ಪುದುಚೇರಿ: ಕ್ರಿಕೆಟ್‍ನಲ್ಲಿ ಟಿ20 ಅತ್ಯಂತ ರೋಚಕ ಪಂದ್ಯ ಎಂದೇ ಹೇಳಲಾಗುತ್ತದೆ. ಮೂರು ಮಾದರಿಯ ಕ್ರಿಕೆಟ್ ನಲ್ಲಿ ಟಿ20 ಪಂದ್ಯಗಳನ್ನು ನೋಡಲು ಬಹುತೇಕರು ಇಷ್ಟಪಡುತ್ತಾರೆ. ಈ ಪಂದ್ಯಗಳಲ್ಲಿ ಆಟಗಾರರು ಹಲವು ದಾಖಲೆಗಳನ್ನು ಬರೆಯುತ್ತಾರೆ. ಹಾಗೆಯೇ ಕೆಲವೊಂದು ಬಾರಿ ಹೀನಾಯ ಸೋಲು ಕಾಣುವ ಮೂಲಕ ಕಳಪೆ ದಾಖಲೆಗಳನ್ನು ಟಿ20 ಚುಟುಕು ಪಂದ್ಯಗಳು ಕಂಡಿವೆ. ಪುದುಚೇರಿ ಮಹಿಳೆಯರ ಟಿ20 ಪಂದ್ಯದಲ್ಲಿ ತಂಡವೊಂದು ಕೇವಲ 9 ರನ್ ಗಳಿಗೆ ತನ್ನ ಎಲ್ಲ ವಿಕೆಟ್ ಗಳನ್ನು ಕಳೆದುಕೊಂಡು 9 ಆಟಗಾರ್ತಿಯರು ಶೂನ್ಯ ಸುತ್ತಿದ್ದಾರೆ.
ಪುದುಚೇರಿ ಪ್ಲಮೀರಾ ಕ್ರಿಕೆಟ್ ಗ್ರೌಂಡ್ ನಲ್ಲಿ ಮಹಿಳೆಯರ ಸೀನಿಯರ್ ಟಿ20 ಪಂದ್ಯ ನಡೆದಿತ್ತು. ಮಿಜೋರಾಂ ಮತ್ತು ಮಧ್ಯ ಪ್ರದೇಶ ತಂಡಗಳ ನಡುವಿನ ಪಂದ್ಯದಲ್ಲಿ ಮೀಜೋರಾಂ ವನಿತೆಯರು 9 ರನ್ ಗಳಿಗೆ ಎಲ್ಲ ವಿಕೆಟ್ ಗಳನ್ನು ಕಳೆದುಕೊಳ್ಳುವ ಮೂಲಕ ಅತ್ಯಂತ ಕಳಪೆ ಪ್ರದರ್ಶನ ನೀಡಿದ್ದಾರೆ. ಒಂಬತ್ತು ಆಟಗಾರ್ತಿಯರು ಖಾತೆಯನ್ನ ತೆರೆಯದೇ ಪೆವಿಲಿಯನ್ ನತ್ತ ಹೆಜ್ಜೆ ಹಾಕಿದ್ದಾರೆ.
Advertisement
Advertisement
14.5 ಓವರ್ ಎದುರಿಸಿದ ಮೀಜೋರಾಂ ಮಹಿಳಾ ಪಡೆ ಕೇವಲ 9 ರನ್ ಕಲೆ ಹಾಕುವಲ್ಲಿ ಯಶಸ್ವಿಯಾಯಿತು. 25 ಬಾಲ್ ಎದುರಿಸಿದ ಅಪೂರ್ವ ಭಾರಧ್ವಾಜ್, ಒಂದು ಬೌಂಡರಿ ಸೇರಿದಂತೆ 6 ರನ್ ಹೊಡೆದರೆ ಇತರೇ ರೂಪದಲ್ಲಿ 3 ರನ್ ಸೇರಿ ತಂಡದ ಒಟ್ಟಾರೆ ಮೊತ್ತ 9 ಆಗಿತ್ತು. ಮಧ್ಯಪ್ರದೇಶದ ತಂಡದಲ್ಲಿ 7 ಮಂದಿ ಬೌಲಿಂಗ್ ಮಾಡಿದ್ದು, ಆರು ಬೌಲರ್ ಗಳು ತಲಾ ಒಂದೊಂದು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಬೌಲರ್ ತರಂಗ ಜಾ 25 ಎಸೆತ ಹಾಕಿ 1 ರನ್ ಬಿಟ್ಟುಕೊಟ್ಟು 4 ವಿಕೆಟ್ ಪಡೆದರು.
Advertisement
ನಂತರ ಬ್ಯಾಟಿಂಗ್ ಆರಂಭಿಸಿದ ಮಧ್ಯ ಪ್ರದೇಶದ ವನಿತೆಯರು ಕೇವಲ ಒಂದು ಓವರ್ ನಲ್ಲಿಯೇ ಪಂದ್ಯವನ್ನು ತಮ್ಮದಾಗಿಸಿಕೊಂಡರು. ಫೆಬ್ರವರಿ 20ರಂದು ನಡೆದಿದ್ದ ಟಿ20 ಮ್ಯಾಚ್ ನಲ್ಲಿ ಮೀಜೋರಾಂ ವನಿತೆಯರನ್ನು ಕೇರಳದ ಆಟಗಾರ್ತಿಯರು 24 ರನ್ ಗಳಿಗೆ ಅಲೌಟ್ ಮಾಡುವ ಮೂಲಕ 10 ವಿಕೆಟ್ ಗಳ ಜಯವನ್ನು ದಾಖಲಿಸಿದ್ದರು.
Advertisement
ಅಂತರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಚೀನಾ ತಂಡ ಯುಎಇ ಎದುರು 14 ರನ್‍ಗಳಿಗೆ ತನ್ನ ಎಲ್ಲ ವಿಕೆಟ್ ಗಳನ್ನು ಕಳೆದುಕೊಂಡಿತ್ತು. ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಇದೂವರೆಗಿನ ಕನಿಷ್ಟ ಸ್ಕೋರ್ ಇದಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv