ಸಿಡ್ನಿ: ಆರಂಭಿಕ ಆಟಗಾರರಾದ ಮೊಹಮ್ಮದ್ ರಿಜ್ವಾನ್ (Mohammad Rizwan) ಮತ್ತು ಬಾಬರ್ ಅಜಮ್ (Babar Azam) ಅಬ್ಬರದಾಟದ ಮುಂದೆ ಕಿವೀಸ್ ಮಂಕಾಗಿದೆ. ಸೆಮಿಫೈನಲ್‍ನಲ್ಲಿ ನ್ಯೂಜಿಲೆಂಡ್ (New Zealand) ವಿರುದ್ಧ ಪಾಕಿಸ್ತಾನ (Pakistan) 7 ವಿಕೆಟ್‌ಗಳ ಅಂತರದ ಭರ್ಜರಿ ಜಯದೊಂದಿಗೆ ಪ್ರಶಸ್ತಿ ಸುತ್ತಿಗೇರಿದೆ.
Advertisement
ನ್ಯೂಜಿಲೆಂಡ್ ನೀಡಿದ 153 ರನ್‍ಗಳ ಗುರಿ ಬೆನ್ನಟ್ಟಿದ ಪಾಕಿಸ್ತಾನ ತಂಡಕ್ಕೆ ಈ ಮೊತ್ತ ಸವಾಲಾಗಿ ಪರಿಣಮಿಸಲಿಲ್ಲ. ಆರಂಭಿಕ ಆಟಗಾರರಿಬ್ಬರೆ 105 ರನ್ ಜೊತೆಯಾಟವಾಡಿ ಪಾಕ್‍ಗೆ ಮೇಲುಗೈ ತಂದುಕೊಟ್ಟರು. ಆ ಬಳಿಕ ಅಂತಿಮವಾಗಿ ಪಾಕ್ 19.1 ಓವರ್‌ಗಳ ಅಂತ್ಯಕ್ಕೆ 3 ವಿಕೆಟ್ ನಷ್ಟಕ್ಕೆ 153 ರನ್ ಸಿಡಿಸಿ ಜಯದ ನಗೆ ಬೀರಿತು. ಇತ್ತ ಈ ಜಯದೊಂದಿಗೆ ಪಾಕಿಸ್ತಾನ ತಂಡ ಟಿ20 ವಿಶ್ವಕಪ್ ಇತಿಹಾಸದಲ್ಲಿ ಮೂರನೇ ಬಾರಿ ಫೈನಲ್‍ಗೆ ಲಗ್ಗೆ ಇಟ್ಟಿದೆ. 2007ರಲ್ಲಿ ಪಾಕಿಸ್ತಾನ ರನ್ನರ್ ಅಪ್ ಆಗಿತ್ತು. 2009ರಲ್ಲಿ ಚಾಂಪಿಯನ್ ಆಗಿತ್ತು. ಇದನ್ನೂ ಓದಿ: ಕ್ರಿಕೆಟಿಗ ರವೀಂದ್ರ ಜಡೇಜಾ ಪತ್ನಿಗೆ ಬಿಜೆಪಿಯಿಂದ ಟಿಕೆಟ್?
Advertisement
Advertisement
ಪಾಕ್ ಪರ ಬ್ಯಾಟಿಂಗ್‍ನಲ್ಲಿ ಮಿಂಚಿದ ಬಾಬರ್ ಮತ್ತು ರಿಜ್ವಾನ್ ಭರ್ಜರಿ ಆರಂಭ ನೀಡಿದರು. 2022ರ ಟಿ20 ವಿಶ್ವಕಪ್‍ನಲ್ಲಿ ಮಂಕಾಗಿದ್ದ ಈ ಜೋಡಿ ಸೆಮಿಫೈನಲ್‍ನಲ್ಲಿ ಮೊದಲ ವಿಕೆಟ್‍ಗೆ 105 ರನ್ (76 ಎಸೆತ) ಸಿಡಿಸಿ ಮೈಚಳಿ ಬಿಟ್ಟು ಆಡಿತು. ಬಾಬರ್ ಅಜಮ್ 53 ರನ್ (42 ಎಸೆತ, 7 ಬೌಂಡರಿ) ಬಾರಿಸಿ ಔಟ್ ಆದರು. ಆ ಬಳಿಕ ರಿಜ್ವಾನ್ ಜೊತೆ ಸೇರಿಕೊಂಡ ಮೊಹಮ್ಮದ್ ಹ್ಯಾರಿಸ್ ಪಾಕಿಸ್ತಾನಕ್ಕೆ ಜಯ ತಂದುಕೊಟ್ಟರು ಎನ್ನುವಷ್ಟರಲ್ಲಿ ರಿಜ್ವಾನ್ 57 ರನ್ (43 ಎಸೆತ, 5 ಬೌಂಡರಿ) ಸಿಡಿಸಿ ವಿಕೆಟ್ ಕೈಚೆಲ್ಲಿಕೊಂಡರು. ನಂತರ ಹ್ಯಾರಿಸ್ 30 ರನ್ (26 ಎಸೆತ, 2 ಬೌಂಡರಿ, 1 ಸಿಕ್ಸ್) ಸಿಡಿಸಿ ಗೆಲುವಿಗೆ 2 ರನ್ ಬೇಕಾಗಿದ್ದಾಗ ಔಟ್ ಆದರು. ಬಳಿಕ ಮಸೂದ್ 3 ರನ್ ಸಿಡಿಸಿ ಗೆಲುವಿನ ದಡ ಸೇರಿಸಿದರು. ಈ ಮೂಲಕ ಲೀಗ್ ಹಂತದಲ್ಲೇ ಹೊರಬೀಳುವ ಸ್ಥಿತಿಯಲ್ಲಿದ್ದ ಪಾಕ್ ಅದೃಷ್ಟದಿಂದ ಸೆಮಿಫೈನಲ್ ಪ್ರವೇಶಿಸಿ ಇದೀಗ ಫೈನಲ್ ಹಂತಕ್ಕೆ ತೇರ್ಗಡೆಗೊಂಡಿದೆ. ಇದನ್ನೂ ಓದಿ: ನೆಟ್ ಪ್ರಾಕ್ಟೀಸ್ ವೇಳೆ ರೋಹಿತ್ ಶರ್ಮಾ ಬಲಗೈಗೆ ಪೆಟ್ಟು – ಟೀಂ ಇಂಡಿಯಾಗೆ ಆಘಾತ
Advertisement
ಈ ಮೊದಲು ಟಾಸ್ ಗೆದ್ದ ನ್ಯೂಜಿಲೆಂಡ್ ಬ್ಯಾಟಿಂಗ್ ಮಾಡಲು ನಿರ್ಧರಿಸಿತ್ತು. ಈ ನಿರ್ಧಾರ ಆರಂಭದಲ್ಲೇ ತಲೆಕೆಳಗಾಯಿತು. ಆರಂಭಿಕ ಅಟಗಾರ ಫಿನ್ ಅಲೆನ್ ಕೇವಲ 4 ರನ್ (3 ಎಸೆತ, 1 ಬೌಂಡರಿ) ಸಿಡಿಸುವಷ್ಟರಲ್ಲಿ ಸುಸ್ತಾದರು. ಇನ್ನೊಂದೆಡೆ ಡೆವೂನ್ ಕಾನ್ವೇ ನಿಧಾನವಾಗಿ ಅಬ್ಬರಿಸುವ ಸೂಚನೆ ನೀಡಿದರು. ಇವರಿಗೆ ಉತ್ತಮ ಸಾಥ್ ನೀಡಿದ ನಾಯಕ ಕೇನ್ ವಿಲಿಯಮ್ಸನ್ ತಂಡಕ್ಕೆ ಚೇತರಿಕೆ ನೀಡಲು ಮುಂದಾದರು. ಆದರೆ ಕಾನ್ವೇ ಆಟ 21 ರನ್ (20 ಎಸೆತ, 3 ಬೌಂಡರಿ) ಸಿಡಿಸಿ ರನೌಟ್ ಆಗುವುದರೊಂದಿಗೆ ಅಂತ್ಯಕಂಡಿತು.
ಬಳಿಕ ಬಂದ ಗ್ಲೆನ್ ಫಿಲಿಪ್ಸ್ ಆಟ 6 ರನ್‍ಗಳಿಗೆ (8 ಎಸೆತ, 1 ಬೌಂಡರಿ) ಸೀಮಿತವಾಯಿತು. ಆ ಬಳಿಕ ಒಂದಾದ ವಿಲಿಯಮ್ಸನ್ ಮತ್ತು ಡೇರಿಲ್ ಮಿಚೆಲ್ ಅಬ್ಬರಿಸಲು ಆರಂಭಿಸಿದರು. ಇಬ್ಬರೂ ಕೂಡ ಜವಾಬ್ದಾರಿಯುತ ಬ್ಯಾಟ್ ಬೀಸಿದ ಪರಿಣಾಮ 4ನೇ ವಿಕೆಟ್‍ಗೆ 68 ರನ್ (50 ಎಸೆತ) ಜೊತೆಯಾಟ ಇವರಿಂದ ಬಂತು. ಕೇನ್ ವಿಲಿಯಮ್ಸನ್ 46 ರನ್ (42 ಎಸೆತ, 1 ಬೌಂಡರಿ, 1 ಸಿಕ್ಸ್) ಸಿಡಿಸಿ ವಿಕೆಟ್ ಕಳೆದುಕೊಂಡರು.
ಅಂತಿಮವಾಗಿ ಡೇರಿಲ್ ಮಿಚೆಲ್ ಅಜೇಯ 53 ರನ್ (35 ಎಸೆತ, 3 ಬೌಂಡರಿ, 1 ಸಿಕ್ಸ್) ಮತ್ತು ಜೇಮ್ಸ್ ನಿಶಾಮ್ 16 ರನ್ (12 ಎಸೆತ, 1 ಬೌಂಡರಿ) ಬಾರಿಸಿದ ಪರಿಣಾಮ ನ್ಯೂಜಿಲೆಂಡ್ 20 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 152 ರನ್‍ಗಳ ಸಾಧಾರಣ ಮೊತ್ತ ಪೇರಿಸಿತು. ಪಾಕಿಸ್ತಾನ ಪರ ಶಾಹೀನ್ ಆಫ್ರಿದಿ 2 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿಕೊಂಡರೆ, ಇನ್ನೊಂದು ವಿಕೆಟ್ ನವಾಝ್ ಪಾಲಾಯಿತು.