ಒಂದು ಕಾಲದಲ್ಲಿ ನಾಗರಿಕತೆ ಮತ್ತು ಇತಿಹಾಸದ ಸಂಕೇತವಾಗಿದ್ದ ಸಿರಿಯಾ (Syria) ಅಂತರ್ಯುದ್ಧದಿಂದ ನಲುಗಿಹೋಗಿದೆ. ಈ ಬೆನ್ನಲ್ಲೇ ಆರ್ಥಿಕ ಬಿಕ್ಕಟ್ಟು ದೇಶದ ಜನರನ್ನ ಕಿತ್ತುತಿನ್ನುವ ಪರಿಸ್ಥಿತಿಗೆ ತಂದೊಡ್ಡುತ್ತಿದೆ. ಹೌದು. ಬಂಡುಕೋರರ ಗುಂಪು ಸಿರಿಯಾವನ್ನ ಆಕ್ರಮಿಸುತ್ತಿದ್ದಂತೆ ಉಚ್ಚಾಟಿತ ಅಧ್ಯಕ್ಷ ಬಶರ್ ಅಲ್ ಅಸ್ಸಾದ್ (Bashar al-Assad) ದೇಶದಿಂದ ಪಲಾಯನ ಮಾಡಿದ್ದಾರೆ. ಇದರಿಂದಾಗಿ ಅಂತಾರಾಷ್ಟ್ರೀಯ ನಿರ್ಭಂಧಗಳು ಹಾಗೂ ಜಾಗತಿಕ ಪ್ರತ್ಯೇಕತೆಯು ದೇಶವನ್ನ ಹಣದುಬ್ಬರದ ಬಲೆಯಲ್ಲಿ ಸಿಲುಕಿದೆ. ಈ ಎಲ್ಲ ಬೆಳವಣಿಗೆಯೂ ಜನರನ್ನ ಸಂಕಷ್ಟಕ್ಕೆ ದೂಡಿದೆ.
Advertisement
ಬಿಕ್ಕಟ್ಟಿಗೆ ಸಾಕ್ಷಿಯಾಯ್ತು ಆಕೆಯ ಒಂದು ವೀಡಿಯೋ….
2-3 ದಿನಗಳ ಹಿಂದೆ ಟ್ರಾವೆಲ್ ಬ್ಲಾಗರ್ ಇಲೋನಾ ಕಾರ್ಫಿನ್ ಸಿರಿಯಾದ ರೆಸ್ಟೋರೆಂಟ್‌ವೊಂದಕ್ಕೆ ಭೇಟಿ ನೀಡಿದ್ದರು. ಈ ವೇಳೆ ಒಂದು ಕಾಫಿ ಆರ್ಡರ್ ಮಾಡಿ 50 ಸಿರಿಯನ್ ಪೌಂಡ್ ಕೊಡಲು ಮುಂದಾಗಿದ್ದಾರೆ. ಈ ವೇಳೆ ರೆಸ್ಟೋರೆಂಟ್‌ನ ಸಪ್ಲೈಯರ್ 25,000 ಪೌಂಡ್ ಇಟ್ಟು ಹೋಗುವಂತೆ ಹೇಳಿದ್ದನ್ನು ಕೇಳಿ ಆಕೆ ಹೌಹಾರಿದ್ದಾಳೆ. ಬಳಿಕ ಅಲ್ಲಿನ ಪರಿಸ್ಥಿತಿಯನ್ನ ವೀಡಿಯೋವೊಂದರಲ್ಲಿ ವಿವರಿಸಿದ್ದಾಳೆ.
Advertisement
ಇನ್ಮುಂದೆ ಸಿರಿಯಾದಲ್ಲಿ ಸರಕುಗಳನ್ನ ಖರೀದಿ ಮಾಡಲು ಪರ್ಸ್‌ಗಳನ್ನ ಕೊಂಡೊಯ್ಯುವ ಅಗತ್ಯವಿಲ್ಲ. ಕಂತೆ ಕಂತೆ ಹಣ ನೀಡಬೇಕಾಗಿರೋದ್ರಿಂದ ಮೂಟೆಯನ್ನೇ ಹೊತ್ತೊಯ್ಯಬೇಕು ಎನ್ನುವಷ್ಟು ಪರಿಸ್ಥಿತಿ ಇಲ್ಲಿ ಹದಗೆಟ್ಟಿದೆ. ಇಲ್ಲಿನ ರೆಸ್ಟೋರೆಂಟ್‌ಗಳಲ್ಲಿ, ಇನ್ನಿತರ ಮಳಿಗೆಗಳಲ್ಲಿ ಪದಾರ್ಥಗಳ ಬೆಲೆಯನ್ನ ಬರೆಯಲಾಗಿಲ್ಲ. ಏಕೆಂದರೆ ಯಾವುದೇ ಬೆಲೆಗಳನ್ನು ನಿಗದಿಪಡಿಸಿಲ್ಲ. ಆದ್ರೆ ಖರೀದಿ ಮಾಡಲು ಹೋದ್ರೆ ಒಂದಕ್ಕೆ ಹತ್ತುಪಟ್ಟು ಬೆಲೆ ಹೇಳುತ್ತಿದ್ದಾರೆ. ಅಂತಾರಾಷ್ಟ್ರೀಯ ನಿರ್ಬಂಧಗಳಿರುವ ಕಾರಣ ವಿದೇಶಗಳಿಂದ ವಸ್ತುಗಳ ರಫ್ತಿನಲ್ಲೂ ಕಡಿಮೆಯಾಗಿದೆ. ಸಹಜವಾಗಿಯೇ ದೇಶಿಯ ವಸ್ತುಗಳ ಮೇಲೆ ಜನ ಅವಲಂಬಿತರಾಗಿದ್ದಾರೆ. ಇದರಿಂದ ಬೆಲೆ ಗಗನಕ್ಕೇರಿದೆ.
Advertisement
ಕೆಲ ದಿನಗಳ ಹಿಂದೆಯಷ್ಟೇ 1 ಯುಎಸ್ ಡಾಲರ್‌ನ ಮೌಲ್ಯ 50 ಸಿರಿಯನ್ ಪೌಂಡ್‌ಗಳಷ್ಟಿತ್ತು. ಆದರೀಗ 15,000 ಸಿರಿಯನ್ ಪೌಂಡ್‌ನಷ್ಟು ತಲುಪಿದೆ. ಪರಿಸ್ಥಿತಿ ಎಷ್ಟು ಕೆಟ್ಟದಾಗಿದೆ ಅಂದ್ರೆ, 1 ಕಪ್ ಕಾಫಿಯ ಬೆಲೆ 25,000 ಸಿರಿಯನ್ ಪೌಂಡ್ ತಲುಪಿದೆ. ಕೋಟ್ಯಂತರ ಜನ ಯುವತಿಯ ವೀಡಿಯೋ ವೀಕ್ಷಣೆ ಮಾಡಿದ್ದಾರೆ. ಸಿರಿಯನ್ನರು ಆತಂಕಗೊಂಡಿದ್ದಾರೆ. ಕೆಲವರು ಅಂತಾರಾಷ್ಟ್ರೀಯ ಸಹಾಯದ ಕೊರತೆಯ ಬಗ್ಗೆ ಪ್ರಶ್ನೆ ಎತ್ತಿದ್ದಾರೆ. ಸಿರಿಯಾದ ಪುನರ್ ನಿರ್ಮಾಣಕ್ಕೆ ಸಹಾಯಹಸ್ತವನ್ನ ಇಡೀ ವಿಶ್ವವೇ ಚಾಚುವಂತೆ ಮನವಿ ಮಾಡಿದ್ದಾರೆ.
Advertisement
ಸಿರಿಯಾ ಬಿಕ್ಕಟ್ಟಿಗೆ – ದುಸ್ಥಿತಿಗೆ ಅಮೆರಿಕವೇ ಕಾರಣವಾ?
ಸಿರಿಯಾದಲ್ಲಿ ಉಂಟಾಗಿರುವ ಆರ್ಥಿಕ ಬಿಕ್ಕಟ್ಟು, ಪ್ರಕ್ಷುಬ್ಧ ವಾತಾವರಣಕ್ಕೆ ಅಮೆರಿಕವೇ ಕಾರಣ ಎಂಬ ಮಾತುಗಳು ಕೇಳಿಬರುತ್ತಿವೆ. ಹೌದು. ಸಿರಿಯಾ ನೆಮ್ಮದಿಯಾಗಿತ್ತು & ಸಿರಿಯಾ ಜನ ಸಾಮಾನ್ಯ ಪ್ರಜೆಗಳ ರೀತಿಯೇ ಜೀವನವನ್ನ ಕೂಡ ನಡೆಸುತ್ತಿದ್ದರು. ಆದ್ರೆ ಅದೊಂದು ದಿನ ಮಾತ್ರ ಭೀಕರ ಘಟನೆ ನಡೆದೇ ಹೊಗಿತ್ತು. ಸಿರಿಯಾ ಅಧ್ಯಕ್ಷ ಬಶರ್ ಅಲ್ ಅಸ್ಸಾದ್ ಆಡಳಿತದ ವಿರುದ್ಧ ತಿರುಗಿದ್ದ ಬಂಡುಕೋರರ ಗುಂಪು, 2011ರ ಸಮಯದಲ್ಲಿ ಬೃಹತ್ ಹೋರಾಟ ಶುರು ಮಾಡಿಬಿಟ್ಟಿತ್ತು. ಹೀಗೆ ಶುರುವಾದ ಹೋರಾಟವು ಸುಮಾರು 13 ವರ್ಷ, 9 ತಿಂಗಳು ನಡೆದಿತ್ತು. ಕೊನೆಗೆ ಸಿರಿಯಾ ಅಧ್ಯಕ್ಷರೇ ಓಡಿ ಹೋಗುವಂತೆ ಆಗಿದೆ. ಇದೀಗ ಸಿರಿಯಾ ದೇಶದ ನೆಲದಲ್ಲಿ ಬಂಡುಕೋರರು ನೆಲೆಯೂರಿದ್ದಾರೆ. ಇಂತಹ ಸ್ಥಿತಿಗೆ ವಿಶ್ವದ ದೊಡ್ಡಣ್ಣ ಅಮೆರಿಕವೇ ಕಾರಣ ಅನ್ನೋ ಗಂಭೀರ ಆರೋಪ ಕೇಳಿಬಂದಿದೆ.
ಸಿರಿಯಾದಲ್ಲಿ ಅಮೆರಿಕದ ಪಾತ್ರವೇನು?
2011ಕ್ಕೂ ಮುನ್ನವೇ ಸಿರಿಯಾ ಸರ್ಕಾರ ಮತ್ತು ಬಂಡುಕೋರರ ನಡುವೆ ಸಂಘರ್ಷ ಶುರುವಾಗಿತ್ತು. ಇದನ್ನೇ ಬಳಸಿಕೊಂಡ ಅಮೆರಿಕ 2011ರಲ್ಲಿ ದಂಗೆ ಕೋರರಿಗೆ ಶಸ್ತ್ರಾಸ್ತ್ರ, ತರಬೇತಿ ನೀಡಲು ಶುರು ಮಾಡಿತು. 2014ರಲ್ಲಿ 15 ಸಾವಿರ ದಂಗೆಕೋರರನ್ನು ಸಿದ್ಧ ಮಾಡುವ ಗುರಿ ಇರಿಸಿಕೊಂಡಿದ್ದ ಅಮೆರಿಕಕ್ಕೆ ಇದು ಸಾಧ್ಯವಾಗಲೇ ಇಲ್ಲ. ಅತ್ತ ಸಿರಿಯಾ ಅಧ್ಯಕ್ಷ ಬಶರ್ ಅಲ್ ಅಸ್ಸಾದ್‌ಗೆ ಐಸಿಸ್‌ನ ಬೆಂಬಲವೂ ಸಿಕ್ಕಿತು. ಇದರ ಮಧ್ಯೆ 2014ರಲ್ಲಿ ಒಬಾಮಾ ಆಡಳಿತವು ಬಹ್ರೈನ್, ಜೋರ್ಡಾನ್, ಕತಾರ್, ಸೌದಿ ಅರೇಬಿಯಾ ಮತ್ತು ಯುನೈಟೆಡ್ ಅರಬ್ ಎಮಿರೈಟ್ಸ್‌ನ ಬೆಂಬಲದೊಂದಿಗೆ ಐಸಿಸ್ ಇದ್ದ ಸ್ಥಳಗಳ ಮೇಲೆ ದಾಳಿ ಶುರು ಮಾಡಿತು. ಅಷ್ಟೇ ಅಲ್ಲ, 2017ರಲ್ಲಿ ಸಿರಿಯಾದ ಪಡೆಗಳನ್ನೂ ಗುರಿಯಾಗಿಸಿಕೊಂಡು ಅಮೆರಿಕ ದಾಳಿ ನಡೆಸಿತು. ಈಗಲೂ ಸಿರಿಯಾದಲ್ಲಿ ಅಮೆರಿಕದ ಸೇನೆ ಇದ್ದು, ಆಗಾಗ ಸಂಘರ್ಷಗಳು ನಡೆಯುತ್ತಲೇ ಇವೆ. ಸಿರಿಯಾ ಸರ್ಕಾರಕ್ಕೆ ರಷ್ಯಾ ನೇರವಾಗಿಯೇ ಬೆಂಬಲ ನೀಡುತ್ತಿದೆ. ಆದ್ರೆ ಬಂಡುಕೋರರ ಗುಂಪೇ ಸಿರಿಯಾವನ್ನಾಳುತ್ತಿದ್ದು ಶೋಷನಿಯ ಸ್ಥಿತಿಗೆ ಕಾರಣವಾಗಿದೆ.
ಸಿರಿಯಾದಲ್ಲಿ ಅಮೆರಿಕದ ಈಗಿನ ಪಾತ್ರ ಏನು?
ಐಸಿಸ್ ಮರು ಸಂಘಟನೆಯನ್ನು ತಡೆಯಲು ಸಿರಿಯಾದ ಕೆಲವು ಭಾಗಗಳಲ್ಲಿ ಅಮೆರಿಕ ನೂರಾರು ಸೈನಿಕರನ್ನು ನಿಯೋಜನೆ ಮಾಡಿದೆ. ಅಲ್ಲದೇ ಅಸ್ಸಾದ್ ಸರ್ಕಾರವನ್ನು ವಿರೋಧಿಸಿದ್ದ ಮಧ್ಯಮ ಸಶಸ್ತ್ರ ಗುಂಪುಗಳಿಗೆ ಅಮೆರಿಕ 1 ಶತಕೋಟಿ ಡಾಲರ್‌ಗಿಂತಲೂ ಹೆಚ್ಚಿನ ಮಿಲಿಟರಿ ಸಹಾಯವನ್ನು ನೀಡಿದೆ. ಈ ಪೈಕಿ ಸಿರಿಯನ್ ಡೆಮಾಕ್ರಟಿಕ್ ಫೋರ್ಸಸ್, ಈಶಾನ್ಯ ಸಿರಿಯಾದ ಕುರ್ಡ್‌ಗಳ ನೇತೃತ್ವದ ಮಿಲಿಟರಿ ಪಡೆ ಹೆಚ್ಚಿನ ಹಣಕಾಸಿನ ನೆರವು ಪಡೆದಿದೆ. ಮುಖ್ಯವಾಗಿ ಭಾರೀ ಹಣಕಾಸು ವಹಿವಾಟುಗಳ ಬಗ್ಗೆ ನಿರ್ಬಂಧ ಹೇರಿದೆ. ಇದೆಲ್ಲವೂ ಸಿರಿಯಾದ ಶೋಚನೀಯ ಸ್ಥಿತಿಗೆ ಕಾರಣವಾಗಿದೆ.
ರಷ್ಯಾ-ಉಕ್ರೇನ್ ಯುದ್ಧ ಅಸ್ಸಾದ್ ಪತನಕ್ಕೆ ಹೇಗೆ ಕಾರಣ?
ಸಿರಿಯಾದ ಮಿತ್ರರಾಷ್ಟ್ರವಾಗಿರುವ ರಷ್ಯಾ ಸಿರಿಯಾಕ್ಕೆ ಬೆಂಬಲ ನೀಡಿದೆಯಾದರೂ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗಿಲ್ಲ. ಏಕೆಂದರೆ ಉಕ್ರೇನ್ ವಿರುದ್ಧ ರಷ್ಯಾ ಈಗಾಗಲೇ ಯುಧ್ಧವನ್ನು ಎದುರಿಸುತ್ತಿದೆ. ಡೊನಾಲ್ಡ್ ಟ್ರಂಪ್ ನಿಯೋಜಿತ ಅಧ್ಯಕ್ಷರಾಗಿದ್ದು, ಜನವರಿಯಲ್ಲಿ ಅಧಿಕಾರ ಸ್ವೀಕರಿಸಲಿದ್ದಾರೆ. ಅಲ್ಲಿಯವರೆಗೂ ಜೋ ಬೈಡನ್ ಅಧಿಕಾರದಲ್ಲಿದ್ದಾರೆ. ಇತ್ತೀಚೆಗೆ ಬೈಡನ್, ರಷ್ಯಾ ಮೇಲೆ ಮಿಸೈಲ್ ದಾಳಿ ನಡೆದಲು ಉಕ್ರೇನ್ ಅಧ್ಯಕ್ಷರಿಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದರಿಂದ ರಷ್ಯಾ – ವಿರುದ್ಧದ ದಾಳಿಯನ್ನು ತೀವ್ರಗೊಳಿಸಿದೆ. ಇತ್ತೀಚೆಗೆ ರಷ್ಯಾದ ಗಗನ ಚುಂಬಿ ಕಟ್ಟಡಗಳ ಮೇಲೆ ಸ್ಫೋಟಕ ತುಂಬಿದ ಡ್ರೋನ್ ದಾಳಿ ನಡೆದಿರುವುದು ಇದಕ್ಕೆ ಸಾಕ್ಷಿಯಾಗಿದೆ.
ಮುಂದಿನ ದಿನಗಳಲ್ಲಿ ಸಿರಿಯಾದ ಬಿಕ್ಕಟ್ಟು ಯಾವ ರೀತಿ ಬಗೆಹರಿಯಲಿದೆ? ಜಾಗತಿಕ ಒಕ್ಕೂಟಗಳು ಸಿರಿಯಾ ನೆರವಿಗೆ ಧಾವಿಸಲಿವೆಯೇ ಎಂಬುದನ್ನು ಕಾದುನೋಡಬೇಕಿದೆ.