ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಉತ್ತಮ ಭಾಷಣಗಾರ. ಆದರೆ ಅವರು ತಮ್ಮ ಅವಧಿಯಲ್ಲಿ ಮೊದಲ ಬಾರಿಗೆ ಓದಿಕೊಂಡು ಭಾಷಣ ಮಾಡಿದ್ದರು. ಓದಿಕೊಂಡು ಭಾಷಣ ಮಾಡಲು ಕಾರಣವಾಗಿದ್ದು ಸುಷ್ಮಾ ಸ್ವರಾಜ್ ಅವರ ಖಡಕ್ ನಿಲುವು.
ಹೌದು, ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ 2014 ಸೆಪ್ಟೆಂಬರ್ ನಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನದಲ್ಲಿ ಭಾಷಣ ಮಾಡಿದ್ದರು. ಎಂದಿನಂತೆ ಮೋದಿ ಭಾಷಣ ಮಾಡದೇ ಓದಿಕೊಂಡು ಭಾಷಣ ಮಾಡಿದ್ದರು. ನಾನು ಯಾಕೆ ಓದಿಕೊಂಡು ಭಾಷಣ ಮಾಡಿದ್ದೆ ಎನ್ನುವುದನ್ನು ಮೋದಿ ಅವರು ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರ ಜೊತೆಗಿನ ಸಂದರ್ಶನದಲ್ಲಿ ತಿಳಿಸಿದ್ದರು.
Advertisement
Advertisement
ಆ ಘಟನೆಯನ್ನು ಮೋದಿ ಮೆಲುಕು ಹಾಕಿದ್ದು ಹೀಗೆ:
ನಾನು ಭಾಷಣ ಮಾಡಬಲ್ಲೆ ಎನ್ನುವ ಅತಿಯಾದ ವಿಶ್ವಾಸವನ್ನು ಹೊಂದಿದ್ದೆ. ಇದು ನನ್ನ ಸಮಸ್ಯೆಯೂ ಹೌದು. ನನ್ನ ಭಾಷಣಕ್ಕೆ ನಾನು ಯೋಚನೆ ಮಾಡಿ ಸಿದ್ಧಗೊಂಡಿದ್ದೆ. ನಾನು ವಿಶ್ವಸಂಸ್ಥೆಗೆ ಭೇಟಿ ನೀಡುವ ಮೊದಲೇ ಅಲ್ಲಿ ಸುಷ್ಮಾ ಸ್ವರಾಜ್ ಅವರು ಸಚಿವಾಲಯದ ಅಧಿಕಾರಿಗಳ ಜೊತೆ ಚರ್ಚೆ ನಡೆಸುತ್ತಿದ್ದರು. ಈ ವೇಳೆ ನಾನು ಅಲ್ಲಿ ಅವರನ್ನು ಭೇಟಿಯಾದೆ.
Advertisement
ಮಾತುಕತೆಯ ವೇಳೆ ಸುಷ್ಮಾ ಸ್ವರಾಜ್ ನನ್ನ ಭಾಷಣದ ವಿಚಾರದ ಬಗ್ಗೆ ಕೇಳಿದರು. ಅದಕ್ಕೆ ನಾನು ಮ್ಯಾನೇಜ್ ಮಾಡುತ್ತೇನೆ ಎಂದು ಉತ್ತರಿಸಿದೆ. ಈ ವೇಳೆ ಅವರು ಕಾರ್ಯಕ್ರಮದಲ್ಲಿ ಮಾತನಾಡಿದಂತೆ ವಿಶ್ವಸಂಸ್ಥೆಯಲ್ಲಿ ಭಾಷಣ ಮಾಡಲು ಸಾಧ್ಯವಿಲ್ಲ. ಬರೆದಿದ್ದನ್ನು ಓದಿ ಭಾಷಣ ಮಾಡಬೇಕೆಂದು ಸೂಚಿಸಿದರು.
Advertisement
ಓದಿ ಭಾಷಣ ಮಾಡುವುದು ನನಗೆ ಇಷ್ಟ ಇಲ್ಲದ ಕಾರಣ ನಮ್ಮಿಬ್ಬರ ಮಧ್ಯೆ ಸುಮಾರು 30 ನಿಮಿಷಗಳ ಆರೋಗ್ಯಕರ ಚರ್ಚೆ ನಡೆಯಿತು. ಆದರೂ ಸುಷ್ಮಾ ಸ್ವರಾಜ್ ಯಾವುದೇ ಕಾರಣಕ್ಕೂ ತಮ್ಮ ನಿಲುವಿನಲ್ಲಿ ಬದಲಾಗಲಿಲ್ಲ. ಅಷ್ಟೇ ಅಲ್ಲದೇ, ನಿಮಗೆ ಇದು ಇಷ್ಟವಾಗದೇ ಇರಬಹುದು. ಆದರೂ ನೀವು ಒಪ್ಪಿಕೊಳ್ಳಲೇಬೇಕು ಎಂದು ಪಟ್ಟು ಹಿಡಿದರು. ಕೊನೆಗೆ ನಾನು ಏನು ಭಾಷಣ ಮಾಡಬೇಕು ಎಂದು ಯೋಚಿಸಿದ್ದೇನೋ ಆ ಎಲ್ಲ ವಿಚಾರಗಳನ್ನು ಅವರಲ್ಲಿ ತಿಳಿಸಿದೆ. ನಂತರ ನನ್ನ ಭಾಷಣ ಸಿದ್ಧಗೊಂಡಿತು. ಬರೆದ ಭಾಷಣವನ್ನು ವಿಶ್ವಸಂಸ್ಥೆಯಲ್ಲಿ ಓದಲು ನನಗೆ ಬಹಳ ಕಷ್ಟವಾಯಿತು. ಯಾಕೆಂದರೆ ಈ ಹಿಂದೆ ನಾನು ಎಲ್ಲಿಯೂ ಬರೆದ ಭಾಷಣವನ್ನು ಓದಿರಲಿಲ್ಲ.
प्रधानमंत्री जी @narendramodi – 2014 की बात आपको जस की तस याद रही और अक्षय कुमार जी को इंटरव्यू देते समय आपने उसका उल्लेख किया. यह आपका बड़प्पन है. मैं हृदय से आपकी आभारी हूँ. pic.twitter.com/P8TRcVksJU
— Sushma Swaraj (@SushmaSwaraj) April 24, 2019
ಸುಷ್ಮಾ ಸ್ವರಾಜ್ ಕೆಲಸದಲ್ಲಿ ರಾಜಿ ಆಗುತ್ತಿರಲಿಲ್ಲ. ವ್ಯಕ್ತಿ ಎಷ್ಟೇ ದೊಡ್ಡವರಾಗಿದ್ದರೂ ನೇರವಾಗಿ ಹೇಳುತ್ತಿದ್ದರು ಎನ್ನುವ ವಿಚಾರ ಈ ಘಟನೆಯಿಂದ ತಿಳಿಯುತ್ತದೆ. ಅಕ್ಷಯ್ ಕುಮಾರ್ ಜೊತೆಗಿನ ಸಂದರ್ಶನದಲ್ಲಿ ಮೋದಿ ತನ್ನ ಬಗ್ಗೆ ಹೇಳಿದ ಮಾತನ್ನು ಸುಷ್ಮಾ ಸ್ವರಾಜ್ ಟ್ವೀಟ್ ಮಾಡಿ ಕೃತಜ್ಞತೆ ಸಲ್ಲಿಸಿದ್ದರು.