ನವದೆಹಲಿ: ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಪತನಕ್ಕೆ ಕಾರಣವಾದ 17 ಅನರ್ಹ ಶಾಸಕರ ವಿಚಾರಣೆಯನ್ನು ಸುಪ್ರೀಂಕೋರ್ಟಿನ ನ್ಯಾ. ಎನ್.ವಿ. ರಮಣ ನೇತೃತ್ವದ ಪೀಠ ಪೂರ್ಣಗೊಳಿಸಿದ್ದು ತೀರ್ಪನ್ನು ಕಾಯ್ದಿರಿಸಿದೆ.
ದೀಪಾವಳಿ ರಜೆ ಮುಗಿದ ಬಳಿಕ ಅಂದರೆ ನವೆಂಬರ್ 4ರ ಬಳಿಕ ಯಾವುದೇ ದಿನ ಸುಪ್ರೀಂಕೋರ್ಟ್ ತೀರ್ಪು ಪ್ರಕಟಿಸುವ ಸಾಧ್ಯತೆಗಳಿವೆ. ನವೆಂಬರ್ 11ರಂದು ಉಪ ಚುನಾವಣೆ ಅಧಿಸೂಚನೆ ಪ್ರಕಟಗೊಳ್ಳಲಿದ್ದು, ಅಷ್ಟರೊಳಗೆ ಅನರ್ಹ ಶಾಸಕರ ತೀರ್ಪು ಹೊರಬೀಳಲಿದೆ.
Advertisement
Advertisement
ಕೊನೆಯ ದಿನವಾದ ಇಂದು ಕಾಂಗ್ರೆಸ್ ಪರವಾಗಿ ಕಪಿಲ್ ಸಿಬಲ್, ದೇವದತ್ ಕಾಮತ್, ಶಶಿಕಿರಣ್ ಶೆಟ್ಟಿ ಪ್ರತಿ ವಾದ ಮಂಡಿಸಿದ್ರೆ, ಅನರ್ಹ ಶಾಸಕರ ಪರವಾಗಿ ಕೇಂದ್ರ ಚುನಾವಣಾ ಆಯೋಗ ಬ್ಯಾಟ್ ಬೀಸಿದೆ. ಅನರ್ಹ ಶಾಸಕರೂ ಕೂಡ ಚುನಾವಣೆಗೆ ಸ್ಪರ್ಧಿಸಬಹುದೆಂಬ ಅಭಿಪ್ರಾಯ ಕೂಡ ವ್ಯಕ್ತಪಡಿಸಿದೆ. ಎರಡು ದಿನಗಳಲ್ಲಿ ಸ್ಪೀಕರ್ ಕಾರ್ಯವ್ಯಾಪ್ತಿಗೆ ಸಂಬಂಧಿಸಿದಂತೆ ಹೆಚ್ಚುವರಿ ದಾಖಲೆಗಳಿದ್ದರೆ, ರಿಜಿಸ್ಟ್ರಾರ್ ಮೂಲಕ 2 ದಿನಗಳಲ್ಲಿ ಸಲ್ಲಿಸುವಂತೆ ಸೂಚಿಸಿದೆ.
Advertisement
ಕಾಂಗ್ರೆಸ್ ಪರ ವಕೀಲರ ವಾದವೇನು?
ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡಬಾರದು. ಇಲ್ಲದಿದ್ರೆ ಅನರ್ಹತೆಗೆ ಅರ್ಥವೇ ಇರುವುದಿಲ್ಲ. ಸದನದ ತೀರ್ಮಾನಗಳಲ್ಲಿ ಕೋರ್ಟ್ ಮಧ್ಯಪ್ರವೇಶ ಮಾಡಬಾರದು. ರಾಜೀನಾಮೆ ನೈಜತೆಯನ್ನು ಪರೀಕ್ಷೆ ಮಾಡುವುದು ಸ್ಪೀಕರ್ ಅವರಿಗೆ ನೀಡಲಾದ ಹಕ್ಕಾಗಿದೆ. ಅನರ್ಹ ಶಾಸಕರು ಬಿಜೆಪಿ ಮುಖಂಡ ಅಶ್ವತ್ಥನಾರಾಯಣ, ಸಂತೋಷ್ ಸಂಪರ್ಕದಲ್ಲಿದ್ದರು ಅಷ್ಟೇ ಅಲ್ಲದೇ ಬಿಜೆಪಿ ರಾಜ್ಯಸಭಾ ಸದಸ್ಯರ ಒಡೆತನದ ವಿಮಾನದಲ್ಲಿ ಮುಂಬೈಗೆ ತೆರಳಿದ್ದರು. ರಾಜೀನಾಮೆ ಕೊಟ್ಟು ರಾಜ್ಯಪಾಲರನ್ನು ಭೇಟಿ ಆಗಿದ್ದೇಕೆ? ಪಕ್ಷಾಂತರವು ಸಾಂವಿಧಾನಿಕ ಪಾಪ. ಶಿಕ್ಷಿಸದೇ ಬಿಡುವುದು ಸರಿಯೇ? ಈ ಪ್ರಕರಣವನ್ನು ಹೈಕೋರ್ಟಿಗೆ ವರ್ಗಾಯಿಸಿ ಇಲ್ಲ ಸಾಂವಿಧಾನಿಕ ಪೀಠಕ್ಕೆ ವರ್ಗಾಯಿಸಬೇಕು. ರಾಜೀನಾಮೆ ನೀಡುವ ಮತ್ತು ಅದನ್ನು ಸ್ವೀಕರಿಸುವ ಪ್ರಕ್ರಿಯೆಯ ಏಕಕಾಲದಲ್ಲಿ ಆಗುವಂತದಲ್ಲ. ಲಿಖಿತವಾಗಿ ಸಲ್ಲಿಸಿದ ರಾಜೀನಾಮೆಯನ್ನು ತ್ವರಿತವಾಗಿ ಸ್ವೀಕರಿಸಬೇಕೆಂಬ ನಿಯಮ ಇಲ್ಲವೇ ಇಲ್ಲ. ಆದ್ದರಿಂದ ಈ ಪ್ರಕರಣವನ್ನು ಸಂವಿಧಾನಿಕ ಪೀಠದಲ್ಲಿ ಉಲ್ಲೇಖಿಸುವುದು ಸೂಕ್ತ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್ಟಿಕಲ್ 145/3 ಅನ್ನು ಅರ್ಥೈಸುವ ಅವಶ್ಯಕತೆ ಇದೆ.
Advertisement
ಚುನಾವಣಾ ಆಯೋಗದ ವಾದ ಏನು?
ಶಾಸಕರನ್ನು ಸ್ಪೀಕರ್ ಅನರ್ಹಗೊಳಿಸಲು ಅವಕಾಶವಿದೆ. ಆದರೆ ಸ್ಪರ್ಧೆ ಬಗ್ಗೆ ಹೇಳಲು ಸ್ಪೀಕರ್‍ಗೆ ಅಧಿಕಾರವಿಲ್ಲ. ಶಾಸಕರಿಗೆ ಮಾತ್ರ ಷೆಡ್ಯೂಲ್ 10 ಅನ್ವಯವಾಗುತ್ತದೆ ಹೊರತು ಅನರ್ಹರಿಗೆ ಅಲ್ಲ. ಅನರ್ಹರು ಚುನಾವಣೆಯಲ್ಲಿ ಸ್ಪರ್ಧೆ ಮಾಡಬಹುದು. ಸೆಕ್ಷನ್ 191/ಬಿ ಪ್ರಕಾರ ಅನರ್ಹ ಶಾಸಕರು ಅಧಿಕಾರ ಹೊಂದಬಹುದು
ಅನರ್ಹರ ಪರ ವಾದ ಏನು..?
ಅನರ್ಹತೆ ಮತ್ತು ರಾಜೀನಾಮೆ ಭಿನ್ನವಾಗಿದೆ. ಆದರೆ ಸ್ಪೀಕರ್ ಈ ಎರಡನ್ನು ಒಂದು ಮಾಡಿ ನೋಡಿದ್ದಾರೆ. ರಾಜೀನಾಮೆ ನೀಡಿರುವ ಶಾಸಕರು ಪೂರ್ವಾಗ್ರಹ ಪೀಡಿತರಾಗಿರಲಿಲ್ಲ. ಸ್ಪೀಕರ್ ರಾಜೀನಾಮೆ ಅಗೀಕರಿಸುವಾಗ ಹಿನ್ನೆಲೆ ನೋಡುವ ಅಗತ್ಯವಿಲ್ಲ. ಆದ್ದರಿಂದ ಈ ಪ್ರಕರಣವನ್ನು ಹೈಕೋರ್ಟ್‍ಗೆ ವಾಪಸ್ ಕಳುಹಿಸದೇ ಇಲ್ಲೇ ಇತ್ಯರ್ಥ ಮಾಡಿ.