ಆರಂಭದಲ್ಲೇ ಆಘಾತ – ಕೊಹ್ಲಿ, ಅಕ್ಷರ್‌ ಸಮಯೋಚಿತ ಆಟ, ಆಫ್ರಿಕಾಗೆ 177 ರನ್‌ ಟಾರ್ಗೆಟ್‌

Public TV
2 Min Read
Axar Patel virat kohli

ಬ್ರಿಡ್ಜ್‌ಟೌನ್‌(ಬಾರ್ಬಡೋಸ್‌): ಆರಂಭಿಕ ಆಘಾತ ಎದುರಾದರೂ ವಿರಾಟ್‌ ಕೊಹ್ಲಿ (Virat Kohli)  ಮತ್ತು ಅಕ್ಷರ್‌ ಪಟೇಲ್‌ (Axar Patel) ಅವರ ಸಮಯೋಚಿತ ಆಟದಿಂದ ಟಿ20 ವಿಶ್ವಕಪ್‌ ಫೈನಲಿನಲ್ಲಿ ದಕ್ಷಿಣ  ಆಫ್ರಿಕಾ (South Africa) ವಿರುದ್ಧ  ಭಾರತ 7 ವಿಕೆಟ್‌ ನಷ್ಟಕ್ಕೆ 176 ರನ್‌ ಗಳಿಸಿದೆ.

ಟಾಸ್‌ ಗೆದ್ದು ಬ್ಯಾಟಿಂಗ್‌ ಆರಂಭಿಸಿದ ಭಾರತ (Team India) ಮೊದಲ ಓವರ್‌ನಲ್ಲೇ 15 ರನ್‌ ಗಳಿಸಿತ್ತು. ವಿರಾಟ್‌ ಕೊಹ್ಲಿ3 ಬೌಂಡರಿ ಸಿಡಿಸಿ ಸ್ಫೋಟಕ ಬ್ಯಾಟಿಂಗ್‌ ಆರಂಭಿಸಿದ್ದರು. ಕೇಶವ್‌ ಮಹಾರಾಜ್‌ ಎಸೆದ ಎರಡನೇ ಓವರ್‌ನಲ್ಲಿ ರೋಹಿತ್‌ ಶರ್ಮಾ ಸತತ ಎರಡು ಬೌಂಡರಿ ಹೊಡೆದರು ಅಬ್ಬರಿಸುವ ಸೂಚನೆ ನೀಡಿದರು. ಆದರೆ ಕೊನೆಯ ಎಸೆತದಲ್ಲಿ ಹೆನ್ಸಿಕ್‌ ಕ್ಲಾಸನ್‌ಗೆ ಕ್ಯಾಚ್‌ ನೀಡಿ ಔಟಾದರು.

ರೋಹಿತ್‌ ಶರ್ಮಾ 9 ರನ್‌ಗಳಿಸಿ ಔಟಾದ ಬೆನ್ನಲ್ಲೇ ಕ್ರೀಸ್‌ಗೆ ಬಂದ ರಿಷಭ್‌ ಪಂತ್‌ ಎರಡು ಎಸೆತ ಎದುರಿಸಿ ಸೊನ್ನೆ ರನ್‌ ಗಳಿಸಿ ಮಹಾರಾಜ್‌ಗೆ ವಿಕೆಟ್‌ ಒಪ್ಪಿಸಿದರು. ಸೂರ್ಯಕುಮಾರ್‌ ಯಾದವ್‌ 3 ರನ್‌ ಗಳಿಸಿ ಸಿಕ್ಸ್‌ ಸಿಡಿಸಲು ಹೋಗಿ ಔಟಾದರು.

virat kohli

4.3 ಓವರ್‌ಗಳಲ್ಲಿ 34 ರನ್‌ ಗಳಿಸಿ ಸಂಕಷ್ಟದಲ್ಲಿದ್ದಾಗ ಅಕ್ಷರ್‌ ಪಟೇಲ್‌ ಮತ್ತು ಕೊಹ್ಲಿ ತಂಡದ ರನ್‌ ನಿಧಾನವಾಗಿ ಏರಿಸತೊಡಗಿದರು. ನಾಲ್ಕನೇ ವಿಕೆಟಿಗೆ 54 ಎಸೆತಗಳಲ್ಲಿ 72 ರನ್‌ ಜೊತೆಯಾಟವಾಡಿದರು.

ತಂಡದ ಮೊತ್ತ 106 ಆಗಿದ್ದಾಗ ನಾನ್‌ ಸ್ಟ್ರೈಕ್‌ನಲ್ಲಿದ್ದ ಅಕ್ಷರ್‌ ಪಟೇಲ್‌ ಕೀಪರ್‌ ಕ್ವಿಂಟನ್‌ ಡಿ ಕಾಕ್‌ ಎಸೆದ ಅತ್ಯುತ್ತಮ ಡೈರೆಕ್ಟ್‌ ಥ್ರೋಗೆ ರನೌಟ್‌ ಆದರು. ಅಕ್ಷರ್‌ ಪಟೇಲ್‌ ಕೇವಲ 31 ಎಸೆತಗಳಲ್ಲಿ 47 ರನ್‌ (1 ಬೌಂಡರಿ, 4 ಸಿಕ್ಸರ್‌) ಹೊಡೆದು ಔಟಾದರು.

ನಂತರ ಬಂದ ಶಿವಂ ದುಬೆ ಆರಂಭದಲ್ಲೇ ಅಬ್ಬರಿಸಲು ಆರಂಭಿಸಿದರು. ಕೊಹ್ಲಿ ಮತ್ತು ದುಬೆ ಐದನೇ ವಿಕೆಟಿಗೆ 33 ಎಸೆತಗಳಲ್ಲಿ 57 ರನ್‌ ಜೊತೆಯಾಟವಾಡಿದರು.

ಕೊಹ್ಲಿ ಸಿಕ್ಸ್‌ ಸಿಡಿಸಲು ಹೋಗಿ 76 ರನ್‌ (59 ಎಸೆತ, 6 ಬೌಂಡರಿ, 2 ಸಿಕ್ಸರ್‌) ಗಳಿಸಿದ್ದಾಗ ಔಟಾದರು. ಶಿವಂ ದುಬೆ 27 ರನ್‌ (16 ಎಸೆತ, 3 ಬೌಂಡರಿ, 1 ಸಿಕ್ಸರ್‌) ಸಿಡಿಸಿ ವಿಕೆಟ್‌ ಒಪ್ಪಿಸಿದರು. ಜಡೇಜಾ 2 ರನ್‌ ಗಳಿಸಿದರೆ ಹಾರ್ದಿಕ್‌ ಪಾಂಡ್ಯ ಔಟಾಗದೇ 5 ರನ್‌ ಹೊಡೆದರು.

ಕೇಶವ್‌ ಮಹಾರಾಜ್‌ ಮತ್ತು ನೋಕಿಯೇ ತಲಾ 2 ವಿಕೆಟ್‌, ಜಾನ್‌ಸೆನ್‌, ರಬಡಾ ತಲಾ ಒಂದು ವಿಕೆಟ್‌ ಪಡೆದರು.

Share This Article