ನವದೆಹಲಿ: ರಾಜ್ಯದಲ್ಲಿ ಉಪಚುನಾವಣೆ ಘೋಷಣೆಯಾಗಿದೆ. ಆದರೆ ಅನರ್ಹ ಶಾಸಕರು ಸ್ಪರ್ಧೆ ಮಾಡುವ ಬಗ್ಗೆ ಸುಪ್ರೀಂಕೋರ್ಟ್ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಇಂದು ಅನರ್ಹ ಶಾಸಕರ ಪರ ಘಟಾನುಘಟಿ ವಕೀಲರು ವಾದ ಮಾಡಲಿದ್ದು, ಸಂಪೂರ್ಣ ಅನರ್ಹ ಶಾಸಕರ ಪರ ವಾದಕ್ಕಾಗಿ ಇಂದು ಕಾಲ ಮೀಸಲಿಡಲಾಗಿದೆ.
ಅನರ್ಹ ಶಾಸಕರು ರಾಜಕೀಯ ಭವಿಷ್ಯ ನಿರ್ಧರಿಸಲಿರುವ ಅನರ್ಹತೆ ಪ್ರಕರಣ ಅಂತಿಮ ಘಟ್ಟಕ್ಕೆ ತಲುಪಿದೆ. ಸ್ಪೀಕರ್ ಆದೇಶ ಪ್ರಶ್ನಿಸಿ 17 ಮಂದಿ ಅನರ್ಹ ಶಾಸಕರು ಸುಪ್ರೀಂಕೋರ್ಟ್ ಸಲ್ಲಿಸಿದ್ದ ಅರ್ಜಿ ಇಂದು ಸುಧೀರ್ಘ ವಿಚಾರಣೆಗೆ ಬರಲಿದೆ. ನ್ಯಾ. ಎನ್.ವಿ ರಮಣ, ನ್ಯಾ. ಸಂಜೀವ್ ಖನ್ನಾ, ನ್ಯಾ ಕೃಷ್ಣ ಮುರಾರಿ ನೇತೃತ್ವದ ತ್ರಿ ಸದಸ್ಯ ಪೀಠ ವಿಚಾರಣೆ ನಡೆಸಲಿದೆ. ಇಂದು ಅನರ್ಹ ಶಾಸಕರ ಪರ ಘಟಾನುಘಟಿ ವಕೀಲರಾದ ಮುಕುಲ್ ರೊಹ್ಟಗಿ, ಹರೀಶ್ ಸಾಳ್ವೆ, ಗಿರಿ ಸೇರಿದಂತೆ ಮೂರ್ನಾಲ್ಕು ಮಂದಿ ವಕೀಲರು ವಾದ ಮಂಡಿಸಲಿದ್ದಾರೆ. ಸೋಮವಾರ ನಡೆದ ವಿಚಾರಣೆಗೆ ವೇಳೆ ರೊಹ್ಟಗಿ ವಾದ ಆಲಿಸಿದ್ದ ಕೋರ್ಟ್ ಸುದೀರ್ಘ ವಿಚಾರಣೆಗಾಗಿ ಇಂದಿಗೆ ಮುಂದೂಡಿದೆ. ಇಂದು ಕೇವಲ ಅನರ್ಹ ಶಾಸಕರ ಪರ ವಕೀಲರು ವಾದ ಮಾಡಲಿದ್ದು, ಅನರ್ಹರ ಮನವಿಯನ್ನಷ್ಟೇ ಸುಪ್ರೀಂಕೋರ್ಟ್ ಆಲಿಸಲಿದೆ.
Advertisement
Advertisement
ಈ ಮಧ್ಯೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಕೆ ಕುಮಾರಸ್ವಾಮಿ, ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹಾಗೂ ಸ್ಪೀಕರ್ ಕಚೇರಿಗೆ ನೋಟಿಸ್ ಜಾರಿ ಮಾಡಿದ್ದು, ಈ ಎಲ್ಲರ ಪರ ವಕೀಲರು ಹಾಜರಿರಲಿದ್ದಾರೆ. ಇದೇ ವೇಳೆ ಕೇಂದ್ರ ಚುನಾವಣಾ ಆಯೋಗವನ್ನು ಅನರ್ಹ ಶಾಸಕರ ಪರ ವಕೀಲ ಮುಕುಲ್ ರೊಹ್ಟಗಿ ಪಾರ್ಟಿ ಮಾಡಿದ್ದು ಚುನಾವಣಾ ಆಯೋಗದ ವಕೀಲ ರಾಕೇಶ್ ದ್ವಿವೇದಿ ಕೂಡ ವಿಚಾರಣೆಗೆ ಹಾಜರಿರಲಿದ್ದಾರೆ. ಇಡಿ ದಿನ ವಿಚಾರಣೆ ನಡೆಯುವ ಸಾಧ್ಯತೆ ಇದ್ದು ಕೋರ್ಟ್ ನಿರ್ದೇಶನದಂತೆ ಮೊದಲು ಅನರ್ಹ ಶಾಸಕರ ಪರ ವಕೀಲರು ವಾದ ಮಂಡಿಸಲಿದ್ದಾರೆ.
Advertisement
Advertisement
ಈಗಾಗಲೇ ವಾದ ಆರಂಭಿಸಿರುವ ಮುಕುಲ್ ರೊಹ್ಟಗಿ ಸ್ಪೀಕರ್ ಆದೇಶದಲ್ಲಿ ಆಗಿರುವ ತಪ್ಪುಗಳನ್ನು ವಿವರಿಸಿದ್ದಾರೆ. ಅಲ್ಲದೇ ಉಪ ಚುನಾವಣೆ ಘೋಷಣೆ ಆಗಿರೋದ್ರರಿಂದ ಚುನಾವಣೆ ತಡೆ ನೀಡಬೇಕು ಇಲ್ಲ ಚುನಾವಣೆ ಸ್ಪರ್ಧಿಸಲು ಅವಕಾಶ ನೀಡುವ ಬಗ್ಗೆ ಮನವಿ ಮಾಡಿದ್ದಾರೆ. ಅಲ್ಲದೆ ಸ್ಪೀಕರ್ ಆದೇಶ ವಜಾ ಮಾಡುವಂತೆ ಕೇಳಿಕೊಂಡಿದ್ದಾರೆ. ಇಂದು ಬಹುತೇಕ ಅನರ್ಹ ಶಾಸಕರ ಪರ ವಕೀಲರು ಪ್ರತ್ಯೇಕ ವಾದ ಮಂಡಿಸಲಿದ್ದು ಗುರುವಾರ ಕಾಂಗ್ರೆಸ್ ಜೆಡಿಎಸ್ ಕೇಂದ್ರ ಚುನಾವಣಾ ಆಯೋಗ ಪರ ವಕೀಲರು ವಾದ ಮಂಡಿಸಲಿದ್ದಾರೆ. ಕೇವಲ ಅನರ್ಹ ಶಾಸಕರ ಪರ ವಾದ ಆಲಿಸಲಿರುವ ಕೋರ್ಟ್ ಇಂದು ಯಾವುದೇ ಮಧ್ಯಂತರ ಆದೇಶ ಹೊರಡಿಸುವ ಸಾಧ್ಯತೆ ಕಡಿಮೆ ಇದೆ.
ನನ್ನ ಕ್ಷೇತ್ರಕ್ಕೂ ಉಪಚುನಾವಣೆ ನಡೆಸಿ..!
ಇತ್ತ 17 ಕ್ಷೇತ್ರಗಳ ಪೈಕಿ ಕೇವಲ 15 ಕ್ಷೇತ್ರಗಳಿಗೆ ಚುನಾವಣೆ ಘೋಷಣೆಯಾಗಿದ್ದು, ಘೋಷಣೆಯಾಗದಿರುವ ಎರಡು ಕ್ಷೇತ್ರಗಳ ಆಕಾಂಕ್ಷಿಗಳಿಗೆ ಆತಂಕ ಶುರುವಾಗಿದೆ. ಅದರಲ್ಲೂ ರಾಜರಾಜೇಶ್ವರಿ ನಗರ ಕ್ಷೇತ್ರಕ್ಕೆ ರಾಜೀನಾಮೆ ನೀಡಿ ಮತ್ತೊಮ್ಮೆ ಸ್ಪರ್ಧೆಗೆ ಸಿದ್ಧವಾಗುತ್ತಿರುವ ಮುನಿರತ್ನ 15 ಕ್ಷೇತ್ರಗಳ ಜೊತೆಯಲ್ಲಿಯೇ ಚುನಾವಣೆ ನಡೆಸಬೇಕು ಎಂದು ಸುಪ್ರೀಂಕೋರ್ಟಿಗೆ ಇಂದು ಮನವಿ ಮಾಡಲು ಚಿಂತನೆ ನಡೆಸಿದ್ದಾರೆ. ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸುವ ಬಗ್ಗೆ ದೆಹಲಿಯಲ್ಲಿ ವಕೀಲರೊಂದಿಗೆ ಚರ್ಚೆ ನಡೆಸಿದ್ದು ದೆಹಲಿಯಲ್ಲಿಯೇ ವಾಸ್ತವ್ಯ ಹೂಡಿದ್ದಾರೆ.
ಇಂದು ಅನರ್ಹ ಶಾಸಕರ ಭವಿಷ್ಯ ನಿರ್ಧಾರವಾಗದಿದ್ರೂ, ಅನರ್ಹರ ಪರ ಘಟಾನುಘಟಿ ವಕೀಲರು ವಾದ ಮಾಡಲಿದ್ದು, ಅನರ್ಹರಿಗೆ ಚುನಾವಣೆಯಲ್ಲಿ ಸ್ಪರ್ಧೆಮಾಡಲು ಅವಕಾಶ ಸಿಗುತ್ತಾ ಇಲ್ವ ಅನ್ನೋದನ್ನು ಕಾದು ನೋಡಬೇಕಿದೆ.