– ತಮ್ಮದೇ ದೇಶದ ಅಭಿಮಾನಿಗಳಿಂದ ಪಾಕ್ ತಂಡದ ವಿರುದ್ಧ ವ್ಯಾಪಕ ಟೀಕೆ
ಫ್ಲೋರಿಡಾ: 2024ರ ಟಿ20 ವಿಶ್ವಕಪ್‌ನಿಂದ (T20 World Cup) ಪಾಕಿಸ್ತಾನ ತಂಡ ಹೊರಬಿದ್ದ ಬಳಿಕ ತಮ್ಮದೇ ದೇಶದ ಕ್ರಿಕೆಟ್ ಅಭಿಮಾನಿಗಳು ಹಾಗೂ ಹಿರಿಯ ಕ್ರಿಕೆಟಿಗರು ವ್ಯಾಪಕ ಟೀಕೆ ವ್ಯಕ್ತಪಡಿಸಿದ್ದಾರೆ. ಅದರಲ್ಲೂ ಬಾಬರ್ ಆಜಂ (Babar Azam), ಮೊಹಮ್ಮದ್ ರಿಜ್ವಾನ್ (Mohammad Rizwan) ಸೇರಿದಂತೆ ಹಿರಿಯ ಕ್ರಿಕೆಟಿಗರನ್ನು ರಾಷ್ಟ್ರೀಯ ತಂಡದಿಂದಲೇ ಕಿತ್ತೊಗೆಯುವಂತೆ ಆಗ್ರಹಗಳು ಕೇಳಿಬರುತ್ತಿವೆ.
ಪಾಕ್‌ನ ಖಾಸಗಿ ವಾಹಿನಿಯೊಂದರ ಚರ್ಚಾ ಕಾರ್ಯಕ್ರಮದಲ್ಲಿ ಮಾತನಾಡಿದ ಪಾಕ್ ಕ್ರಿಕೆಟಿಗ, ಅಹ್ಮದ್ ಶೆಹಜಾದ್ (Ahmed Shehzad) ಹಿರಿಯ ಆಟಗಾರರ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. ಪಾಕ್ ತಂಡದಲ್ಲಿರುವ ನಾಯಕ ಬಾಬರ್ ಆಜಂ, ಮೊಹಮ್ಮದ್ ರಿಜ್ವಾನ್, ಶಾಹೀನ್ ಶಾ ಅಫ್ರಿದಿ ಸೇರಿದಂತೆ ಹಿರಿಯ ಕ್ರಿಕೆಟಿಗರನ್ನು ತಂಡದಿಂದ ಕಿತ್ತೊಗೆಯಬೇಕು ಎಂದು ಪಾಕ್ ಕ್ರಿಕೆಟ್ ಮಂಡಳಿಗೆ ಒತ್ತಾಯಿಸಿದ್ದಾರೆ.
ಬಾಬರ್ ಕ್ರಿಕೆಟ್ ತಂಡದಲ್ಲಿ ಗುಂಪುಗಾರಿಕೆ ಮಾಡುತ್ತಿದ್ದಾರೆ, ತನ್ನ ಸ್ನೇಹಿತರನ್ನ ರಕ್ಷಿಸಲು ಪ್ರಯತ್ನಿಸುತ್ತಿದ್ದಾರೆ. ಬಾಬರ್, ರಿಜ್ವಾನ್, ಅಫ್ರಿದಿ, ಫಖರ್ ಜಮಾನ್, ಹ್ಯಾರಿಸ್ ರೌಫ್ ಪಾಕಿಸ್ತಾನಕ್ಕಾಗಿ ಕಳೆದ 4-5 ವರ್ಷಗಳಿಂದ ನಿಯಮಿತವಾಗಿ ಆಡುತ್ತಿದ್ದಾರೆ. ಅವರ ಪ್ರದರ್ಶನ ಸುಧಾರಿಸಿಕೊಳ್ಳಲು ಸಾಕಷ್ಟು ಸಮಯ ನೀಡಲಾಗಿದೆ. ಆದರೂ ತಂಡದಲ್ಲಿ ಗುಂಪುಗಾರಿಕೆಯಿಂದ ಒಬ್ಬರನ್ನೊಬ್ಬರು ಸಮರ್ಥಿಸಿಕೊಳ್ಳುತ್ತಿದ್ದಾರೆ. ನಮ್ಮ ತಪ್ಪುಗಳಿಂದ ನಾವು ಕಲಿಯುತ್ತಿದ್ದೇವೆ ಅಂತ ಪ್ರತಿಬಾರಿಯೂ ಹೇಳ್ತಿದ್ದಾರೆ. ಕೆನಡಾ ವಿರುದ್ಧ ಸಹ ಕಡಿಮೆ ಎನ್‌ರೇಟ್‌ನಿಂದ ಗೆದ್ದು ನೀವು ಏನನ್ನು ಕಲಿಯುತ್ತಿದ್ದೀರಿ? ನಿಮ್ಮ ನಾಯಕತ್ವದಿಂದ ಪಾಕಿಸ್ತಾನದ ಕ್ರಿಕೆಟ್ ಹಾಳಾಗಿದೆ. ಬಾಬರ್ ಕೇವಲ ಸೋಷಿಯಲ್ ಮೀಡಿಯಾ ಸ್ಟಾರ್‌ಗಳಾಗಿದ್ದಾರೆ. ಬಾಬರ್ ವಿರುದ್ಧ ಪಿಸಿಬಿ (PCB) ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಶೆಹಜಾದ್ ಒತ್ತಾಯಿಸಿದ್ದಾರೆ.
ವಿಶ್ವಕಪ್ ನಿಂದ ಪಾಕ್ ಔಟ್:
ಅಮೆರಿಕ (USA) ಮತ್ತು ಐರ್ಲೆಂಡ್ ನಡುವಿನ ಪಂದ್ಯ ಶುಕ್ರವಾರ ಮಳೆಯಿಂದ ರದ್ದಾದರಿಂದ ಪಾಕ್ ತಂಡ 2024ರ ಆವೃತ್ತಿಗೆ ಗುಡ್‌ಬೈ ಹೇಳಿದೆ. ಭಾನುವಾರ ಐರ್ಲೆಂಡ್ ವಿರುದ್ಧ ತನ್ನ ಕೊನೆಯ ಪಂದ್ಯವನ್ನಾಡಿ, ಬಳಿಕ ತವರಿಗೆ ಮರಳಲಿದೆ. ಇನ್ನೂ ಚೊಚ್ಚಲ ಆವೃತ್ತಿಯಲ್ಲೇ ಸೂಪರ್ -8ರ ಘಟಕ್ಕೆ ಪ್ರವೇಶಿಸಿರುವ ಅಮೆರಿಕ ತಂಡ 2026ರ ವಿಶ್ವಕಪ್ ಟೂರ್ನಿಗೂ ಅರ್ಹತೆ ಗಿಟ್ಟಿಸಿಕೊಂಡಿದೆ.