ನವದೆಹಲಿ: ಉಗ್ರರ ವಿರುದ್ಧ ಹೋರಾಡಬೇಕಾದರೆ ನಮಗೆ ಸಾಕ್ಷ್ಯ ನೀಡಿ. ಪ್ರಬಲ ಸಾಕ್ಷ್ಯವನ್ನು ಕೊಟ್ಟರೆ ನಾವು ಉಗ್ರರನ್ನು ಮಟ್ಟ ಹಾಕುತ್ತೇವೆ ಎಂದು ಎಂದಿದ್ದ ಪಾಕಿಸ್ತಾನಕ್ಕೆ ಭಾರತ ಸಾಕ್ಷ್ಯ ಸಮೇತ ಉತ್ತರವನ್ನು ನೀಡಿದೆ.
ಹೌದು. ಇಲ್ಲಿಯವರೆಗೆ ಭಾರತ ಮಾತಿನ ಮೂಲಕ ಪ್ರತಿಕ್ರಿಯೆ ನೀಡುತಿತ್ತು. ಅಷ್ಟೇ ಅಲ್ಲದೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕ್ ಮರ್ಯಾದೆಯನ್ನು ಕಳೆಯುವ ಪ್ರಯತ್ನವನ್ನು ನಡೆಸುತಿತ್ತು. ಉರಿ ಮತ್ತು ಪುಲ್ವಾಮಾ ದಾಳಿ ಬಳಿಕ ಭಾರತ ಸರ್ಜಿಕಲ್ ಸ್ಟ್ರೈಕ್ ಮಾಡಿ ನಮ್ಮ ಶಕ್ತಿ ಏನು ಎನ್ನುವುದನ್ನು ತೋರಿಸಿಕೊಟ್ಟಿದೆ. ಈ ವಿಚಾರ ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಲಿದೆ ಎನ್ನುವುದನ್ನು ಮೊದಲೇ ಅರಿತ ಭಾರತ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ ವಾಯುದಾಳಿ ನಡೆಸಿ ಪಾಕಿಸ್ತಾನಕ್ಕೆ ಶಾಕ್ ನೀಡಿದೆ.
Advertisement
Advertisement
ಉಗ್ರರು ಒಳ ನುಸುಳುವ ಸಮಯದಲ್ಲಿ ಪಾಕಿಸ್ತಾನ ಗಡಿ ನಿಯಂತ್ರಣ ರೇಖೆಯ ಬಳಿ ಗುಂಡಿನ ದಾಳಿ ಆರಂಭಿಸುತ್ತದೆ. ಈ ವೇಳೆ ಭಾರತ ಸಹ ಪ್ರತಿದಾಳಿ ನಡೆಸುತ್ತದೆ. ಭಾರತ ಸೈನಿಕರ ಗಮನವನ್ನು ಸೆಳೆದು ಪಾಕಿಸ್ತಾನ ಉಗ್ರರು ಕಾಶ್ಮೀರ ಪ್ರವೇಶಿಸಲು ಸಹಾಯ ಮಾಡುತ್ತಿರುತ್ತದೆ. ಈ ವಿಚಾರ ಭಾರತಕ್ಕೆ ಗೊತ್ತಿದ್ದರೂ ದಾಳಿ ನಡೆಸಲು ಧೈರ್ಯ ತೋರಿರಲಿಲ್ಲ. ಆದರೆ ಪುಲ್ವಾಮಾದಲ್ಲಿ ಸಿಆರ್‍ಪಿಎಫ್ ಯೋಧರ ಮೇಲೆ ದಾಳಿ ಬಳಿಕ ಭಾರತೀಯರ ಆಕ್ರೋಶದ ಕಟ್ಟೆ ಒಡೆದಿತ್ತು. ಯಾವ ರೀತಿ ದಾಳಿ ನಡೆಸಿ ಉಗ್ರರನ್ನು ಹೆಡೆಮುರಿ ಕಟ್ಟಿ ಹಾಕುತ್ತಿರಿ ಎಂದು ಜನ ಕೇಂದ್ರ ಸರ್ಕಾರವನ್ನು ಪ್ರಶ್ನಿಸುತ್ತಿದ್ದರು. ಜನರ ಆಕ್ರೋಶ ಕಟ್ಟೆ ಒಡೆಯುತ್ತಿದ್ದಂತೆ ಸರ್ಕಾರ ಉಗ್ರರನ್ನು ಹೀಗೆಯೇ ಬಿಟ್ಟರೆ ಆಗುವುದಿಲ್ಲ ಎಂದು ಅರಿತ ಗಡಿಯನ್ನು ದಾಟಿ ದಾಳಿ ನಡೆಸುವುದೇ ಸೂಕ್ತ ಎನ್ನುವ ನಿರ್ಧಾರಕ್ಕೆ ಬಂದು ಇಂದು ಮುಹೂರ್ತ ಫಿಕ್ಸ್ ಮಾಡಿತ್ತು. ಈ ಪ್ಲಾನ್ ಯಶಸ್ವಿಯಾಗಿದ್ದು ಭಾರತ ತನ್ನ ಗಡಿಯನ್ನು ದಾಟಿ ದಾಳಿ ನಡೆಸಲು ತಯಾರಾಗುತ್ತಿದ್ದ ಉಗ್ರರನ್ನು ಅವರ ನೆಲದಲ್ಲೇ ಹತ್ಯೆ ಮಾಡಿ ತನ್ನ ಪರಾಕ್ರಮವನ್ನು ತೋರಿಸಿದೆ.
Advertisement
Advertisement
ಕಾರಣ 1:
ಬಾಲ್‍ಕೋಟ್ ನಲ್ಲಿ ಜೈಶ್-ಇ-ಮೊಹಮ್ಮದ್ (ಜೆಇಎಂ) ನ ದೊಡ್ಡ ತರಬೇತಿ ಶಿಬಿರವನ್ನು ವಾಯುಸೇನೆ ಬಾಂಬ್ ದಾಳಿ ನಡೆಸಿ ಧ್ವಂಸ ಮಾಡಿದೆ. ಈ ಹಿಂದೆ ಉರಿ ಸೇನಾ ನೆಲೆಯ ಮೆಲೆ ದಾಳಿ ನಡೆದ ಬಳಿಕ ಪಾಕ್ ಆಕ್ರಮಿತ ಕಾಶ್ಮೀರ ಒಳಗಡೆ ಹೆಲಿಕಾಪ್ಟರ್ ಸಹಾಯದಿಂದ ನುಗ್ಗಿ ಭೂ ಸೇನೆಯ ಸೈನಿಕರು ಉಗ್ರರನ್ನು ಸಂಹಾರ ಮಾಡಿದ್ದರು. ಆದರೆ ಮೊದಲ ಬಾರಿಗೆ ವಾಯುಸೇನೆ ಬಾಂಬ್ ಬಳಸಿ ಸರ್ಜಿಕಲ್ ಸ್ಟ್ರೈಕ್ ನಡೆಸಿದೆ. ಮೌಲಾನಾ ಯೂಸುಫ್ ಅಝರ್ (ಅಲಿಯಾಸ್ ಉಸ್ತಾದ್ ಘೌರಿ), ಜೆಇಎಂ ಮುಖ್ಯಸ್ಥ ಮಸೂದ್ ಅಝರ್‍ನ ಸೋದರ ಸಂಬಂಧಿ ನಡೆಸುತ್ತಿದ್ದ ಬಾಲಕೋಟ್ ಅಡಗುದಾಣದ ಮೇಲೆಯೇ ದಾಳಿ ನಡೆದಿದೆ. ಮೂರು ದಾಳಿಯಲ್ಲಿ ಭಯೋತ್ಪಾದಕರು, ತರಬೇತುದಾರರು ಮತ್ತು ಹಿರಿಯ ಕಮಾಂಡರ್‍ಗಳು ಸೇರಿ ಒಟ್ಟು 350ಕ್ಕೂ ಹೆಚ್ಚು ಉಗ್ರರು ಹತ್ಯೆಯಾಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಈ ಮೂಲಕ ಭಾರತ ಪಾಕಿಸ್ತಾನ ಸೇರಿದಂತೆ ವಿಶ್ವಕ್ಕೆ ತನ್ನ ವಾಯುಸೇನೆಯ ಶಕ್ತಿಯನ್ನು ತೋರಿಸಿದೆ.
ಕಾರಣ 2 :
ಪಾಕಿಸ್ತಾನದಲ್ಲಿ ಭಯೋತ್ಪಾದನಾ ತರಬೇತಿ ಶಿಬಿರಗಳ ಮೇಲೆ ದಾಳಿ ಭಾರತೀಯ ವಾಯುಸೇನೆ ಮೊದಲ ಬಾರಿಗೆ ಗಡಿ ನಿಯಂತ್ರಣ ರೇಖೆಯನ್ನು ದಾಟಿದೆ. 1971 ರ ಇಂಡೋ-ಪಾಕ್ ಯುದ್ಧದ ಸಂದರ್ಭದಲ್ಲಿ ಇದೇ ರೀತಿಯ ದಾಳಿ ನಡೆದಿತ್ತು. 1999 ರ ಕಾರ್ಗಿಲ್ ಯುದ್ಧದ ಸಮಯದಲ್ಲೂ ವಾಯುಸೇನೆಯ ವಿಮಾನ ಬಳಸಿ ದಾಳಿ ಮಾಡಲಾಗಿತ್ತು. ಆದರೆ ಈ ವೇಳೆ ಯಾವುದೇ ಕಾರಣಕ್ಕೂ ಗಡಿ ನಿಯಂತ್ರಣ ರೇಖೆಯನ್ನು ದಾಟದಂತೆ ಸೂಚನೆ ಬಂದಿತ್ತು. ಆದರೆ ಈ ಬಾರಿ ಸೇನೆಗೆ ಸರ್ಕಾರ ಸಂಪೂರ್ಣ ಅನುಮತಿ ನೀಡಿತ್ತು. ಪುಲ್ವಾಮಾ ದಾಳಿ ಬಳಿಕ ಸೇನೆಗೆ ಸಂಪೂರ್ಣ ಅಧಿಕಾರವನ್ನು ನೀಡಲಾಗಿದೆ ಎಂದು ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದರು. ಭಾರತ ಗಡಿನಿಯಂತ್ರಣ ರೇಖೆಯನ್ನು ದಾಟಿ ನಮ್ಮ ನೆಲದ ಮೇಲೆ ಬಂದು ದಾಳಿ ಮಾಡಿದೆ ಎನ್ನುವುದನ್ನು ಪಾಕಿಸ್ತಾನವೇ ಒಪ್ಪಿಕೊಂಡಿದೆ.
ಕಾರಣ 3 :
ಭಾರತ ಹೇಗೆ ಬಜೆಟ್ ನಲ್ಲಿ ಮಿಲಿಟರಿ ಶಕ್ತಿ ಹೆಚ್ಚಿನ ಹಣವನ್ನು ಮೀಸಲಿಡುತ್ತದೋ ಅದೇ ರೀತಿಯಾಗಿ ಪಾಕಿಸ್ತಾನ ಸಹ ಬಜೆಟ್‍ನಲ್ಲಿ ಹಣವನ್ನು ಮೀಸಲಿಡುತ್ತಿದೆ. ಅತ್ಯಾಧುನಿಕ ತಂತ್ರಜ್ಞಾನವನ್ನು ಪಾಕಿಸ್ತಾನ ಖರೀದಿಸಿದೆ. ಪುಲ್ವಾಮಾ ದಾಳಿ ಬಳಿಕ ಭಾರತ ಪ್ರತಿದಾಳಿ ನಡೆಸಲಿದೆ ಎನ್ನುವುದನ್ನು ಅರಿತ ಪಾಕಿಸ್ತಾನ ಗಡಿಯಲ್ಲಿ ತನ್ನ ಸೇನೆಯನ್ನು ನಿಯೋಜಿಸಿತ್ತು. ಈ ನಡುವೆ ಮೋದಿ ಸೈನಿಕರ ಬಲಿದಾನವನ್ನು ವ್ಯರ್ಥವಾಗಲು ಬಿಡುವುದಿಲ್ಲ. ಹಿಂದಿನ ಎಲ್ಲ ಬಾಕಿಗಳನ್ನು ತೀರಿಸಿಯೇ ತೀರಿಸುತ್ತೇವೆ ಎಂದು ಗುಡುಗಿದ್ದರು. ಹೀಗಾಗಿ ಪಾಕಿಸ್ತಾನ ತನ್ನ ಗಡಿಯಲ್ಲಿ ಹೈ ಅಲರ್ಟ್ ಘೋಷಿಸಿತ್ತು. ಇಷ್ಟೆಲ್ಲ ಅಲರ್ಟ್ ಘೋಷಿಸಿದರೂ ಭಾರತ ಮಂಗಳವಾರ ಬೆಳಗ್ಗೆ ಪಾಕ್ ಸೈನಿಕರ ಕಣ್ಣು ತಪ್ಪಿಸಿ ಏರ್ ಸರ್ಜಿಕಲ್ ಸ್ಟ್ರೈಕ್ ಮಾಡಿ ಪ್ರಪಂಚವೇ ನಿಬ್ಬೆರಾಗುವಂತೆ ಮಾಡಿ ತನ್ನ ಶಕ್ತಿಯನ್ನು ತೋರಿಸಿದೆ.
ಭಾರತದಿಂದ ಪ್ರತೀಕಾರದ ಮಾತು ಬರುತ್ತಿದ್ದಂತೆ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್, ನಾವು ಯಾವುದೇ ದಾಳಿ ಎದುರಿಸಲು ಸಿದ್ಧ ಎಂದು ಹೇಳಿದ್ದರು. ಕಳೆದ ಶುಕ್ರವಾರ ಪಾಕಿಸ್ತಾನದ ಸೇನೆಯ ವಕ್ತಾರ ಮೇಜರ್ ಜನರಲ್ ಗಫೂರ್ ಮಾತನಾಡಿ, ಪಾಕಿಸ್ತಾನದ ಸೇನಾ ಪಡೆಗಳು ನಿಮ್ಮಿಂದ ಎಂದಿಗೂ ಆಶ್ಚರ್ಯಪಡುವುದಿಲ್ಲ. ಆದರೆ ನಾನು ನಿಮಗೆ ಭರವಸೆ ನೀಡುತ್ತೇವೆ. ನಾವು ನಿಮ್ಮನ್ನು ಅಚ್ಚರಿಗೊಳಿಸುತ್ತೇವೆ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಗಳಿಗೆ ಭಾರತ ತಲೆ ಕೆಡಿಸಿಕೊಳ್ಳದೇ ಪ್ಲಾನ್ ಮಾಡಿ ದಾಳಿ ನಡೆಸಿ ಪಾಕಿಸ್ತಾನಕ್ಕೆ ಭಾರೀ ಮುಜುಗರವನ್ನುಂಟು ಮಾಡಿದೆ.
ಕಾರಣ 4 :
ಭಾರತದ ಮೇಲೆ ನೇರವಾಗಿ ಯುದ್ಧ ಮಾಡಿದರೆ ನಮಗೆ ಸೋಲು ಖಚಿತ ಎನ್ನುವುದು ಪಾಕಿಸ್ತಾನಕ್ಕೆ ಗೊತ್ತಿದೆ. ಹೀಗಾಗಿ ಅದು ಉಗ್ರರನ್ನು ಛೂ ಬಿಡುವ ಮೂಲಕ ಭಾರತದ ಮೇಲೆ ದಾಳಿ ನಡೆಸಲು ಪ್ರಚೋದನೆ ನೀಡುತ್ತಿದೆ. ಉರಿ ದಾಳಿ ಬಳಿಕವೇ ಭಾರತ ಸರ್ಜಿಕಲ್ ಸ್ಟ್ರೈಕ್ ನಡೆಸಿ ಉತ್ತರ ನೀಡಿ ಭಯೋತ್ಪಾದನೆಯನ್ನು ನಾವು ಸಹಿಸುವುದಿಲ್ಲ ಎಂದು ಹೇಳಿತ್ತು. ಪುಲ್ವಾಮಾ ದಾಳಿ ಬಳಿಕ ಭಾರತ ಮತ್ತೊಂದು ದಾಳಿ ನಡೆಸಬಹುದು ಎಂದು ಪಾಕಿಸ್ತಾನ ತನ್ನ ಗಡಿಯಲ್ಲಿದ್ದ ಉಗ್ರರ ಕೇಂದ್ರಗಳನ್ನು ಬೇರೆ ಕಡೆಗೆ ಶಿಫ್ಟ್ ಮಾಡಿತ್ತು. ಪಾಕ್ ಈ ಉಗ್ರರನ್ನು ಕಾಪಾಡುತ್ತಿದ್ದರೂ ಭಾರತ ಈಗ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿ ಧ್ವಂಸ ಮಾಡಿದೆ. ಇಲ್ಲಿಯವರೆಗೆ ಉಗ್ರರ ವಿಚಾರದಲ್ಲಿ ನಾವು ಕಟು ಮಾತಿನಲ್ಲಿ ಮಾತ್ರ ಪ್ರತಿಕ್ರಿಯೆ ನೀಡುತ್ತಿದ್ದರೆ ಈಗ ನಮ್ಮಲ್ಲಿರುವ ರಕ್ಷಣಾ ಪಡೆಗಳ ಮೂಲಕ ಪ್ರತಿ ಉತ್ತರ ನೀಡುತ್ತೇವೆ ಎನ್ನುವ ಸಂದೇಶವನ್ನು ಪಾಕಿಸ್ತಾನಕ್ಕೆ ರವಾನಿಸಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv