ಅಯೋಧ್ಯೆ ರಾಮನಿಗೆ ಸಿಗಲು ‘ಸ್ಕಂದ’ ಕಾರಣ

Public TV
3 Min Read
Ayodhya Rama Temple 8

– ಅಯೋಧ್ಯೆಯಲ್ಲಿ ರಾಮ ಹುಟ್ಟಿದ್ದು ಎಲ್ಲಿ?
– ವಾಲ್ಮೀಕಿ ರಾಮಾಯಣದಲ್ಲಿ ಜಾಗದ ಬಗ್ಗೆ ಉಲ್ಲೇಖ ಇಲ್ಲ
– ಸ್ಕಂದ ಪುರಾಣದ ಶ್ಲೋಕಕ್ಕೂ ಸ್ಥಳಕ್ಕೆ ತಾಳೆ

ನವದೆಹಲಿ: ಅಯೋಧ್ಯೆಯಲ್ಲಿ ರಾಮ ಹುಟ್ಟಿದ್ದಾನೆ ಎನ್ನುವುದು ಹಿಂದೂಗಳ ನಂಬಿಕೆ. ಆದರೆ ಅಯೋಧ್ಯೆಯಲ್ಲಿ ಹುಟ್ಟಿದ್ದು ಎಲ್ಲಿ ಎನ್ನುವ ಪ್ರಶ್ನೆಗೆ ಸುಪ್ರೀಂ ಕೋರ್ಟ್ ಸ್ಕಂದ ಪುರಾಣದಲ್ಲಿ ಉತ್ತರ ಕಂಡುಕೊಂಡಿದೆ.

ಹೌದು, 1045 ಪುಟಗಳ ಸುದೀರ್ಘ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ಪುರಾತತ್ವ ಇಲಾಖೆಯ ಸಾಕ್ಷ್ಯಗಳು, ಬ್ರಿಟಿಷ್ ಮತ್ತು ಭಾರತ ಸರ್ಕಾರದ ಗೆಜೆಟ್‍ಗಳು, ವಿದೇಶಿ ವ್ಯಕ್ತಿಗಳು ಬರೆದ ಗ್ರಂಥಗಳು, ಮೌಖಿಕ ಹೇಳಿಕೆಯ ಜೊತೆಗೆ ಸ್ಕಂದ ಪುರಾಣವನ್ನು ಉಲ್ಲೇಖಿಸಿದೆ.

ayodhya skanda purana

40 ದಿನಗಳ ದೀರ್ಘ ವಿಚಾರಣೆಯ ಸಮಯದಲ್ಲಿ ರಾಮ ಅಯೋಧ್ಯೆಯಲ್ಲಿ ಹುಟ್ಟಿಲ್ಲ ಎಂದು ಸುನ್ನಿ ವಕ್ಫ್ ಬೋರ್ಡ್ ವಾದ ಮಂಡಿಸಿರಲಿಲ್ಲ. 2.77 ಎಕ್ರೆ ವಿವಾದಿತ ಜಾಗದಲ್ಲಿ ರಾಮ ಜನಿಸಿರಲಿಲ್ಲ. ಅಲ್ಲಿ ದೇವಾಲಯ ಕೆಡವಿ ಮಸೀದಿ ನಿರ್ಮಾಣಗೊಂಡಿಲ್ಲ ಎನ್ನುವುದಷ್ಟೇ ಅವರ ವಾದವಾಗಿತ್ತು. ಆದರೆ ರಾಮಲಲ್ಲಾ ಪರ ವಾದ ಮಂಡಿಸಿದ ವಕೀಲರು ವಿವಾದಿತ ಸ್ಥಳದಲ್ಲೇ ರಾಮ ಜನಿಸಿದ್ದ. ಹೀಗಾಗಿ ಈ ಜಾಗ ನಮಗೆ ನೀಡಬೇಕು ಎಂದು ವಾದಿಸಿದ್ದರು.  ಇದನ್ನೂ ಓದಿ: ಅಂದು ಹೇಳಿದಾಗ ಟೀಕೆ ಬಂದಿತ್ತು, ಇಂದು ನನ್ನ ಸಾಕ್ಷ್ಯ ಆಧಾರಿಸಿ ತೀರ್ಪು ಬಂದಿದೆ- ಕೆ.ಕೆ.ಮೊಹಮ್ಮದ್ ಸಂತಸ

ಪುರಾತತ್ವ ಇಲಾಖೆ ಹಿಂದೂ ದೇವಾಲಯ ಕೆಡವಿ ಮಸೀದಿ ನಿರ್ಮಾಣವಾಗಿದೆ. ಹಿಂದೂ ದೇವಾಲಯಗಳಲ್ಲಿ ಬಳಸುವ ಕಲ್ಲು, ಪ್ರಾಣಿಗಳು ಸಿಕ್ಕಿವೆ ಎಂದು ಆಧಾರ ನೀಡಿದರೂ ವಿವಾದಿತ ಜಾಗದಲ್ಲೇ ರಾಮ ಜನಿಸಿದ್ದಾನೆ ಎನ್ನುವುದಕ್ಕೆ ಆಧಾರ ಸಿಗದ ಕಾರಣ ಪ್ರಕರಣ ಜಟಿಲವಾಗಿತ್ತು. ಅಷ್ಟೇ ಅಲ್ಲದೇ ವಿವಾದಿತ ಸ್ಥಳದಲ್ಲಿ ರಾಮ ಜನಿಸಿಲ್ಲ ಎನ್ನುವುದು ಸುನ್ನಿ ವಕ್ಫ್ ಬೋರ್ಡ್ ವಾದವಾಗಿದ್ದರಿಂದ ಹಾಗಾದರೆ ರಾಮ ಜನಿಸಿದ್ದು ಎಲ್ಲಿ ಎನ್ನುವ ಕಠಿಣ ಪ್ರಶ್ನೆ ಎದ್ದಿತ್ತು.

Ayodhya Rama Temple 1

 

ಅಯೋಧ್ಯೆಯಲ್ಲಿ ರಾಮ ಜನಿಸಿಯೇ ಇಲ್ಲ ಎಂದು ವಾದಿಸಿದ್ದರೆ ಪ್ರಕರಣ ಬೇರೆ ರೀತಿಯ ತಿರುವು ಪಡೆದುಕೊಳ್ಳುತಿತ್ತು. ಆದರೆ ಇಲ್ಲಿ ವಿವಾದಿತ ಸ್ಥಳದಲ್ಲಿ ರಾಮ ಜನಿಸಿಲ್ಲ ಎನ್ನುವ ವಾದಕ್ಕೆ ಮಾತ್ರ ಆಕ್ಷೇಪ ಇದ್ದ ಕಾರಣ ರಾಮ ಅಯೋಧ್ಯೆಯಲ್ಲೇ ಜನಿಸಿದ್ದ ಎನ್ನುವ ಅಂಶ ದೃಢವಾಯಿತು.

ಈಗ ವಿವಾದಕ್ಕೆ ಕಾರಣವಾಗಿರುವ ಜಾಗದಲ್ಲೇ ರಾಮ ಹುಟ್ಟಿದ್ದಾನೆ ಎಂದು ತಿಳಿದುಕೊಳ್ಳುವುದು ಹೇಗೆ? ಈ ಎರಡನೇ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ನ್ಯಾಯಾಧೀಶರು ವಾಲ್ಮೀಕಿ ರಾಮಾಯಣ ಮತ್ತು ಸ್ಕಂದ ಪುರಾಣದ ಮೊರೆ ಹೋಗಿದ್ದಾರೆ. ಇದನ್ನೂ ಓದಿ: ರಕ್ತದಲ್ಲಿ ಬರೆದು ಸುಪ್ರೀಂ ತೀರ್ಪು ಸ್ವಾಗತಿಸಿದ ಮುಸ್ಲಿಂ ವ್ಯಕ್ತಿ

Ayodhya Judge 1

ರಾಮಾಯಣದ ಮೂಲ ಕೃತಿಯಾದ ವಾಲ್ಮೀಕಿ ರಾಮಾಯಣದ 10ನೇ ಶ್ಲೋಕದಲ್ಲಿ ಕೌಸಲ್ಯೆಯು ಮಗನೊಬ್ಬನಿಗೆ ಜನ್ಮ ನೀಡಿದ್ದಳು. ರಾಮನ ಆಗಮನದಿಂದ ಅಯೋಧ್ಯೆ ಪಾವನಗೊಂಡಿತು. ಮುಂದೆ ಆತ ವಿಶ್ವಕ್ಕೆ ದೇವರಾದ ಎನ್ನುವ ಉಲ್ಲೇಖವಿದೆ. ರಾಮ ಅಯೋಧ್ಯೆಯಲ್ಲಿ ಜನಿಸಿದ್ದಾನೆ ಎನ್ನುವುದಕ್ಕೆ ಉಲ್ಲೇಖ ಇದ್ದರೂ ವಾಲ್ಮೀಖಿ ರಾಮಾಯಣದಲ್ಲಿ ವಿವಾದಿತ ಜಾಗದಲ್ಲೇ ರಾಮ ಜನಿಸಿದ್ದ ಎನ್ನುವುದಕ್ಕೆ ಯಾವುದೇ ದಾಖಲೆಗಳಿರಲಿಲ್ಲ. ಹೀಗಾಗಿ ನ್ಯಾಯಾಧೀಶರು ಸ್ಕಂದ ಪುರಾಣವನ್ನು ಅಧ್ಯಯನ ಮಾಡಿದ್ದಾರೆ.

ಸ್ಕಂದ ಪುರಾಣದಲ್ಲಿರುವ ವೈಷ್ಣವಕಾಂಡದಲ್ಲಿ ಅಯೋಧ್ಯಾ ಮಹಾತ್ಮ ಅಧ್ಯಾಯದಲ್ಲಿ ರಾಮನ ಜನ್ಮಸ್ಥಾನದ ಉಲ್ಲೇಖದ ಬಗ್ಗೆ ಶ್ಲೋಕವಿದೆ. ಈ ಶ್ಲೋಕದ ಪ್ರಕಾರ ಇಲ್ಲಿಂದ ಈಶಾನ್ಯ ದಿಕ್ಕಿನಲ್ಲಿರುವ ಜಾಗವೇ ರಾಮಜನ್ಮ ಸ್ಥಾನ. ಮೋಕ್ಷ ಸ್ಥಾನವಾಗಿರುವ ಈ ಸ್ಥಳವು ವಿಘ್ನೇಶ್ವರದ ಪೂರ್ವ ದಿಕ್ಕಿನಲ್ಲಿದ್ದು, ವಶಿಷ್ಠದ ಉತ್ತರ ದಿಕ್ಕಿನಲ್ಲಿದೆ ಲಾವ್ಮಾಸಾ ಆಶ್ರಮದ ಪಶ್ಚಿಮ ದಿಕ್ಕಿನಲ್ಲಿದೆ ಎಂದು ಹೇಳುತ್ತದೆ.

ayodhya skanda purana 2

 

ಈ ಶ್ಲೋಕದಲ್ಲಿ ತಿಳಿಸಿದ ಅಂಶ ರಾಮಲಲ್ಲಾ ಕಡೆಯವರ ವಾದಕ್ಕೂ ತಾಳೆಯಾಗುತ್ತದೆಯೇ ಎನ್ನುವುದನ್ನು ಕೋರ್ಟ್ ಅಧ್ಯಯನ ಮಾಡಿದೆ. ಈ ಶ್ಲೋಕದಲ್ಲಿರುವ ಸ್ಥಳಗಳು ವಿವಾದಿತ ಪ್ರದೇಶದಲ್ಲಿರುವ ಸ್ಥಳಗಳಿಗೂ ತಾಳೆಯಾಗುತ್ತಾ ಎನ್ನುವುದನ್ನು ಪರಿಶೀಲಿಸಿದಾಗ, ಶ್ಲೋಕದಲ್ಲಿ ಉಲ್ಲೇಖಿಸಿರುವ ದಿಕ್ಕಿನಲ್ಲಿಯೇ ರಾಮಮಂದಿರವಿದ್ದು ಈಗಲೂ ಈ ಸ್ಥಳಗಳು ಇವೆ. ನಾವು ಈ ಸ್ಥಳಕ್ಕೆ ಭೇಟಿ ನೀಡಿದ್ದೇವೆ ಎನ್ನುವುದನ್ನು ಹಲವು ವ್ಯಕ್ತಿಗಳು ಮೌಖಿಕ ಸಾಕ್ಷ್ಯ ನುಡಿದಿದ್ದಾರೆ ಎಂದು ಕೋರ್ಟ್ ತನ್ನ ತೀರ್ಪಿನಲ್ಲಿ ಉಲ್ಲೇಖಿಸಿದೆ.

ಸ್ಕಂದ ಪುರಾಣದ ಆಧಾರ ಮತ್ತು ಖಾಲಿ ಜಾಗದಲ್ಲಿ ಮಸೀದಿ ನಿರ್ಮಾಣವಾಗಿಲ್ಲ. ಹಿಂದೂ ದೇವಾಲಯವನ್ನು ಕೆಡವಿ ಮಸೀದಿ ನಿರ್ಮಾಣವಾಗಿದೆ ಎನ್ನುವ ಭಾರತೀಯ ಪುರಾತತ್ವ ಇಲಾಖೆ ಸಾಕ್ಷ್ಯಗಳನ್ನು ಗಂಭೀರ ಪರಿಗಣಿಸಿದ ಕೋರ್ಟ್ ಅಂತಿಮವಾಗಿ ವಿವಾದಿತ 2.77 ಎಕ್ರೆ ಜಾಗ ರಾಮಲಲ್ಲಾಗೆ ಸೇರಬೇಕೆಂದು ಷರಾ ಬರೆದು ವಿವಾದವಾಗಿದ್ದ ಪ್ರಕರಣಕ್ಕೆ ಪೂರ್ಣ ವಿ’ರಾಮ’ ಹಾಕಿದೆ.

Share This Article
Leave a Comment

Leave a Reply

Your email address will not be published. Required fields are marked *