ಬೆಂಗಳೂರು: ಅಯೋಧ್ಯೆ, ಅನರ್ಹರ ಕೇಸ್ ಬಳಿಕ ಸುಪ್ರೀಂಕೋರ್ಟಿನಲ್ಲಿ ಇಂದು ಅಯ್ಯಪ್ಪನ ಕೇಸ್ ತೀರ್ಪು ಬರುತ್ತಿದೆ. ದೇಶದ ಜನತೆ ಬಹುದಿನಗಳಿಂದ ಕಾಯುತ್ತಿರುವ ಶಬರಿಮಲೆ ಅಯ್ಯಪ್ಪನ ದೇಗುಲಕ್ಕೆ ಮಹಿಳೆಯರ ಪ್ರವೇಶ ಕುರಿತ ಮಹತ್ವದ ತೀರ್ಪನ್ನು ಸುಪ್ರೀಂಕೋರ್ಟ್ ಇಂದು ಬೆಳಗ್ಗೆ 10.30ಕ್ಕೆ ಪ್ರಕಟಿಸಲಿದೆ.
ಶಬರಿಮಲೆಗೆ ಮಹಿಳೆಯರ ಪ್ರವೇಶ ಪ್ರಶ್ನಿಸಿ ಸಲ್ಲಿಸಲಾದ 64 ಮರುಪರಿಶೀಲನಾ ಅರ್ಜಿಗಳ ಸಂಬಂಧ ಸರ್ವೋಚ್ಛ ನ್ಯಾಯಾಲಯ ತೀರ್ಪು ನೀಡಲಿದೆ. ಫೆಬ್ರವರಿ 6ರಂದೇ ವಿಚಾರಣೆ ಮುಗಿಸಿದ್ದ ಮುಖ್ಯನ್ಯಾಯಮೂರ್ತಿ ರಂಜನ್ ಗೋಗಯ್ ನೇತೃತ್ವದ ಸಾಂವಿಧಾನಿಕ ಪೀಠ ತೀರ್ಪನ್ನು ಕಾಯ್ದಿರಿಸಿತ್ತು.
Advertisement
Advertisement
2018ರ ಸೆಪ್ಟೆಂಬರ್ 28ರಂದು ಸುಪ್ರೀಂಕೋರ್ಟಿನ ಅಂದಿನ ಸಿಜೆ ದೀಪಕ್ ಮಿಶ್ರಾ ನೇತೃತ್ವದ ಸಾಂವಿಧಾನಿಕ ಪೀಠ 4:1ರ ಅನುಪಾತದಲ್ಲಿ ಎಲ್ಲಾ ವಯೋಮಾನದ ಮಳೆಯರಿಗೆ ಅಯ್ಯಪ್ಪ ದೇಗುಲಕ್ಕೆ ಪ್ರವೇಶ ಕಲ್ಪಿಸಿತ್ತು.
Advertisement
ಸುಪ್ರೀಂ ತೀರ್ಪು ಏನಾಗಿತ್ತು..?
5ರಿಂದ 50 ವಯಸ್ಸಿನ ಮಹಿಳೆಯರು ಅಯ್ಯಪ್ಪ ದೇಗುಲ ಪ್ರವೇಶ ಮಾಡಬಹುದು. ಮಹಿಳೆಯನ್ನು ಆಕೆಯ ಲಿಂಗ ಮತ್ತು ಜೈವಿಕ ಕಾರಣಗಳಿಂದ ಪ್ರತ್ಯೇಕಿಸಲು ಸಾಧ್ಯವಿಲ್ಲ. ನಮ್ಮ ಬದುಕಿನ ಘನತೆಯನ್ನು ಧರ್ಮ ಎತ್ತಿ ಹಿಡಿಯುತ್ತದೆ. ಅಯ್ಯಪ್ಪ ಪ್ರತ್ಯೇಕ ದೇವರಲ್ಲ. ಲಿಂಗದ ಆಧಾರದ ಮೇಲೆ ಮಹಿಳೆಗೆ ದೇಗುಲ ಪ್ರವೇಶ ನಿರಾಕರಿಸುವುದು ಸರಿಯಲ್ಲ.
Advertisement
ಅಂದಿನ ಸಿಜೆ ದೀಪಕ್ ಮಿಶ್ರಾ ಸೇರಿ ನಾಲ್ವರು ನ್ಯಾಯಮೂರ್ತಿಗಳಿಂದ ತೀರ್ಪಿಗೆ ಸಹಮತ. ನ್ಯಾಯಮೂರ್ತಿ ಇಂದೂ ಮಲ್ಹೋತ್ರಾ ಮಾತ್ರ ಮಹಿಳೆಯರ ದೇಗುಲ ಪ್ರವೇಶಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಧಾರ್ಮಿಕ ಆಚರಣೆಗಳನ್ನು ಸಂವಿಧಾನದ 14ನೇ ವಿಧಿ ಅನ್ವಯ ಪರಿಗಣಿಸಲಾಗದು ಅಂದು ಸುಪ್ರೀಂಕೋರ್ಟಿನ ಸಾಂವಿಧಾನಿಕ ಪೀಠ ಅಭಿಪ್ರಾಯ ವ್ಯಕ್ತಪಡಿಸಿತ್ತು.
ಆದರೆ, ಸುಪ್ರೀಂಕೋರ್ಟ್ ಆದೇಶವನ್ನು ಖಂಡಿಸಿ, ವಿರೋಧಿಸಿ ವಿರೋಧಿಸಿ ಬಿಜೆಪಿ ಮತ್ತು ಬಲಪಂಥೀಯ ಸಂಘಟನೆಗಳು ಕೇರಳದಲ್ಲಿ ಭಾರೀ ಪ್ರತಿಭಟನೆ ನಡೆಸಿದ್ದವು. ಇದರ ನಡುವೆಯೇ ಸುಪ್ರೀಂಕೋರ್ಟ್ ಆದೇಶದ ಮೇರೆಗೆ ಕನಕದುರ್ಗಾ ಮತ್ತು ಬಿಂದು ಅಮ್ಮಿಣಿ ಅವರು ಪೊಲೀಸ್ ಭದ್ರತೆಯಲ್ಲಿ ಅಯ್ಯಪ್ಪನ ದರ್ಶನ ಪಡೆದಿದ್ದರು. ಇದು ಉದ್ರಿಕ್ತರನ್ನು ಮತ್ತಷ್ಟು ಕೆರಳಿಸಿತ್ತು. ಹೀಗಾಗಿ, ನಾಯರ್ ಸಮಾಜ, ತಿರುವಂಕೂರು ದೇವಸ್ವ ಮಂಡಳಿ ಹಾಗೂ ಕೇರಳ ಸರ್ಕಾರದ ಜೊತೆಗೆ 64 ಅರ್ಜಿಗಳು ಸುಪ್ರೀಂಕೋರ್ಟಿಗೆ ಮೇಲ್ಮನವಿ ಸಲ್ಲಿಸಿದ್ದವು.
ಇದೀಗ ಸುಪ್ರೀಂಕೋರ್ಟ್ ತೀರ್ಪು ಮತ್ತು ಇದೇ 16ರಿಂದ ಮಂಡಲ ಪೂಜೆ ಪ್ರಯುಕ್ತ ಅಯ್ಯಪ್ಪ ದೇಗುಲ ತೆರೆಯುತ್ತಿರುವ ಹಿನ್ನೆಲೆಯಲ್ಲಿ 10 ಸಾವಿರಕ್ಕೂ ಹೆಚ್ಚು ಪೊಲೀಸರನ್ನು ಶಬರಿಮಲೆಯಲ್ಲಿ ಭದ್ರತೆಗಾಗಿ ನಿಯೋಜಿಸಲಾಗಿದೆ. ಸುಪ್ರೀಂಕೋರ್ಟಿನ ಅಯೋಧ್ಯೆ ತೀರ್ಪನ್ನು ಗೌರವಿಸಿದ ರೀತಿಯಲ್ಲೇ ಶಬರಿಮಲೆ ಪ್ರಕರಣದಲ್ಲಿಯೂ ಕೋರ್ಟ್ ತೀರ್ಪನ್ನು ಸ್ವಾಗತಿಸಬೇಕೆಂದು ಕೇರಳ ಮುಜುರಾಯಿ ಸಚಿವ ಸುರೇಂದ್ರನ್, ಬಿಜೆಪಿ ನಾಯಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.