ಕೋಲಾರ: ಚಿನ್ನದ ನಾಡಿನ ಜನರ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ. ರೈಲ್ವೇ ಇಲಾಖೆ ತನ್ನ ನಿರ್ಧಾರ ಬದಲಿಸಿಕೊಂಡು ಮತ್ತೆ ಸ್ವರ್ಣ ಪ್ಯಾಸೆಂಜರ್ ರೈಲಿನ ಸಂಚಾರವನ್ನ ಆರಂಭಿಸಿದೆ.
ಸ್ವರ್ಣ ಪ್ಯಾಸೆಂಜರ್ ರೈಲು ಬದಲಾವಣೆಗೆ ವಿರೋಧ ವ್ಯಕ್ತವಾಗಿತ್ತು. ಬುಧವಾರದಂದು ಎರಡು ಗಂಟೆಗಳ ಕಾಲ ರೈಲು ತಡೆದು ಪ್ರತಿಭಟನೆ ನಡೆಸಿದ ಫಲವಾಗಿ ಮತ್ತೆ 19 ಬೋಗಿಗಳಿರುವ ಸ್ವರ್ಣ ಪ್ಯಾಸೆಂಜರ್ ರೈಲು ಸಂಚಾರ ಆರಂಭಗೊಂಡಿದೆ. ಇದರಿಂದ ಖುಷಿಯಾಗಿರುವ ಕೆಜಿಎಫ್ ಜನರು ಸಿಹಿ ಹಂಚಿ ಕುಣಿದು ಕುಪ್ಪಳಿಸಿದ್ದಾರೆ.
ಮಾರಿಕುಪ್ಪಂ-ಬೆಂಗಳೂರು ಸ್ವರ್ಣ ಪ್ಯಾಸೆಂಜರ್ ರೈಲು ಬದಲಾವಣೆ ಖಂಡಿಸಿ ಕೆಜಿಎಫ್ ನ ಮಾರಿಕುಪ್ಪಂ ರೈಲು ನಿಲ್ದಾಣದಲ್ಲಿ ಬುಧವಾರದಂದು ಕಾಂಗ್ರೆಸ್, ಪ್ರಯಾಣಿಕರು ಹಾಗೂ ವಿವಿಧ ಸಂಘಟನೆಯವರು 2 ಗಂಟೆಗಳ ಕಾಲ ರೈಲು ತಡೆದು ಪ್ರತಿಭಟನೆ ನಡೆಸಿದ್ದರು. ರೈಲ್ವೇ ಅಧಿಕಾರಿಗಳು ಸ್ಥಳಕ್ಕೆ ಬರುವಂತೆ ಪಟ್ಟು ಹಿಡಿದು ಹೋರಾಟ ನೆಡೆಸಿದ್ದರು.
ಮುಂಜಾನೆಯ 6.30 ರ ಸ್ವರ್ಣ ಪ್ಯಾಸೆಂಜರ್ ರೈಲಿನ ಬದಲಾಗಿ ಪುಷ್ ಪುಲ್ ರೈಲು ಹಾಕಿದ್ದಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಅಲ್ಲದೆ ಬದಲಾದ ರೈಲಿನ ಬೋಗಿಗಳು ಕಡಿಮೆ ಇರುವ ಕಾರಣ ಪ್ರತಿನಿತ್ಯ ಹೊಟ್ಟೆಪಾಡಿಗೆ ಬೆಂಗಳೂರಿಗೆ ಪ್ರಯಾಣ ಬೆಳೆಸುವವರಿಗೆ ಬಹಳಷ್ಟು ತೊಂದರೆಯಾಗುತ್ತಿರುವ ಹಿನ್ನಲೆಯಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಕೆ.ಹೆಚ್ ಮುನಿಯಪ್ಪ ಪುತ್ರಿ ರೂಪಾ ಸೇರಿದಂತೆ 9 ಜನರ ವಿರುದ್ಧ ಪ್ರಕರಣ ಕೂಡ ದಾಖಲಾಗಿತ್ತು. ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆದು ಲಘು ಲಾಠಿ ಪ್ರಹಾರ ಕೂಡ ನಡೆದಿತ್ತು.
ಸ್ವರ್ಣ ಪ್ಯಾಸೆಂಜರ್ ರೈಲು ಕಳೆದ 20 ವರ್ಷಗಳಿಂದ ಮಾರಿಕುಪ್ಪ ಹಾಗೂ ಬೆಂಗಳೂರು ನಡುವೆ ಸಂಚಾರ ಮಾಡುತ್ತಿದ್ದು, ರೈಲನ್ನ ಬದಲಾವಣೆ ಮಾಡಲು ರೈಲ್ವೇ ಇಲಾಖೆ ಮುಂದಾಗಿತ್ತು.