ಮೈಸೂರು: ಸಾವು ಪ್ರತಿ ಮನೆಯಲ್ಲೂ ದು:ಖದ ಕಡಲ ಸೃಷ್ಟಿಸುತ್ತೆ ಅನ್ನೋದು ಎಲ್ಲರಿಗೂ ಗೊತ್ತು. ಇಲ್ಲೊಂದು ಸಮುದಾಯದಲ್ಲಿ ಸಾವು ಬರೀ ದು:ಖದ ಕಡಲ ಸೃಷ್ಟಿಸುವ ಜೊತೆಗೆ ಸಾಲದ ಹೊರೆಯನ್ನು ಸೃಷ್ಟಿಸುತ್ತದೆ. ಸಾವು ಆಯ್ತು ಎಂಬ ನೋವು ಒಂದು ಕಡೆ, ಸಾವು ಸೃಷ್ಟಿಸೋ ಸಾಲದ ನೋವು ಮತ್ತೊಂದು ಕಡೆ.
ಮೈಸೂರು ಜಿಲ್ಲೆಯ ಟಿ. ನರಸೀಪುರ ಪಟ್ಟಣದಲ್ಲಿನ ಕ್ರೈಸ್ತ ಧರ್ಮದ ಪ್ರೊಟೆಸ್ಟಂಟ್ ಸಮುದಾಯದವರು ಈ ರೀತಿಯ ತೊಂದರೆಯನ್ನು ಎದುರಿಸುತ್ತಿದ್ದಾರೆ. ಬಹುತೇಕರು ಬಡತನ ರೇಖೆಗಿಂತಾ ಕೆಳಗೆ ಇದ್ದಾರೆ. ಇವರ ಮನೆಯಲ್ಲಿ ಸಾವು ಸಂಭವಿಸಿದರೆ ಕನಿಷ್ಟ ಪಕ್ಷ 50 ಸಾವಿರ ರೂಪಾಯಿ ಸಾಲ ಅವರ ಬೆನ್ನಿಗೆ ಬೀಳೋದು ನಿಶ್ಚಿತ. ಸಾಲಕ್ಕೆ ಬಡ್ಡಿ ಎಲ್ಲಾ ಸೇರಿ ಬಿಟ್ಟರೆ ಸಾಲದ ಬೆಟ್ಟ ಲಕ್ಷ ರೂಪಾಯಿಯನ್ನೆ ಮುಟ್ಟುತ್ತದೆ.
Advertisement
Advertisement
ಈ ಸಮುದಾಯಕ್ಕೆ ಟಿ. ನರಸೀಪುರ ವ್ಯಾಪ್ತಿಯಲ್ಲಿ ಸ್ಮಶಾನವಿಲ್ಲ. ಪ್ರೊಟೆಸ್ಟಂಟ್ ಸಮುದಾಯದವರು ಯಾರಾದರೂ ಸತ್ತರೆ ಅವರನ್ನು ಹೂಳುವುದಕ್ಕೆ 40 ಕಿ.ಮೀ. ದೂರ ಇರುವ ಮೈಸೂರಿಗೆ ತರಬೇಕು. ಮೈಸೂರಿನಲ್ಲಿನ ಕ್ರೈಸ್ತ ಸಮುದಾಯದ ಸ್ಮಶಾನದಲ್ಲಿ 12 ಸಾವಿರ ರೂಪಾಯಿ ಹಣ ನೀಡಬೇಕು. ಇದರ ಜೊತೆಗೆ ಶವ ತರಲು ವಾಹನ, ಸಂಬಂಧಿಕರು, ಮನೆಯವರು ಎಲ್ಲರೂ ಮೈಸೂರಿಗೆ ಬರುವುದಕ್ಕೆ ವಾಹನದ ವ್ಯವಸ್ಥೆ ಮಾಡಬೇಕು. ಟಿ. ನರಸೀಪುರದಿಂದ ಮೈಸೂರಿಗೆ ಶವ ತಂದು ಸಂಸ್ಕಾರ ಮಾಡಿ ವಾಪಾಸ್ ಹೋಗುವುದಕ್ಕೆ ಕನಿಷ್ಟ 50 ಸಾವಿರ ರೂಪಾಯಿ ವೆಚ್ಚವಾಗುತ್ತದೆ. ಹೇಳಿ ಕೇಳಿ ಈ ಸಮುದಾಯದಲ್ಲಿ ಇರುವವರಲ್ಲಿ ಬಹುತೇಕರು ಬಡವರು. ಇವರ ಬಳಿ ಅಷ್ಟು ಹಣ ಇರೋದಿಲ್ಲ. ಹೀಗಾಗಿ 50 ಸಾವಿರ ರೂಪಾಯಿಯನ್ನು ಬಡ್ಡಿಗೆ ಸಾಲಕ್ಕೆ ತಂದು ಶವ ಸಂಸ್ಕಾರದ ಕಾರ್ಯ ಮಾಡುತ್ತಿದ್ದಾರೆ.
Advertisement
ಕ್ರೈಸ್ತ ಸಮುದಾಯದ ಬೇರೆ ಪಂಗಡದ ಸ್ಮಶಾನದಲ್ಲಿ ಇವರಿಗೆ ಶವ ಸಂಸ್ಕಾರಕ್ಕೆ ಅವಕಾಶ ನೀಡುತ್ತಿಲ್ಲ. ಇನ್ನೂ ಹಿಂದೂ ಧರ್ಮದ ಸ್ಮಶಾನಗಳಲ್ಲೂ ಅವಕಾಶ ಸಿಗುತ್ತಿಲ್ಲ. ಹೀಗಾಗಿ ಮೈಸೂರಿಗೆ ಬರಲೇಬೇಕಾದ ಅನಿವಾರ್ಯತೆ ಇದೆ. ಇದರಿಂದ ತಮಗೆ ಪ್ರತ್ಯೇಕವಾಗಿ ಒಂದು ಸ್ಮಶಾನ ಭೂಮಿ ಮಂಜೂರು ಮಾಡಿ ಅಂತಾ ಸಮುದಾಯದ ಮುಖಂಡ ಅಲೆಕ್ಸ್ ಸೇರಿದಂತೆ ಗ್ರಾಮಸ್ಥರು ಕೇಳುತ್ತಿದ್ದಾರೆ.
Advertisement
ಪ್ರೊಟೆಸ್ಟಂಟ್ ಸಮುದಾಯದ ನೂರಕ್ಕೂ ಅಧಿಕ ಕುಟುಂಬದವರು ಟಿ. ನರಸೀಪುರ ಪಟ್ಟಣದಲ್ಲಿ ವಾಸವಾಗಿದ್ದು, ಪ್ರಾರ್ಥನೆಗೆ ಚರ್ಚ್ ಕೂಡ ಇಲ್ಲ. ಹೀಗಾಗಿ ಮನೆಗಳಲ್ಲೇ ಪ್ರಾರ್ಥನೆ ಮಾಡುತ್ತಿದ್ದಾರೆ. ನಮಗೆ ಚರ್ಚ್ ಬೇಡ ಕನಿಷ್ಟ ಪಕ್ಷ ಸ್ಮಶಾನ ಭೂಮಿಯಾದರೂ ಕೊಡಿ ಅಂತಾ ಜನಪ್ರತಿನಿಧಿಗಳನ್ನು ಮೈಸೂರು ಜಿಲ್ಲಾಡಳಿತವನ್ನು ಕೇಳುತ್ತಿದ್ದಾರೆ.
ಈ ಸಮುದಾಯಕ್ಕೆ ಶೀಘ್ರವೆ ಸ್ಮಶಾನ ಭೂಮಿ ನೀಡೋಕೆ ಮೈಸೂರು ಜಿಲ್ಲಾಡಳಿತ ಮುಂದಾಗಬೇಕಿದೆ. ಇಲ್ಲದೆ ಇದ್ದರೆ ಸಾವಿನ ನೋವಿನ ಜೊತೆ ಸಾಲದ ನೋವು ಈ ಕುಟುಂಬಗಳನ್ನು ಕಾಡುವುದು ಮುಂದುವರಿಯುತ್ತದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv