಪ್ಪಿಸಿದರು.
ಬಳಿಕ ಕ್ರೀಸ್‌ಗೆ ಮರಳಿದ ಶಿವಂ ದುಬೆ 24 ಎಸೆತಗಳಿಗೆ 34 ರನ್ ಸಿಡಿಸಿ ಔಟಾದರು. ಶಿವಂ ದುಬೆ ಹಾಗೂ ಹಾರ್ದಿಕ್ ಪಾಂಡ್ಯ ಜೊತೆಯಾಟವಾಡಿ ತಂಡಕ್ಕೆ 54 ರನ್ ಗಳಿಸಿಕೊಟ್ಟರು. ಅಕ್ಷರ್ ಪಟೇಲ್ 5 ಎಸೆತಗಳಿಗೆ 3 ರನ್ ಗಳಿಸಿ ಔಟಾಗದೇ ಆಟವನ್ನು ಕೊನೆಗೊಳಿಸಲು ಸಹಕರಿಸಿದರು. ಹಾರ್ದಿಕ್ ಪಾಂಡ್ಯ ಕೊನೆಯ 1 ಬಾಲ್‌ನಲ್ಲಿ ಫೋರ್ ಸಿಡಿಸಿ 27 ಎಸೆತಗಳಿಗೆ ಅರ್ಧಶತಕ ಪೂರ್ಣಗೊಳಿಸಿ ಔಟಾಗದೇ ಆಟವನ್ನು ಕೊನೆಗೊಳಿಸಿದರು.