ಕೋಲಾರ: ವರದಕ್ಷಿಣೆ ಕಿರುಕುಳ ತಾಳಲಾರದೆ ವಕೀಲನೊಬ್ಬನ ಪತ್ನಿ ನೇಣು ಬಿಗಿದುಕೊಂಡ ರೀತಿಯಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟ ಘಟನೆ ಜಿಲ್ಲೆಯ ಮಾಲೂರು ಪಟ್ಟಣದಲ್ಲಿ ನಡೆದಿದೆ.
ಅನುಷಾ (28) ಮಾಲೂರು ಪಟ್ಟಣದ ಅರಳೇರಿ ರಸ್ತೆಯ ಸಾಯಿ ಬಾಬಾ ಟೆಂಪಲ್ ಬೀದಿಯಲ್ಲಿ ಗೃಹಿಣಿ. ಈ ಘಟನೆ ಬೆಳಕಿಗೆ ಬರುತ್ತಿದ್ದಂತೆಯೇ ಮಾಲೂರು ಸರ್ಕಾರಿ ಆಸ್ಪತ್ರೆಯ ಶವಗಾರದ ಬಳಿ ಮೃತಳ ಸಂಬಂಧಿಕರು ಜಮಾಯಿಸಿದ್ದರು. ವರದಕ್ಷಿಣೆಗಾಗಿ ಪತಿ ರವೀಂದ್ರಗೌಡ ಹಾಗೂ ಆತನ ಪೋಷಕರು ಕೊಲೆ ಮಾಡಿದ್ದಾರೆಂದು ಮೃತಳ ಸಂಬಂಧಿಕರು ಆರೋಪಿಸಿದ್ದಾರೆ.
ಎರಡು ವರ್ಷದಿಂದ ಅನುಷಾಳ ಅತ್ತೆ ಮಂಜುಳ ಹಾಗೂ ಪತಿ ಇಬ್ಬರು ವರದಕ್ಷಿಣೆ ಕಿರುಕುಳ ನೀಡುತ್ತಿದ್ದಲ್ಲದೆ, ಗಂಡ ರವೀಂದ್ರ ಕುಡಿದು ಬಂದು ಗಲಾಟೆ ಮಾಡುತ್ತಿದ್ದನು. ಅದೇ ರೀತಿ ಬುಧವಾರ ಕೂಡ ಕಂಠಪೂರ್ತಿ ಕುಡಿದ ಬಂದಿದ್ದ ಗಂಡ ಅನುಷಾಳನ್ನ ಮನಬಂದಂತೆ ಥಳಿಸಿದ್ದು, ಬಳಿಕ ಅತ್ತೆ, ಪತಿ ಇಬ್ಬರು ಸೇರಿ ಕೊಲೆ ಮಾಡಿದ್ದಾರೆ. ಕೊಲೆ ಮಾಡಿದ ಬಳಿಕ ಮಗುವಿನೊಂದಿಗೆ ಪತಿ ರವೀಂದ್ರಗೌಡ ಸೇರಿದಂತೆ ಅವರ ಪೋಷಕರು ಪರಾರಿಯಾಗಿದ್ದಾರೆ ಎಂದು ಮೃತ ಅನುಷಾ ದೊಡ್ಡಪ್ಪ ಮುನಿಯಪ್ಪ ಹೇಳಿದ್ದಾರೆ.
ಎರಡು ವರ್ಷಗಳ ಹಿಂದೆ ಮಾಲೂರು ತಾಲೂಕಿನ ಬೈರನಹಳ್ಳಿ ಗ್ರಾಮದ ಜೆಡಿಎಸ್ ಮುಖಂಡ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಪಾಪಣ್ಣನ ಮಗ ರವೀಂದ್ರ ಜೊತೆ ತಮಿಳುನಾಡಿನ ಗೆದಲನದೊಡ್ಡಿ ಮೂಲದ ಅನುಷಾಳನ್ನ ಗುರು-ಹಿರಿಯರ ಸಮ್ಮುಖದಲ್ಲಿ ಮದುವೆ ಮಾಡಲಾಗಿತ್ತು. ಮದುವೆ ಹೊಸದರಲ್ಲಿ ಅನ್ಯೋನ್ಯವಾಗಿದ್ದ ಗಂಡ-ಹೆಂಡತಿ ಬಳಿಕ ಆಗಾಗ ವರದಕ್ಷಿಣೆ ಗಲಾಟೆ ನಡೆಯುತ್ತಿತ್ತು. ಇದರ ಮಧ್ಯೆ ಈ ದಂಪತಿಗೆ ಒಂದು ವರ್ಷದ ಗಂಡು ಮಗು ಸಹ ಆಗಿತ್ತು.
ಮಗುವಾದರೂ ಗಂಡ ಹಾಗೂ ಅತ್ತೆ ವರದಕ್ಷಿಣೆ ತರುವಂತೆ ಕಿರುಕುಳ ನೀಡುತ್ತಿದ್ದರು. ಇದರಿಂದ ಮನನೊಂದಿದ್ದ ಅನುಷಾ ಎರಡು ತಿಂಗಳ ಹಿಂದೆ ತವರು ಮನೆಗೆ ಬಂದಿದ್ದಳು. ನಂತರ ತವರು ಮನೆಯವರು ಬುದ್ಧಿವಾದ ಹೇಳಿ ಪತಿಯ ಮನೆಗೆ ಅನುಷಾಳನ್ನ ಕಳುಹಿಸಿ ಕೊಟ್ಟಿದ್ದರು. ಬುಧವಾರ ಗಂಡನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ. ಅನುಷಾ ಪೋಷಕರು ಮಾತ್ರ ಇದು ಆತ್ಮಹತ್ಯೆ ಅಲ್ಲ ಕೊಲೆ ಎನ್ನುತ್ತಿದ್ದಾರೆ.
ಸದ್ಯ ಈ ಸಂಬಂಧ ಮಾಲೂರು ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಾಗಿದೆ ಎಂದು ಎಸ್‍ಪಿ ರೋಹಿಣಿ ಕಠೋಚ್ ಘಟನೆಯ ಬಗ್ಗೆ ವಿವರಣೆ ನೀಡಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv