ಬೆಂಗಳೂರು: ನನ್ನ ವಿರುದ್ಧ ‘ಬ್ಲಾಕ್‌ಮೇಲರ್’ ಎಂಬ ಪದ ಬಳಕೆ ಮಾಡಿರುವ ಸಿಎಂ ಸಿದ್ದರಾಮಯ್ಯ ಅವರು ಬಹಿರಂಗ ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಟಿ.ಜೆ.ಅಬ್ರಹಾಂ ಎಚ್ಚರಿಕೆ ನೀಡಿದ್ದಾರೆ.
ಮುಡಾ ಹಗರಣ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವಂತೆ ಕೋರಿ ರಾಜ್ಯಪಾಲರಿಗೆ ದೂರು ನೀಡಿದ್ದರು. ಈ ಸಂಬಂಧ ರಾಜ್ಯಪಾಲರು, ಸಿಎಂಗೆ ಶೋಕಾಸ್ ನೋಟಿಸ್ ನೀಡಿದ್ದರು.
ಇದೇ ವಿಚಾರವಾಗಿ ಅಬ್ರಹಾಂ ವಿರುದ್ಧ ಕಾಂಗ್ರೆಸ್ ನಾಯಕರು ಆಕ್ರೋಶ ಹೊರಹಾಕಿದ್ದರು. ಸಿಎಂ ಸಿದ್ದರಾಮಯ್ಯ ಕೂಡ, ಅಬ್ರಹಾಂ ಬ್ಲಾಕ್‌ಮೇಲರ್ ಎಂದು ಕಿಡಿಕಾರಿದ್ದರು. ಇದಕ್ಕೆ ಅಬ್ರಹಾಂ ಅಸಮಾಧಾನ ಹೊರಹಾಕಿದ್ದಾರೆ. ಮಾಧ್ಯಮಗಳ ಮುಂದೆ ನನ್ನ ವಿರುದ್ಧ ನೀಡಿರುವ ಹೇಳಿಕೆ ವಿಚಾರವಾಗಿ ಸಿಎಂ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.
ಬ್ಲಾಕ್‌ಮೇಲರ್ ಎಂದು ಬಹಿರಂಗವಾಗಿ ನೀಡಿರುವ ಹೇಳಿಕೆಯನ್ನು ವಾಪಸ್ ಪಡೆಯಿರಿ. ಇಲ್ಲದಿದ್ದರೆ ನಿಮ್ಮ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಸಿಎಂಗೆ ಅಬ್ರಹಾಂ ಎಚ್ಚರಿಕೆ ನೀಡಿದ್ದಾರೆ.