ರೈತರ ಸಾಲಮನ್ನಾ: ಮದ್ರಾಸ್ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ತಡೆ

Public TV
1 Min Read
supreme court loan

ನವದೆಹಲಿ: ತಮಿಳುನಾಡಿನ ಎಲ್ಲಾ ರೈತರ ಸಾಲಮನ್ನಾ ಮಾಡಿ ಎಂದು ಮದ್ರಾಸ್ ಹೈಕೋರ್ಟ್ ಹೊರಡಿಸಿದ್ದ ಆದೇಶಕ್ಕೆ ಸುಪ್ರೀಂಕೋರ್ಟ್ ತಡೆ ನೀಡಿದೆ.

ಸರ್ಕಾರದ ಆರ್ಥಿಕ ನೀತಿ-ನಿರ್ಣಯದಲ್ಲಿ ಹಸ್ತಕ್ಷೇಪ ಮಾಡಿದಂತಾಗಿದೆ ಎಂದು ವ್ಯಾಖ್ಯಾನಿಸಿ ನ್ಯಾ. ಮದನ್ ಲೋಕೂರ್ ಅವರು ಮದ್ರಾಸ್ ಹೈಕೋರ್ಟ್ ಪೀಠದ ಆದೇಶಕ್ಕೆ ತಡೆ ನೀಡಿ ನೋಟಿಸ್ ಜಾರಿ ಮಾಡಿದ್ದಾರೆ.

ರೈತರ ಪ್ರತಿಭಟನೆಗೆ ತೀವ್ರ ಒತ್ತಡಕ್ಕೊಳಗಾಗಿದ್ದ ತಮಿಳುನಾಡಿನ ಪಳನಿಸ್ವಾಮಿ ಸರ್ಕಾರ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದಂತೆ ಐದು ಎಕರೆ ಭೂಮಿ ಹೊಂದಿರುವ ಸಣ್ಣ ಮತ್ತು ಅತೀಸಣ್ಣ ರೈತರು ಸಹಕಾರಿ ಬ್ಯಾಂಕ್‍ಗಳಿಂದ ಪಡೆದ ಸಾಲವನ್ನು ಮನ್ನಾ ಮಾಡಲು ಮುಂದಾಗಿತ್ತು. ಆದರೆ, ಕೇವಲ ಐದು ಎಕರೆ ಯಾಕೆ ಎಲ್ಲಾ ರೈತರ ಸಾಲಮನ್ನಾ ಮಾಡಿ ಎಂದು ದೆಹಲಿಯಲ್ಲಿ ತಿಂಗಳ ಕಾಲ ತಮಿಳುನಾಡಿನ ರೈತರು ವಿಭಿನ್ನ-ವಿಚಿತ್ರವಾದ ಹೋರಾಟ ಮಾಡಿದ್ದರು.

ರೈತರ ಹೋರಾಟಕ್ಕೆ ವಿಪಕ್ಷಗಳು, ಸಿನಿ ನಟರು ಬೆಂಬಲ ನೀಡಿದ್ದರು. ಅಲ್ಲದೆ, ಎಲ್ಲಾ ರೈತರ ಸಾಲಮನ್ನಾ ಮಾಡುವಂತೆ ಮದ್ರಾಸ್ ಹೈಕೋರ್ಟ್ ಗೆ `ದಕ್ಷಿಣ ಭಾರತದ ನದಿಜೋಡಣೆ ಮತ್ತು ಕೃಷಿಕ ಸಂಘ’ದ ಪಿ. ಅಯ್ಯಕಣ್ಣು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ರು. ವಿಚಾರಣೆ ನಡೆಸಿದ್ದ ಮದ್ರಾಸ್ ಹೈಕೋರ್ಟ್‍ನ ಮದುರೈ ಪೀಠದ ನ್ಯಾ. ಎಸ್.ನಾಗಮುತ್ತು ಪೀಠ ಎಲ್ಲಾ ರೈತರ ಸಾಲಮನ್ನಾ ಮಾಡುವಂತೆ ಆದೇಶ ಹೊರಡಿಸಿತ್ತು.

ಈ ಆದೇಶದಂತೆ 3 ಲಕ್ಷ ರೈತರ ಸಾಲವನ್ನು ಮನ್ನಾ ಮಾಡಿದ್ರೆ ಎರಡು ಸಾವಿರ ಕೋಟಿ ಹೊರೆಯಾಗಲಿದೆ ಎಂದು ತಮಿಳುನಾಡು ಸರ್ಕಾರ, ಮದ್ರಾಸ್ ಹೈಕೊರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ನಲ್ಲಿ ಮೇಲ್ಮನವಿ ಸಲ್ಲಿತ್ತು.

ಕರ್ನಾಟಕದ ಮೇಲೆ  ಪರಿಣಾಮವೇನು..?
50 ಸಾವಿರ ರೂ. ಸಾಲ ಮನ್ನಾ ಮಾಡಿರುವ ಕರ್ನಾಟಕದ ಮೇಲೆ ಯಾವುದೇ ಪರಿಣಾಮವಿಲ್ಲ. ಒಂದು ದೃಷ್ಟಿಯಲ್ಲಿ ಸಿದ್ದರಾಮಯ್ಯ ಪಾಲಿಗೆ ಇದು ನಿರಾಳ. ಆದರೆ ಭವಿಷ್ಯದಲ್ಲಿ ಸುಪ್ರೀಂ ಆದೇಶ ಉಲ್ಲೇಖಿಸಿ ಸಂಪೂರ್ಣ ಸಾಲಮನ್ನಾ ಅಸಾಧ್ಯ ಎಂದು ರಾಜಕೀಯ ಪಕ್ಷಗಳು ಹೇಳಬಹುದು. ಸಾಲಮನ್ನಾ ವಿಚಾರ ಇಟ್ಟುಕೊಂಡು ಹೋರಾಟ ನಡೆಸುತ್ತಿರುವ ರಾಜ್ಯ ಬಿಜೆಪಿಗೆ ಹಿನ್ನಡೆಯಾದರೂ ಕೇಂದ್ರ ಮಟ್ಟದಲ್ಲಿ ಸ್ವಲ್ಪಮಟ್ಟಿಗೆ ನಿರಾಳವಾಗಿದೆ.

 

Share This Article
Leave a Comment

Leave a Reply

Your email address will not be published. Required fields are marked *