ಮುಂಬೈ: ಬರಹಗಾರ ಹಿಮಾಂಶು ಶರ್ಮಾ ಅವರ ಜೊತೆಗೆ ಸುಮಾರು 5 ವರ್ಷದಿಂದ ಡೇಟಿಂಗ್ ಮಾಡಿ, ಬ್ರೇಕಪ್ ಮಾಡಿಕೊಂಡ ಬಾಲಿವುಡ್ ನಟಿ ಸ್ವರ ಭಾಸ್ಕರ್ ಈಗ ತಮ್ಮ ಬ್ರೇಕಪ್‍ಗೆ ಕಾರಣವೇನು ಅನ್ನೋದನ್ನ ಬಿಚ್ಚಿಟ್ಟಿದ್ದಾರೆ.
2019ರ ಜುಲೈನಲ್ಲಿ ಸ್ವರ ಹಾಗೂ ಹಿಮಾಂಶು ಬ್ರೇಕಪ್ ಮಾಡಿಕೊಂಡಿದ್ದರು. ಆದರೆ ಬ್ರೇಕಪ್ ಆದ 7 ತಿಂಗಳ ಬಳಿಕ ಸ್ವರ ಇಬ್ಬರೂ ಬೇರೆ ಆಗಲು ಕಾರಣವೇನು ಎನ್ನೋದನ್ನ ಬಹಿರಂಗಪಡಿಸಿದ್ದಾರೆ.
ನಾವಿಬ್ಬರು ಪ್ರೀತಿಯಲ್ಲಿ ಯಾವುದೇ ತಪ್ಪು ಮಾಡಿಲ್ಲ. ಒಬ್ಬರಿಗೊಬ್ಬರು ಮೋಸ ಕೂಡ ಮಾಡಿಲ್ಲ. ಆದರೆ ಕೆಲ ವಿಚಾರದಲ್ಲಿ ನಮ್ಮಿಬ್ಬರ ಆಲೋಚನೆ ಬೇರೆ ಬೇರೆ ಆಗಿತ್ತು. ಆದ್ದರಿಂದ ನಾವಿಬ್ಬರು ಬ್ರೇಕಪ್ ಮಾಡಿಕೊಳ್ಳಲು ನಿರ್ಧರಿಸಿದೆವು ಎಂದು ಸ್ವರ ಹೇಳಿಕೊಂಡಿದ್ದಾರೆ.
ನನಗೆ ಹೆಚ್ಚು ಕೋಪ ಬರಲ್ಲ. ಒಂದು ವೇಳೆ ಕೋಪ ಬಂದಿದ್ದರೆ ಈ ಸಂಗತಿಯನ್ನು ಎದುರಿಸಲು ಸಹಾಯವಾಗುತ್ತಿತ್ತು ಅನಿಸುತ್ತೆ. ಆದರೆ ನಮ್ಮ ವಿಚಾರದಲ್ಲಿ ಯಾರೂ ಯಾವುದೇ ತಪ್ಪು ಮಾಡಿಲ್ಲ. ಒಬ್ಬರಿಗೊಬ್ಬರು ಕೆಡುಕು ಭಯಸಲಿಲ್ಲ. ಯಾರಿಗೂ ಯಾರೂ ವಂಚಿಸಲಿಲ್ಲ, ಅದೇ ದುರದೃಷ್ಟಕರ ಎಂದು ಸ್ವರ ಬೇಸರ ವ್ಯಕ್ತಪಡಿಸಿದ್ದಾರೆ.
ತಮ್ಮ ಹಾಗೂ ಹಿಮಾಂಶು ಅವರ ಸಂಬಂಧದ ಬಗ್ಗೆ ವಿವರಿಸಿದ ಸ್ವರ, ಸಂಬಂಧ ಎನ್ನುವುದು ಒಂದು ಜೋಡಿಯಾಗಿ ನಡೆಸುವ ಪ್ರಯಾಣ. ನೀವು ಜೊತೆಯಾಗಿ ಉದ್ಯಾನದಲ್ಲಿ ಹೋಗುತ್ತಿದ್ದೀರಿ ಎಂದರೆ ನೀವು ಜೊತೆಯಾಗಿ ಪಯಣಿಸುತ್ತಿದ್ದೀರಿ ಎಂದರ್ಥ. ಆದರೆ ನಿಮ್ಮ ಮುಂದೆ ಎರಡು ದಾರಿ ಇದೆ ಎಂದಾದರೆ, ಇಬ್ಬರೂ ಜೊತೆಯಾಗಿ ಹೋಗಲು ಒಬ್ಬರು ತಮ್ಮ ದಾರಿ ತ್ಯಾಗ ಮಾಡಬೇಕು. ಒಬ್ಬರು ನಾನು ನನ್ನ ದಾರಿ ಬಿಟ್ಟು ನಿನ್ನ ಜೊತೆ ಬರುತ್ತೇನೆ ಎನ್ನಬೇಕು. ಆದರೆ ಇಬ್ಬರ ದಾರಿ ಬೇರೆಯಾಗಿದ್ದರೆ ಜೊತೆ ಸಾಗಲು ಸಾಧ್ಯವಿಲ್ಲ. ಹೀಗಾಗಿ ಇಬ್ಬರು ಬಾಯ್ ಹೇಳಿ ಮುಂದೆ ಸಾಗೋದು ಉತ್ತಮ. ನಾವು ನಮ್ಮ ಆಯ್ಕೆಯನ್ನು ಮಾತ್ರವಲ್ಲ, ಇತರರ ಆಯ್ಕೆಯನ್ನೂ ಒಪ್ಪಿಕೊಳ್ಳಬೇಕು ಎಂದು ಸ್ವರ ಸಂಬಂಧವನ್ನು ಅರ್ಥೈಸಿದ್ದಾರೆ.
ಹಿಮಾಂಶು ಹಾಗೂ ಸ್ವರ ಇಬ್ಬರು ಜೊತೆಗೂಡಿ ಹಲವು ಪ್ರಾಜೆಕ್ಟ್ ಗಳಲ್ಲಿ ಕೆಲಸ ಮಾಡಿದ್ದಾರೆ. 2013ರಲ್ಲಿ ತೆರೆಕಂಡ ‘ರಾಂಝಣಾ’ ಸಿನಿಮಾ, ‘ತನು ವೆಡ್ಸ್ ಮನು’ ಸೀರಿಸ್‍ನಲ್ಲಿ ಇಬ್ಬರು ಜೊತೆಗೂಡಿ ಕೆಲಸ ಮಾಡಿದ್ದರು.
ಸ್ವರ ಅವರು ‘ಪ್ರೇಮ್ ರತನ್ ಧನ್ ಪಾಯೋ’, ‘ವೀರ್ ದಿ ವೆಡ್ಡಿಂಗ್’ ಹಾಗೂ ಕೆಲ ವೆಬ್ ಸೀರಿಸ್‍ಗಳಲ್ಲಿ ಕೂಡ ಅಭಿನಯಿಸಿದ್ದಾರೆ. ಇತ್ತ ಹಿಮಾಂಶು ಅವರು ರಾಷ್ಟ್ರ ಪ್ರಶಸ್ತಿ ವಿಜೇತ ಚಲನಚಿತ್ರ ಬರಹಗಾರರಾಗಿದ್ದು, ‘ಸ್ಟ್ರೇಂಜರ್’, ‘ತನು ವೆಡ್ಸ್ ಮನು’ ಹಾಗೂ ‘ಝೀರೋ’ ಸಿನಿಮಾಗಳಿಗೆ ಬರಹಗಾರರಾಗಿ ಕೆಲಸ ಮಾಡಿದ್ದಾರೆ. ‘ಶುಭ್ ಮಂಗಲ್ ಸಾವ್ಧಾನ್’, ‘ಮನ್ಮರ್ಜಿಯಾನ್’, ‘ಶುಭ್ ಮಂಗಲ್ ಜ್ಯಾದಾ ಸಾವ್ಧಾನ್’ ಇನ್ನಿತರೆ ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ.