ನವದೆಹಲಿ: ಮೇಕೆದಾಟು ಅಣೆಕಟ್ಟು ಡಿಪಿಆರ್ ವಿರುದ್ಧದ ತಮಿಳುನಾಡಿನ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.
ಮೇಕೆದಾಟು ಜಲಾಶಯ ಯೋಜನೆಗೆ ವಿವರವಾದ ಯೋಜನಾ ವರದಿ (ಡಿಪಿಆರ್) ತಯಾರಿಸಲು ಅನುಮತಿ ಕೋರಿ ಕರ್ನಾಟಕ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ವಿಚಾರಣೆ ನಡೆಸಿತು. ತಮಿಳುನಾಡಿನ ಪರವಾಗಿ ಹಿರಿಯ ವಕೀಲ ಮುಕುಲ್ ರೋಹಟಗಿ ವಾದ ಮಂಡಿಸಿದರು.
ಡಿಪಿಆರ್ ತಯಾರಿಕೆಗಾಗಿ ಕೇಂದ್ರ ಜಲ ಆಯೋಗ (ಸಿಡಬ್ಲ್ಯೂಸಿ) ಹೊರಡಿಸಿದ ಆದೇಶಕ್ಕೆ ತಮಿಳುನಾಡು ಸಲ್ಲಿಸಿದ ಸವಾಲು ಅಕಾಲಿಕ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ, ನ್ಯಾಯಮೂರ್ತಿ ಕೆ. ವಿನೋದ್ ಚಂದ್ರನ್ ಮತ್ತು ನ್ಯಾಯಮೂರ್ತಿ ಎನ್.ವಿ. ಅಂಜಾರಿಯಾ ಅವರನ್ನೊಳಗೊಂಡ ಪೀಠವು ಅಭಿಪ್ರಾಯಪಟ್ಟಿದೆ.
ರಾಜ್ಯದ ಆಕ್ಷೇಪಣೆಗಳು ಹಾಗೂ ತಜ್ಞ ಸಂಸ್ಥೆಗಳು, ಕಾವೇರಿ ನೀರು ನಿಯಂತ್ರಣ ಸಮಿತಿ (ಸಿಡಬ್ಲ್ಯೂಆರ್‌ಸಿ) ಮತ್ತು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (ಸಿಡಬ್ಲ್ಯೂಎಂಎ) ಗಳ ಅಭಿಪ್ರಾಯವನ್ನು ಪರಿಗಣಿಸಿದ ನಂತರವೇ ಯೋಜನೆಯನ್ನು ಅನುಮೋದಿಸಲಾಗುತ್ತದೆ.
ಮೇಕೆದಾಟು ಅಣೆಕಟ್ಟು ಪ್ರಸ್ತಾವನೆಯು ಕಾವೇರಿ ಜಲ ವಿವಾದದ ಕುರಿತಾದ ಅಂತಿಮ ಸುಪ್ರೀಂ ಕೋರ್ಟ್ ತೀರ್ಪಿನ ನೇರ ಉಲ್ಲಂಘನೆಯಾಗಿದೆ. ಅಣೆಕಟ್ಟು ನಿರ್ಮಾಣವು ರಾಜ್ಯದ ನೀರು ಸರಬರಾಜಿನ ಮೇಲೆ ತೀವ್ರ ಪರಿಣಾಮ ಬೀರುತ್ತದೆ ಎಂದು ತಮಿಳುನಾಡು ವಾದಿಸಿತ್ತು.

