ನ್ಯೂಯಾರ್ಕ್: ಅಮೆರಿಕ ಮತ್ತು ವೆಸ್ಟ್ ಇಂಡೀಸ್ ಆತಿಥ್ಯದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್ (T20 World Cup) ಟೂರ್ನಿಯಲ್ಲಿ ಭಾರತ (Team India) ಶುಭಾರಂಭ ಕಂಡಿದೆ. ಐರ್ಲೆಂಡ್ ವಿರುದ್ಧ ನಡೆದ ಆರಂಭಿಕ ಪಂದ್ಯದಲ್ಲೇ ಹಾರ್ದಿಕ್ ಪಾಂಡ್ಯ (Hardik Pandya) ಅವರ ಬೌಲಿಂಗ್ ಕಮಾಲ್, ರೋಹಿತ್ ಶರ್ಮಾ ಅವರ ಬ್ಯಾಟಿಂಗ್ ನೆರವಿನಿಂದ ಐರ್ಲೆಂಡ್ ವಿರುದ್ಧ ಟೀಂ ಇಂಡಿಯಾ 8 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ.
ಇಲ್ಲಿನ ನಸ್ಸೌ ಕೌಂಟಿ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಐರ್ಲೆಂಡ್ ತಂಡ 20 ಓವರ್‌ಗಳಲ್ಲಿ ಕೇವಲ 96 ರನ್‌ಗಳಿಗೆ ಸರ್ವಪತನ ಕಂಡಿತು. ಅಲ್ಪಮೊತ್ತದ ಗುರಿ ಬೆನ್ನತ್ತಿದ ಟೀಂ ಇಂಡಿಯಾ 12.2 ಓವರ್‌ಗಳಲ್ಲೇ 2 ವಿಕೆಟ್ ನಷ್ಟಕ್ಕೆ 97 ರನ್ ಗಳಿಸಿ ಗೆದ್ದು ಬೀಗಿತು.
ಚೇಸಿಂಗ್ ಆರಂಭಿಸಿದ ಟೀಂ ಇಂಡಿಯಾ ಪರ ಆರಂಭಿಕರಾಗಿ ಕಣಕ್ಕಿಳಿದ ರೋಹಿತ್ ಶರ್ಮಾ (Rohit Sharma) ಹಾಗೂ ವಿರಾಟ್ ಕೊಹ್ಲಿ ಜೋಡಿ ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಯಿತು. ವಿರಾಟ್ ಕೇವಲ 1 ರನ್ ಗಳಿಸಿ ಔಟಾದರು. ಬಳಿಕ ಜೊತೆಗೂಡಿದ ರಿಷಭ್ ಪಂತ್ ಹಾಗೂ ಸೂರ್ಯಕುಮಾರ್ ಜೋಡಿ ತಾಳ್ಮೆಯ ಆಟವಾಡಿ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ನಾಯಕ ರೋಹಿತ್ ಶರ್ಮಾ 52 ರನ್ (37 ಎಸೆತ, 3 ಸಿಕ್ಸರ್, 4 ಬೌಂಡರಿ) ಚಚ್ಚಿದರೆ, ರಿಷಭ್ ಪಂತ್ 36 ರನ್, ಸೂರ್ಯಕುಮಾರ್ ಯಾದವ್ 2 ರನ್ ಗಳಿಸಿದರು.
ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ್ದ ಐರ್ಲೆಂಡ್ ತಂಡ ಟೀಂ ಇಂಡಿಯಾ, ಬೌಲರ್‌ಗಳ ದಾಳಿಗೆ ರನ್ ಕಲೆಹಾಕಲು ತಿಣುಕಾಡಿತ್ತು. ಮಾರಕ ದಾಳಿಗೆ ತತ್ತರಿಸಿದ ಐರ್ಲೆಂಡ್ ಅಗ್ರ ಕ್ರಮಾಂಕದ ಬ್ಯಾಟರ್‌ಗಳು ಆರಂಭದಿಂದಲೇ ಪೆವಿಲಿಯನ್ ಪರೇಡ್ ನಡೆಸಿದರು. ಇದನ್ನೂ ಓದಿ: T20 World Cup: ಸ್ಕಾಟ್‌ಲೆಂಡ್ ಬಳಿಕ ಐರ್ಲೆಂಡ್ ಜೆರ್ಸಿಯಲ್ಲಿ ಮಿಂಚಿದ ಕರ್ನಾಟಕದ ‘ನಂದಿನಿ’ ಬ್ರ್ಯಾಂಡ್!
ಗರೆಥ್ ಡೆಲಾನಿ 26 ರನ್, ಜೋಶ್ ಲಿಟಲ್ 14 ರನ್, ಕರ್ಟಿಸ್ ಕ್ಯಾಂಫರ್ 12 ರನ್, ಲೋರ್ಕನ್ ಟಕರ್ 10 ರನ್ ಗಳಿಸಿದ್ದು ಬಿಟ್ಟರೆ, ಉಳಿದ ಆಟಗಾರರು ಎರಡಂಕಿಯ ಮೊತ್ತವನ್ನೂ ಗಳಿಸರ ಪರಿಣಾಮ ಐರ್ಲೆಂಡ್ ಅಲ್ಪ ಮೊತ್ತಕ್ಕೆ ಆಲೌಟ್ ಆಗಿ ಸೋಲು ಎದುರಿಸಬೇಕಾಯಿತು. ಇದನ್ನೂ ಓದಿ: ವಿಶ್ವದ ನಂ.1 ಮ್ಯಾಗ್ನಸ್ ಕಾರ್ಲ್‌ಸನ್‌ಗೆ ಸೋಲುಣಿಸಿದ ಗ್ರ್ಯಾಂಡ್‌ಮಾಸ್ಟರ್ ಪ್ರಜ್ಞಾನಂದ!
ಪಾಂಡ್ಯ ಭರ್ಜರಿ ಕಂಬ್ಯಾಕ್:
2024ರ ಐಪಿಎಲ್ ಆವೃತ್ತಿಯಲ್ಲಿ ಕಳಪೆ ಬೌಲಿಂಗ್ ಪ್ರದರ್ಶನದಿಂದ ಟೀಕೆಗೆ ಗುರಿಯಾಗಿದ್ದ ಹಾರ್ದಿಕ್ ಪಾಂಡ್ಯ ಟಿ20 ವಿಶ್ವಕಪ್ ಆರಂಭಿಕ ಪಂದ್ಯದಲ್ಲೇ ಭರ್ಜರಿ ಕಂಬ್ಯಾಕ್ ಮಾಡಿದ್ದಾರೆ. 4 ಓವರ್‌ಗಳಲ್ಲಿ 27 ರನ್ ಬಿಟ್ಟುಕೊಟ್ಟ ಪಾಂಡ್ಯ 3 ಪ್ರಮುಖ ವಿಕೆಟ್ ಪಡೆದಿದ್ದಾರೆ. ಇನ್ನೂ ಜಸ್ಪ್ರೀತ್ ಬುಮ್ರಾ, ಹರ್ಷ್‌ದೀಪ್ ಸಿಂಗ್ ತಲಾ 2 ವಿಕೆಟ್ ಕಿತ್ತರೆ, ಮೊಹಮ್ಮದ್ ಸಿರಾಜ್ ಮತ್ತು ಅಕ್ಷರ್ ಪಟೇಲ್ ತಲಾ ಒಂದು ವಿಕೆಟ್ ಪಡೆದು ಮಿಂಚಿದರು. ಇದನ್ನೂ ಓದಿ: ಗೌತಮ್ ಗಂಭೀರ್‌ಗೆ ಬ್ಲ್ಯಾಂಕ್ ಚೆಕ್ ಆಫರ್ ಕೊಟ್ಟಿದ್ದೇಕೆ ಶಾರುಖ್?