ನವದೆಹಲಿ: ಟಿ20 ವಿಶ್ವಕಪ್ (T20 World Cup) ಮೊದಲ ಲೀಗ್ ಸುತ್ತಿನ ಪಂದ್ಯಗಳು ಬಹುತೇಕ ಮುಕ್ತಾಯ ಹಂತಕ್ಕೆ ಬಂದು ನಿಂತಿವೆ. 20 ತಂಡಗಳಲ್ಲಿ ಈಗಾಗಲೇ 7 ತಂಡಗಳು ಸೂಪರ್-8 ಹಂತಕ್ಕೆ ತಲುಪಿವೆ. ಇಂದು ನಮೀಬಿಯಾ ವಿರುದ್ಧ ಪಾಕಿಸ್ತಾನ (Pakistan) ನಿರ್ಣಾಯಕ ಪಂದ್ಯ ಹೊರತುಪಡಿಸಿದ್ರೆ, ಉಳಿದೆಲ್ಲ ಪಂದ್ಯಗಳು ಆಟಕ್ಕುಂಟು ಲೆಕ್ಕಕ್ಕಿಲ್ಲದಂತಾಗಿದೆ.
ಗ್ರೂಪ್-ಎ ಯಿಂದ ಈಗಾಗಲೇ ಭಾರತ ತಂಡವು (Team India) ಮುಂದಿನ ಸುತ್ತಿಗೆ ಪ್ರವೇಶಿಸಿದ್ದು, ದ್ವಿತೀಯ ಸುತ್ತಿನಲ್ಲಿ 3 ತಂಡಗಳನ್ನು ಎದುರಿಸಲಿದೆ. ಅದರಂತೆ ಸೂಪರ್-8 ಸುತ್ತಿನಲ್ಲಿ ಟೀಮ್ ಇಂಡಿಯಾ ಎದುರಿಸಲಿರುವ ತಂಡಗಳಾವುವು ಎಂದು ನೋಡುವುದಾದರೆ…

ಭಾರತ vs ಸೌತ್ ಆಫ್ರಿಕಾ
ಫೆಬ್ರವರಿ 22 ರಂದು ನಡೆಯಲಿರುವ ಸೂಪರ್-8 ಪಂದ್ಯದಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಮುಖಾಮುಖಿಯಾಗಲಿವೆ. ಈ ಪಂದ್ಯಕ್ಕೆ ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂ ಆತಿಥ್ಯ ವಹಿಸಲಿದೆ.
ಭಾರತ vs ಜಿಂಬಾಬ್ವೆ
ಟೀಂ ಇಂಡಿಯಾ ತನ್ನ ಎರಡನೇ ಸೂಪರ್-8 ಪಂದ್ಯದಲ್ಲಿ ಜಿಂಬಾಬ್ವೆ (Zimbabwe) ತಂಡವನ್ನು ಎದುರಿಸಲಿದೆ. ಫೆಬ್ರವರಿ 26 ರಂದು ನಡೆಯಲಿರುವ ಈ ಮ್ಯಾಚ್ಗೆ ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂ ಆತಿಥ್ಯವಹಿಸಲಿದೆ.

ಭಾರತ vs ವೆಸ್ಟ್ ಇಂಡೀಸ್
ಮಾರ್ಚ್ 1 ರಂದು ನಡೆಯಲಿರುವ ಪಂದ್ಯದಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ (West Indies) ಮುಖಾಮುಖಿಯಾಗಲಿದೆ. ಈ ಪಂದ್ಯವು ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆಯಲಿದೆ.
ಈ ಮೂರು ಪಂದ್ಯಗಳಲ್ಲಿ ಭಾರತ ಗೆದ್ದರೆ ಟೀಂ ಇಂಡಿಯಾ ಸೆಮಿಸ್ ಹಂತಕ್ಕೆ ತಲುಪಲಿದೆ. ಅಂದರೆ ಸೂಪರ್-8 ಹಂತದಲ್ಲಿ 2 ಗ್ರೂಪ್ಗಳಿರಲಿದ್ದು, ಎರಡು ಗ್ರೂಪ್ಗಳಿಂದ ತಲಾ 2 ತಂಡಗಳು ಸೆಮಿಫೈನಲ್ಗೆ ಪ್ರವೇಶಿಸುತ್ತದೆ. ಹೀಗಾಗಿ ಟೀಮ್ ಇಂಡಿಯಾ ಪಾಲಿಗೆ ಮುಂದಿನ ಮೂರು ಪಂದ್ಯಗಳು ತುಂಬಾ ನಿರ್ಣಾಯಕವಾಗಿದೆ.

