ಹಾವೇರಿ: ಜಿಲ್ಲೆಯ ಎರಡು ಅನರ್ಹ ಕ್ಷೇತ್ರಗಳಲ್ಲಿ ಉಪಚುನಾವಣೆ ಕಾವು ಹೆಚ್ಚುತ್ತಿರುವ ಬೆನ್ನಲ್ಲೇ ಸ್ವಾಮೀಜಿಗೆ ಭಕ್ತರು ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಒತ್ತಾಯಿಸುತ್ತಿದ್ದಾರೆ.
ಹಿರೇಕೆರೂರು ಕ್ಷೇತ್ರದಿಂದ ಉಪಚುನಾವಣೆಯಲ್ಲಿ ಸ್ಪರ್ಧಿಸುವಂತೆ ರಟ್ಟೀಹಳ್ಳಿ ಪಟ್ಟಣದಲ್ಲಿರುವ ಕಬ್ಬಿಣಕಂಥಿ ಮಠದ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿಗೆ ಭಕ್ತರು ಸಾಮಾಜಿಕ ಜಾಲತಾಣದಲ್ಲಿ ಒತ್ತಾಯ ಮಾಡುತ್ತಿದ್ದಾರೆ.
ಹಿರೇಕೆರೂರು ಕ್ಷೇತ್ರದ ರಾಜಕಾರಣ ಅಪಮೌಲ್ಯ ಆಗಿದೆ. ಕ್ಷೇತ್ರದ ರಾಜಕೀಯ ವ್ಯವಸ್ಥೆ ಸರಿಪಡಿಸಲು ಚುನಾವಣೆಗೆ ಸ್ಪರ್ಧಿಸಿ ಎಂದು ಒತ್ತಡ ಹಾಕುತ್ತಿದ್ದಾರೆ. ಭಕ್ತರ ಒತ್ತಾಯದ ಕುರಿತು ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಇನ್ನೂ ಯಾವುದೇ ನಿರ್ಧಾರ ಪ್ರಕಟಿಸಿಲ್ಲ. ಮಠದ ಬಳಿ ಇರುವ ಸಮುದಾಯ ಭವನದಲ್ಲಿ ನಾಳೆ ಭಕ್ತರ ಹಾಗೂ ಅಭಿಮಾನಿಗಳ ಸಭೆ ನಡೆಸಲಿದ್ದಾರೆ. ಸಭೆ ನಂತರ ಅಂತಿಮ ನಿರ್ಧಾರ ಪ್ರಕಟಣೆ ಮಾಡುತ್ತೇನೆ ಎಂದು ತಿಳಿಸಿದ್ದಾರೆ.
ಬಿ.ಸಿ.ಪಾಟೀಲ್ ಅವರನ್ನು ಅನರ್ಹಗೊಳಿಸಿದ್ದರಿಂದ ಹಿರೇಕೇರೂರು ಕ್ಷೇತ್ರ ಈಗ ತೆರವಾಗಿದೆ. ಈ ಕ್ಷೇತ್ರಕ್ಕೆ ಈಗಾಗಲೇ ಹಲವರು ಪೈಪೋಟಿ ನಡೆಸಿದ್ದರು. ಅಲ್ಲದೆ ಬಿ.ಸಿ.ಪಾಟೀಲ್ ಅವರ ಸ್ಪರ್ಧೆಗೂ ಸಹ ಬಿಜೆಪಿ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದ್ದರು. ಇದೀಗ ಸ್ವಾಮೀಜಿ ಸ್ವರ್ಧೆ ಮಾಡುತ್ತಾರಾ ಎನ್ನುವ ಪ್ರಶ್ನೆ ಕಾಡುತ್ತಿದೆ. ಹಿರೇಕೇರೂರಿನಲ್ಲಿ ಡಿಸೆಂಬರ್ 5 ರಂದು ಉಪಚುನಾವಣೆ ನಡೆಯಲಿದೆ.