ನವದೆಹಲಿ: ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Arvind Kejriwal) ಅವರ ನಿವಾಸದಲ್ಲಿ ತನ್ನ ಮೇಲೆ ಹಲ್ಲೆ ನಡೆದಿದೆ ಎನ್ನುವ ಸ್ವಾತಿ ಮಲಿವಾಲ್ ಅವರ ಆರೋಪ ಸುಳ್ಳು. ಇದು ಬಿಜೆಪಿಯ ಒಳಸಂಚು, ಆ ದಿನ ಸ್ವಾತಿ ಮಲಿವಾಲ್‌ರನ್ನ ಸಿಎಂ ಮನೆಗೆ ಕಳುಹಿಸಿದ್ದೇ ಬಿಜೆಪಿ ಎಂದು ಸಚಿವೆ ಅತಿಶಿ (Atishi) ತಿರುಗೇಟು ನೀಡಿದ್ದಾರೆ.
ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಆಪ್ತ ಸಹಾಯಕ ಬಿಭವ್ ಕುಮಾರ್ ವಿರುದ್ಧ ರಾಜ್ಯಸಭಾ ಸಂಸದೆ ಸ್ವಾತಿ ಮಲಿವಾಲ್ (Swati Maliwal) ಮಾಡುತ್ತಿರುವ ಆರೋಪಗಳೆಲ್ಲವೂ ಆಧಾರ ರಹಿತ ಮತ್ತು ಸುಳ್ಳು. ಇದು ಬಿಜೆಪಿಯ ಸಂಚು ಎಂದು ಅಲ್ಲಗಳೆದಿದ್ದಾರೆ.
ಈ ಆರೋಪವು ಬಿಜೆಪಿ (BJP) ಒಳಸಂಚು, ಸ್ವಾತಿ ಮಲಿವಾಲ್ ಅದರ ಮುಖವಾಡ. ಮೇ 13ರಂದು ಬೆಳಗ್ಗೆ ಕೇಜ್ರಿವಾಲ್ ನಿವಾಸಕ್ಕೆ ಮಲಿವಾಲ್‌ರನ್ನ ಕಳುಹಿಸಿದ್ದೇ ಬಿಜೆಪಿ. ಮುಖ್ಯವಾಗಿ ಸ್ವಾತಿಗೆ ಸಿಎಂ ಮೇಲೆಯೇ ಆರೋಪ ಮಾಡುವ ಉದ್ದೇಶವಿತ್ತು. ಆ ಸಂದರ್ಭದಲ್ಲಿ ಸಿಎಂ ಇಲ್ಲದಿದ್ದ ಕಾರಣ ಬಚಾವ್ ಆಗಿದ್ದಾರೆ. ಸಿಎಂ ಇಲ್ಲದಿದ್ದರಿಂದ ಅವರ ಆಪ್ತ ಸಹಾಯಕನ ವಿರುದ್ಧ ದೂರು ನೀಡಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.
ಮುಂದುವರಿದು ಮಾತನಾಡಿ, ಸ್ವಾತಿ ಮಲಿವಾಲ್ ಪೊಲೀಸರಿಗೆ ನೀಡಿದ ದೂರಿನಲ್ಲಿ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಆದ್ರೆ ಸಿಸಿಟಿವಿ ವೀಡಿಯೋದಲ್ಲಿ, ಮಲಿವಾಲ್ ಸಿಎಂ ಮನೆ ಡ್ರಾಯಿಂಗ್ ರೂಮಿನಲ್ಲಿ ಆರಾಮಾಗಿ ಕುಳಿತಿರುವುದು ಕಂಡುಬಂದಿದೆ. ಅವರೇ ಅಲ್ಲಿದ್ದ ಪೊಲೀಸರಿಗೆ ಮತ್ತು ಬಿಭವ್ ಕುಮಾರ್‌ಗೆ ಬೆದರಿಕೆ ಹಾಕಿದ್ದಾರೆ. ಇದಕ್ಕಿಂತ ಸಾಕ್ಷಿ ಇನ್ನೇನು ಬೇಕು ಎಂದು ಪ್ರಶ್ನೆ ಮಾಡಿದ್ದಾರೆ.
ನನ್ನ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ರಾಜ್ಯಸಭೆ ಆಪ್ ಸಂಸದೆ ಸ್ವಾತಿ ಮಾಲಿವಾಲ್ ಅವರು ಆರೋಪಿಸಿರುವುದು ದೇಶಾದ್ಯಂತ ಸುದ್ದಿಯಾಗಿದೆ. ಅರವಿಂದ್ ಕೇಜ್ರಿವಾಲ್ ಅವರ ಆಪ್ತ ಸಹಾಯಕ ವಿಭವ್ ಕುಮಾರ್ ಅವರೇ ಹಲ್ಲೆ ಮಾಡಿದ್ದಾರೆ ಎಂದು ಸ್ವಾತಿ ಮಾಲಿವಾಲ್ ಅವರು ಆರೋಪಿಸಿ ಎಫ್‌ಐಆರ್ ಕೂಡ ದಾಖಲಿಸಿದ್ದಾರೆ. ಆದರೆ, ಈ ಪ್ರಕರಣಕ್ಕೀಗ ಟ್ವಿಸ್ಟ್ ಸಿಕ್ಕಿದ್ದು, ಸ್ವಾತಿ ಮಾಲಿವಾಲ್ ಆರೋಪ ಸುಳ್ಳು ಎಂದು ಆಪ್ ನಾಯಕರೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ, ದೆಹಲಿ ಸಿಎಂ ಕಚೇರಿಯಲ್ಲಿ ಗಲಾಟೆ ನಡೆದಿದೆ ಎನ್ನಲಾದ ವೀಡಿಯೋ ಕೂಡ ಬಿಡುಗಡೆ ಮಾಡಿದ್ದಾರೆ.