– ನ.3 ರಂದು ವಿಚಾರಣೆಗೆ ಹಾಜರಾಗುವಂತೆ ಸಿಎಸ್‌ಗೆ ಸಮನ್ಸ್
– ವಿಚಾರಣೆಗೆ ಗೈರಾದ್ರೆ ಕ್ರಮದ ಎಚ್ಚರಿಕೆ
ನವದೆಹಲಿ: ಬೀದಿ ನಾಯಿಗಳ (Stray Dogs) ಸಮಸ್ಯೆಗೆ ಸಂಬಂಧಿಸಿದ ಪ್ರಕರಣದಲ್ಲಿ ಪ್ರತಿಕ್ರಿಯೆ ದಾಖಲಿಸದ ರಾಜ್ಯಗಳನ್ನು ಸುಪ್ರೀಂಕೋರ್ಟ್ (Supreme Court) ತರಾಟೆಗೆ ತೆಗೆದುಕೊಂಡಿದೆ. ಅಫಿಡವಿಟ್‌ಗಳನ್ನು ಸಲ್ಲಿಸಲು ವಿಫಲವಾದ ಕಾರಣ ಪಶ್ಚಿಮ ಬಂಗಾಳ, ದೆಹಲಿ ಮತ್ತು ತೆಲಂಗಾಣ ಹೊರತುಪಡಿಸಿ ಎಲ್ಲಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು (Chief Secretaries) ತಮ್ಮ ಮುಂದೆ ಹಾಜರಿರುವಂತೆ ನ್ಯಾಯಾಲಯ ಸಮನ್ಸ್ ಜಾರಿಗೊಳಿಸಿದೆ.
ನ್ಯಾಯಮೂರ್ತಿ ವಿಕ್ರಮ್ ನಾಥ್, ಸಂದೀಪ್ ಮೆಹ್ತಾ ಮತ್ತು ಎನ್.ವಿ. ಅಂಜಾರಿಯಾ ಅವರಿದ್ದ ತ್ರಿಸದಸ್ಯ ಪೀಠ ಈ ಆದೇಶ ನೀಡಿದೆ. ಮುಂದಿನ ವಿಚಾರಣೆಯ ದಿನಾಂಕದಂದು ಅಧಿಕಾರಿಗಳು ಗೈರಾದರೆ ದಂಡ ವಿಧಿಸಲಾಗುವುದು ಅಥವಾ ಬಲವಂತದ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಪೀಠ ಎಚ್ಚರಿಕೆ ನೀಡಿದೆ.
ಅಧಿಕಾರಿಗಳು ಪತ್ರಿಕೆ ಓದಿಲ್ಲವೇ ಅಥವಾ ಸಾಮಾಜಿಕ ಮಾಧ್ಯಮಗಳನ್ನು ನೋಡಿಲ್ಲವೇ? ನವೆಂಬರ್ 3 ರಂದು ಎಲ್ಲಾ ಮುಖ್ಯ ಕಾರ್ಯದರ್ಶಿಗಳು ನ್ಯಾಯಾಲಯದಲ್ಲಿ ಹಾಜರಿರಬೇಕು. ಈ ಬಗ್ಗೆ ವಿಚಾರಣೆ ನಡೆಸುತ್ತೇವೆ ಎಂದು ನ್ಯಾಯಾಲಯ ಹೇಳಿದೆ.
ನಾಯಿಗಳ ಜನನ ನಿಯಂತ್ರಣ ನಿಯಮಗಳ ಬಗ್ಗೆ ಅಭಿಪ್ರಾಯ ತಿಳಿಸುವಂತೆ ನ್ಯಾಯಾಲಯವು ಈ ಹಿಂದೆ ರಾಜ್ಯಗಳಿಗೆ ನಿರ್ದೇಶನ ನೀಡಿತ್ತು. ಪಶ್ಚಿಮ ಬಂಗಾಳ, ದೆಹಲಿ ಮತ್ತು ತೆಲಂಗಾಣ ರಾಜ್ಯಗಳು ಮಾತ್ರ ಅಫಿಡವಿಟ್‌ಗಳನ್ನು ಸಲ್ಲಿಸಿವೆ. ಉಳಿದಂತೆ ಎಲ್ಲಾ ರಾಜ್ಯಗಳು ನ್ಯಾಯಾಲಯದ ಆದೇಶವನ್ನು ನಿರ್ಲಕ್ಷಿಸಿವೆ. ಅದಕ್ಕಾಗಿ ನ್ಯಾಯಾಲಯ ಚಾಟಿ ಬೀಸಿದೆ.
ಬೀದಿ ನಾಯಿಗಳ ದಾಳಿಯಂತಹ ಘಟನೆಗಳು ನಿರಂತರವಾಗಿ ನಡೆಯುತ್ತಿವೆ. ವಿದೇಶಗಳಲ್ಲಿ ದೇಶದ ಚಿತ್ರಣವನ್ನು ಕೆಟ್ಟದಾಗಿ ತೋರಿಸಲಾಗುತ್ತಿದೆ ಇಂತಹ ವರದಿಗಳನ್ನು ನಾವು ಓದುತ್ತಿದ್ದೇವೆ ಎಂದು ಸರ್ಕಾರಗಳನ್ನು ನ್ಯಾಯಮೂರ್ತಿ ವಿಕ್ರಮ್ ನಾಥ್ ಟೀಕಿಸಿದರು.

