– ಕೊನೆಯ ಎಸೆತದಲ್ಲಿ ಅಮೆರಿಕವನ್ನು ಗೆಲ್ಲಿಸಿದ ನಿತೀಶ್ ಕುಮಾರ್
ಡಲ್ಲಾಸ್: ಟಿ20 ವಿಶ್ವಕಪ್ (T20 World Cup) ಗೆಲ್ಲಲು ಸೇನಾ ಕೇಂದ್ರದಲ್ಲಿ ದೈಹಿಕ ತರಬೇತಿ ಪಡೆದಿದ್ದ ಪಾಕಿಸ್ತಾನ (Pakistan) ತಂಡ ಕ್ರಿಕೆಟ್ ಶಿಶು ಅಮೆರಿಕದ (USA) ವಿರುದ್ಧ ಸೋತಿದೆ. ಸೂಪರ್ ಓವರ್‌ನಲ್ಲಿ (Super Over) ಅಮೆರಿಕ ಪಾಕಿಸ್ತಾನವನ್ನು ಮಣಿಸಿದೆ.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಪಾಕಿಸ್ತಾನ 7 ವಿಕೆಟ್ ನಷ್ಟಕ್ಕೆ 159 ರನ್ ಹೊಡೆಯಿತು. ಚೇಸ್ ಮಾಡಿದ ಅಮೆರಿಕಕ್ಕೆ ಕೊನೆಯ ಓವರ್‌ನಲ್ಲಿ 15 ರನ್ ಬೇಕಿತ್ತು.
ಹ್ಯಾರಿಸ್ ರೌಫ್ ಎಸೆದ ಮೊದಲ ಮೂರು ಎಸೆತದಲ್ಲಿ 1 ರನ್ ಬಂದಿದ್ದರೆ 4ನೇ ಎಸೆತವನ್ನು ಆರನ್ ಜೋನ್ಸ್ ಸಿಕ್ಸ್‌ಗೆ ಅಟ್ಟಿದರು. 5ನೇ ಎಸೆತದಲ್ಲಿ 1 ರನ್ ಓಡಿದರು. 6ನೇ ಎಸೆತದಲ್ಲಿ ಸ್ಟ್ರೈಕ್‌ನಲ್ಲಿದ್ದ ನಿತೀಶ್ ಕುಮಾರ್ ಬೌಂಡರಿ ಹೊಡೆಯುವ ಮೂಲಕ ಪಂದ್ಯ ಟೈನಲ್ಲಿ ಅಂತ್ಯವಾಯಿತು.
ಅಮೀರ್ ಎಸೆದ ಸೂಪರ್ ಓವರ್‌ನಲ್ಲಿ ಅಮೆರಿಕ 18 ರನ್ ಹೊಡೆಯಿತು. ಇದರಲ್ಲಿ ಇತರ ರೂಪದಲ್ಲಿ 7 ರನ್ ಬಿಟ್ಟುಕೊಟ್ಟಿದ್ದರು. 19 ರನ್‌ಗಳ ಸವಾಲು ಪಡೆದ ಪಾಕಿಸ್ತಾನ 1 ವಿಕೆಟ್ ನಷ್ಟಕ್ಕೆ 13 ರನ್‌ಗಳಿಸಿ ಸೋಲನ್ನು ಒಪ್ಪಿಕೊಂಡಿತು.
ಮೊದಲು ಬ್ಯಾಟ್ ಮಾಡಿದ್ದ ಪಾಕ್ ಪರ ನಾಯಕ ಬಾಬರ್ ಅಜಂ 44 ರನ್(43 ಎಸೆತ, 3 ಬೌಂಡರಿ, 2 ಸಿಕ್ಸರ್), ಶಾದಾಬ್ ಖಾನ್ 40 ರನ್(25 ಎಸೆತ, 1 ಬೌಂಡರಿ, 3 ಸಿಕ್ಸರ್) ಇಫ್ತಿಕಾರ್ ಅಹ್ಮದ್ ಔಟಾಗದೇ 18 ರನ್ (14 ಎಸೆತ, 3 ಬೌಂಡರಿ), ಶಾಹೀನ್ ಅಫ್ರಿದಿ ಔಟಾಗದೇ 23 ರನ್ (16 ಎಸೆತ, 1 ಬೌಂಡರಿ, 2 ಸಿಕ್ಸರ್) ಹೊಡೆದರು.
ಅಮೆರಿಕ ಪರ ಮೊನಾಂಕ್ ಪಟೇಲ್ 50 ರನ್ (38 ಎಸೆತ, 7 ಬೌಂಡರಿ, 1 ಸಿಕ್ಸರ್), ಅಂಡ್ರಿಸ್ ಗೌಸ್ 35 ರನ್ (26 ಎಸೆತ, 5 ಬೌಂಡರಿ, 1 ಸಿಕ್ಸರ್), ಆರನ್ ಜೋನ್ಸ್ ಔಟಾಗದೇ 36 ರನ್ (26 ಎಸೆತ, 2 ಬೌಂಡರಿ, 2 ಸಿಕ್ಸರ್), ನಿತೀಶ್ ಕುಮಾರ್ ಔಟಾಗದೇ 14 ರನ್ (14 ಎಸೆತ, 1 ಬೌಂಡರಿ) ಹೊಡೆದರು. ಪಾಕಿಸ್ತಾನ ಇತರ ರೂಪದಲ್ಲಿ12 ರನ್ (1 ನೋಬಾಲ್, 11 ವೈಡ್) ಬಿಟ್ಟುಕೊಟ್ಟದ್ದು ಮುಳುವಾಯಿತು.