ಬೆಂಗಳೂರು: ಹೆರಿಗೆ ನಂತರ ಮನೆಗೆ ಬಂದ ಪತ್ನಿಯನ್ನು (Wife) ಹೊರಗೆ ಹಾಕಿದ ಪತಿಯ (Husband) ವಿರುದ್ಧ ಕೇಸ್ ದಾಖಲಾಗಿದೆ.
ಮೂಲತಃ ಉತ್ತರಪ್ರದೇಶದ ಬನಾರಸ್ ದಂಪತಿ ಬೆಂಗಳೂರಲ್ಲಿ (Bengaluru) ನೆಲೆ ಕಂಡುಕೊಂಡಿದ್ದರು. ಅದ್ಯಾಕೋ ಏನೋ ಗರ್ಭಿಣಿ ಪತ್ನಿಯ ಮೇಲೆ ಗಂಡನಿಗೆ ಅನುಮಾನ. ಪತ್ನಿಗೆ ಅನೈತಿಕ ಸಂಬಂಧವೆಂದು ಅನುಮಾನಿಸಿ ಗರ್ಭಿಣಿ ಪತ್ನಿಯ ಮೇಲೆ ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದೆ.
ಈ ಸಂಬಂಧ ಪತಿ ಅನುರಾಗ್ ಪಾಂಡೆ ಎಂಬವವನ ಮೇಲೆ ದಕ್ಷಿಣ ವಿಭಾಗದ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 8 ವರ್ಷಗಳ ಹಿಂದೆ ಜ್ಯೋತಿ ಹಾಗೂ ಅನುರಾಗ್ ಉತ್ತರಪ್ರದೇಶದಲ್ಲಿ ಮದುವೆಯಾಗಿದ್ದರು.
ಅನುರಾಗ್ ಬೆಂಗಳೂರಲ್ಲಿ ಕೆಲಸ ಮಾಡುತ್ತಿದ್ದರಿಂದ ಜ್ಯೋತಿಯನ್ನು ಇಲ್ಲಿಗೆ ಕರೆಸಿಕೊಂಡಿದ್ದ. ನಾಲ್ಕು ವರ್ಷಗಳ ಕಾಲ ಚೆನ್ನಾಗಿದ್ದ ಪತಿ ನಂತರ ಕಿರುಕುಳ ಕೊಡಲು ಆರಂಭಿಸಿದ್ದ. ಮೊದಲ ಮಗುವಿನ ಗರ್ಭಿಣಿ ಇದ್ದಾಗ ಅನೈತಿಕ ಸಂಬಂಧ ಆರೋಪ ಮಾಡಿ ಪತ್ನಿಯ ಮೇಲೆ ಹಲ್ಲೆ ಮಾಡಿದ್ದಾನೆ. ಇದನ್ನೂ ಓದಿ: ಅತ್ತೆ ಸಾಯಲಿ ಎಂದು ದೇವರ ಮುಂದೆ ಸೊಸೆಯಿಂದ ಪ್ರಾರ್ಥನೆ
9 ತಿಂಗಳ ಗರ್ಭಿಣಿ ಮೇಲೆ ಅತ್ತೆ, ಮಾವ, ಪತಿಯಿಂದ ಹಲ್ಲೆ ನಡೆದಿದ್ದು ಭಯದಿಂದ ತವರು ಮನೆಗೆ ಜ್ಯೋತಿ ಹೋಗಿದ್ದಾಳೆ. ಎರಡನೇ ಮಗುವಿನ ಜನನ ಆಗಿ 4 ದಿನದ ಬಳಿಕ ಮತ್ತೆ ಬೆಂಗಳೂರಿನಲ್ಲಿರುವ ಪತಿ ಮನೆಗೆ ಬಂದಾಗ ಮಾವ ರಾಮಪ್ರಸಾದ್, ಅತ್ತೆ ರಾಣಿ , ಪತಿ ಅನುರಾಗ್ ಹಲ್ಲೆ ನಡೆಸಿ ಮನೆಯಿಂದ ಹೊರಗಟ್ಟಿದ್ದಾರೆ.
ಸದ್ಯ ಈ ಬಗ್ಗೆ ದಕ್ಷಿಣ ವಿಭಾಗದ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

