ನವದೆಹಲಿ: ಸ್ತನಗಳನ್ನು ಸ್ಪರ್ಶಿಸುವುದು ಮತ್ತು ಪೈಜಾಮದ ದಾರವನ್ನು ಎಳೆಯುವುದು ಅತ್ಯಾಚಾರದ ಅಪರಾಧವಲ್ಲ ಎಂಬ ಅಲಹಾಬಾದ್ ಹೈಕೋರ್ಟ್‌ನ ವಿವಾದಾತ್ಮಕ ಆದೇಶಕ್ಕೆ ಸುಪ್ರೀಂ ಕೋರ್ಟ್ (Supreme Court) ತಡೆಯಾಜ್ಞೆ ನೀಡಿದೆ. ಈ ಆದೇಶ ಸಂಪೂರ್ಣ ಅಸಂವೇದನಾಶೀಲತೆ ಮತ್ತು ಅಮಾನವೀಯ ವಿಧಾನದಿಂದ ಕೂಡಿದೆ ಎಂದು ಅದು ಟೀಕಿಸಿದೆ.
ಅಲಹಾಬಾದ್ ಹೈಕೋರ್ಟ್‌ನ (Allahabad High Court) ಏಕಸದಸ್ಯ ಪೀಠವು ಮಾ.17 ರಂದು, ಸ್ತನಗಳನ್ನು ಸ್ಪರ್ಶಿಸುವುದು ಮತ್ತು ಪೈಜಾಮದ ದಾರವನ್ನು ಎಳೆಯುವುದು ಅತ್ಯಾಚಾರ ಅಥವಾ ಅತ್ಯಾಚಾರದ ಪ್ರಯತ್ನವಾಗಿ ಪರಿಗಣಿಸಲಾಗದು ಎಂದು ತಿಳಿಸಿತ್ತು. ಬದಲಾಗಿ, ಇದು ಮಹಿಳೆಯ ಮೇಲೆ ದೌರ್ಜನ್ಯ ಅಥವಾ ಅವಳನ್ನು ಬೆತ್ತಲೆಗೊಳಿಸುವ ಉದ್ದೇಶದಿಂದ ಕೂಡಿದ ಕ್ರಿಮಿನಲ್ ಶಿಕ್ಷಾರ್ಹ ಅಪರಾಧ ಎಂದು ಹೇಳಿತ್ತು. ಇದನ್ನೂ ಓದಿ: ಏ.2ಕ್ಕೆ ಸಿಎಂ ಡೆಲ್ಲಿಗೆ – ಹನಿಟ್ರ‍್ಯಾಪ್ ಬಗ್ಗೆ ಮಾಹಿತಿ ಕೊಡ್ತಾರಾ ಸಿದ್ದರಾಮಯ್ಯ?
ಈ ಆದೇಶ ವ್ಯಾಪಕ ಟೀಕೆಯಾದ ಬೆನ್ನಲ್ಲೇ ಸುಪ್ರೀಂ ಕೋರ್ಟ್ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿತ್ತು. ಇಂದು ನ್ಯಾ. ಬಿ.ಆರ್.ಗವಾಯಿ ಮತ್ತು ಆಗಸ್ಟಿನ್ ಜಾರ್ಜ್ ಮಸೀಹ್ ಅವರನ್ನೊಳಗೊಂಡ ಪೀಠವು ವಿಚಾರಣೆ ನಡೆಸಿತು. ಹೈಕೋರ್ಟ್ ಆದೇಶದ 21, 24 ಮತ್ತು 26ನೇ ಪ್ಯಾರಾಗಳಲ್ಲಿನ ಟೀಕೆಗಳನ್ನು ತಡೆ ಹಿಡಿಯಲಾಯಿತು.
ಸಾಮಾನ್ಯವಾಗಿ ಈ ಹಂತದಲ್ಲಿ ತಡೆಯಾಜ್ಞೆ ನೀಡುವಲ್ಲಿ ನಾವು ನಿಧಾನವಾಗಿರುತ್ತೇವೆ. ಆದರೆ, ಈ ಆದೇಶದಲ್ಲಿನ ಕೆಲವು ಟೀಕೆಗಳು ಕಾನೂನಿನ ಮೂಲ ಸಿದ್ಧಾಂತಗಳಿಗೆ ಸಂಪೂರ್ಣ ವಿರುದ್ಧವಾಗಿದ್ದು, ಅವು ಸಂಪೂರ್ಣ ಅಸಂವೇದನಾಶೀಲತೆ ಮತ್ತು ಅಮಾನವೀಯ ದೃಷ್ಟಿಕೋನದಿಂದ ಕೂಡಿದೆ ಎಂದು ಪೀಠ ತಿಳಿಸಿತು. ಇದನ್ನೂ ಓದಿ: ಹನಿಟ್ರ್ಯಾಪ್ ಪ್ರಕರಣ ತನಿಖೆಗೆ ಕೋರಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾಗೊಳಿಸಿದ ಸುಪ್ರೀಂ
ಇದೊಂದು ಗಂಭೀರ ವಿಷಯವಾಗಿದ್ದು, ಆದೇಶ ನೀಡಿದವರಿಗೆ ಸಂಪೂರ್ಣ ಸೂಕ್ಷ್ಮತೆಯ ಕೊರತೆ ಎದ್ದು ಕಾಣುತ್ತಿದೆ ಎಂದು ನ್ಯಾಯಮೂರ್ತಿ ಗವಾಯಿ ಆಕ್ಷೇಪಿಸಿದರು.