ನಡುರಸ್ತೆಯಲ್ಲಿ ತಲ್ವಾರ್ ನಿಂದ ಹಲ್ಲೆ ನಡೆಸಿದ್ದ ರೈ ಬೆಂಬಲಿಗ ಪೊಲೀಸರಿಗೆ ಶರಣು

Public TV
1 Min Read
MNG RAMANTH RAI

ಮಂಗಳೂರು: ಹಲವು ದಿನಗಳಿಂದ ತಲೆ ಮರಿಸಿಕೊಂಡಿದ್ದ ಮಾಜಿ ಸಚಿವ ರಮಾನಾಥ್ ರೈ ಆಪ್ತ, ತುಳು ನಟ ಸುರೇಂದ್ರ ಮಂಗಳೂರು ಡಿಸಿಐಬಿ ಪೊಲೀಸರಿಗೆ ಶರಣಾಗಿದ್ದಾನೆ.

ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ನಟ ಸುರೇಂದ್ರ ವಿರುದ್ಧ ಪ್ರಕರಣ ದಾಖಲಾಗಿತ್ತು. ಘಟನೆಯ ಬಳಿಕ ಸುರೇಂದ್ರ ಪೊಲೀಸರಿಗೆ ಸಿಗದೆ ತಲೆ ಮರೆಸಿಕೊಂಡಿದ್ದ. ಸದ್ಯ ಬಂಟ್ವಾಳ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿದ್ದು, ಇಂದು ಸಂಜೆ ಶರಣಾಗಿರುವ ಸುರೇಂದ್ರರನ್ನು ಮಂಗಳೂರಿನ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆ ಇದೆ.

ಏನಿದು ಘಟನೆ:
ಬಂಟ್ವಾಳ ಪೇಟೆ ಬಳಿಯ ಬಡ್ಡಕಟ್ಟೆ ಎಂಬಲ್ಲಿ ಜೂನ್ 21ರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ನಡೆದಿರುವ ಬೀದಿ ಕಾಳಗದಲ್ಲಿ ರಮಾನಾಥ ರೈ ಆಪ್ತ ಸುರೇಂದ್ರ, ತಲ್ವಾರ್ ಹಿಡಿದು ಕೊಲೆಗೆ ಯತ್ನಿಸಿದ್ದ. ಈ ಘಟನೆಯನ್ನು ಸ್ಥಳೀಯ ವ್ಯಕ್ತಿಯೊಬ್ಬರು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದರು. ಬಳಿಕ ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ವಿಡಿಯೋದಲ್ಲಿ ಸುರೇಂದ್ರ ತಲ್ವಾರ್ ಹಿಡಿದು ಬಿಜೆಪಿ ಕಾರ್ಯಕರ್ತರನ್ನು ಅಟ್ಟಿಸಿಕೊಂಡು ಬರುತ್ತಿರುವುದನ್ನು ಕಾಣಬಹುದಾಗಿತ್ತು.

ಘಟನೆಯಲ್ಲಿ ಗಣೇಶ್ ಮತ್ತು ಪುಷ್ಪರಾಜ್ ಗಾಯಗೊಂಡಿದ್ದು, ಅಪಾಯದಿಂದ ಪಾರಾಗಿದ್ದರು. ಅಂದಹಾಗೇ ಸುರೇಂದ್ರ ಈ ಹಿಂದೆ ಎರಡು ತುಳು ಸಿನಿಮಾಗಳಲ್ಲಿ ನಟಿಸಿದ್ದು, ತುಳು ಸಿನಿಮಾ ರಂಗದ ಕಲಾವಿದರೊಂದಿಗೆ ನಿಕಟ ಸಂಪರ್ಕ ಹೊಂದಿದ್ದಾನೆ. ಅಲ್ಲದೆ, ಮಂಗಳೂರು ಮತ್ತು ಬಂಟ್ವಾಳದಲ್ಲಿ ಹಣದ ವ್ಯವಹಾರ ನಡೆಸುತ್ತಾ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯವಾಗಿದ್ದನು ಎಂಬುದಾಗಿ ತಿಳಿದುಬಂದಿತ್ತು.

https://www.youtube.com/watch?v=BD46Vi6guss

Share This Article
Leave a Comment

Leave a Reply

Your email address will not be published. Required fields are marked *