ಹಾಸನ: ಕಸ್ಟಡಿಯಲ್ಲಿದ್ದ ಯುವಕ ಅನುಮಾನಾಸ್ಪದವಾಗಿ ಮೃತಪಟ್ಟ ಘಟನೆ ಚನ್ನರಾಯಪಟ್ಟಣ ತಾಲೂಕಿನ ನುಗ್ಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ನಡೆದಿದೆ.
ಚನ್ನರಾಯಪಟ್ಟಣ ತಾಲೂಕಿನ ಅಗ್ರಹಾರ ಬೆಳಗುಲಿ ಮೂಲದ ಅವಿನಾಶ್ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾನೆ. ಮದ್ಯದಂಗಡಿಯಲ್ಲಿ ಮದ್ಯವನ್ನು ಕಳ್ಳತನ ಮಾಡಿದ್ದಾನೆ ಎನ್ನುವ ಆರೋಪದ ಅಡಿ ಪೊಲೀಸರು ಕಳೆದ 20 ದಿನಗಳ ಹಿಂದೆ ಆತನನ್ನು ಬಂಧಿಸಿ ಕಸ್ಟಡಿಯಲ್ಲಿ ವಿಚಾರಣೆ ನಡೆಸುತ್ತಿದ್ದರು.
ಕಸ್ಟಡಿಯಲ್ಲಿದ್ದ ಆರೋಪಿ ಅವಿನಾಶ್ ಇಂದು ಅನುಮಾನಸ್ಪದವಾಗಿ ಮೃತಪಟ್ಟಿದ್ದಾನೆ. ಅವಿನಾಶ್ ಹೃದಯಾಘಾತದಿಂದ ಮೃತಪಟ್ಟಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿದ್ದರೆ, ಅವಿನಾಶ್ ಪೋಷಕರು ಪೊಲೀಸರೇ ಆತನಿಗೆ ಹೊಡೆದು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಅವಿನಾಶ್ ಅನುಮಾನಾಸ್ಪದವಾಗಿ ಮೃತಪಟ್ಟ ಹಿನ್ನೆಲೆಯಲ್ಲಿ ಆತನ ಪೋಷಕರು ಹಾಗೂ ಗ್ರಾಮಸ್ಥರು ಪ್ರತಿಭಟನೆ ಮಾಡುವ ಸಂಭವವಿದೆ. ಹಾಗಾಗಿ ಪೊಲೀಸರು ಈಗಾಗಲೇ ಬೆಳಗುಲಿ ಗ್ರಾಮ ಹಾಗೂ ಪೊಲೀಸ್ ಠಾಣೆ ಮುಂದೆ ಬಿಗಿ ಬಂದೋಬಸ್ತ್ ಮಾಡಿದ್ದಾರೆ.
ಈ ಬಗ್ಗೆ ಪೊಲೀಸರು ಅಧಿಕೃತವಾಗಿ ಯಾವುದೇ ಹೇಳಿಕೆ ನೀಡುತ್ತಿಲ್ಲ. ಸದ್ಯ ಆರೋಪಿ ಅವಿನಾಶ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಹಾಸನ ಜಿಲ್ಲಾಸ್ಪತ್ರೆ ಶವಾಗಾರಕ್ಕೆ ರವಾನಿಸಲಾಗಿದೆ.