Connect with us

Latest

ಸುಷ್ಮಾ ಸ್ವರಾಜ್ ಪ್ರೇಮ್ ಕಹಾನಿ – ಸ್ನೇಹಿತರು ಸತಿ, ಪತಿಗಳಾದ ಕಥೆ ಓದಿ

Published

on

ನವದೆಹಲಿ: ದೇಶದ ಪ್ರಸಿದ್ಧ ವಕೀಲರಲ್ಲಿ ಒಬ್ಬರಾದ ಸ್ವರಾಜ್ ಕೌಶಲ್, ಸುಷ್ಮಾ ಸ್ವರಾಜ್ ಅವರ ಪತಿ ಎಂಬುದು ಎಲ್ಲರಿಗೂ ತಿಳಿದಿದೆ. ಆದರೆ ಅವರದ್ದು ಪ್ರೇಮ ವಿವಾಹ ಎಂಬ ವಿಚಾರ ಹಲವರಿಗೆ ತಿಳಿದಿಲ್ಲ.

ಹೌದು, ಸುಷ್ಮಾ ಅವರು ಚಂಡೀಗಢದಲ್ಲಿ ಕಾನೂನು ಪದವಿ ಓದುತ್ತಿದ್ದಾಗ ಸ್ವರಾಜ್ ಕೌಶಲ್ ಅವರ ಪರಿಚಯವಾಗಿ ಇಬ್ಬರ ಸ್ನೇಹ ಬೆಳೆದಿತ್ತು. ಆರಂಭಿಕ ದಿನಗಳಲ್ಲಿ, ಇಬ್ಬರೂ ಒಳ್ಳೆಯ ಸ್ನೇಹಿತರಾಗಿದ್ದರು. ಇಬ್ಬರ ಮಧ್ಯೆ ಪ್ರೀತಿ ಇರಲಿಲ್ಲ. ಆದರೆ ಸಮಯ ಕಳೆಯುತ್ತಿದ್ದಂತೆ ಸ್ನೇಹ ಪ್ರೀತಿಗೆ ತಿರುಗಿದೆ. ಕಾನೂನು ಅಧ್ಯಯನ ಮುಗಿದ ನಂತರ ಪ್ರಾಕ್ಟೀಸ್‍ಗಾಗಿ ಇಬ್ಬರೂ ದೆಹಲಿಗೆ ಬಂದರು. ಈ ಸಮಯದಲ್ಲಿ ಇಬ್ಬರ ಸ್ನೇಹ ಪ್ರೀತಿಯಾಗಿ ಬದಲಾಯಿತು.

ಇಬ್ಬರ ಹಿನ್ನೆಲೆ ಬೇರೆ ಬೇರೆಯಾಗಿದ್ದರು ಅವರ ನಡುವಿನ ಪ್ರೀತಿ ಅವರನ್ನು ಒಂದು ಮಾಡಿತು. ಸುಷ್ಮಾ ಅವರ ತಂದೆ ಹರ್ದೇವ್ ಶರ್ಮಾ ಅವರು ಆರ್‍ಎಸ್‍ಎಸ್‍ನಲ್ಲಿದ್ದ ಕಾರಣಕ್ಕೆ ಅವರು ಮೊದಲು ಮಗಳ ಪ್ರೀತಿಗೆ ಒಪ್ಪಿರಲಿಲ್ಲ. ಆದರೆ ಮಗಳ ಮೇಲಿದ್ದ ಪ್ರೀತಿಯಿಂದ ಕೊನೆಗೆ ಸುಷ್ಮಾ, ಕೌಶಲ್ ಪ್ರೇಮಕ್ಕೆ ಸಮ್ಮತಿಸಿ, ಮದುವೆಗೆ ಒಪ್ಪಿದರು. ಸಾಕಷ್ಟು ವಿರೋಧಗಳನ್ನು ಎದುರಿಸಿದ ನಂತರ 1975ರ ಜುಲೈ 13ರಂದು ಸುಷ್ಮಾ ಹಾಗೂ ಕೌಶಲ್ ಅವರ ವಿವಾಹವಾಯಿತು. ಬನ್ಸೂರಿ ಸ್ವರಾಜ್ ಸುಷ್ಮಾ ಹಾಗೂ ಕೌಶಲ್ ದಂಪತಿಯ ಮಗಳ ಹೆಸರು. ಮಗಳು ಕೂಡ ಹೆತ್ತವರಂತೆ ಕಾನೂನು ಪದವಿ ಪಡೆದಿದ್ದಾರೆ.

1975ರಲ್ಲಿ ತುರ್ತು ಪರಿಸ್ಥಿತಿ ಇದ್ದಾಗ ಜಾರ್ಜ್ ಫರ್ನಾಂಡೀಸ್ ಕಾನೂನು ತಂಡದಲ್ಲಿ ಸದಸ್ಯರಾಗಿ ಕೌಶಲ್ ಹಾಗೂ ಸುಷ್ಮಾ ಅವರು ಕಾರ್ಯನಿರ್ವಹಿಸಿದ್ದರು. ಸುಷ್ಮಾ ಅವರ ಪತಿ ಸ್ವರಾಜ್ ಕೌಶಲ್ ಸಹ 1999-2004ರವರೆಗೆ ಸಂಸದರಾಗಿದ್ದರು. ಕೇವಲ 34 ವರ್ಷ ವಯಸ್ಸಿನಲ್ಲಿ ಅವರನ್ನು ದೇಶದ ಅತ್ಯಂತ ಕಿರಿಯ ಅಡ್ವೊಕೇಟ್ ಜನರಲ್ ಆಗಿ ನೇಮಿಸಲಾಯಿತು. ಬಳಿಕ 37 ನೇ ವಯಸ್ಸಿನಲ್ಲಿ ಮಿಜೋರಾಂನ ರಾಜ್ಯಪಾಲರಾದರು. 1990 ರಿಂದ 1993 ರವರೆಗೆ ಮಿಜೋರಾಂನ ರಾಜ್ಯಪಾಲರಾಗಿ ಸೇವೆಸಲ್ಲಿಸಿದ್ದಾರೆ. ಜೊತೆಗೆ ಪತ್ನಿಗೂ ರಾಜಕೀಯದಲ್ಲಿ ಸಕ್ರಿಯವಾಗಿ ಭಾಗಿಯಾಗಲು ಪ್ರತ್ಸಾಹಿಸಿ, ಅದ್ಭುತ ಮಹಿಳಾ ರಾಜಕಾರಣಿಯಾಗಿ ಬೆಳೆಯಲು ಬೆಂಬಲಿಸಿದರು.

ದೇಶದ ರಾಜಕೀಯದಲ್ಲಿ ಸಾಕಷ್ಟು ಕೀರ್ತಿ, ಹೆಸರು ಗಳಿಸಿರುವ ಸುಷ್ಮಾ ಸ್ವರಾಜ್ ಅವರು ತಮ್ಮ ರಾಜಕೀಯ ಜೀವನದ ಜೊತೆಗೆ ಅವರ ವೈಯಕ್ತಿಕ ಜೀವನದ ಎಲ್ಲ ಜವಾಬ್ದಾರಿಗಳನ್ನು ನಿಭಾಯಿಸುತ್ತಿದ್ದರು. ರಾಜಕೀಯದಲ್ಲಿ ದೊಡ್ಡ ಸ್ಥಾನವನ್ನು ಹೊಂದಿದ್ದರೂ ಕೂಡ ಅವರು ತಮ್ಮ ವೈಯಕ್ತಿಕ ಜೀವನವನ್ನು ಬಹಳ ಖಾಸಗಿಯಾಗಿ ಇಟ್ಟುಕೊಂಡಿದ್ದರು. ಪ್ರತಿ ಹಬ್ಬದಲ್ಲೂ ತನ್ನ ಕುಟುಂಬದೊಂದಿಗೆ ಸಂಪ್ರದಾಯವಾಗಿ ಹಬ್ಬವನ್ನು ಆಚರಿಸುತ್ತಿದ್ದರು.

ಕಳೆದ ಜುಲೈ 13ಕ್ಕೆ ಸುಷ್ಮಾ ಹಾಗೂ ಕೌಶಲ್ ಅವರು ತಮ್ಮ 44ನೇ ವರ್ಷದ ಮದುವೆ ವಾರ್ಷಿಕೋತ್ಸವವನ್ನು ಖುಷಿಯಿಂದ ಆಚರಿಸಿಕೊಂಡಿದ್ದರು. ಆದರೆ ಈ ಖುಷಿ ಮಾಸುವ ಮೊದಲೇ ಸುಷ್ಮಾ ಅವರು ವಿಧಿವಶರಾಗಿದ್ದಾರೆ.

Click to comment

Leave a Reply

Your email address will not be published. Required fields are marked *