ಚಾಮರಾಜನಗರ: ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಸೋಮವಾರ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಅರಣ್ಯಗ್ರಾಮ ಪಚ್ಚೆದೊಡ್ಡಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಾಸ್ತವ್ಯ ಹೂಡಿದ್ದರು.
ಶಿಕ್ಷಣ ಸಚಿವರಾದ ನಂತರ ರಾಜ್ಯದಲ್ಲಿ ಇದು ಅವರ ಮೂರನೇ ಶಾಲಾ ವಾಸ್ತವ್ಯವಾಗಿದೆ. ಮೊದಲನೇಯದಾಗಿ ತುಮಕೂರು ಜಿಲ್ಲೆಯ ಅಚ್ಚಮ್ಮನಹಳ್ಳಿಯಲ್ಲಿ ವಾಸ್ತವ್ಯ ಹೂಡಿದ್ದರು. ಆ ನಂತರ ಕಾಡುಗಳ್ಳ ವೀರಪ್ಪನ್ ಹುಟ್ಟೂರು ಗೋಪಿನಾಥಂನಲ್ಲಿ ವಾಸ್ತವ್ಯ ಮಾಡಿದ್ದರು. ಇದೀಗ ಪಚ್ಚೆದೊಡ್ಡಿಯ ಸರ್ಕಾರಿ ಶಾಲೆಯಲ್ಲಿ ವಾಸ್ತವ್ಯ ಹೂಡಿದ್ದು, ಶಾಲಾ ಮಕ್ಕಳೊಂದಿಗೆ ಸಂವಾದ ನಡೆಸಿದರು.
Advertisement
Advertisement
6ನೇ ತರಗತಿಯಿಂದ ಮುಂದಿನ ವಿದ್ಯಾಭ್ಯಾಸಕ್ಕಾಗಿ 5 ಕಿ.ಮೀ ದೂರದ ಅಜ್ಜಿಪುರಕ್ಕೆ ಕಾಡಿನ ನಡುವೆ ಕಲ್ಲು, ಮುಳ್ಳು ಹಾಗೂ ಕಡಿದಾದ ಹಾದಿಯಲ್ಲಿ ಮಕ್ಕಳು ನಡೆದು ಹೋಗಬೇಕು. ಕಾಡುಪ್ರಾಣಿಗಳ ಹಾವಳಿ ಬೇರೆ ಇದೆ. ನಡೆಯುವುದರಲ್ಲೇ ಸಾಕಷ್ಟು ಕಾಲ ವ್ಯಯವಾಗುವುದರಿಂದ ವಿದ್ಯಾಭ್ಯಾಸಕ್ಕೆ ಪೆಟ್ಟು ಬೀಳುತ್ತಿದೆ ಎಂದು ವಿದ್ಯಾರ್ಥಿಗಳು, ಗ್ರಾಮಸ್ಥರು ಸಚಿವರಿಗೆ ತಿಳಿಸಿದರು. ನಮಗೆ ರಸ್ತೆ ಬೇಕು, ವಾಹನ ವ್ಯವಸ್ಥೆಬೇಕು ಎಂದು ಮನವಿ ಮಾಡಿಕೊಂಡರು.
Advertisement
Advertisement
ಮಕ್ಕಳ ಸಮಸ್ಯೆಗೆ ಸ್ಪಂಧಿಸಿದ ಸಚಿವ ಸುರೇಶ್ ಕುಮಾರ್ ಅವರು, ಹತ್ತು ದಿನಗಳಲ್ಲಿ ಕಾಡಿನ ರಸ್ತೆಯ ಜಂಗಲ್ ಕಟಿಂಗ್ ಮಾಡಿ, ಅಜ್ಜಿಪುರಕ್ಕೆ ವ್ಯಾನ್ ವ್ಯವಸ್ಥೆ ಕಲ್ಪಿಸಲು ಅಧಿಕಾರಿಗಳಿಗೆ ಸ್ಥಳದಲ್ಲೇ ಆದೇಶ ನೀಡಿದರು. ಇದೇ ವೇಳೆ ಅವರು ಗ್ರಾಮಸ್ಥರ ಅಹವಾಲು ಸ್ವೀಕರಿಸಿದರು. ಗ್ರಾಮಕ್ಕೆ ಸಂಚಾರಿ ನ್ಯಾಯಬೆಲೆ ಅಂಗಡಿ ಸೌಲಭ್ಯ ಕಲ್ಪಿಸಿ, ತಿಂಗಳಲ್ಲಿ ಎರಡು ಬಾರಿ ಪಡಿತರ ಹಂಚಿಕೆಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.