ಬ್ರಿಡ್ಜ್‍ಟೌನ್: ವಿಶ್ವಕಪ್ ಟಿ20, ಸೂಪರ್ 8 ಹಂತದಲ್ಲಿ ಟೀಂ ಇಂಡಿಯಾ ಹಾಗೂ ಅಫ್ಘಾನಿಸ್ತಾನ ನಡುವೆ ಹಣಾಹಣಿ ನಡೆಯಿತು. ಈ ಪಂದ್ಯದಲ್ಲಿ ಆರಂಭಿಕ ಆಘಾತ ಹೊರತಾಗಿಯೂ ಸೂರ್ಯ ಕುಮಾರ್ ಬಾರಿಸಿದ ಅರ್ಧಶತಕದ ನೆರವಿನಿಂದ ಟೀಂ ಇಂಡಿಯಾ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 181 ರನ್ ಗಳಿಸಿ ಅಫ್ಘಾನಿಸ್ತಾನ ತಂಡಕ್ಕೆ ಸವಾಲಿನ ಗುರಿ ನೀಡಿದೆ.
ಇಲ್ಲಿನ ಕೆನ್ಸಿಂಗ್ಟನ್ ಓವಲ್ ಕ್ರೀಡಾಂಗಣದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಬೀಸಿದ ಟೀಂ ಇಂಡಿಯಾ, ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಯಿತು. ಮೂರನೇ ಓವರ್‌ನಲ್ಲಿ ನಾಯಕ ರೋಹಿತ್ ಶರ್ಮಾ ಔಟಾದರು. 13 ಎಸೆತಗಳಲ್ಲಿ ಕೇವಲ 8 ರನ್ ಗಳಿಸಿ ಫಜಲ್‍ಹಕ್ ಫಾರೂಕಿಗೆ ವಿಕೆಟ್ ಒಪ್ಪಿಸಿದರು.
ಇನ್ನೂ ರೋಹಿತ್ ವಿಕೆಟ್ ಪತನದ ಬೆನ್ನಲ್ಲೇ ಕ್ರೀಸ್‍ಗಿಳಿದ ರಿಷಭ್ ಪಂತ್ ಕೇವಲ 11 ಎಸೆತಗಳಲ್ಲಿ 20 ರನ್ ಗಳಿಸಿ ವಿಕೆಟ್ ಒಪ್ಪಿಸಿದರೆ, ವಿರಾಟ್ ಕೊಹ್ಲಿ 24 ಎಸೆತಗಳಲ್ಲಿ 24 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಶಿವಂ ದುಬೆ ಕೇವಲ 10 ರನ್ ಗಳಿಸಿದರು.
90 ರನ್‍ಗಳಿಸಿ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಟೀಂ ಇಂಡಿಯಾಕ್ಕೆ 5ನೇ ವಿಕೆಟ್‍ಗೆ ಹಾರ್ದಿಕ್ ಪಾಂಡ್ಯ ಹಾಗೂ ಸೂರ್ಯಕುಮಾರ್ ಯಾದವ್ ಕೇವಲ 37 ಎಸೆತಗಳಲ್ಲಿ 60 ರನ್‍ಗಳ ಅಮೂಲ್ಯ ಜೊತೆಯಾಟವಾಡುವ ಮೂಲಕ ತಂಡಕ್ಕೆ ಉತ್ತಮ ರನ್‍ಗಳ ಕೊಡುಗೆ ಕೊಟ್ಟರು.
ಕೇವಲ 28 ಎಸೆತಗಳನ್ನು ಎದುರಿಸಿದ ಸೂರ್ಯ ಕುಮಾರ್ 5 ಬೌಂಡರಿ ಹಾಗೂ 3 ಆಕರ್ಷಕ ಸಿಕ್ಸರ್‌ಗಳ ನೆರವಿನಿಂದ 53 ರನ್ ಸಿಡಿಸಿ ವಿಕೆಟ್ ಒಪ್ಪಿಸಿದರು. ಹಾರ್ದಿಕ್ ಪಾಂಡ್ಯ 24 ಎಸೆತಗಳನ್ನು ಎದುರಿಸಿ 3 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 32 ರನ್ ಬಾರಿಸಿ ನವೀನ್ ಉಲ್ ಹಕ್‍ಗೆ ವಿಕೆಟ್ ಒಪ್ಪಿಸಿದರು. ಕೊನೆಯಲ್ಲಿ ಅಕ್ಷರ್ ಪಟೇಲ್ 12 ರನ್ ಸಿಡಿಸುವ ಮೂಲಕ ತಂಡದ ಮೊತ್ತವನ್ನು 180ರ ಗಡಿ ಮುಟ್ಟಿಸುವಲ್ಲಿ ಯಶಸ್ವಿಯಾದರು.
ಆಫ್ಘಾನಿಸ್ತಾನ ಪರ ನಾಯಕ ರಶೀದ್ ಖಾನ್ ಹಾಗೂ ಫಜಲ್‍ಹಕ್ ಫಾರೂಕಿ ತಲಾ 3 ವಿಕೆಟ್ ಪಡೆದರೆ, ನವೀನ್ ಉಲ್ ಹಕ್ ಒಂದು ವಿಕೆಟ್ ಉರುಳಿಸಿದರು.