– ಮೂರು ಹಂತಗಳಲ್ಲಿ ನಡೆಯಲಿದೆ ಸಮೀಕ್ಷೆ
– 100 ಕೋಟಿ ರೂ. ವೆಚ್ಚ, 65 ಸಾವಿರ ಶಿಕ್ಷಕರು ಭಾಗಿ
ಬೆಂಗಳೂರು: ಒಳ ಮೀಸಲಾತಿ (Internal Reservation) ಕಲ್ಪಿಸುವ ಸಂಬಂಧ ಇಂದಿನಿಂದ ಮೂರು ಹಂತಗಳಲ್ಲಿ ಪರಿಶಿಷ್ಠ ಜಾತಿಗಳ (Scheduled Castes) ಸಮೀಕ್ಷೆ ಆರಂಭಗೊಂಡಿದ್ದು, ಎರಡು ತಿಂಗಳಲ್ಲಿ ಒಳ ಮೀಸಲಾತಿ ಜಾರಿಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಹೇಳಿದರು.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿಎಂ, ಮೂರು ಹಂತಗಳ ಮೂಲಕ ನಿಖರ ಮಾಹಿತಿ ಪಡೆದ ಮೇಲೆ 60 ದಿನಗಳಲ್ಲಿ ವರದಿ ಕೊಡಲು ಹೇಳಿದ್ದೇವೆ. ಸಮೀಕ್ಷೆ ಕೈಗೊಳ್ಳುವವರಿಗೆ ಮೊಬೈಲ್ ಅಪ್ಲಿಕೇಶನ್ ವ್ಯವಸ್ಥೆ ಮಾಡಲಾಗಿದೆ. ಬೆಳಗ್ಗೆ 6:30 ರಿಂದ ಸಂಜೆ 6:30ರ ಒಳಗೆ ಆಪ್ ಓಪನ್ ಇರಲಿದೆ. ಮನೆ ಮನೆಗೆ ಹೋದಾಗ ಮೂಲ ಜಾತಿ ಯಾವುದು ಅಂತ ಹೇಳಬೇಕು. ಮನೆ ಮನೆಗೆ ಹೋದಾಗ ಮಾಹಿತಿ ಕೊಡಲು ಸಾಧ್ಯವಾದೇ ಇದ್ದಾಗ ಸ್ವಯಂ ಪ್ರೇರಿತವಾಗಿ ಹೇಳಲು ಅವರಿಗೂ ಅವಕಾಶ ಇದೆ. ಶಿಬಿರಗಳಲ್ಲಿ ಅಥವಾ ಅನ್ ಲೈನ್ ನಲ್ಲಿ ಮಾಹಿತಿ ಕೊಡಬಹುದು. ವೈಜ್ಞಾನಿಕವಾಗಿ, ಪಾರದರ್ಶಕವಾಗಿ ಸಮೀಕ್ಷೆ ಇರಬೇಕು ಎಂದು ಹೇಳಿದರು. ಇದನ್ನೂ ಓದಿ: ಪಾಕಿಸ್ತಾನದ ಬುಡಕ್ಕೆ `ಜಲ’ಬಾಂಬ್ ಹಾಕಿದ ಭಾರತ!
ವಿಶೇಷವಾಗಿ ಪರಿಶಿಷ್ಟ ಜಾತಿ ಅವರಿಗೆ ಮಾಡುತ್ತಿರುವ ಸಮೀಕ್ಷೆ ಇದು. ಇದಾದ ನಂತರ ನ್ಯಾ.ನಾಗಮೋಹನ್ ದಾಸ್ ನೇತೃತ್ವದ ಸಮಿತಿ ಶಿಫಾರಸು ಮಾಡಲಿದೆ. ನಮ್ಮ ಪ್ರಣಾಳಿಕೆಯಲ್ಲಿ ಒಳ ಮೀಸಲಾತಿ ನೀಡುವ ಬಗ್ಗೆ ಘೋಷಣೆ ಮಾಡಿದ್ದೆವು. ನಾಗಮೋಹನ್ ದಾಸ್ ಅವರು ನಿಖರ ಅಂಕಿಅಂಶಗಳು ಬೇಕಾಗುತ್ತದೆ ಅಂತ ಹೇಳಿದ್ದರು. ಸುಪ್ರೀಂಕೋರ್ಟ್ ಕೂಡಾ ನಿಖರ ಅಂಕಿಅಂಶಗಳು ಬೇಕು ಅಂತ ಹೇಳಿದೆ. ಇದೆಲ್ಲದರ ಹಿನ್ನೆಲೆಯಲ್ಲಿ ಕರಾರುವಾಕ್ಕಾಗಿ ಯಾರು ಯಾವ ಸಮುದಾಯಕ್ಕೆ ಸೇರಿದ್ದಾರೆ ಅಂತ ಅಂಕಿಅಂಶಗಳು ಸಿಗಲು ಈ ಸಮೀಕ್ಷೆ ಮಾಡುತ್ತಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ಸುಹಾಸ್ ಶೆಟ್ಟಿ ಹತ್ಯೆಗೂ ಮುನ್ನ ಭರ್ಜರಿ ಪಾರ್ಟಿ ಮಾಡಿದ್ದ ಆರೋಪಿಗಳು!
ನಾವು ಒಳ ಮೀಸಲಾತಿ ಮಾಡಲು ಬದ್ದರಾಗಿ ಇದ್ದೇವೆ. ಪರಿಶಿಷ್ಟ ಜಾತಿಯವರು ಸಮೀಕ್ಷೆಯಲ್ಲಿ ಭಾಗವಹಿಸಿ ಮನೆ ಮನೆ ಬಂದಾಗ ಮಾಹಿತಿ ಕೊಡಿ. ಇಲ್ಲವೇ ಶಿಬಿರ ಅಥವಾ ಆನ್ ಲೈನ್ ನಲ್ಲಿ ಮಾಹಿತಿಯನ್ನು ನೀಡಿ. ಎಲ್ಲಾ ಸಂಘಟನೆಗಳು ಸಮೀಕ್ಷೆಗೆ ಸಹಕಾರ ಕೊಡಬೇಕು. ಯಾರು ಹಿಂಜರಿಯದೇ ಮಾಹಿತಿ ಕೊಡಬೇಕು ಎಂದು ಮನವಿ ಮಾಡಿದರು.
ಸುಮಾರು 65 ಸಾವಿರ ಶಿಕ್ಷಕರು ಸಮೀಕ್ಷೆ ಮಾಡಲಿದ್ದು ಜಿಲ್ಲಾಧಿಕಾರಿಗಳು ಇವರನ್ನು ನೇಮಿಸಿದ್ದಾರೆ. 10-12 ಜನರಿಗೆ ಒಬ್ಬರು ಮೇಲ್ವಿಚಾರಕರು ಇರುತ್ತಾರೆ. ಒಟ್ಟು 100 ಕೋಟಿ ರೂ. ವೆಚ್ಚದಲ್ಲಿಈ ಸಮೀಕ್ಷೆ ನಡೆಯಲಿದೆ.
ಯಾವ ಹಂತದಲ್ಲಿ ಏನು?
ಮೊದಲ ಹಂತ – ಮೇ 5 ರಿಂದ 17ರವರೆಗೆ ಮನೆ ಮನೆ ಸಮೀಕ್ಷೆ.
ಎರಡನೇ ಹಂತ – ಮೇ 19 ರಿಂದ 21 ವರೆಗೆ ಎರಡನೇ ಹಂತದಲ್ಲಿ ವಿಶೇಷ ಶಿಬಿರಗಳಲ್ಲಿ ಸಮೀಕ್ಷೆ.
ಮೂರನೇ ಹಂತ – ಮೇ 19 ರಿಂದ 23ವರೆಗೆ ಆನ್‌ಲೈನ್ ಮೂಲಕ ಸ್ವಯಂ ಘೋಷಣೆ ಮಾಡಬಹುದು.
ಸಮೀಕ್ಷೆ ಯಾಕೆ?
ಪರಿಶಿಷ್ಠ ಜಾತಿಗಳಲ್ಲಿ ಸದ್ಯ 17 % ಮೀಸಲಾತಿ ನಿಗದಿಯಾಗಿದ್ದು ನಿಖರವಾಗಿ ಯಾರ ಸಂಖ್ಯೆ ಎಷ್ಟಿದೆ ಎನ್ನುವುದು 2011ರ ಗಣತಿಯಲ್ಲಿ ಸರಿಯಾಗಿ ತಿಳಿದು ಬಂದಿಲ್ಲ. 101 ಜಾತಿಯಲ್ಲಿ ಒಳ ಮೀಸಲಾತಿ ಕೊಡಲು ನಿರ್ದಿಷ್ಟವಾದ ಅಂಕಿ ಅಂಶಗಳು ಬೇಕು. ಈ ಕಾರಣಕ್ಕೆ ಈಗ ಸಮೀಕ್ಷೆಯನ್ನು ಕೈಗೊಳ್ಳಲಾಗಿದೆ.