ಬಿಗ್ ಬಾಸ್ ಮನೆಯ ಫ್ಯಾಮಿಲಿ ವೀಕ್‌ನಲ್ಲೂ ಗಿಲ್ಲಿಯದ್ದೇ ಹವಾ. ಆರಂಭದಿಂದಲೂ ಗಿಲ್ಲಿ ಕಾಮಿಡಿ ಬಗ್ಗೆ ಸ್ಪರ್ಧಿಗಳು ಅಪಸ್ವರ ಎತ್ತಿದ್ದರು. ಎಲ್ಲರನ್ನೂ ಕೆಳಗಿಟ್ಟು ಕಾಮಿಡಿ ಮಾಡ್ತಾನೆ ಅಂತ ಎಲ್ಲರೂ ವಿರೋಧಿಸುತ್ತಿದ್ದರು. ಆದರೆ, ಕಂಟೆಸ್ಟೆಂಟ್‌ಗಳ ಮನೆಯವರಿಗೆ ಗಿಲ್ಲಿ ಕಾಮಿಡಿ ತುಂಬಾ ಇಷ್ಟ ಆಗಿದೆಯಂತೆ. ಸೂರಜ್ ತಾಯಿ ಮತ್ತು ಧನುಷ್ ತಾಯಿ ಇಬ್ಬರಿಗೂ ಗಿಲ್ಲಿ ಫೇವರಿಟ್ ಅಂತೆ. ಸ್ವತಃ ಈ ಮಾತನ್ನು ಮಕ್ಕಳೆದರೇ ಹೇಳಿಕೊಂಡಿದ್ದಾರೆ.
ದೊಡ್ಮನೆಗೆ ಸ್ಪರ್ಧಿಗಳ ಕುಟುಂಬಸ್ಥರು ಆಗಮಿಸುತ್ತಿದ್ದಾರೆ. ಮನೆಗೆ ಬಂದು ಮಕ್ಕಳ ಯೋಗಕ್ಷೇಮ ವಿಚಾರಿಸಿಕೊಂಡು, ಆಟದ ವಿಚಾರವಾಗಿ ಒಂದಷ್ಟು ಸಲಹೆ ಕೊಡುತ್ತಿದ್ದಾರೆ. ಕೆಲಹೊತ್ತು ತಮ್ಮವರೊಟ್ಟಿಗೆ ಸಮಯ ಕಳೆದು ವಾಪಸ್ ಆಗ್ತಿದ್ದಾರೆ. ಫ್ಯಾಮಿಲಿ ವೀಕ್‌ನಲ್ಲೂ ಗಿಲ್ಲಿ ಹವಾ ಸೃಷ್ಟಿಸಿದ್ದಾರೆ. ಸ್ಪರ್ಧಿಗಳ ಮನೆಯವರ ಮನವನ್ನೂ ಗಿಲ್ಲಿ ಗೆದ್ದಿರೋದು ಕಂಡುಬಂದಿದೆ.
ಸೂರಜ್ ತಾಯಿ ಮನೆಗೆ ಎಂಟ್ರಿ ಕೊಟ್ಟಾಗ ಎಲ್ಲರೂ ಆತ್ಮೀಯವಾಗಿ ಸ್ವಾಗತಿಸುತ್ತಾರೆ. ಎಲ್ಲರ ಕುಶಲೋಪರಿಯನ್ನು ಸೂರಜ್ ತಾಯಿ ವಿಚಾರಿಸಿಕೊಳ್ಳುತ್ತಾರೆ. ಗಿಲ್ಲಿಯನ್ನು ಕಂಡೊಡನೆ ಫುಲ್ ಖುಷ್ ಆಗ್ತಾರೆ. ‘ಓ.. ಗಿಲ್ಲಿ ನೀನಂದ್ರೆ ತುಂಬಾ ಇಷ್ಟ ನಮಗೆ’ ಅಂತ ಮಾತಾಡಿಸ್ತಾರೆ. ಅದಕ್ಕೆ ಗಿಲ್ಲಿ, ‘ಇವರೊಬ್ಬರೇ ನನ್ನನ್ನು ಇಷ್ಟ ಪಟ್ಟವರು’ ಅಂತ ಖುಷಿ ಪಡ್ತಾರೆ.
ನಂತರ ಧನುಷ್ ಅವರ ತಾಯಿ ಕೂಡ ಗಿಲ್ಲಿಯನ್ನು ಮೆಚ್ಚಿ ಮಾತಾಡ್ತಾರೆ. ‘ಅಮ್ಮ ನಿಮಗೆ ನಿಮಗೆ ಹುಡುಗರಲ್ಲಿ ಈ ಮನೆಯಲ್ಲಿ ಯಾರಿಷ್ಟ’ ಅಂತ ಧನುಷ್ ತಾಯಿಯನ್ನು ಎಲ್ಲರೂ ಕೇಳ್ತಾರೆ. ಅದಕ್ಕೆ ಅವರು, ‘ನನಗೆ ಗಿಲ್ಲಿ ಅಂದ್ರೆ ತುಂಬಾ ಇಷ್ಟ. ಧನುಷ್ ಈ ಮನೆಯಲ್ಲಿ ಇರಲಿಲ್ಲ ಅಂದಿದ್ರೆ ನಾನು ಗಿಲ್ಲಿಗೆ ವೋಟ್ ಹಾಕ್ತಿದ್ದೆ. ಗಿಲ್ಲಿ ಕಾಮಿಡಿ ಅಂದ್ರೆ ಬಹಳ ಇಷ್ಟ’ ಅಂತ ಮನದಾಳದ ಮಾತನ್ನು ಹಂಚಿಕೊಳ್ತಾರೆ.
ಧನುಷ್ ತಾಯಿ ಮಾತು ಕೇಳಿ ಗಿಲ್ಲಿಗೆ ತುಂಬಾ ಖುಷಿಯಾಗುತ್ತೆ. ‘ಅಮ್ಮ.. ಬನ್ನಿ ನಾವು ಆಚೆ ಹೋಗಿ ಮಾತಾಡೋಣ’ ಅಂತ ಗಿಲ್ಲಿ ಹೇಳ್ತಾರೆ. ಗಿಲ್ಲಿ ಹೆಸರನ್ನು ನೀವು ಹೇಳಬಾರದಿತ್ತು ಅಂತ ಧನುಷ್ ತಾಯಿಯನ್ನು ಎಲ್ಲರೂ ರೇಗಿಸುತ್ತಾರೆ.


