– ಅಚ್ಚುಕಟ್ಟು ಪ್ರದೇಶದ ರೈತರಲ್ಲಿ ಮಂದಹಾಸ
– ನದಿಪಾತ್ರದ ಜನರಿಗೆ ಎಚ್ಚರಿಕೆ ಕೊಟ್ಟ ಅಧಿಕಾರಿಗಳು
ಚಾಮರಾಜನಗರ: ಹಿಂಗಾರು ಮಳೆಯ ಆರ್ಭಟಕ್ಕೆ ಸುವರ್ಣಾವತಿ ಜಲಾಶಯ (Suvarnavathy Dam) ಬಹುತೇಕ ಭರ್ತಿಯಾಗಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.
ಕಳೆದ ವರ್ಷ ಅಷ್ಟೇ ಅಲ್ಲ, ಈ ಬಾರಿಯ ಮುಂಗಾರಿನಲ್ಲೂ ಜಲಾಶಯ ತುಂಬದೇ ರೈತರನ್ನು ಚಿಂತೆಗೀಡು ಮಾಡಿತ್ತು. ಆದರೆ ಜಿಲ್ಲೆಯ ಗಡಿಭಾಗ ದಿಂಬಂ ಘಾಟ್‌ನಲ್ಲಿ ಕಳೆದ ಕೆಲ ದಿನಗಳಿಂದ ಉತ್ತಮ ಮಳೆಯಾದ ಕಾರಣ ಸಾಕಷ್ಟು ನೀರು ಹರಿದುಬರುತ್ತಿದ್ದು ಸುವರ್ಣಾವತಿ ಜಲಾಶಯ ಬಹುತೇಕ ತುಂಬಿದೆ. ಇದನ್ನೂ ಓದಿ: ಕಾವೇರಿ ನದಿ ನೀರು ವಿವಾದ – ಶಾಶ್ವತ ಪರಿಹಾರಕ್ಕೆ ʻಕಾವೇರಿ ರಕ್ಷಣಾ ಸಮಿತಿʼ ರಚನೆ
55 ಅಡಿ ಸಾಮರ್ಥ್ಯದ ಜಲಾಶಯ ಸದ್ಯ 53.5 ಅಡಿ ಭರ್ತಿಯಾಗಿದೆ. ಒಳಹರಿವು 250 ಕ್ಯೂಸೆಕ್ ಇದ್ದು, ಮುನ್ನೆಚ್ಚರಿಕಾ ಕ್ರಮವಾಗಿ ನದಿಗೆ 150 ಕ್ಯೂಸೆಕ್ ಬಿಡುಗಡೆ ಮಾಡಲಾಗಿದೆ. ಯಾವುದೇ ಕ್ಷಣದಲ್ಲಿ ಒಳ ಹಾಗೂ ಹೊರಹರಿವು ಹೆಚ್ಚಳ ಸಾಧ್ಯತೆ ಇರುವುದರಿಂದ ನದಿಪಾತ್ರದ ಗ್ರಾಮಸ್ಥರು ಎಚ್ಚರಿಕೆಯಿಂದಿರಲು ಕಾವೇರಿ ನೀರಾವರಿ ನಿಗಮ ಸೂಚಿಸಿದೆ.
ಸದ್ಯ ನದಿಯಿಂದ ಕರಿನಂಜನಪುರದ ದೊಡ್ಡಕೆರೆ, ಚಿಕ್ಕಕೆರೆ, ಸಿಂಡಗೆರೆ, ಬಂಡೀಗೆರೆ ನಲ್ಲೂರು, ನಾಗವಳ್ಳಿ ಸೇರಿದಂತೆ ಹತ್ತಾರು ಕೆರೆ ಕಟ್ಟೆಗಳಿಗೆ ನೀರು ಹರಿಯುತ್ತಿದ್ದು, ಈ ಕೆರೆಕಟ್ಟೆಗಳು ತುಂಬ ತೊಡಗಿವೆ. ಇದರಿಂದ ಚಾಮರಾಜನಗರ, ಯಳಂದೂರು ಹಾಗೂ ಕೊಳ್ಳೇಗಾಲ ತಾಲೂಕಿನ ಹಲವೆಡೆ ಅಂತರ್ಜಲ ವೃದ್ಧಿಯಾಗುತ್ತಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಇದನ್ನೂ ಓದಿ: ಚನ್ನಪಟ್ಟಣದಲ್ಲಿ ನಿಖಿಲ್ ಸ್ಪರ್ಧೆ ನಮಗೆ ಮುಖ್ಯ ಅಲ್ಲ: ಪರಮೇಶ್ವರ್
ಸುವರ್ಣಾವತಿ ಜಲಾಶಯ 7000 ಹೆಕ್ಟೇರ್ ಅಚ್ಚುಕಟ್ಟು ಪ್ರದೇಶ ಹೊಂದಿದೆ. ಹಿಂಗಾರು ಬೆಳೆ ಬೆಳೆಯಲು ಜಲಾಶಯದಿಂದ ಚಾನೆಲ್‌ಗಳಿಗೆ ನೀರು ಬಿಡುಗಡೆ ಮಾಡಬೇಕು ಎಂಬುದು ರೈತರ ಆಗ್ರಹವಾಗಿದೆ.