– ಸ್ಪಿನ್ ಪ್ಯಾರಡೈಸ್‌ನಲ್ಲಿ ಹರಿಯುವುದೇ ರನ್ ಹೊಳೆ..?
ಚೆನ್ನೈ: ಸೂಪರ್ 8 ಹಂತದ ಮೊದಲ ಪಂದ್ಯದಲ್ಲೇ ದಕ್ಷಿಣ ಆಫ್ರಿಕಾ ವಿರುದ್ಧ ಹೀನಾಯ ಸೋಲು ಕಂಡಿರುವ ಟೀಂ ಇಂಡಿಯಾ (Team India) ಇದೀಗ ಮಾಡು ಇಲ್ಲವೇ ಮಡಿ ಪರಿಸ್ಥಿತಿಯಲ್ಲಿ ಜಿಂಬಾಬ್ವೆ ವಿರುದ್ಧ ಸೆಣಸಲು ಅಣಿಯಾಗಿದೆ.
ಇಂದು ಸಂಜೆ 7 ಗಂಟೆಗೆ ಪಂದ್ಯ ಶುರುವಾಗಲಿದ್ದು, ಚೆನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ಭಾರತ, ಜಿಂಬಾಬ್ವೆ (Zimbabwe) ವಿರುದ್ಧ ತನ್ನ 2ನೇ ಸೂಪರ್-8 ಪಂದ್ಯವನ್ನು ಆಡಲಿದೆ. ಇದನ್ನೂ ಓದಿ: ಯುಪಿ ಸರ್ಕಾರದ ಜೊತೆ ಸಹಿ – 2027ಕ್ಕೆ ಭಾರತದಲ್ಲಿ MotoGP ರೇಸ್?

ಇಂದಿನ ಪಂದ್ಯದಲ್ಲಿ ಟೀಂ ಇಂಡಿಯಾ ಮಹತ್ವದ ಬದಲಾವಣೆ ತರುವ ಸಾಧ್ಯತೆಯಿದೆ. ಅಕ್ಷರ್ ಪಟೇಲ್, ಆರಂಭಿಕ ಬ್ಯಾಟರ್ ಸಂಜು ಸ್ಯಾಮ್ಸನ್ (Sanju Samson) ಮತ್ತೆ ಕಣಕ್ಕಿಳಿವ ಸಾಧ್ಯತೆ ಹೆಚ್ಚಿದೆ. ಚೆನ್ನೈನ ಚೆಪಾಕ್ ಪಿಚ್ ನಲ್ಲಿ ರನ್ ಹೊಳೆ ಹರಿಸಿ ಎದುರಾಳಿಯ ವಿರುದ್ಧ ದೊಡ್ಡ ಅಂತರದ ಜಯ ಸಾಧಿಸದೇ ಹೋದಲ್ಲಿ ಸೆಮಿಫೈನಲ್ ಹಾದಿ ಬಹುತೇಕ ಮುಚ್ಚಿದಂತೆಯೇ. ಅತ್ತ ವೆಸ್ಟ್ ಇಂಡೀಸ್ ವಿರುದ್ಧ ನೆಲಕಚ್ಚಿರುವ ಜಿಂಬಾಬ್ವೆಯದ್ದೂ ಅದೇ ಪರಿಸ್ಥಿತಿ. ಹೀಗಾಗಿ ಇಂದಿನ ಪಂದ್ಯ ಹೈವೋಲ್ಟೇಜ್ ಅಂತಲೇ ಕರೆಯಬಹುದು.
ದೊಡ್ಡ ಅಂತರದ ಜಯ ಅಗತ್ಯ
ಹಿಂದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ (South Africa) ವಿರುದ್ಧ 76 ರನ್ ಗಳ ಅಂತರದಲ್ಲು ಸೋಲು ಕಂಡಿದ್ದ ಭಾರತದ ನೆಟ್ ರನ್ ರೇಟ್ -3.800 ಗೆ ಬಿದ್ದಿದೆ. ಇನ್ನು ಜಿಂಬಾಬ್ವೆಯದ್ದಂತೂ (-.530) ಅದಕ್ಕಿಂತಲೂ ಕಮ್ಮಿಯಿದೆ. ಈ ಪಂದ್ಯದಲ್ಲಿ ಭಾರತ ತಂಡ ಮೊದಲು ಬ್ಯಾಟ್ ಮಾಡಿದರೆ ಕನಿಷ್ಠ 100 ರನ್ ಗಳಷ್ಟು ದೊಡ್ಡ ಅಂತರದಿಂದಲಾದರೂ ಗೆಲ್ಲದೇ ಹೋದಲ್ಲಿ ರನ್ ರೇಟ್ ಮೇಲೆಳುವುದು ದುಸ್ತರ. ಬಣದಲ್ಲಿ 4 ತಂಡಗಳಿರುವುದರಿಂದ 3 ತಂಡಗಳಿಗೆ 2 ಗೆಲುವಿನೊಂದಿಗೆ 4 ಅಂಕ ಸಂಪಾದಿಸುವ ಅವಕಾಶ ಇದೆ. ಹೀಗಾಗಿಯೇ 2 ಗೆಲುವು ಸಂಪಾದಿಸಿದರೂ ರನ್ ರೇಟ್ ಮಹತ್ವದ್ದಾಗಿದೆ. ಈ ಪಂದ್ಯದಲ್ಲಿ ಕೇವಲ ಸರಳ ಗೆಲುವು ಭಾರತದ ಸೆಮಿಫೈನಲ್ ಹಾದಿಯನ್ನು ಮತ್ತಷ್ಟು ಕಠಿಣವಾಗಿಸಲಿದೆ. ಜಿಂಬಾಬ್ವೆ ವಿರುದ್ಧ ದೊಡ್ಡ ಅಂತರದಿಂದ ಗೆದ್ದು ರನ್ ರೇಟ್ ಉತ್ತಮಪಡಿಸಿಕೊಂಡಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯವನ್ನು ಭಾರತ ಸ್ವಲ್ಪ ಒತ್ತಡರಹಿತಾಗಿ ಆಡಬಹುದು.

ಸಂಜು, ಅಕ್ಷರ್ ಇನ್
ದಕ್ಷಿಣ ಆಫ್ರಿಕಾ ವಿರುದ್ಧ ಪಂದ್ಯದಲ್ಲಿ ಭಾರತ ತಂಡ ದಾಳಿಯಲ್ಲಿ ವೈವಿಧ್ಯತೆ ತರುವ ಸಲುವಾಗಿ ಉಪನಾಯಕ ಅಕ್ಷರ್ ಪಟೇಲ್ ಅವರ ಬದಲು ವಾಷಿಂಗ್ಟನ್ ಸುಂದರ್ ಅವರನ್ನ ಕಣಕ್ಕಿಳಿಸಿತ್ತು. ಆದ್ರೂ ಟೀಂ ಇಂಡಿಯಾ ಅದರ ಪ್ರಯೋಜನ ಪಡೆಯಲಿಲ್ಲ. ಇಂದಿನ ಪಂದ್ಯದಲ್ಲಿ ಆರಂಭಿಕ ಸಂಜು ಸ್ಯಾಮ್ಸನ್ ಹಾಗೂ ಅಕ್ಷರ್ ಪಟೇಲ್ ಮತ್ತೆ ಕಣಕ್ಕಿಳಿಯುವ ಸಾಧ್ಯತೆಗಳಿವೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದ ಭಾಗವೂ ಆಗಿರುವ ಸಂಜು ಸ್ಯಾಮ್ಸನ್‌ಗೆ ಐಪಿಎಲ್ ಆರಂಭಕ್ಕೂ ಮುನ್ನ ತವರು ಕ್ರೀಡಾಂಗಣದಲ್ಲಿ ಆಡುವ ಅವಕಾಶವೂ ಇದಾಗಿದೆ. ಇದನ್ನೂ ಓದಿ: ವಿಶ್ವಕಪ್‌ನಿಂದ ಶ್ರೀಲಂಕಾ ಔಟ್ – ನ್ಯೂಜಿಲೆಂಡ್ ಸೆಮಿ ಆಸೆ ಜೀವಂತ

ಪಿಚ್ ರಿಪೋರ್ಟ್ ಹೇಗಿದೆ?
ಐತಿಹಾಸಿಕ ಚೆಪಾಕ್ ಕ್ರೀಡಾಂಗಣದ ಪಿಚ್ ಅಂದರೆ ಅದು ಸ್ಪಿನ್ನರ್ ಗಳ ಸ್ವರ್ಗ ಎಂದೇ ಅರ್ಥ. ಆದರೆ ಚುಟುಕು ಕ್ರಿಕೆಟ್ ವಿಷಯಕ್ಕೆ ಬಂದಾಗ ಇಲ್ಲಿ ರನ್ ಹೊಳೆಯೇ ಹರಿದಿದೆ. ಇಲ್ಲಿನ ಪಿಚ್ ನಲ್ಲಿ 170 ರಿಂದ 180 ರನ್ ಗಳಿಸಲು ಏನೂ ಅಡ್ಡಿಯಿಲ್ಲ. 200 ರನ್‌ಗಳಿಗೆ ಹೆಚ್ಚು ಗಳಿಸಿದ್ರೆ, ಆ ತಂಡದ್ದೇ ಗೆಲುವು ನಿಶ್ಚಿತ ಎಂದು ಹೇಳಬಹುದು. ಆದ್ರೆ ದೊಡ್ಡ ಅಂತರದ ಜಯ ಕಾಯ್ದುಕೊಳ್ಳಲು ಭಾರತ ತಂಡ ಕನಿಷ್ಠ 250 ಅಥವಾ 250+ ರನ್ ಗಳಿಸಬೇಕಾಗುತ್ತದೆ.

