ಬೆಳಗಾವಿ: ಮತಾಂತರ ನಿಷೇಧ ಕಾಯ್ದೆ (Anti Conversion Bill) ರದ್ದು ವಿರೋಧಿಸಿ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಲು ತೆರಳುತ್ತಿದ್ದ ಸ್ವಾಮೀಜಿಯೊಬ್ಬರ ಕಾರು ಹಾಗೂ ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಕಾಕತಿ ಗ್ರಾಮದ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.
ಮೃತರನ್ನು ಸ್ವಾಮೀಜಿಯ ಸೇವಕರು ಎನ್ನಲಾಗಿದ್ದು ಅವರ ಗುರುತು ಪತ್ತೆಯಾಗಿಲ್ಲ. ಘಟನೆಯಲ್ಲಿ ಶಿವಾಪುರ ಗ್ರಾಮದ ಮುಪ್ಪಿನ ಕಾಡಸಿದ್ದೇಶ್ವರ ಮಠದ ಸ್ವಾಮೀಜಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ಉಚಿತ ಪ್ರಯಾಣ ಹಿನ್ನೆಲೆ ಒಂದು ಇಡೀ ಬಸ್ ಬುಕ್ ಮಾಡೋಕೆ ಬಂದ ಅಜ್ಜಿ
ಬೆಳಗಾವಿಯಲ್ಲಿ (Belagavi) ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳ (Bajrang Dal) ನಡೆಸುತ್ತಿದ್ದ ಮತಾಂತರ ನಿಷೇಧ ಕಾಯ್ದೆ ರದ್ದು ವಿರೋಧಿಸಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ತೆರಳುತ್ತಿರುವಾಗ ಈ ಅಪಘಾತ ಸಂಭವಿಸಿದೆ. ಸ್ಥಳಕ್ಕೆ ಕಾಕತಿ ಠಾಣೆ ಪೊಲೀಸರ ಭೇಟಿ, ನೀಡಿ ಪರಿಶೀಲನೆ ನಡೆಸಿದ್ದಾರೆ.
ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಮತಾಂತರ ನಿಷೇಧ ಕಾಯ್ದೆ ರದ್ದಿಗೆ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿತ್ತು. ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯದ ಹಕ್ಕು ಧಾರ್ಮಿಕ ಸಂರಕ್ಷಣಾ ಅಧಿನಿಯಮ- 2022 ನ್ನು ರದ್ದುಗೊಳಿಸಿ ಕರ್ನಾಟಕ ಧಾರ್ಮಿಕ ಹಕ್ಕು ಸಂರಕ್ಷಣಾ ವಿಧೇಯಕ- 2023ಕ್ಕೆ ಅನುಮೋದನೆ ನೀಡಲಾಗಿತ್ತು. ಇದಕ್ಕೆ ಹಿಂದೂ ಪರ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದವು.
ರಾಜ್ಯದಲ್ಲಿ ಮತಾಂತರ ತಡೆಯುವ ಉದ್ದೇಶದಿಂದ ಬಿಜೆಪಿ (BJP) ನೇತೃತ್ವದ ಸರ್ಕಾರ ಕಾಯ್ದೆಯೊಂದನ್ನು ಜಾರಿಗೆ ತಂದಿತ್ತು. 2021ರ ಡಿಸೆಂಬರ್‍ನಲ್ಲಿ ಬೆಳಗಾವಿಯಲ್ಲಿ ನಡೆದ ವಿಧಾನಮಂಡಲ ಅಧಿವೇಶನದಲ್ಲಿ ಮತಾಂತರ ನಿಷೇಧ ಮಸೂದೆಯನ್ನು ಅಂಗೀಕರಿಸಲಾಗಿತ್ತು. ನಂತರ ಸುಗ್ರೀವಾಜ್ಞೆ ಮೂಲಕ ಕಾಯ್ದೆಯನ್ನು ಜಾರಿಗೊಳಿಸಿತ್ತು. ಇದನ್ನೂ ಓದಿ: ರಾಜಕಾರಣ ಅಷ್ಟೊಂದು ಚೆನ್ನಾಗಿಲ್ಲ, ರಾಜಕೀಯ ಸಾಕಾಗಿದೆ – ಡಿಕೆ ಸುರೇಶ್ ವೈರಾಗ್ಯದ ಮಾತು