ಬೆಂಗಳೂರು: ಕರ್ನಾಟಕದ ಶಾಸಕರಿಗೆ ತಿರುಪತಿಯಲ್ಲಿ ದರ್ಶನ ಭಾಗ್ಯ ಕಲ್ಪಿಸಬೇಕು ಅಂತ ವಿಧಾನ ಪರಿಷತ್ ಶರವಣ ಸರ್ಕಾರವನ್ನ ಆಗ್ರಹ ಮಾಡಿದರು. ಶಾಸಕರಿಗೆ ವಾರದಲ್ಲಿ ಮೂರು ದಿನ ದರ್ಶನ ಮಾಡೋ ವ್ಯವಸ್ಥೆ ತಿರುಪತಿಯಲ್ಲಿ ಕಲ್ಪಿಸಬೇಕು ಅಂತ ಸರ್ಕಾರಕ್ಕೆ ಆಗ್ರಹಿಸಿದರು.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಪ್ರಶ್ನೆ ಕೇಳಿದ ಶರವಣ, ತಿರುಪತಿಯಲ್ಲಿ ಕರ್ನಾಟಕ ಭವನ ಅತಿಥಿ ಗೃಹ ಅವ್ಯವಸ್ಥೆಯಿಂದ ಕೂಡಿದೆ. ಅದರ ನಿರ್ವಹಣೆ ಸರಿಯಾಗಿ ಮಾಡ್ತಿಲ್ಲ. 51 ಜನ ಸಿಬ್ಬಂದಿ ಇದ್ದರು ಯಾವುದೇ ನಿರ್ವಹಣೆ ಮಾಡುತ್ತಿಲ್ಲ. ಸಿಬ್ಬಂದಿಗಳಿಗೆ ಸಮವಸ್ತ್ರ ಕೊಡಿ. ಹಾಜರಾತಿ ಕಡ್ಡಾಯ ಮಾಡಬೇಕು. ಕರ್ನಾಟಕ ಭವನದಲ್ಲಿ ಅನ್ನ ದಾಸೋಹ ನಿಲ್ಲಿಸಿದ್ದಾರೆ. ಅದನ್ನ ಪುನರ್ ಪ್ರಾರಂಭ ಮಾಡಬೇಕು ಅಂತ ಒತ್ತಾಯಿಸಿದರು.
ತಿರುಪತಿಯಲ್ಲಿ ಕರ್ನಾಟಕದಿಂದ ಯಾವುದೇ ಶಾಸಕರಿಗೆ ದರ್ಶನ ಭಾಗ್ಯ ಸಿಗ್ತಿಲ್ಲ. ತಿರುಪತಿಯಲ್ಲಿ ದರ್ಶನ ಭಾಗ್ಯ ಬೇಕು ಅಂತ ತೆಲಂಗಾಣದ ಶಾಸಕರು ಆಂಧ್ರಪ್ರದೇಶದ ಸಿಎಂ ಅವರನ್ನ ಭೇಟಿ ಮಾಡಿ ಸರ್ಕಾರಿ ಆದೇಶ ಮಾಡಿಸಿಕೊಂಡಿದ್ದಾರೆ. ಅದರಂತೆ ಕರ್ನಾಟಕದ ಶಾಸಕರ ನಿಯೋಗ ಆಂಧ್ರಪ್ರದೇಶದ ಸಿಎಂ ಅವರನ್ನು ಭೇಟಿಯಾಗಿ ದರ್ಶನ ಭಾಗ್ಯ ಕಲ್ಪಿಸಬೇಕು ಅಂತ ಮನವಿ ಮಾಡಿದರು.
ಕಾಶಿಯಲ್ಲಿ ನಮ್ಮ ಅತಿಥಿ ಗೃಹ ನೂರು ವರ್ಷ ಆಗಿದೆ ಅಂತ ಕಟ್ಟಡ ನೆಲಸಮ ಮಾಡಿದ್ದಾರೆ. ಆದಷ್ಟು ಬೇಗ ಕಾಶಿಯಲ್ಲಿ ಅತಿಥಿ ಗೃಹ ಕೆಲಸ ಪ್ರಾರಂಭ ಮಾಡಬೇಕು ಅಂತ ಒತ್ತಾಯಿಸಿದರು.
ಇದಕ್ಕೆ ಸಚಿವ ರಾಮಲಿಂಗಾರೆಡ್ಡಿ ಉತ್ತರ ನೀಡಿ, ತಿರುಪತಿಯಲ್ಲಿ ಕರ್ನಾಟಕ ಭವನದ ನವೀಕರಣ ಕೆಲಸ ಆಗ್ತಿದೆ. ಈಗಾಗಲೇ ಒಂದು ಭವನದ ಕೆಲಸ ಮುಗಿದು ಉದ್ಘಾಟನೆ ಆಗಿದೆ. ಬಾಕಿ ಕಾಮಗಾರಿಗಳನ್ನ ಮೇ ನಲ್ಲಿ ಮುಕ್ತಾಯ ಮಾಡುತ್ತೇವೆ. ಈಗ ಭವನ ನಿರ್ವಹಣೆ ಮಾಡಲು ತಾತ್ಕಾಲಿಕ ವ್ಯವಸ್ಥೆ ಮಾಡಿದ್ದೇವೆ. ಎಲ್ಲಾ ಕಾಮಗಾರಿ ಮುಗಿದ ಮೇಲೆ 4 ಸ್ಟಾರ್ ಮಾದರಿಯಲ್ಲಿ ವ್ಯವಸ್ಥೆ ಮಾಡೋ ಕೆಲಸ ಮಾಡ್ತೀವಿ. ಸಿಬ್ಬಂದಿಗಳಿಗೆ ಸಮವಸ್ತ್ರ ಕಡ್ಡಾಯ ಮಾಡೋ ವ್ಯವಸ್ಥೆ ಮಾಡ್ತೀವಿ. ಕರ್ನಾಟಕ ಭವನದ 60% ರೂಂ ಯಾರು ಬೇಕಾದ್ರು ಬುಕ್ ಮಾಡಿಕೊಳ್ಳಬಹುದು.40% ಕರ್ನಾಟಕದವರಿಗೆ ಮೀಸಲು ಇರಲಿದೆ ಅಂತ ತಿಳಿಸಿದರು.
ಕಾಶಿಯಲ್ಲಿ ಕರ್ನಾಟಕ ಭವನ ನೂರು ವರ್ಷ ಆಗಿರೋದ್ರಿಂದ ಕಟ್ಟಡ ತೆಗೆಯಲಾಗಿದೆ. ಹೊಸ ಕಟ್ಟಡಕ್ಕೆ 36 ಕೋಟಿ ಹಣ ಬೇಕು.ಹೊಸ ಕಟ್ಟಡ ನಿರ್ಮಾಣದ ಕೆಲಸ ಆದಷ್ಟು ಬೇಗ ಪ್ರಾರಂಭ ಮಾಡ್ತೀವಿ ಅಂತ ಭರವಸೆ ನೀಡಿದರು.