– ಕನ್ನಡ ಟ್ರೇಲರಲ್ಲಿ ಮೊಳಗಿತು ಸ್ವಾತಂತ್ರ್ಯ ಸಂಗ್ರಾಮದ ರಣಕಹಳೆ!
ಬೆಂಗಳೂರು: ಕೇವಲ ದಕ್ಷಿಣ ಭಾರತ ಮಾತ್ರವಲ್ಲ; ಭಾರತೀಯ ಸಿನಿ ಪ್ರೇಕ್ಷಕರೆಲ್ಲ ತುದಿಗಾಲಲ್ಲಿ ನಿಂತು ಕಾಯುವಂತೆ ಮಾಡಿರೋ ಚಿತ್ರ ಸೈರಾ ನರಸಿಂಹ ರೆಡ್ಡಿ. ಏಕಕಾಲದಲ್ಲಿಯೇ ಕನ್ನಡ ಸೇರಿದಂತೆ ಹಲವಾರು ಭಾಷೆಗಳಲ್ಲಿ ಬಿಡುಗಡೆಯಾಗಲಿರೋ ಈ ಚಿತ್ರದ ಟ್ರೇಲರ್ ಇಂದು ಕನ್ನಡದಲ್ಲಿಯೂ ಬಿಡುಗಡೆಯಾಗಿದೆ. `ನರಸಿಂಹ ರೆಡ್ಡಿ ಸಾಮಾನ್ಯನಲ್ಲ. ಅವನು ಇತಿಹಾಸವನ್ನು ಸೃಷ್ಟಿಸಲು ಹೊರಟವನು. ಅವನೊಬ್ಬ ಯೋಗಿ. ಅವನೊಬ್ಬ ಯೋಧ. ಅವನನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ’ ಎಂಬ ಖಡಕ್ ಹಿನ್ನೆಲೆ ಧ್ವನಿಯೊಂದಿಗೆ ಬಿಚ್ಚಿಕೊಳ್ಳೋ ಸೈರಾ ಟ್ರೇಲರ್ ಮೇಕಿಂಗ್ ಮೂಲಕ, ಪಾತ್ರಗಳ ಅಬ್ಬರದ ಲಕ್ಷಣಗಳ ಮೂಲಕ ಕನ್ನಡದ ಪ್ರೇಕ್ಷಕರನ್ನೆಲ್ಲ ಥ್ರಿಲ್ ಆಗುವಂತೆ ಮಾಡಿದೆ.
ಈ ಕಥೆ ಬ್ರಿಟಿಷರ ವಿರುದ್ಧ ನಡೆದ ಸಂಗ್ರಾಮದ ಕಥೆಯನ್ನಾಧರಿಸಿದೆ. ಮೆಗಾ ಸ್ಟಾರ್ ಚಿರಂಜೀವಿ ಸೈರಾ ನರಸಿಂಹ ರೆಡ್ಡಿಯಾಗಿ ದೇಶ ಭಕ್ತಿಯನ್ನು ನರನಾಡಿಗಳಲ್ಲಿಯೂ ತುಂಬಿಕೊಂಡಿರೋ ಪಾತ್ರದ ಮೂಲಕ ಅಬ್ಬರಿಸಿದ್ದಾರೆ. ಈ ಟ್ರೇಲರ್ ಮಾತ್ರವಲ್ಲದೇ ಇಡೀ ಸಿನಿಮಾ ಕನ್ನಡ ಪ್ರೇಕ್ಷಕರಿಗೆ ಮತ್ತಷ್ಟು ಆಪ್ತವಾಗಲು ಸುದೀಪ್ ಅದರಲ್ಲೊಂದು ಪಾತ್ರವನ್ನು ನಿರ್ವಹಿಸಿರೋದೂ ಕಾರಣ. ಅವುಕು ಪ್ರಾಂತ್ಯದ ರಾಜನಾಗಿ ಸುದೀಪ್ ಇಲ್ಲಿ ಸೈರಾ ನರಸಿಂಹ ರೆಡ್ಡಿಗೆ ಸಾಥ್ ನೀಡಿದ್ದಾರೆ. ಅವರ ಪಾತ್ರದ ಚಹರೆಗಳೂ ಕೂಡಾ ಈ ಟ್ರೇಲರ್‍ನಲ್ಲಿ ಸ್ಪಷ್ಟವಾಗಿಯೇ ಕಾಣಿಸಿದೆ.
Advertisement
Advertisement
ಸೈರಾ ನರಸಿಂಹ ರೆಡ್ಡಿ ಚಿತ್ರದಲ್ಲಿ ಬೇರೆ ಬೇರೆ ಭಾಷೆಗಳ ನಟನಟಿಯರು ಪ್ರಧಾನ ಪಾತ್ರಗಳಲ್ಲಿ ನಟಿಸಿದ್ದಾರೆ. ಅದರಲ್ಲಿಯೂ ಅಮಿತಾಭ್ ಬಚ್ಚನ್ ವೀರ ಸೇನಾನಿ ಸೈರಾ ನರಸಿಂಹ ರೆಡ್ಡಿಯ ಗುರು ಗೋಸಾಯಿ ವೆಂಕಣ್ಣನಾಗಿ, ಶಿಷ್ಯನನ್ನು ಬ್ರಿಟೀಷರ ವಿರುದ್ಧ ತಿರುಗಿ ಬಿದ್ದು ಸೆಣಸಲು ಪ್ರೋತ್ಸಾಹಿಸೋ ಪಾತ್ರವಾಗಿ ಕಾಣಿಸಿಕೊಂಡಿದ್ದಾರೆ. ಸಿದ್ದಮ್ಮನ ಪಾತ್ರದಲ್ಲಿ ನಯನತಾರಾ, ಲಕ್ಷ್ಮಿಯ ಪಾತ್ರದಲ್ಲಿ ತಮನ್ನಾ, ರಾಜಪಾಂಡಿಯಾಗಿ ವಿಜಯ್ ಸೇತುಪತಿ, ವೀರರೆಡ್ಡಿಯಾಗಿ ಜಗಪತಿ ಬಾಬು ನಟಿಸಿದ್ದಾರೆ. ಈ ಎಲ್ಲ ಪಾತ್ರಗಳ ಪರಿಚಯವೂ ಈ ಟ್ರೇಲರ್ ಮೂಲಕವೇ ಆಗಿದೆ. ವಿಶೇಷವಾಗಿ ಕಿಚ್ಚ ಸುದೀಪ್ ಪಾತ್ರದ ಕನ್ನಡದ ಡೈಲಾಗ್ ಮೂಲಕವೇ ಸೈರಾ ಚಿತ್ರ ಕನ್ನಡಿಗರನ್ನು ಮತ್ತಷ್ಟು ಸೆಳೆದುಕೊಂಡಿದೆ.
Advertisement
Advertisement
ಈ ಟ್ರೇಲರ್ ನಲ್ಲಿ ಪ್ರಧಾನವಾಗಿ ಕಾಣಿಸಿರೋದು ಮೇಕಿಂಗ್‍ನ ಅಬ್ಬರ. ಅದ್ಭುತವೆಂಬಂಥಾ ಮೇಕಿಂಗ್, ದೃಷ್ಯಾವಳಿಗಳೇ ಒಟ್ಟಾರೆಯಾಗಿ ಈ ಸಿನಿಮಾ ಮೂಡಿಬಂದಿರೋ ರೀತಿಯನ್ನು ಪ್ರೇಕ್ಷಕರಿಗೆ ಪರಿಚಯಿಸಿದೆ. ಸೈರಾ ನರಸಿಂಹ ರೆಡ್ಡಿ ಕನ್ನಡಿಗರನ್ನು ಸೆಳೆದಿರೋದಕ್ಕೆ ಮತ್ತೊಂದು ಪ್ರಧಾನ ಕಾರಣವೂ ಇದೆ. ಅದು ಈ ಸಿನಿಮಾದಲ್ಲಿ ಕನ್ನಡದ ಹೆಮ್ಮೆಯ ಆಡಿಯೋ ಸಂಸ್ಥೆ ಲಹರಿ ಕೂಡಾ ಪ್ರಮುಖ ಭಾಗವಾಗಿರೋದು. ಲಹರಿ ಸಂಸ್ಥೆ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿಯೇ ಹೆಗ್ಗಳಿಕೆ ಹೊಂದಿರುವಂಥಾದ್ದು. ಈಗಾಗಲೇ ದಕ್ಷಿಣ ಭಾರತೀಯ ದೊಡ್ಡ ಚಿತ್ರಗಳ ಆಡಿಯೋ ಹಕ್ಕುಗಳನ್ನು ಲಹರಿ ಸಂಸ್ಥೆ ಖರೀದಿಸಿತ್ತು. ಆದರೀಗ ಸೈರಾ ನರಸಿಂಹ ರೆಡ್ಡಿಯ ಎಲ್ಲ ಭಾಷೆಗಳ ಆಡಿಯೋ ಹಕ್ಕುಗಳನ್ನೂ ಲಹರಿ ಸಂಸ್ಥೆ ಪಡೆದುಕೊಂಡಿದ್ದು ಈ ಮೂಲಕ ಈ ಬಹುನಿರೀಕ್ಷಿತ ಚಿತ್ರದ ಭಾಗವಾಗಿದೆ.