ಬೆಂಗಳೂರು: ಫಸಲ್ ಭೀಮಾ ಯೋಜನೆಯನ್ನು ಇನ್ನಷ್ಟು ರೈತಸ್ನೇಹಿಯನ್ನಾಗಿ ಮಾಡಲು ಬೆಳೆ ಹಾನಿಗೊಳಗಾದ ಪ್ರತಿ ರೈತರ ಜಮೀನಿನ ಸರ್ವೆನಂಬರ್ ಆಧಾರದಲ್ಲಿ ಉಪಗ್ರಹದ ಮೂಲಕ ಬೆಳೆ ಹಾನಿ ಸಮೀಕ್ಷೆ ನಡೆಸುವಂತೆ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬವರಾಜ ಬೊಮ್ಮಾಯಿ (Basavaraj Bommai) ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವ ಶಿವರಾಜ್ ಸಿಂಗ್ ಚೌಹಾಣ್ (Shivraj Singh Chouhan) ಅವರಿಗೆ ಮನವಿ ಮಾಡಿದ್ದಾರೆ.
ಪತ್ರದಲ್ಲಿ ಏನಿದೆ?
ಫಸಲ್ ಭೀಮಾ ಯೋಜನೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ (Narendra Modi) ಮಹತ್ವಾಕಾಂಕ್ಷೆಯ ರೈತ (Farmer) ಪರವಾದ ಯೋಜನೆಯಾಗಿದ್ದು, ಈ ಯೋಜನೆಯನ್ನು ಇನ್ನಷ್ಟು ರೈತ ಪರ ಹಾಗೂ ಪಾರದರ್ಶಕವಾಗಿ ಜಾರಿ ಮಾಡುವುದರಿಂದ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ. ಇದನ್ನೂ ಓದಿ: ಮಾರುಕಟ್ಟೆಯಲ್ಲಿ ನವಿಲುಕೋಸಿಗೆ ಸರಿಯಾದ ಬೆಲೆ ಸಿಗದೇ ಬೆಳೆ ನಾಶ ಮಾಡಿದ ರೈತ
ಬರ, ಪ್ರವಾಹದಂತಹ ಅನೇಕ ಕಾರಣಗಳಿಂದ ಬೆಳೆ ಹಾನಿಗೊಳಗಾದಾಗ ಗ್ರಾಮ ಪಂಚಾಯತಿ ಮಟ್ಟದಲ್ಲಿ ಬೆಳೆ ಹಾನಿ ಸಮೀಕ್ಷೆ ನಡೆಸಲಾಗುತ್ತಿದೆ. ಅದರ ಬದಲು ಪ್ರತಿ ರೈತರ ಜಮೀನಿನ ಸರ್ವೆ ನಂಬರ್ ಆಧಾರದಲ್ಲಿ ಬೆಳೆ ಹಾನಿ ಸಮೀಕ್ಷೆ ನಡೆಸಿದರೆ ನಿಜವಾಗಲೂ ಬೆಳೆಹಾನಿಗೊಳಗಾದ ಎಲ್ಲ ರೈತರೂ ವಿಮಾ ಪರಿಹಾರ ಪಡೆಯಲು ಅನುಕೂಲವಾಗುತ್ತದೆ. ಅಲ್ಲದೇ ಅನಗತ್ಯವಾಗಿ ವಿಮಾ ಪರಿಹಾರ ಪಡೆಯುವುದನ್ನು ತಪ್ಪಿಸಿದಂತಾಗುತ್ತದೆ.
ಇನ್ನೊಂದು ಮಹತ್ವದ ವಿಷಯವೆಂದರೆ ಬೆಳೆ ಹಾನಿಯ ಪ್ರಮಾಣವನ್ನು ಹಿಂದಿನ ಏಳು ವರ್ಷಗಳ ಅಂದಾಜು ಪಡೆಯುವುದರಿಂದ ಸರಿಯಾದ ಹಾನಿಯ ಪ್ರಮಾಣವನ್ನು ತಿಳಿದುಕೊಳ್ಳಲು ಸಾಧ್ಯವಾಗುವುದಿಲ್ಲ. ಮಳೆಯ ಅನಿಶ್ಚಿತತೆ ಹಾಗೂ ಹವಾಮಾನ ವೈಪರಿತ್ಯರಿಂದ ಏಳು ವರ್ಷಗಳ ಅವಧಿಯಲ್ಲಿ ಬೆಳೆ ಹಾನಿಯ ಬಗ್ಗೆ ನಿಖರವಾದ ಮಾಹಿತಿ ಪಡೆಯಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಬೆಳೆ ಹಾನಿಯ ಬಗ್ಗೆ ಪ್ರಸ್ತುತ ಹಂಗಾಮು ವರ್ಷ ಹಾಗೂ ಹಿಂದಿನ ವರ್ಷ ಸೇರಿ ಎರಡು ವರ್ಷಗಳನ್ನು ಪರಿಗಣಿಸಬೇಕು. ಈ ಎರಡೂ ಸುಧಾರಣೆಗಳನ್ನು ಜಾರಿಗೆ ತರುವುದರಿಂದ ರೈತರಿಗೆ ಹೆಚ್ಚು ಅನುಕೂಲವಾಗಲಿದೆ. ಅಲ್ಲದೇ ಈಗಾಗಲೇ ಪ್ರೀಮಿಯಂ ಮೊತ್ತ ನಿಗದಿಯಾಗಿರುವುದರಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಯಾವುದೇ ಹೆಚ್ಚಿನ ಆರ್ಥಿಕ ಹೊರೆಯಾಗುವುದಿಲ್ಲ.
ಈ ಎರಡು ಸುಧಾರಣೆಗಳನ್ನು ತಂದರೆ ಪ್ರಧಾನಿ ನರೇಂದ್ರ ಮೋದಿ ಹಾಗೂ ನಿಮ್ಮ ಉದ್ದೇಶದಂತೆ ಫಸಲ್ ಬಿಮಾ ಯೋಜನೆ ರೈತರ ಆಪದ್ಭಾಂದವ ಆಗಲಿದೆ. ದಯವಿಟ್ಟು ಈ ವಿಷಯದಲ್ಲಿ ತಾವು ಅಗತ್ಯ ಕ್ರಮ ಕೈಗೊಳ್ಳಬೇಕು ಹಾಗೂ ತಮ್ಮ ಅಧ್ಯಕ್ಷತೆಯಲ್ಲಿ ಈ ವಿಷಯದ ಕುರಿತು ಚರ್ಚಿಸಲು ನಾನು ಆಸಕ್ತನಿದ್ದೇನೆ ಎಂದು ಬೊಮ್ಮಾಯಿ ತಿಳಿಸಿದ್ದಾರೆ.