ಅಜ್ಜಿ, ತಾಯಿಯ ಮೇಲೆ ಆಸಿಡ್ ದಾಳಿ ಹಿಂದೆ `ಕೈ’ ಸಂಸದ – ಸೂರಜ್ ಆರೋಪ

Public TV
2 Min Read
Suraj Revanna

– ಭವಾನಿ ರೇವಣ್ಣ ಏನು ಭಯೋತ್ಪಾದಕರಾ?
– ಪೆನ್‍ಡ್ರೈವ್ ಹಂಚಿ ಶ್ರೇಯಸ್ ಸಂಸದರಾಗಿದ್ದಾರೆ

ಹಾಸನ: ನಮ್ಮ ಅಜ್ಜಿ ಹಾಗೂ ತಾಯಿ ಮೇಲೆ 25 ವರ್ಷಗಳ ಹಿಂದೆ ಆಸಿಡ್ ದಾಳಿ ಆಗಿತ್ತು. ಆಗ ಸಹ ಕಾಂಗ್ರೆಸ್ ಸರ್ಕಾರ ಇತ್ತು. ಇಲ್ಲಿ ಕಾಂಗ್ರೆಸ್ ಸಂಸದರು ಇದ್ದರು. ಅದರ ಹಿಂದೆ ಅಂದಿನ ಸಂಸದರ ಕೈವಾಡ ಇತ್ತು ಎಂದು ಜನ ಮಾತಾಡಿಕೊಳ್ತಿದ್ದರು ಎಂದು ಎಂಎಲ್‍ಸಿ ಸೂರಜ್ ರೇವಣ್ಣ ಹೊಸ ಬಾಂಬ್ ಸಿಡಿಸಿದ್ದಾರೆ.

ಹಾಸನದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ವೇಳೆ, ಆಸಿಡ್ ದಾಳಿ ಬಗ್ಗೆ ಇಲ್ಲಿಯವರೆಗೂ ದೇವೇಗೌಡರಾಗಲಿ, ರೇವಣ್ಣ ಆಗಲಿ ಮಾತಾಡಿಲ್ಲ ಎಂಬ ಸಂಸದ ಶ್ರೇಯಸ್ ಪಟೇಲ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದರು. ದೇವೇಗೌಡರು ಯಾಕೆ ಮಾತಾಡಬೇಕು? ಇವರದೆ ಸರ್ಕಾರ ಇದೆ ಸಿಬಿಐ ತನಿಖೆಗೆ ಕೊಡಲಿ. ಸತ್ಯಾಸತ್ಯತೆ ಗೊತ್ತಾಗಲಿದೆ ಎಂದು ಸವಾಲು ಹಾಕಿದ್ದಾರೆ.

BHAVANI REVANNA

ಹಾಸನ ಜಿಲ್ಲೆಗೆ ನಿಮ್ಮ ಕೊಡುಗೆ ಏನು ಎಂದು ಸಂಸದರು ಪ್ರಶ್ನಿಸಿದ್ದಾರೆ. ಅವರಿಗೆ ಮಾಹಿತಿ ಕೊರತೆ ಇರಬೇಕು. ಮಾಡಿರುವ ಕೆಲಸ ಕಣ್ಣೆದುರೇ ಇದೆ. ನಾನು ಇಡೀ ಜಿಲ್ಲೆಗೆ ಸಹಕಾರ ಆಗುವ ರೀತಿ ಅನುದಾನ ಕೊಟ್ಟಿದ್ದೇನೆ. ಮೂರು ವರ್ಷದಲ್ಲಿ 50 ಕೋಟಿ ರೂ. ಅನುದಾನ ಕೊಟ್ಟಿದ್ದೇನೆ. ಸಾವಿರಕ್ಕೂ ಹೆಚ್ಚು ಹಳ್ಳಿಗಳಿಗೆ ಅನುದಾನ ಹೋಗಿದೆ. ಪೆನ್‍ಡ್ರೈವ್ ಹಂಚಿ ನೀವು ಅಚಾನಕ್ಕಾಗಿ ಸಂಸದರಾಗಿದ್ದೀರಿ ಎಂದು ವಾಗ್ದಾಳಿ ನಡೆಸಿದ್ದಾರೆ.

ಸಂಸದನಾಗಿದ್ದೇನೆ ಎಂದು ದೊಡ್ಡದಾಗಿ ಕೇಂದ್ರ ಸಚಿವರಿಗೆ ಮನವಿ ಕೊಡುವುದಲ್ಲ. ಕಾಡಾನೆ ಸಮಸ್ಯೆ ಬಗ್ಗೆ ಕೇಂದ್ರ ಅರಣ್ಯ ಸಚಿವರಿಗೆ ಮನವಿ ಕೊಟ್ಟಿದ್ದಾರೆ. ರಾಜ್ಯ ಸರ್ಕಾರ ಅವರದ್ದೇ ಇದೆ. ರೈಲ್ವೆ ಬ್ಯಾರಿಕೇಡ್ ಎಷ್ಟು ಕಡೆ ಅಳವಡಿಸಿದ್ದಾರೆ? ಕೇಂದ್ರ ಸರ್ಕಾರದ ಬಳಿ ಏಕೆ ಹೋಗಬೇಕು? ಹಳ್ಳಿಗಳಿಗೆ ಹೋಗಿ ನಿಮ್ಮ ಕುಟುಂಬದ ಕೊಡುಗೆ ಏನಿದೆ? ನಮ್ಮ ಕೊಡುಗೆ ಏನಿದೆ ಗೊತ್ತಾಗುತ್ತೆ ಎಂದಿದ್ದಾರೆ.

ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗ ಸಾಲಮನ್ನಾ ಮಾಡಿದ್ದಾರೆ. ನೀರಾವರಿ ಯೋಜನೆಗಳು, ಆರೋಗ್ಯ ಕೇಂದ್ರಗಳು, ಮೆಡಿಕಲ್ ಕಾಲೇಜು, ರಸ್ತೆಗಳನ್ನು ಮಾಡಿಸಿದ್ದಾರೆ. ರೈತರಿಗೆ ಶಾಶ್ವತವಾಗಿ ಅನುಕೂಲವಾಗುವ ರೀತಿಯಲ್ಲಿ ಕೆಲಸ ಮಾಡಿದ್ದಾರೆ. ನಮ್ಮ ತಂದೆ ಕೆಲಸ ಮಾಡುವುದನ್ನು ಹೇಳಿಕೊಟ್ಟಿದ್ದಾರೆ. ಮೈಕ್ ಹಿಡಿದು ಪ್ರಚಾರ ತಗೊಳೊದನ್ನು ಹೇಳಿಕೊಟ್ಟಿಲ್ಲ. ವಾರಕ್ಕೆ ಒಂದು ದಿನ ಪ್ರೆಸ್‍ಮೀಟ್ ಮಾಡಿ ಪ್ರಚಾರ ತಗೊಳೊದಲ್ಲ ಎಂದು ಕಿಡಿಕಾರಿದ್ದಾರೆ.

ರೇವಣ್ಣ ಅವರ ಕುಟುಂಬ ಮುಗಿಸುವ ಅಜೆಂಡಾ ಇಟ್ಟುಕೊಂಡಿದ್ದಾರೆ. ರೇವಣ್ಣ ಅವರನ್ನು ಅರೆಸ್ಟ್ ಮಾಡಿಸಿದ್ರು, ನನ್ನ ಮೇಲೂ ಕೇಸ್ ಹಾಕಿಸಿದ್ರು. ನಮ್ಮ ತಾಯಿಯವರ ಮೇಲೂ ಕೇಸ್ ಹಾಕಿ ಬಂಧಿಸುವ ಯತ್ನ ಮಾಡಿದ್ದರು. ಭವಾನಿ ರೇವಣ್ಣ ಭಯೋತ್ಪಾದಕರಾ? 50, 60 ಲಕ್ಷ ರೂ. ಖರ್ಚು ಮಾಡಿಸಿ ಸುಪ್ರೀಂಕೋರ್ಟ್ ತನಕ ಹೋಗಿ ವಾದ ಮಾಡಿಸಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.

Share This Article